'ಸಾವಿರ ತಲೆ ತಗೆದು ಪ್ರಲ್ಹಾದ್ ಜೋಶಿ, ಬಿಎಲ್ ಸಂತೋಷ್‌ಗೆ ಜಾಗ..' ಬಿಜೆಪಿ ಟಿಕೆಟ್ ಬೆಂಕಿಗೆ ಕಾಂಗ್ರೆಸ್ ಟಾಂಗ್!
ಬಿಜೆಪಿಯಲ್ಲಿ ಹಿರಿಯ ನಾಯಕರಿಗೆ ಟಿಕೆಟ್ ಮಿಸ್ ಆಗುವ ಸೂಚನೆ ಸಿಗುತ್ತಿದ್ದಂತೆ, ಕಾಂಗ್ರೆಸ್ ಟ್ವೀಟ್ ಮೇಲೆ ಟ್ವೀಟ್ ಮಾಡುವ ಮೂಲಕ ಬಿಜೆಪಿ ಟಿಕೆಟ್ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದೆ.
ಬೆಂಗಳೂರು (ಏ.11): ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ಗೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ನಾಯಕರಲ್ಲಿ ತಳಮಳ ಶುರುವಾಗಿದೆ. ಈಗಾಗಲೇ ಕೆಎಸ್ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರೆ, ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ, ರಘುಪತಿ ಭಟ್, ಲಾಲ್‌ಜಿ ಮೆಂಡನ್, ಸುಕುಮಾರ್ ಶೆಟ್ಟಿ ಸೇರಿದಂತೆ ಹಲವು ಹಾಲಿ ಶಾಸಕರು ಹಾಗೂ ಬಿಜೆಪಿಯ ಹಿರಿಯ ನಾಯಕರಿಗೆ ಟಿಕೆಟ್ ಮಿಸ್ ಎಂದು ಹೇಳಲಾಗಿದೆ. ಇದರ ನಡುವೆ ಕರ್ನಾಟಕ ಕಾಂಗ್ರೆಸ್ ಟ್ವೀಟ್‌ನ ಮೂಲಕ ಬಿಜೆಪಿಯ ಟಿಕೆಟ್ ಬೆಂಕಿಗೆ ತುಪ್ಪ ಸುರಿದಿದೆ. ಪ್ರಲ್ಹಾದ್ ಜೋಶಿ ಹಾಗೂ ಬಿಎಲ್ ಸಂತೋಶ್‌ಗೆ ಜಾಗ ಮಾಡುವ ಸಲುವಾಗಿ ಬಿಜೆಪಿಯ ಹೈಕಮಾಂಡ್ ಸಾವಿರ ತಲೆ ತೆಗೆಯಲು ಸಿದ್ಧ ಎಂದು ಹೇಳುವ ಮೂಲಕ ರಾಜಕಾರಣ ಆರಂಭ ಮಾಡಿದೆ. 'ಯಡಿಯೂರಪ್ಪ - ಔಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ - ಔಟ್, ಈಶ್ವರಪ್ಪ - ಔಟ್, ಜಗದೀಶ್ ಶೆಟ್ಟರ್ - ಔಟ್? ಸಾವಿರ ತಲೆ ತೆಗೆದಾದರೂ ಸರಿ ಪ್ರಹ್ಲಾದ್ ಜೋಷಿ, ಬಿ ಎಲ್ ಸಂತೋಷರಿಗೆ ಜಾಗ ಮಾಡಿಕೊಡಲು ಅಮಿತ್ ಶಾ ತಯಾರಾಗಿದ್ದಾರೆ. ಸಂತೋಷ ಕೂಟದ ಆಟಕ್ಕೆ ಬಿಜೆಪಿಯ ಲಿಂಗಾಯತ ಹಾಗೂ ಹಿಂದುಳಿದ ವರ್ಗದ ನಾಯಕರು ಹೀನಾಯ ಅವಮಾನ ಎದುರಿಸಿ ಹೊರನಡೆಯುತ್ತಿದ್ದಾರೆ' ಎಂದು ಟ್ವೀಟ್ ಮಾಡಿದೆ.
ಮೊ-ಶಾ ಜೋಡಿಯ ಮಸಲತ್ತು ನೋಡಿದರೆ ಬೊಮ್ಮಾಯಿಯವರೂ ರಾಜಕೀಯ ನಿವೃತ್ತಿ ಘೋಷಿಸಿದರೆ ಯಾವುದೇ ಆಶ್ಚರ್ಯವಿಲ್ಲ! ಜೋಶಿ, ಸಂತೋಷರನ್ನು ಪ್ರತಿಷ್ಠಾಪಿಸಲು ಹವಣಿಸುತ್ತಿರುವ ಬೊಮ್ಮಾಯಿಯವರು ಅದೆಷ್ಟೇ ನಾಗಪುರದ ನೌಕರರು ಎನಿಸಿಕೊಂಡರೂ RSSಗೆ ಅಪಥ್ಯವೇ.. ಯಡಿಯೂರಪ್ಪರಂತೆ ಬೊಮ್ಮಾಯಿಯವರ ರಾಜಕೀಯ ಬದುಕೂ ದುರಂತ ಅಂತ್ಯ ಕಾಣಲಿದೆ ಎಂದು ಇನ್ನೊಂದು ಟ್ವೀಟ್‌ನಲ್ಲಿ ಬರೆದಿದೆ.
ಅಥಣಿ, ಕರಾವಳಿಯಲ್ಲಿ ಬಿಜೆಪಿ ಮೇಜರ್ ಸರ್ಜರಿ, ಲಕ್ಷಣ್ ಸವದಿ ಸೇರಿ ಮೂವರಿಗೆ ಟಿಕೆಟ್ ಮಿಸ್?
'ಯಡಿಯೂರಪ್ಪನವರನ್ನುಕಣ್ಣೀರು ಹಾಕಿಸಿ ಪದಚ್ಯುತಿ ಮಾಡಲಾಯ್ತು. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಈಶ್ವರಪ್ಪನವರ ರಾಜಕೀಯವನ್ನೇ ಮುಗಿಸಿಯಾಯ್ತು. ಜಗದೀಶ್ ಶೆಟ್ಟರ್ ಕಾಲವೂ ಸನ್ನಿಹಿತ. ಅಲ್ಲಿಗೆ ಬಿಜೆಪಿಯಲ್ಲಿ ಲಿಂಗಾಯತ ಹಾಗೂ ಹಿಂದುಳಿದ ವರ್ಗದ ನಾಯಕತ್ವವನ್ನು ಕಿತ್ತು ನಾಗಪುರದ ನೌಕರರಾದ ಜೋಶಿ ಹಾಗೂ ಸಂತೋಷ ಕೂಟ ಆಪೋಷನ ತೆಗೆದುಕೊಂಡಾಯ್ತು!' ಎಂದು ಕಾಂಗ್ರೆಸ್ ತನ್ನ ಮೂರನೇ ಟ್ವೀಟ್‌ನಲ್ಲಿ ಬರೆದುಕೊಂಡಿದೆ.
ಪುತ್ರನಿಗೆ ಟಿಕೆಟ್ ಕೊಡುವ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು, ರಾಜಕೀಯ ನಿವೃತ್ತಿ ಬೆನ್ನಲ್ಲೇ ಈಶ್ವರಪ್ಪ ಹೇಳಿಕೆ
ಬಿಎಸ್‌ವೈ, ಈಶ್ವರಪ್ಪ, ಜಗದೀಶ್ ಶೆಟ್ಟರ್.. ಬಿಜೆಪಿ ಎಂಬ ಕಳೆಗೆ ನೀರು ಗೊಬ್ಬರ ಹಾಕಿ ಬೆಳೆಸಿದ ನಾಯಕರನ್ನು ಅಗೌರವದ ನಿರ್ಗಮನ ದಾರಿ ತೋರಿಸಿದೆ ಬಿಜೆಪಿ. "ನಾವೇ ಎಲ್ಲ" ಎನ್ನುತ್ತಿದ್ದವರಿಗೆ "ನೀವೇನೂ ಅಲ್ಲ" ಎನ್ನುತ್ತಿದೆ ಮೊ-ಶಾ ಜೋಡಿ. ಗೊಡ್ಡು ಹಸುಗಳನ್ನು ಗೋಶಾಲೆಗಾದರೂ ಬಿಡಬಹುದಿತ್ತು, ಆದರೆ ನೇರ ಕಸಾಯಿಖಾನೆಗೇ ಕಳಿಸುತ್ತಿರುವುದು ದುರಂತ ಎಂದು ಇನ್ನೊಂದು ಟ್ವೀಟ್‌ನಲ್ಲಿ ಬರೆದಿದೆ.
ಸಂತೋಷ್ ಆಟಕ್ಕೆ ಯಡಿಯೂರಪ್ಪ ಬಲಿ. ಪ್ರಹ್ಲಾದ್ ಜೋಷಿ ಆಟಕ್ಕೆ ಜಗದೀಶ್ ಶೆಟ್ಟರ್ ಬಲಿ. ನಾಗಪುರದ ಕರುಳುಬಳ್ಳಿಯ ಸಂಬಂಧವನ್ನೇ ಬಳಸಿ ಬಿಜೆಪಿಯಲ್ಲಿ ಪ್ರಾಬಲ್ಯ ಸಾಧಿಸಿರುವ ಪ್ರಹ್ಲಾದ್ ಜೋಶಿ ಲಿಂಗಾಯತ ನಾಯಕರನ್ನು ಹೊಂಡಕ್ಕೆ ಕೆಡವುದರಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಸಿಎಂ ಒಬ್ಬರಿಗೆ ಟಿಕೆಟ್ ನಿರಾಕರಿಸುವಂತಹ ಅವಮಾನ ಇನ್ನೊಂದಿಲ್ಲ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬರೆದುಕೊಂಡಿದೆ.