Ramanagara: ರಾಗಿ ಬೆಂಬಲ ಬೆಲೆ ನೋಂದಣಿಯಲ್ಲಿ ಕುಸಿತ!
ನಿರಂತರ ಮಳೆಯಿಂದಾಗಿ ಸಾಕಷ್ಟುಬೆಳೆ ಕಳೆದುಕೊಂಡಿರುವ ರೈತರಿಗೆ ಈ ಬಾರಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಲಾಭ ಸಿಗುವುದು ಕೂಡ ಅನುಮಾನವಾಗಿದೆ. ಜಿಲ್ಲೆಯಾದ್ಯಂತ ಆರಂಭಗೊಂಡಿರುವ ರಾಗಿ ಬೆಳೆಗಾರರ ನೋಂದಣಿ ಪ್ರಕ್ರಿಯೆಯಲ್ಲಿ ಕುಸಿತ ಕಂಡಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಡಿ.28): ನಿರಂತರ ಮಳೆಯಿಂದಾಗಿ ಸಾಕಷ್ಟು ಬೆಳೆ ಕಳೆದುಕೊಂಡಿರುವ ರೈತರಿಗೆ ಈ ಬಾರಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಲಾಭ ಸಿಗುವುದು ಕೂಡ ಅನುಮಾನವಾಗಿದೆ. ಜಿಲ್ಲೆಯಾದ್ಯಂತ ಆರಂಭಗೊಂಡಿರುವ ರಾಗಿ ಬೆಳೆಗಾರರ ನೋಂದಣಿ ಪ್ರಕ್ರಿಯೆಯಲ್ಲಿ ಕುಸಿತ ಕಂಡಿದೆ. ಡಿ.15 ರಿಂದಲೇ ನೋಂದಣಿ ಶುರುವಾದರೂ ಜಿಲ್ಲೆಯಲ್ಲಿ ಇಲ್ಲಿವರೆಗೆ ಕೇವಲ 12,503 ಮಂದಿ ರಾಗಿ ಬೆಳೆಗಾರರು ಮಾತ್ರ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು 43 ಭತ್ತ ಬೆಳೆಗಾರರ ಹೆಸರು ನೋಂದಣಿ ಮಾಡಿಕೊಂಡವರ ಪಟ್ಟಿಯಲ್ಲಿದೆ.
ಕಳೆದ ವರ್ಷ 20,547 ಮಂದಿ ರಾಗಿ ಬೆಳೆಗಾರರು ಹೆಸರು ನೋಂದಣಿ ಮಾಡಿಕೊಂಡು 337598 ಕ್ವಿಂಟಾಲ್ ರಾಗಿಯನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿದ್ದರು. ಈಗ ನೋಂದಣಿ ಮಾಡಿಕೊಂಡಿರುವ 12,503 ರೈತರು 1,89,890 ಕ್ವಿಂಟಲ್ ರಾಗಿ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಕ್ವಿಂಟಾಲ್ ರಾಗಿಗೆ 3,758 ರುಪಾಯಿ ಬೆಂಬಲ ಬೆಲೆ ಘೋಷಿಸಿದ್ದರೂ ಈ ವರ್ಷ ಮಳೆಯ ಕಾರಣಕ್ಕೆ ಅಪಾರ ಪ್ರಮಾಣದ ರಾಗಿ ಕಳೆದುಕೊಂಡಿರುವ ರೈತರಿಗೆ ಕೇಂದ್ರ ಸರ್ಕಾರದ ಬೆಲೆ ಲಾಭ ಸಿಗದೇ ದೂರ ಉಳಿಯುವಂತಾಗಿದೆ.
ಲಿಂಗಪ್ಪರಿಗೆ ವಯಸ್ಸಾಗಿದೆ ಅಭಿವೃದ್ಧಿ ಕೆಲಸ ಕಾಣುತ್ತಿಲ್ಲ: ಅನಿತಾ ಕುಮಾರಸ್ವಾಮಿ
ಜಿಲ್ಲೆಯಲ್ಲಿ 77 ಸಾವಿರ ಹೆಕ್ಟೇರ್ ಗುರಿಯಲ್ಲಿ 66,719 ಹೆಕ್ಟೇರ್ ರಾಗಿ ಬೆಳೆಯಲಾಗಿದ್ದು, ಇದರಲ್ಲಿ ಶೇಕಡ 20ರಷ್ಟುರಾಗಿ ಬೆಳೆ ಮಳೆಯಿಂದ ನಾಶವಾಗಿದೆ. ಈಗಾಗಲೇ ಚನ್ನಪಟ್ಟಣ, ಕನಕಪುರ, ಮಾಗಡಿ ಹಾಗೂ ರಾಮನಗರ ತಾಲೂಕುಗಳಲ್ಲಿಯೂ ಖರೀದಿ ಕೇಂದ್ರ ತೆರೆಯಲಾಗಿದೆ. ಆದರೀಗ ನೋಂದಣಿ ಪ್ರಕ್ರಿಯೆಗೆ ಬೆಳೆಗಾರರು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ. ಇಲ್ಲಿವರೆಗೆ ಚನ್ನಪಟ್ಟಣ ತಾಲೂಕಿನಲ್ಲಿ 1283, ಕನಕಪುರ - 3595, ಮಾಗಡಿ - 5899 ಹಾಗೂ ರಾಮನಗರ ತಾಲೂಕಿನಲ್ಲಿ 1726 ಮಂದಿ ರಾಗಿ ಬೆಳೆಗಾರರು ನೋಂದಣಿ ಮಾಡಿಸಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರೈತರ ನೋಂದಣಿ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಕುಸಿತ ಕಂಡಿರುವುದು ಸ್ಪಷ್ಟವಾಗಿದೆ.
ರಾಗಿ ಖರೀದಿ ಮಿತಿಗೆ ಆಕ್ರೋಶ: ರಾಜ್ಯ ಸರ್ಕಾರ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಮಿತಿ ಹೇರಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಎಕರೆ ಕನಿಷ್ಠ 10 ರಿಂದ 20 ಕ್ವಿಂಟಲ್ ರಾಗಿ ಮಾರಾಟಕ್ಕೆ ಮಾತ್ರ ರೈತರಿಗೆ ಅವಕಾಶ ನೀಡಿದ್ದು, ಈ ಯೋಜನೆಯಡಿ ದೊಡ್ಡ ರೈತರನ್ನು ಸರ್ಕಾರ ದೂರ ಇಟ್ಟಿದೆ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ. ಅಲ್ಲದೆ, 5 ಲಕ್ಷ ಮೆಟ್ರಿಕ್ ರಾಗಿ ಖರೀದಿ ಬಳಿಕ ರಾಗಿ ಖರೀದಿ ಪ್ರಕ್ರಿಯೆಯನ್ನು ಸರ್ಕಾರ ಸ್ಥಗಿತಗೊಳಿಸುವ ಬಗ್ಗೆ ಸರ್ಕಾರ ಆದೇಶಿಸಿರುವುದು ಕೂಡ ರಾಗಿ ಬೆಳೆಗಾರರು ಕಣ್ಣು ಕೆಂಪಾಗಿಸಿದೆ. ಸರ್ಕಾರ ಯಾವುದೇ ಮಿತಿ ಹೇರದೆ ರಾಗಿಯನ್ನು ರೈತರಿಂದ ಬೆಂಬಲ ಯೋಜನೆಯಡಿ ಖರೀದಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
2023ರ ಮಾರ್ಚ್‌ಗೆ ಖರೀದಿ ಕಾರ್ಯ ಪೂರ್ಣ: ಪ್ರತಿ ಕ್ವಿಂಟಾಲ್‌ಗೆ 3578 ರು.ಗಳು ರಾಗಿ, ಪ್ರತಿ ಕ್ವಿಂಟಾಲ್‌ಗೆ 2040 ರು.ಗಳು ಸಾಮಾನ್ಯ ಭತ್ತ ಹಾಗೂ 2060 ರು.ಗಳು ಗ್ರೇಡ್-ಎ ಭತ್ತ ಖರೀದಿಸಲು ನಿಗದಿ ಪಡಿಸಲಾಗಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತರವರು ಖರೀದಿ ಏಜೆನ್ಸಿಯಾಗಿದ್ದು, 2023ರ ಜನವರಿ 1 ರಿಂದ 2023ರ ಮಾ.31ರ ವರೆಗೆ ಖರೀದಿ ಕಾರ್ಯ ಪೂರ್ಣಗೊಳ್ಳಲಿದೆ. ಭತ್ತವನ್ನು ರೈತರ ಉತ್ಪಾದನೆಗನುಗುಣವಾಗಿ ಪ್ರತಿ ಎಕರೆಗೆ 25 ಕ್ವಿಂಟಾಲ್‌ನಂತೆ ಗರಿಷ್ಠ 40 ಕ್ವಿಂಟಾಲ…ವರೆಗೆ ಖರೀದಿಸಲಾಗುವುದು. ರಾಗಿಯನ್ನು ರೈತರ ಉತ್ಪಾದನೆಗನುಗುಣವಾಗಿ ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿ ಖರೀದಿಸಲಾಗುವುದು.
Ramanagara: ಕ್ಷೇತ್ರಕ್ಕೆ ಉತ್ಸವ ಮೂರ್ತಿಯಂತೆ ಬರುವ ಎಚ್ಡಿಕೆ: ಯೋಗೇಶ್ವರ್ ಆರೋಪ
ತಾಲೂಕು ನೋಂದಣಿಯಾದ ರಾಗಿ ಬೆಳೆಗಾರರು ರಾಗಿ ಪ್ರಮಾಣ (ಕ್ವಿಂಟಾಲ್)
ಚನ್ನಪಟ್ಟಣ 1283 19866
ಕನಕಪುರ 3595 52794
ಮಾಗಡಿ 5899 92080
ರಾಮನಗರ 1726 25150