ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕಳೆದ ಮೂರು ದಿನಗಳಿಂದ 22 ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಆದರೆ, 8 ಜನ ಶಾಸಕರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ಹಾಗಾದರೆ, ಸಭೆಗೆ ಹಾಜರಾದ ಸಚಿವರಿಗೆ ಏನೇನು ಪ್ರಶ್ನೆ ಕೇಳಲಾಯಿತು ಎಂಬ ವಿವರ ಇಲ್ಲಿದೆ…

ಬೆಂಗಳೂರು (ಜು.16): ಕರ್ನಾಟಕದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕಳೆದ ಮೂರು ದಿನಗಳಿಂದ 22 ಸಚಿವರೊಂದಿಗೆ ಪ್ರತ್ಯೇಕವಾಗಿ ಸಭೆಯನ್ನು ಮಾಡಿದ್ದಾರೆ. ಇಂದು ಕೊನೆಯ ದಿನ ಸಿಎಂ ಸಿದ್ದರಾಮಯ್ಯ ಆಪಸ್ತ ಸಚಿವರೊಂದಿಗೆ ಸಭೆ ನಡೆಸಿದ್ದು, ಕೆ.ಎನ್. ರಾಜಣ್ಣ, ಮುನಿಯಪ್ಪ ಸೇರಿದಂತೆ 8 ಜನ ಶಾಸಕರೊಂದಿಗೆ ಯಾವುದೇ ಚರ್ಚೆ ನಡೆಸದೇ ಸಭೆಯನ್ನು ಮುಕ್ತಾಯಗೊಳಿಸಿದದಾರೆ. ಆದರೆ, ಒನ್ ಟು ಒನ್ ಸಭೆಗೆ ಹಾಜರಾದ ಸಚಿವರಿಗೆ ಏನೇನ್ ಪ್ರಶ್ನೆ ಕೇಳಿದರು ಎನ್ನುವ ವಿವರ ಇಲ್ಲಿದೆ.

ಸುರ್ಜೇವಾಲಾ ಮೂರು ದಿನಗಳ ಸಚಿವರ ಒನ್ ಟು ಒನ್ ಮೀಟಿಂಗ್ ಇಂದಿಗೆ ಮುಕ್ತಾಯಗೊಂಡಿದೆ. ರಾಜ್ಯ ಉಸ್ತುವಾರಿ ಸುರ್ಜೇವಾಲಾ ಸಚಿವರ ಸರಣಿ ಸಭೆ ಮುಗಿಸಿ ದೆಹಲಿಯತ್ತ ಹೊರಟಿದ್ದಾರೆ. ಕೊನೆಯ ದಿನವಾದ ಇಂದು ಸಚಿವ ಈಶ್ವರ್ ಖಂಡ್ರೆ, ಕೃಷ್ಣ ಭೈರೇಗೌಡ, ಎಂ.ಬಿ ಪಾಟೀಲ್, ರಾಮಲಿಂಗಾ ರೆಡ್ಡಿ, ಎನ್. ಚಲುವರಾಯಸ್ವಾಮಿ, ಹೆಚ್.ಕೆ ಪಾಟೀಲ್, ಜಿ.ಪರಮೇಶ್ವರ್ ಹಾಗೂ ಕೆ.ಜೆ ಜಾರ್ಜ್ ಜೊತೆ ಸಭೆ ನಡೆಸಿದರು. ಆದರೆ, ರಾಜ್ಯ ಸಚಿವ ಸಂಪುಟದಲ್ಲಿ 33 ಸಚಿವರಿದ್ದಾರೆ. ಈ ಪೈಕಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶೀವಕುಮಾರ್ ಹೊರತುಪಡಿಸಿ ಉಳಿದ 31 ಸಚಿವರ ಸರಣಿ ಸಭೆ ನಡೆಸಲು ಸುರ್ಜೇವಾಲಾ ಬಂದಿದ್ದರು.

ಸುರ್ಜೇವಾಲಾ ನಡೆಸಿದ ಮೂರು ದಿನಗಳ ಸಭೆಯಲ್ಲಿ 22 ಮಂದಿ ಸಚಿವರ ಜೊತೆ ಒನ್ ಟು ಒನ್ ಮೀಟಿಂಗ್ ಮಾಡಿದ್ದಾರೆ. ಉಳಿದಂತೆ 8 ಸಚಿವರು ಸಭೆಗೆ ಗೈರಾಗಿದ್ದಾರೆ. ಕೆ.ಹೆಚ್ ಮುನಿಯಪ್ಪ, ಶರಣಬಸಪ್ಪ‌ ದರ್ನಾನಪುರ್, ಆರ್.ಬಿ ತಿಮ್ಮಾಪುರ್, ಶಿವರಾಜ್ ತಂಗಡಗಿ, ಎಂ.ಸಿ ಸುಧಾಕರ್, ಕೆ.ಎನ್.ರಾಜಣ್ಣ, ಶಿವಾನಂದ‌ ಪಾಟೀಲ್ ಹಾಗೂ ಮಂಕಾಳು ವೈದ್ಯ ಇವರೊಂದಿಗೆ ಯಾವುದೇ ಸಭೆಯನ್ನು ಮಾಡಿಲ್ಲ.

ಕೆ.ಜೆ. ಜಾರ್ಜ್‌ಗೆ ಕೇಳಿದ್ದೇನು?

ನಮ್ಮ ಇಲಾಖೆ ಎರಡು ವರ್ಷದ ಸಾಧನೆ ಬಗ್ಗೆ ಕೇಳಿದರು. ಹೊಸ ಯೋಜನೆಗಳ ವಿವರಣೆ ಪಡೆದುಕೊಂಡರು. ಶಾಸಕರು ಒಂದಷ್ಟು ಬೇಡಿಕೆ ಇಟ್ಟಿದ್ದರು. ಸುರ್ಜೇವಾಲಾ ಅವರಿಗೆ ಭೇಟಿಯಾಗಿ ಕೆಲವೊಂದು ಬೇಡಿಕೆ ಇಟ್ಟಿದ್ದರು. ಅವುಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ನಾನು ಅದನ್ನು ಬಗೆ ಹರಿಸುವ ಕೆಲಸ ಮಾಡುತ್ತೇನೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ಸಚಿವ ಚಲುವರಾಯಸ್ವಾಮಿಗೆ ಕೇಳಿದ್ದೇನು? ಹೇಳಿದ್ದೇನು?

ನಮ್ಮ ಇಲಾಖೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ರಸಗೊಬ್ಬರದ ಸಮಸ್ಯೆ ದೇಶದಲ್ಲಿ ಇತ್ತು. ಆದರೆ ನಾವು ರೈತರನ್ನ ಕನ್ವಿನ್ಸ್ ಮಾಡಿದ್ದೇವೆ. ಯಾವುದೇ ಪ್ರತಿಭಟನೆ ಆಗದಂತೆ ನೊಡಿಕೊಂಡಿದ್ದೇವೆ. ನಮ್ಮ ಇಲಾಖೆ ಬಗ್ಗೆ ಬಹಳ ಸಂತೋಷ ಪಟ್ಟಿದ್ದಾರೆ. ಜಿಲ್ಲಾ ಸಚಿವರಾಗಿಯೂ ನಮ್ಮಲ್ಲಿ ವ್ಯತ್ಯಾಸ ಇಲ್ಲ. ಉಸ್ತುವಾರಿ ಜಿಲ್ಲೆಯ ಶಾಸಕರೊಂದಿಗೆ ಚೆನ್ನಾಗಿದ್ದೇನೆ. ಸಂಘಟನೆ ಬಗ್ಗೆ ಮಾತಾಡಿದ್ದಾರೆ. ನಮ್ಮಲ್ಲಿನ 7ಕ್ಷೇತ್ರದಲ್ಲಿಯೂ ನಾವು ಚೆನ್ನಾಗಿದ್ದೇವೆ. ಎಂಪಿ ಎಲೆಕ್ಷನ್ ಬಿಟ್ಟು ನಾವು ಉಳಿದೆಲ್ಲಾ ಚುನಾವಣೆ ಗೆದ್ದಿದ್ದೇವೆ. ಬಿಜೆಪಿ ಜೊತೆ ಮೈತ್ರಿ ಆಗಿ ಅವರು ಗೆದ್ದಿದ್ದಾರೆ. ಅದರಲ್ಲೂ ಸಿಎಂ ಅಗಿದ್ದವರು, ದೊಡ್ಡ ಲೀಡರ್ ಬೇರೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.

ರಾಮಲಿಂಗಾರೆಡ್ಡಿಗೆ ಬಸ್‌ಸ್ಟಾಂಡ್ ಕಟ್ಟಿಕೊಡಲು ಹೇಳಿದ ಸುರ್ಜೇವಾಲಾ

ಸುರ್ಜೇವಾಲ ನಮ್ಮ ರಾಜ್ಯದ ಉಸ್ತುವಾರಿ. ಚುನಾವಣೆಗೂ ಮೊದಲೇ ಅವರು ಉಸ್ತುವಾರಿ ವಹಿಸಿಕೊಂಡಿದ್ದರು. ಎಲ್ಲಾ ಜಿಲ್ಲೆಯ ಪ್ರವಾಸವನ್ನು ಮಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದ ಮೇಲೆಯೂ ಅವರು ಜವಾಬ್ದಾರಿಯನ್ನು ಕಂಟಿನ್ಯೂ ಮಾಡ್ತಿದ್ದಾರೆ. 60-70 ಶಾಸಕರನ್ನ ಅವರು ಭೇಟಿ ಮಾಡಿದ್ದಾರೆ. ಶಾಸಕರು ಕೊಟ್ಟಿರೋ ಬೇಡಿಕೆ ಬಗ್ಗೆ ಅವರು ಹೇಳಿದರು. ಬಸ್ ಸ್ಟ್ಯಾಂಡ್ ಬೇಕು ಎಂದು ಕೆಲ ಶಾಸಕರು ಕೇಳಿದ್ದಾರೆ. ಅದರ ಬಗ್ಗೆ ಹೇಳಿದ್ದಾರೆ, ಅವರಿಗೆ ವಿವರಣೆ ಕೊಟ್ಟಿದ್ದೇನೆ. ಇಲಾಖೆಯ ಬಗ್ಗೆ ಕೇಳಿದ್ದಾರೆ. ಮುಜರಾಯಿ ಇಲಾಖೆದು ಏನೂ ಇರಲಿಲ್ಲ. ಈ ವಿಚಾರದಲ್ಲಿ ಯಾವುದೇ ಅಸಮಾಧಾನ ಇಲ್ಲ. ಪಕ್ಷದ ಆಗುಹೋಗು ಬಗ್ಗೆ ನೋಡಿಕೊಳ್ಳೊ ಜವಾಬ್ದಾರಿ ಅವರದ್ದು. ಟಿಕೆಟ್‌ ಬೇಕು ಎಂದರೆ ಉಸ್ತುವಾರಿ ಕೇಳಲ್ವಾ.? ರಾಹುಲ್ ಗಾಂಧಿವರೆಗೂ ಹೋಗಲ್ಲವಾ..? ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ದೇವನಹಳ್ಳಿ ಭೂಮಿ ಬಗ್ಗೆ ವರದಿ ಒಪ್ಪಿಸಿದ ಎಂ.ಬಿ. ಪಾಟೀಲ

ಸುರ್ಜೇವಾಲಾ ನನ್ನ ಕರೆದು ಇಂಡಸ್ಟ್ರಿ ಡಿಪಾರ್ಟ್ಮೆಂಟ್ ಬಗ್ಗೆ ಚರ್ಚೆ ಮಾಡಿದರು. ರಾಜ್ಯದ ಡೆವಲಪ್ಮೆಂಟ್ ಬಗ್ಗೆ ಚರ್ಚೆ ಮಾಡಿದ್ದಾರೆ. ನಾನು ಕೈಗಾರಿಕಾ ಸಚಿವನಾದ ಮೇಲೆ ಯಾವೆಲ್ಲ ಕೈಗಾರಿಕೆಗಳು ಬಂದಿವೆ.? ಈ ಬಗ್ಗೆ ಸುರ್ಜೇವಾಲಾ ಗಮನಕ್ಕೆ ತಂದಿದ್ದೇನೆ. ನನ್ನ ಇಲಾಖೆಯ ಕೆಲಸದ ಬಗ್ಗೆ ಸುರ್ಜೇವಾಲಾ ಖುಷಿಯಾಗಿದ್ದಾರೆ. ಇದು ಮೌಲ್ಯಮಾಪನ ಅಲ್ಲ. ಮೌಲ್ಯಮಾಪನ ಆಗಿದ್ದರೆ ಬೇರೆ ರೀತಿಯಲ್ಲಿ ರೆಡಿಯಾಗ್ತಾ ಇದ್ದೆವು ಎಂದು ಹೇಳಿದರು. ಇನ್ನು ರಾಜ್ಯದಲ್ಲಿ ಉದ್ಯಮಿಗಳ ಹಿತರಕ್ಷಣೆ ಸರ್ಕಾರ ಕಾಯ್ತಿಲ್ಲ ಎಂಬ ವಿಜಯೇಂದ್ರ ಟೀಕೆ ವಿಚಾರದ ಬಗ್ಗೆ ಮಾತನಾಡಿ, ಉದ್ಯಮಿಗಳ ಪರವಾಗಿ ನಿರ್ಣಯ ಮಾಡಿದರೆ ರೈತರ ಹಿತರಕ್ಷಣೆ ಅಂತಿದ್ದರು. ಉದ್ಯಮಿಗಳ ಹಿತರಕ್ಷಣೆಯನ್ನು ನಾವು ಕಾಯುತ್ತೇವೆ. ಒಂದು ಸಣ್ಣ ಕೈಗಾರಿಕೆ ಕೂಡ ರಾಜ್ಯ ಬಿಟ್ಟು ಹೋಗಲ್ಲ. ವಿಪಕ್ಷಗಳ ಸಹಕಾರದ ‌ಬಗ್ಗೆ ನಾನು ಹೇಳಲ್ಲ. ಏನೇ ಮಾಡಿದರೂ ವಿಪಕ್ಷಗಳು ಟೀಕೆ ಮಾಡುತ್ತವೆ. ನನಗೆ ರಾಜ್ಯದ ಹಿತರಕ್ಷಣೆ ‌ಮಾತ್ರ‌ ಮುಖ್ಯ. ಎಷ್ಟೇ ಭೂಮಿ ಬೇಕಾದರೂ ನಾವು ನೀಡುತ್ತೇವೆ. ದೇವನಹಳ್ಳಿ ಭೂಮಿ ವಿಚಾರವಾಗಿ ಸುರ್ಜೇವಾಲಾ ಕೇಳಿದರು. ಈ ಬಗ್ಗೆ ಸುರ್ಜೇವಾಲಾ ಗಮನಕ್ಕೂ ತಂದಿದ್ದೇನೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಪ್ರಶ್ನೆಗೆ ಮೊದಲೇ ಉತ್ತರಿಸಿ ಬಂದ ಈಶ್ವರ ಖಂಡ್ರೆ:

ಸುರ್ಜೇವಾಲಾ ಅವರನ್ನ ಭೇಟಿ ಮಾಡಿದ್ದೆ ಅರಣ್ಯ ಇಲಾಖೆಯ ಸಾಧನೆ ಬಗ್ಗೆ ಚರ್ಚಿಸಿದ್ದೇನೆ. ಪರಿಸರ ಇದ್ದರೆ ನಾವೆಲ್ಲರು ಇರ್ತೇವೆ. ಅರಣ್ಯ ಇಲಾಖೆ ಪರಿವರ್ತನೆ ಬಗ್ಗೆ ತಿಳಿಸಿದ್ದೇನೆ ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಕಾಂಕ್ರೀಟ್ ಕಾಡಾಗಿ ಬೆಳೆಯುತ್ತಿದೆ. ಅರಣ್ಯೀಕರಣಕ್ಕೆ ನಾವು ಗಮನ ಕೊಟ್ಟಿದ್ದೇವೆ. 10 ಸಾವಿರ ಎಕರೆ ಅರಣ್ಯ ವಶಪಡಿಸಿಕೊಂಡಿದ್ದೇವೆ. ಹೆಚ್ ಎಂಟಿ ಗೆ ನೀಡಿದ್ದ ಭೂಮಿ‌ ಮೋಸವಾಗಿದೆ. ಹೆಚ್‌ಎಂಟಿಯವರು ರಿಯಲ್ ಎಸ್ಟೇಟ್ ಗೆ ಕೊಟ್ಟಿದ್ದರು. ಅದು ಸರ್ವೋಚ್ಛ ನ್ಯಾಯಾಲಯದಲ್ಲಿದೆ. ನಗರದ ಮಧ್ಯ ಭಾಗದಲ್ಲಿರುವ ಜಾಗದಲ್ಲಿ ಬಯೋ ಪಾರ್ಕ್ ಮಾಡಬೇಕಿದೆ. ಅದನ್ನ ಮರುವಶಕ್ಕೆ ಪಡೆಯೋ ಪ್ರಯತ್ನ ನಡೆದಿದೆ. ಆದರೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.