Asianet Suvarna News Asianet Suvarna News

ಅಸಲಿ ಹಸ್ತದ ಹಕೀಕತ್ತು ನೋಡಿ, 135 ಕಾಂಗ್ರೆಸ್‌ ಶಾಸಕರನ್ನು ಅನರ್ಹಗೊಳಿಸಿ: ಎಚ್‌ಡಿಕೆ ಮನವಿ

ಕಾಂಗ್ರೆಸ್‌ ಅಭ್ಯರ್ಥಿಗಳು ಗಿಫ್ಟ್‌ ಪಾಲಿಟಿಕ್ಸ್‌ ಮೂಲಕ ಗೆಲುವು ಸಾಧಿಸಿದ್ದಾರೆಂದು ಹೇಳಿದ ಯತೀಂದ್ರ ಸಿದ್ದರಾಮಯ್ಯ ಅವರ ಮಾತಿನ ಆಧಾರದಲ್ಲಿ ತನಿಖೆ ಮಾಡಿ 135 ಕಾಂಗ್ರೆಸ್‌ ಶಾಸಕರನ್ನು ವಜಾಗೊಳಿಸಬೇಕು.

Karnataka 135 Congress MLAs should be disqualified HDK pleads to election commission sat
Author
First Published Sep 20, 2023, 5:12 PM IST

ಬೆಂಗಳೂರು (ಸೆ.20): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗಿಫ್ಟ್‌ ಪಾಲಿಟಿಕ್ಸ್‌ ಮೂಲಕ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರ ಪುತ್ರನೇ ಮಾಹಿತಿ ಹಂಚಿಕೊಂಡಿದ್ದು, ಈ ಬಗ್ಗೆ ತನಿಖೆ ಮಾಡಿ ಚುನಾವಣಾ ಆಯೋಗ 135 ಕಾಂಗ್ರೆಸ್‌ ಶಾಸಕರನ್ನು ವಜಾಗೊಳಿಸಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. 

ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮಡಿವಾಳ ಸಮುದಾಯಕ್ಕೆ ಕುಕ್ಕರ್, ತವಾ, ಇಸ್ತ್ರಿಪೆಟ್ಟಿಗೆ ಹಂಚಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಸಮುದಾಯವೊಂದರ ಭಾಷಣದಲ್ಲಿ ಹೇಳಿದ್ದಾರೆ. ಇದು ಅಸಲಿ ಹಸ್ತದ ಹಕೀಕತ್ತು ಆಗಿದೆ. ರಾಜ್ಯದ ಎಲ್ಲ ಕಾಂಗ್ರೆಸ್‌ ಶಾಸಕರ ಗೆಲುವಿನ ಬಗ್ಗೆ ತನಿಖೆ ಮಾಡಿ ಚುನಾವಣಾ ಆಯೋಗವು 135 ಶಾಸಕರನ್ನು ಅಮಾನತು ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ದರ್ಶನ್‌ ಬೆನ್ನಲ್ಲಿಯೇ ಕಾವೇರಿ ಕದನಕ್ಕಿಳಿದ ಅಭಿನಯ ಚಕ್ರವರ್ತಿ ಸುದೀಪ್‌

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿರುವ ಅವರು, "ಮತದಾರರಿಗೆ ಸಲ್ಲದ ಆಸೆ, ಆಮಿಷ ಒಡ್ಡಿ ಈ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ನಾನು ಪದೇಪದೆ ಹೇಳಿದ್ದೆ. ಗಿಫ್ಟ್ ಕೂಪನ್, ತವಾ, ಕುಕ್ಕರ್, ಇಸ್ತ್ರಿಪೆಟ್ಟಿಗೆ, ಸೀರೆ ಕೊಟ್ಟ ಕಾಂಗ್ರೆಸ್‌ ಪಕ್ಷದ 'ಅಸಲಿ ಹಸ್ತ'ದ ಹಕೀಕತ್ತು ಹೀಗಿದೆ ನೋಡಿ. ಸ್ವತಃ ರಾಜ್ಯದ ಘನತವೇತ್ತ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ರಾಮಯ್ಯ ಅವರ ಸುಪುತ್ರನೇ ರಾಜ್ಯಕ್ಕೆ ಸತ್ಯದ ಸಾಕ್ಷಾತ್ಕಾರ ಮಾಡಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?" ಎಂದು ಕೇಳಿದ್ದಾರೆ. 

ಉಳಿದ ಕ್ಷೇತ್ರಗಳ ಕಥೆ ಹಾಗಿರಲಿ, ಕರ್ನಾಟಕದ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿಯೇ ಕುಕ್ಕರ್, ಇಸ್ತ್ರಿಪೆಟ್ಟಿಗೆಗಳ ಭರ್ಜರಿ ಸಮಾರಾಧನೆ ನಡೆದಿದೆ. ಸಮಾಜವಾದಿ ಮುಖ್ಯಮಂತ್ರಿ ಮಹೋದಯರ ಹಾದಿಯಲ್ಲೇ ನಡೆದಿರುವ ಇಡೀ ಕಾಂಗ್ರೆಸ್‌  ಪಕ್ಷದ ಅಭ್ಯರ್ಥಿಗಳು ಅದೇ ವಾಮಮಾರ್ಗದಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ಶ್ರೀ ಕೆಂಗಲ್ ಹನುಮಂತಯ್ಯ ಅವರು ಕಟ್ಟಿದ ಕನ್ನಡಿಗರ ಪ್ರಜಾಸತ್ತೆಯ ಮಹಾದೇಗುಲ ವಿಧಾನಸೌಧದ ಪಾವಿತ್ರ್ಯವನ್ನೇ ಹಾಳು ಮಾಡಿದ್ದಾರೆ.

ರಾಮನಗರ, ಮಾಗಡಿ ಸೇರಿ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗಿಫ್ಟ್ ಕೂಪನ್, ಗ್ಯಾರಂಟಿ ಕೂಪನ್ ಹಂಚಿಯೇ ಗೆದ್ದಿದ್ದಾರೆ. ಪಕ್ಷದ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರೇ ಸಹಿ ಹಾಕಿದ ಅಧಿಕೃತ ಅಮಿಷಗಳ 5 ಗ್ಯಾರಂಟಿ ಕೂಪನ್ ಗಳನ್ನು ಮನೆಮನೆಗೂ ಹಂಚಿ ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ. ಇದು ಸ್ವಾತಂತ್ರ್ಯ ಭಾರತ ಕಂಡ, ಅದೂ ಅಮೃತಕಾಲದಲ್ಲಿ ನಡೆದಿರುವ ಅತಿದೊಡ್ಡ ಚುನಾವಣಾ ಅಕ್ರಮ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಹೆಗ್ಗಳಿಕೆಯ ಕಗ್ಗೊಲೆ.

ಕಾವೇರಿ ನೀರಿಗಾಗಿ ದೆಹಲಿಗ್ಹೋದ ಸಿಎಂ ಸಿದ್ದರಾಮಯ್ಯಗೆ ಸಿಕ್ಕಿದ್ದೇನು? ಇಲ್ಲಿದೆ ಸುದ್ದಿಗೋಷ್ಠಿ ವಿವರ

ಕೇಂದ್ರ ಚುನಾವಣಾ ಆಯೋಗ ಈ ಚುನಾವಣಾ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಬೇಕು. ಖಡಕ್ ತನಿಖೆ ನಡೆಸಿ ಕಾಂಗ್ರೆಸ್‌ ಪಕ್ಷದ ಎಲ್ಲಾ ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ಹೊರ ಹಾಕಲೇಬೇಕು. ಅಪ್ರಜಾಸತ್ತಾತ್ಮಕವಾಗಿ ಗೆದ್ದಿರುವ ಆ ಪಕ್ಷದ ಎಲ್ಲಾ 135 ಶಾಸಕರನ್ನೂ ಅನರ್ಹಗೊಳಿಸಬೇಕು. ಕೇಂದ್ರ ಸರಕಾರವೂ ಈ ಚುನಾವಣೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು. ಈ ಅಕ್ರಮ ಸರಕಾರವನ್ನು ವಜಾ ಮಾಡಬೇಕು. 

ಕಾಂಗ್ರೆಸ್ ಪಕ್ಷವು ಇಡೀ ಚುನಾವಣೆ ವ್ಯವಸ್ಥೆಯನ್ನೇ ನಾಶ ಮಾಡಲು ಸಂಚು ಹೂಡಿದೆ. ಕರ್ನಾಟಕ ಮಾದರಿ ಎನ್ನುವ ವಿನಾಶಕಾರಿ ಮಹಾಮಾರಿಯನ್ನು ಇಡೀ ದೇಶಕ್ಕೆ ವಿಸ್ತರಿಸಲು ಹೊರಟಿದೆ. ಮಧ್ಯಪ್ರದೇಶ, ರಾಜಸ್ತಾನ, ತೆಲಂಗಾಣ ಸೇರಿ ಶೀಘ್ರವೇ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಈ ಷಡ್ಯಂತ್ರ, ಕುತಂತ್ರ, ಕುಯುಕ್ತಿಗಳನ್ನು ಪ್ರಯೋಗ ಮಾಡಲು ಹೊರಟಿದೆ. ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ವಿಷಪ್ರಾಶನ ಮಾಡುವ ಈ ದೇಶದ್ರೋಹಿ ಕೃತ್ಯವನ್ನು ಎಲ್ಲರೂ ತಡೆಯಲೇಬೇಕಿದೆ.

Follow Us:
Download App:
  • android
  • ios