113 ನಿಮ್ಮ ಲೆಕ್ಕ. ನಮ್ಮ ಗುರಿ 141. ಮೇ 13ರಂದು ಫಲಿತಾಂಶ ಬರಲಿದೆ. ಮೇ 15ರಂದು ನಾವು ಸರ್ಕಾರ ರಚನೆ ಮಾಡುತ್ತೇವೆ. ಮೋದಲ ಸಂಪುಟದಲ್ಲೇ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ: ಡಿಕೆಶಿ

ಬೆಂಗಳೂರು(ಮೇ.09): ‘ಬಿಜೆಪಿಗೆ ಮತ ಹಾಕದಿದ್ದರೆ ಕೇಂದ್ರದ ಯೋಜನೆಗಳಿಂದ ವಂಚಿತರಾಗುತ್ತೀರಿ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಹೆದರಿಸುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಗಲಭೆಗಳಾಗುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯದ ಜನರಿಗೆ ಬೆದರಿಕೆ ಹಾಕಿದ್ದಾರೆ. ಆದರೆ, ಇಂತಹ ಬೆದರಿಕೆಗಳಿಗೆ ಕನ್ನಡಿಗರು ಹೆದರುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದರು.

ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕವೇ ಕೇಂದ್ರಕ್ಕೆ ಆದಾಯ ನೀಡಿ ಸಹಾಯ ಮಾಡುತ್ತಿದೆ. ಇಲ್ಲಿರುವ ವಿದ್ಯಾವಂತರು, ಪ್ರಜ್ಞಾವಂತರು ದೇಶಕ್ಕೆ ಆದಾಯ ನೀಡುತ್ತಿದ್ದಾರೆ. ವಿಶ್ವವೇ ಕರ್ನಾಟಕ ಹಾಗೂ ಬೆಂಗಳೂರು ಮೂಲಕ ಇಡೀ ದೇಶವನ್ನು ನೋಡುತ್ತಿದೆ ಎಂದು ವಾಜಪೇಯಿ ಅವರೇ ಹೇಳಿದ್ದರು. ಇದು ಈ ರಾಜ್ಯದ ಶಕ್ತಿ. ಬಿಜೆಪಿ ಗೆಲ್ಲದಿದ್ದರೆ ಕೇಂದ್ರದ ಯೋಜನೆಗಳು ದೊರೆಯುವುದಿಲ್ಲ ಎಂಬುದು ಅಹಂಕಾರದ ಪರಮಾವಧಿ. ಸ್ವಾಭಿಮಾನಿ ಕನ್ನಡಿಗರಿಗೆ ಹಾಕಿರುವ ಬೆದರಿಕೆ ಎಂದು ಕಿಡಿ ಕಾರಿದರು.

ಸಿದ್ದು, ಡಿಕೆಶಿ ಸೋಲಿಸಲು ಕಾಂಗ್ರೆಸ್‌ನಲ್ಲೇ ಗುಂಪು ಸಿದ್ಧವಾಗಿದೆ: ನಳಿನ್‌ ಕುಮಾರ್‌ ಕಟೀಲ್‌

ಭ್ರಷ್ಟಾಚಾರದಿಂದಾಗಿ ಸೋಲಿನ ಭೀತಿ ಎದುರಿಸುತ್ತಿರುವ ಅವರು ಕನ್ನಡಿಗರಿಗೆ ಬೆದರಿಕೆ ಹಾಕಿ ಮತ ಪಡೆಯಲು ಮುಂದಾಗಿದ್ದಾರೆ. ಬಿಜೆಪಿಗೆ ಮತ ಹಾಕದಿದ್ದರೆ ಕೇಂದ್ರದ ಯೋಜನೆಗಳನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ. ಈ ದೇಶ ಒಕ್ಕೂಟ ವ್ಯವಸ್ಥೆಯಿಂದ ರೂಪುಗೊಂಡಿದೆ. ಕೇಂದ್ರ ಸರ್ಕಾರದ ಆದಾಯದಲ್ಲಿ ಶೇ.41ರಷ್ಟುಕರ್ನಾಟಕ ರಾಜ್ಯದಿಂದ ಹೋಗುತ್ತಿದೆ. ಇದರಲ್ಲಿ ನಮಗೆ ಮರಳಿ ಬರುತ್ತಿರುವುದು ಬಿಡಿಗಾಸಿನಷ್ಟುಮಾತ್ರ. ಯಾವುದ್ಯಾವುದಕ್ಕೋ ನಾವು ಹೆದರಲಿಲ್ಲ, ಇನ್ನು ಇದಕ್ಕೆ ಹೆದರುತ್ತೇವಾ? ಎಂದು ಪ್ರಶ್ನಿಸಿದರು.

ಸ್ವಾಭಿಮಾನದ ಚುನಾವಣೆ:

ಇದು ಕರ್ನಾಟಕದ ಸ್ವಾಭಿಮಾನದ ಚುನಾವಣೆ. ಮೇಕೆದಾಟು ಪಾದಯಾತ್ರೆ ಸಮಯದಲ್ಲಿ ಬಿಜೆಪಿ ಸರ್ಕಾರ ಈ ಯೋಜನೆಗೆ 1 ಸಾವಿರ ಕೋಟಿ ಅನುದಾನ ಘೋಷಣೆ ಮಾಡಿದರು. ಈ ಡಬಲ… ಎಂಜಿನ್‌ ಸರ್ಕಾರ ಇದ್ದಾಗ ಎಲ್ಲಾ ಇಲಾಖೆ ಅನುಮತಿ ಕೊಡಿಸಿ ಕೆಲಸ ಆರಂಭಿಸಲು ಯಾಕೆ ಮುಂದಾಗಿಲ್ಲ. ಈ ಯೋಜನೆಯಲ್ಲಿ ಆಣೆಕಟ್ಟು ನಿರ್ಮಾಣದ ಕಾಮಗಾರಿಗೆ ಬೇಕಾದ ಭೂಮಿ ವಶಕ್ಕೆ ಪಡೆಯಲು ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ. ಮಹದಾಯಿ ವಿಚಾರವಾಗಿ ಪ್ರಹ್ಲಾದ್‌ ಜೋಷಿ ಅವರು ಸಂಭ್ರಮಾಚರಣೆ ಮಾಡಿದರಲ್ಲಾ ಇನ್ನು ಯಾಕೆ ಕೆಲಸ ಆರಂಭಿಸಿಲ್ಲ? ಎಂದು ಕಿಡಿ ಕಾರಿದರು.

Kanakapura Constituency: ನನಗೆ ಸಿಎಂ ಆಗೋ ಅರ್ಹತೆ ಇದೆಯೆಂದು ಹೇಳಿಕೊಂಡ ಡಿಕೆಶಿ!

ಮೇ 15 ರಂದು ಸರ್ಕಾರ ರಚಿಸುತ್ತೇವೆ: ಡಿಕೆಶಿ

ನಿಮ್ಮ ಗುರಿ 113 ಮುಟ್ಟುತ್ತದೆಯೇ ಎಂಬ ಪ್ರಶ್ನೆಗೆ, 113 ನಿಮ್ಮ ಲೆಕ್ಕ. ನಮ್ಮ ಗುರಿ 141. ಮೇ 13ರಂದು ಫಲಿತಾಂಶ ಬರಲಿದೆ. ಮೇ 15ರಂದು ನಾವು ಸರ್ಕಾರ ರಚನೆ ಮಾಡುತ್ತೇವೆ. ಮೋದಲ ಸಂಪುಟದಲ್ಲೇ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ ಎಂದು ತಿಳಿಸಿದರು. ಈ ಗ್ಯಾರಂಟಿ ಯೋಜನೆ ಜಾರಿ ಮಾಡುವ ಸಚಿವ ಸಂಪುಟ ಯಾರ ನೇತೃತ್ವದ್ದಾಗಿರುತ್ತದೆ ಎಂದು ಕೇಳಿದಾಗ, ಮೇ 15ರಂದು ಮಲ್ಲಿಕಾರ್ಜುನ ಖರ್ಗೆ ಅವರು ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು.

ಚುನಾವಣಾ ಆಯೋಗದ ನೋಟಿಸ್‌ಗೆ ಉತ್ತರ ನೀಡಿದ್ದೇವೆ: ಡಿಕೆಶಿ

ಬಿಜೆಪಿಯ ಭ್ರಷ್ಟಾಚಾರದ ರೇಟ್‌ ಕಾರ್ಡ್‌ ಜಾಹೀರಾತಿನ ವಿಚಾರವಾಗಿ ಚುನಾವಣಾ ಆಯೋಗದ ನೋಟೀಸ್‌ಗೆ ಉತ್ತರ ನೀಡಿದ್ದೇವೆ. ಭ್ರಷ್ಟಾಚಾರಕ್ಕೆ ಆಧಾರ ಕೇಳಿದ್ದರು. ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರೇ ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರು. ದರ ಫಿಕ್ಸ್‌ ಆಗಿರುವುದನ್ನು ಹೇಳಿದ್ದರು. ಉಳಿದಂತೆ ಮಾಧ್ಯಮ ವರದಿಗಳು, ಬಿಜೆಪಿ ನಾಯಕರಾದ ಎಚ್‌. ವಿಶ್ವನಾಥ್‌, ಗೂಳಿಹಟ್ಟಿಶೇಖರ್‌ ಅವರ ಹೇಳಿಕೆಗಳೇ ಸಾಕ್ಷಿ. ಈ ಸಾಕ್ಷಿಗಳ ಆಧಾರದ ಮೇಲೆ ಜಾಹೀರಾತು ನೀಡಿದ್ದೇವೆ ಎಂದು ಆಯೋಗಕ್ಕೆ ಉತ್ತರ ನೀಡಿದ್ದೇವೆ. ಆದರೆ, ಅಮಿತ್‌ ಶಾ ಅವರು ಗಲಭೆ ನಡೆಯಲಿದೆ ಎಂಬ ಬೆದರಿಕೆಗೆ ಯಾಕೆ ಆಯೋಗ ನೋಟಿಸ್‌ ನೀಡಿಲ್ಲ ಎಂದು ಪ್ರಶ್ನಿಸಿದರು.