ಈ ಬಾರಿ ಚುನಾವಣೆಯಲ್ಲಿ ವರುಣಾದಲ್ಲಿ ಸ್ಪರ್ಧಿಸಿರುವ ಸಿದ್ದರಾಮಯ್ಯ ಸೋಲುತ್ತಾರೆ, ಕನಕಪುರದಲ್ಲಿ ಡಿಕೆಶಿಗೆ ಟೆನ್ಷನ್‌ ಶುರುವಾಗಿದೆ. ಮಲ್ಲಿಕಾರ್ಜನ ಖರ್ಗೆ, ಡಾ.ಪರಮೇಶ್ವರ್‌ ಅವರನ್ನು ಸೋಲಿಸಿದ ಒಂದು ಗುಂಪು ಇವರನ್ನು ಸೋಲಿಸಲು ಸಿದ್ಧವಾಗಿದೆ ಎಂದು ದ.ಕ. ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಮಂಗಳೂರು (ಮೇ.8) : ಈ ಬಾರಿ ಚುನಾವಣೆಯಲ್ಲಿ ವರುಣಾದಲ್ಲಿ ಸ್ಪರ್ಧಿಸಿರುವ ಸಿದ್ದರಾಮಯ್ಯ ಸೋಲುತ್ತಾರೆ, ಕನಕಪುರದಲ್ಲಿ ಡಿಕೆಶಿಗೆ ಟೆನ್ಷನ್‌ ಶುರುವಾಗಿದೆ. ಮಲ್ಲಿಕಾರ್ಜನ ಖರ್ಗೆ, ಡಾ.ಪರಮೇಶ್ವರ್‌ ಅವರನ್ನು ಸೋಲಿಸಿದ ಒಂದು ಗುಂಪು ಇವರನ್ನು ಸೋಲಿಸಲು ಸಿದ್ಧವಾಗಿದೆ ಎಂದು ದ.ಕ. ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌(Nalin kumar kateel) ಹೇಳಿದ್ದಾರೆ.

ಮಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಇಡೀ ತಂಡ ಬಂದರೂ ಸಿದ್ದರಾಮಯ್ಯ ಮತ್ತು ಡಿಕೆಶಿ(Siddaramaiah and DK Shivakumar) ಅವರ ಸೋಲನ್ನು ತಪ್ಪಿಸಿಕೊಳ್ಳಲಾಗದು. ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪೈಪೋಟಿಯ ನಡುವೆ ಕಾಂಗ್ರೆಸ್‌ನಲ್ಲಿ ಯಾರು ಯಾರನ್ನು ಸೋಲಿಸುತ್ತಾರೆ ಎಂಬುದನ್ನು ಕಾದು ನೋಡಿ ಎಂದರು.

ಸಿದ್ದು-ಡಿಕೆಶಿ ಚರ್ಚೆ ವಿಡಿಯೋ ವೈರಲ್‌: ಕಷ್ಟಸುಖ ಆಲಿಸುತ್ತ ಉಭಯ ನಾಯಕರ ಹರಟೆ

ಚುನಾವಣೆ ಬಂದಾಗ ಸುಳ್ಳು ಭರವಸೆಯ ಗ್ಯಾರಂಟಿ ಕಾರ್ಡ್‌ ನೀಡುವ ಕಾಂಗ್ರೆಸ್‌ಗೆ ಕಳೆದ 60 ವರ್ಷಗಳಲ್ಲಿ ಯಾಕೆ ನೆನಪಾಗಿಲ್ಲ ಎಂದು ನಳಿನ್‌ ಕುಮಾರ್‌ ಪ್ರಶ್ನಿಸಿದರು. ರಾಜಸ್ತಾನ, ಹಿಮಾಚಲ ಪ್ರದೇಶಗಳಲ್ಲಿ ಚುನಾವಣೆ ವೇಳೆ ನೀಡಿದ ಗ್ಯಾರಂಟಿ ಕಾರ್ಡ್‌ ಭರವಸೆ ನಂತರ ಈಡೇರಿಸಲೇ ಇಲ್ಲ. ಪ್ರಧಾನಿಗೆ ಅವಹೇಳನ, ಗೋಹತ್ಯೆ, ಮತಾಂತರ ನಿಷೇಧ ವಾಪಸ್‌, ಬಜರಂಗದಳ ನಿಷೇಧ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್‌ನ್ನು ಜನತೆ ಸಂಪೂರ್ಣ ತಿರಸ್ಕರಿಸಲಿದ್ದಾರೆ ಎಂದರು.

ಇಡೀ ರಾಜ್ಯದಲ್ಲಿ ಬಿಜೆಪಿ ಪರವಾದ ಬೆಂಬಲ ಇದ್ದು, ಕಳೆದ 10 ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ರೋಡ್‌ಶೋ, ರಾರ‍ಯಲಿಗಳಿಂದಾಗಿ ಬಿಜೆಪಿಗೆ ಇನ್ನೂ 15ರಿಂದ 20 ಸೀಟು ಜಾಸ್ತಿ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲದಿದ್ದರೆ ತೊಡಕು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇಲ್ಲದಿದ್ದರೆ ಕೇಂದ್ರ ಯೋಜನೆಗಳನ್ನು ಅನುಷ್ಠಾನಗೊಳಿಸಲು ತೊಡಕು ಉಂಟಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿರುವುದು ಸರಿಯಾಗಿಯೇ ಇದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಕೇಂದ್ರ ಜಾರಿಗೊಳಿಸಿದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿಲ್ಲ. ಅಲ್ಲದೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಏನಾಗುತ್ತದೆ ಎಂಬುದನ್ನು ಪ್ರಣಾಳಿಕೆಯಲ್ಲೇ ಹೇಳಿದ್ದಾರೆ. ಕಾಂಗ್ರೆಸ್‌ ಅಪಪ್ರಚಾರ ಹಾಗೂ ಸುಳ್ಳು ಆರೋಪದಿಂದ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಇದನ್ನು ಜನತೆ ಸಹಿಸುವುದಿಲ್ಲ ಎಂದರು.

ನಿರೀಕ್ಷೆಗೂ ಮೀರಿ ಜನಬೆಂಬಲ : ಕಳೆದ ಒಂದೂವರೆ ವರ್ಷದಿಂದ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ರಾಜ್ಯದಲ್ಲಿ ತಯಾರಿ ನಡೆಸಿದೆ. ನರೇಂದ್ರ ಮೋದಿ ಅವರು ಚುನಾವಣೆಗೆ ಮೊದಲು 16 ಬಾರಿ, ನಂತರ 20 ಬಾರಿ ಕರ್ನಾಟಕ ಪ್ರವಾಸ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಡಬ್ಬಲ್‌ ಎಂಜಿನ್‌ ಸರ್ಕಾರದ ಸಾಧನೆಯನ್ನು ತೋರಿಸಿದ್ದಾರೆ. ಜೆಡಿಎಸ್‌ ಭದ್ರಕೋಟೆ ಹಳೆ ಮೈಸೂರಿನಲ್ಲಿ ಬಿಜೆಪಿಗೆ ಬೆಂಬಲ ಸಿಗುತ್ತಿದೆ. ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ, ಬೆಂಗಳೂರು, ಮೈಸೂರು, ಕರಾವಳಿ ಜಿಲ್ಲೆಗಳಲ್ಲಿ ನಿರೀಕ್ಷೆಗೂ ಮೀರಿ ಜನಬೆಂಬಲ ಬಿಜೆಪಿಗೆ ಸಿಗುತ್ತಿದೆ ಎಂದರು.

ಟಿಕೆಟ್‌ ಹಂಚಿಕೆಯಲ್ಲೂ ಬಿಜೆಪಿ ಎಲ್ಲ ಸಮುದಾಯದ ಸಮಾನತೆಯನ್ನು ಕಾಯ್ದುಕೊಂಡಿದ್ದು, ಸಾಮಾನ್ಯ ಕಾರ್ಯಕರ್ತರಿಗೂ ಟಿಕೆಟ್‌ ನೀಡಿದೆ. ಜನಬೆಂಬಲ ಮತ್ತು ಪಕ್ಷ ಬಿಟ್ಟುಹೋಗುವುದಕ್ಕೂ ವ್ಯತ್ಯಾಸ ಇದ್ದು, ಇದರಿಂದ ಪಕ್ಷಕ್ಕೇನು ತೊಂದರೆಯಾಗದು ಎಂದರು.

ರಾಜ್ಯ ವಕ್ತಾರ ಕ್ಯಾ.ಗಣೇಶ್‌ ಕಾರ್ಣಿಕ್‌, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಎಂ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್‌ ಶೆಟ್ಟಿ, ವಕ್ತಾರ ರವಿಶಂಕರ್‌ ಮಿಜಾರ್‌ ಇದ್ದರು.

ನಾನು ಸಿಎಂ ಸ್ಥಾನ ಆಕಾಂಕ್ಷಿ ಅಲ್ಲ, ಅಪೇಕ್ಷೆಯೂ ಇಲ್ಲ

ನನಗೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೂ ಅಲ್ಲ, ಅಪೇಕ್ಷೆಯೂ ಇಲ್ಲ. ರಾಜ್ಯ ರಾಜಕಾರಣದ ಬಗ್ಗೆ ಆಸಕ್ತಿಯೂ ಇಲ್ಲ, ಪಕ್ಷದ ಹಿರಿಯರು ಪಕ್ಷದ ಜವಾಬ್ದಾರಿ ನೀಡಿದ್ದಾರೆ, ಅದನ್ನು ನಡೆಸಿಕೊಂಡು ಹೋಗುತ್ತಿದ್ದೇನೆ. ನನ್ನ ಅಧ್ಯಕ್ಷ ಸ್ಥಾನದ ಅವಧಿ ಮುಕ್ತಾಯ ಹಂತದಲ್ಲಿದ್ದು, ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟಪಡಿಸಿದರು.

ಸಿದ್ದು-ಡಿಕೆಶಿ ಕಟ್ಟಿ ಹಾಕಲು ಕಮಲಾಧಿಪತಿಗಳ ಮೆಗಾ ಪ್ಲಾನ್! ಬಿಜೆಪಿಗೆ ಬ್ರಹ್ಮಾಸ್ತ್ರ ಸಿದ್ಧಪಡಿಸಿದ ಕಾಂಗ್ರೆಸ್!

ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಸ್ಪರ್ಧೆಯಿಂದ ಬಿಜೆಪಿ ಎದೆಗುಂದಿಲ್ಲ, ಅಲ್ಲಿಗೆ ಸ್ಟಾರ್‌ ಪ್ರಚಾರಕರಾಗಿ ಯೋಗಿ ಆದಿತ್ಯನಾಥ್‌ರನ್ನು ಕರೆಸುವುದು ಮೊದಲೇ ನಿರ್ಧಾರವಾಗಿತ್ತು. ಸ್ಟಾರ್‌ ಪ್ರಚಾರಕರ ಪಟ್ಟಿಮೊದಲೇ ನಿಗದಿಯಾಗಿರುತ್ತದೆ. ಅದರ ಆಧಾರದಲ್ಲಿ ಪುತ್ತೂರಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ನಳಿನ್‌ ಕುಮಾರ್‌ ಉತ್ತರಿಸಿದರು.