Asianet Suvarna News Asianet Suvarna News

Kalyana Rajya Pragati Paksha: ಉತ್ತರ ಕರ್ನಾಟಕದಿಂದ ಉದಯಿಸುತ್ತಿರುವ 4ನೇ ಪಕ್ಷ

ಕನ್ನಡನಾಡು, ಬಿಎಸ್‌ಆರ್‌, ಕೆಜೆಪಿ ಇದೀಗ ರೆಡ್ಡಿ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ನಾಲ್ಕೂ ಪಕ್ಷಗಳು ಬಿಜೆಪಿ ವಿರುದ್ಧ ಬಂಡಾಯವೆದ್ದು ಹುಟ್ಟಿದವು, ಯಡಿಯೂರಪ್ಪ, ಶ್ರೀರಾಮುಲು ಗೆದ್ದು ಬಿಜೆಪಿ ಸೋಲಿಸಿದರು. ಸೋತ ಸಂಕೇಶ್ವರ ರಾಜಕೀಯದಿಂದಲೇ ದೂರ ಉಳಿದರು. 

Kalyana Rajya Pragati Paksha 4th Party Emerging from North Karnataka grg
Author
First Published Dec 26, 2022, 3:55 AM IST

ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ(ಡಿ.26): ಬಹುದಿನಗಳ ಮಾನಸಿಕ ಹೊಯ್ದಾಟದ ಬಳಿಕ ಜನಾರ್ದನ ರೆಡ್ಡಿಯವರು ಕರ್ನಾಟಕದ ಉತ್ತರ ಭಾಗದಲ್ಲಿ ಹೊಸ ರಾಜಕೀಯ ಪಕ್ಷದ ಉದಯಕ್ಕೆ ನಾಂದಿ ಹಾಡಿದ್ದಾರೆ. ಇದು ಉತ್ತರದಲ್ಲಿ ಉದಯವಾಗುತ್ತಿರುವ ನಾಲ್ಕನೇ ರಾಜಕೀಯ ಪಕ್ಷ. ಯಡಿಯೂರಪ್ಪ ಅವರ ಕೆಜೆಪಿ, ಬಿ.ಶ್ರೀರಾಮುಲು ಅವರ ಬಿಎಸ್‌ಆರ್‌, ವಿಜಯ ಸಂಕೇಶ್ವರ ಅವರ ಕನ್ನಡನಾಡು ಪಕ್ಷಗಳು ಜನ್ಮ ತಾಳಿದ್ದು ಇದೇ ನೆಲದಲ್ಲಿ. ಇದೀಗ ಉತ್ತರದ ರಾಜಕೀಯದಲ್ಲಿ ರೆಡ್ಡಿ ಪಕ್ಷದ ಕನವರಿಕೆ ಶುರುವಾಗಿದೆ.

ಬಿಜೆಪಿಯಿಂದ ಬೇಸತ್ತು:

ತಾವು ಹೊಸ ಪಕ್ಷ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ) ಕಟ್ಟಲು ಬಿಜೆಪಿ ಮುಖಂಡರ ತಿರಸ್ಕಾರದ ನಿಲುವು ಕಾರಣ ಎನ್ನುವ ಬೇಸರವನ್ನು ರೆಡ್ಡಿ ಹೊರಹಾಕಿದ್ದಾರೆ. ತಮ್ಮೊಂದಿಗೆ ಬರುವಂತೆ ಆಪ್ತಮಿತ್ರ ಸಚಿವ ಬಿ. ಶ್ರೀರಾಮುಲು, ಸೋದರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಸೇರಿದಂತೆ ಯಾರಿಗೂ ಒತ್ತಾಯಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

Assembly election: ಜನಾರ್ಧನರೆಡ್ಡಿ ಹೊಸ ಪಕ್ಷದ ನಿರ್ಧಾರ ವಾಪಸ್‌ ಪಡೆಯಲಿ: ಸಚಿವ ಸುಧಾಕರ್ ಮನವಿ

ಹುಬ್ಬಳ್ಳಿ ಭಾಗದಲ್ಲಿ ಸೋಲಿಲ್ಲದ ಸರದಾರ ಎನಿಸಿದ್ದ ಉದ್ಯಮಿ ವಿಜಯ ಸಂಕೇಶ್ವರ ಅವರು ಅನಂತಕುಮಾರ ಜತೆ ಮುನಿಸಿಕೊಂಡು ಬಿಜೆಪಿಯಿಂದ ಹೊರ ಬಂದು 2004ರಲ್ಲಿ ತಮ್ಮದೇ ಆದ ‘ಕನ್ನಡನಾಡು ಪಕ್ಷ’ವನ್ನು ಹುಬ್ಬಳ್ಳಿಯಲ್ಲಿ ಆರಂಭಿಸಿ ರಾಜ್ಯಾದ್ಯಂದ ವಿಸ್ತರಿಸಲು ಶ್ರಮಿಸಿದರು. ಯಡಿಯೂರಪ್ಪ, ಅನಂತಕುಮಾರ ಅವರ ಕಟ್ಟಾಅನುಯಾಯಿಯಾಗಿ ರಾಜಕೀಯವಾಗಿ ಎತ್ತರೆತ್ತರಕ್ಕೆ ಬೆಳೆದ ಬಿ.ಶ್ರೀರಾಮುಲು ಕೂಡ ಬಿಜೆಪಿ ನಾಯಕರಿಂದ ತಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬಿತ್ತು ಎಂದು ಬೇಸರಿಸಿಕೊಂಡು 2012ರಲ್ಲಿ ಬಿಎಸ್‌ಆರ್‌ ಪಕ್ಷವನ್ನು (ಬಡವರು, ಶ್ರಮಿಕರು, ರೈತರ ಕಾಂಗ್ರೆಸ್‌) ಬಳ್ಳಾರಿಯಲ್ಲಿ ಆರಂಭಿಸಿದ್ದರು.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆ ಕಲ್ಪಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದ, ಸೈಕಲ್‌ ಮೇಲೆ ರಾಜ್ಯ ಸುತ್ತಿ ಪಕ್ಷ ಸಂಘಟಿಸಿದ್ದ ಯಡಿಯೂರಪ್ಪ ಕೂಡ ಇಂಥದೇ ಬೇಸರದಿಂದ 2013ರಲ್ಲಿ ಬಿಜೆಪಿಯಿಂದ ಹೊರಗೆ ಬಂದು ‘ಕರ್ನಾಟಕ ಜನತಾ ಪಕ್ಷ’ಕ್ಕೆ ಹಾವೇರಿಯಿಂದ ಚಾಲನೆ ನೀಡಿದ್ದರು.

ಬಿಜೆಪಿ ಸೋಲಿಸಿದರು, ತಾವೂ..:

ಬಿಜೆಪಿಯಿಂದ ಸಿಡಿದೆದ್ದು ತಮ್ಮದೇ ಆದ ಹೊಸ ಪಕ್ಷ ಕಟ್ಟಿದ್ದ ಯಡಿಯೂರಪ್ಪ, ಶ್ರೀರಾಮುಲು ಚುನಾವಣೆಯಲ್ಲಿ ತಾವು ಗೆದ್ದರು. ಶ್ರೀರಾಮುಲು ಗೆಲುವಂತೂ ಮಹಾ ವಿಜಯ. ಆದರೆ, ಅವರ ಪಕ್ಷಗಳು ಧೂಳಿಪಟವಾದವು. ಜತೆಗೆ, ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದವು. ಅಷ್ಟರ ಮಟ್ಟಿಗೆ ಅವರ ಸೇಡು ಕೆಲಸ ಮಾಡಿತ್ತು. ವಿಜಯ ಸಂಕೇಶ್ವರ ವಿಷಯದಲ್ಲಿ ಈ ಯಾವುದೇ ಅಚ್ಚರಿಗಳು ನಡೆಯಲಿಲ್ಲ. ಸ್ವತ: ಅವರು ಸೋಲುಂಡರು ಮತ್ತು ಅವರ ಪಕ್ಷ ಹೀನಾಯವಾಗಿ ಸೋಲುಂಡಿತು.

Assembly election:ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ: ಜನಾರ್ಧನರೆಡ್ಡಿ ಅಧಿಕೃತ ಘೋಷಣೆ

ಬಿಜೆಪಿಗೆ ರೆಡ್ಡಿ ಮಗ್ಗಲು ಮುಳ್ಳಾಗುತ್ತಾರಾ?:

ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟುವುದಾಗಿ ಘೋಷಿಸಿರುವುದು ಕಲ್ಯಾಣ ಕರ್ನಾಟಕ ಅಷ್ಟೇ ಅಲ್ಲ, ಇಡೀ ಉತ್ತರ ಕರ್ನಾಟಕದಲ್ಲಿ ಸದ್ಯದ ಮಟ್ಟಿಗೆ ಅಲ್ಪಮಟ್ಟಿನ ಸಂಚಲನ ಮೂಡಿಸಿದೆ. ಕಾರಣ, ಬಳ್ಳಾರಿ, ರಾಯಚೂರು, ವಿಜಯನಗರ, ಕೊಪ್ಪಳ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ರೆಡ್ಡಿ ಪ್ರಭಾವ ಇದೆ. ಆ ಪ್ರಭಾವದ ಹಿಂದೆ ಮಿತ್ರ ಶ್ರೀರಾಮುಲು ಮತ್ತು ಬಿಜೆಪಿ ಎಂಬ ಆಲದ ಮರ ಇತ್ತು. ಇಂದು ರೆಡ್ಡಿ ಏಕಾಂಗಿ, ಮೇಲಾಗಿ ಒಂದು ದಶಕದ ಕಾಲ ಯಾರೊಂದಿಗೂ ಸಂಪರ್ಕ ಕೂಡ ಇಟ್ಟುಕೊಂಡಿಲ್ಲ. ಆದರೆ, ಹಿಂದೆ ಇವರಿಂದ ಸಹಾಯ ಪಡೆದು ಋುಣ ತೀರಿಸುವ ಹಂಬಲ ಹೊಂದಿದವರು, ಚುನಾವಣೆ ವೇಳೆ ಟಿಕೆಟ್‌ ವಂಚಿತ ಬಿಜೆಪಿಗರು ರೆಡ್ಡಿ ಬೆನ್ನಿಗೆ ನಿಲ್ಲುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಜೆಡಿಎಸ್‌ ಮುಖಂಡರು ರೆಡ್ಡಿ ಹಿಂದೆ ಹೋದರೆ ಮುಂಬರುವ ಚುನಾವಣೆಗಳಲ್ಲಿ ಈ ನಾಲ್ಕೈದು ಜಿಲ್ಲೆಗಳಲ್ಲಿ ಬಿಜೆಪಿಗೆ ಜನಾರ್ದನ ರೆಡ್ಡಿ ಮಗ್ಗಲು ಮುಳ್ಳಾಗುವುದನ್ನು ಅಲ್ಲಗಳೆಯುವಂತಿಲ್ಲ.

ಬಿಜೆಪಿಯ ಮೂವರು ಪಕ್ಷ ಕಟ್ಟಿಹಿನ್ನಡೆ ಅನುಭವಿಸಿದ ನೆಲದಲ್ಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಫಲಿತಾಂಶವನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios