Assembly election:ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ: ಜನಾರ್ಧನರೆಡ್ಡಿ ಅಧಿಕೃತ ಘೋಷಣೆ
ನಾನು ಕೆಲಸ ಮಾಡಿದ ಪಕ್ಷದಿಂದ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿ ಮುಂದೆ ಹೆಜ್ಜೆ ಹಾಕುತ್ತೇನೆ ಎಂದು ಮಾಜಿ ಸಚಿವ ಜನಾರ್ಧನರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು (ಡಿ.25): ರಾಜ್ಯದಲ್ಲಿ 2019ರ ಚುನಾವಣೆಯಲ್ಲಿ ಶ್ರೀರಾಮುಲು ಸ್ಪರ್ಧೆ ಮಾಡಿದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಸೀಮಿತಗೊಳಿಸದೇ ಇಡೀ ರಾಜ್ಯದಲ್ಲಿ ರಾಜಕಾರಣದಲ್ಲಿ ಸಕ್ರಿಯವಾಗಿರಲು ಅವಕಾಶ ನೀಡಿದ್ದರೆ ಬಿಜೆಪಿಗೆ 130ಕ್ಕೂ ಅಧಿಕ ಸ್ಥಾನಗಳು ಬರುತ್ತಿದ್ದವು. ಆದರೆ, ನಾನು ಕೆಲಸ ಮಾಡಿದ ಪಕ್ಷದಿಂದ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿ ಮುಂದೆ ಹೆಜ್ಜೆ ಹಾಕುತ್ತೇನೆ ಎಂದು ಮಾಜಿ ಸಚಿವ ಜನಾರ್ಧನರೆಡ್ಡಿ ತಿಳಿಸಿದ್ದಾರೆ.
ನಗರದ ಚಾಲುಕ್ಯ ವೃತ್ತದ ಪಾರಿಜಾತ ಅಪಾರ್ಟ್‌ಮೆಂಟ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಇಷ್ಟೆಲ್ಲಾ ಆದ ಮೇಲೆ ನಾನು ನಿರ್ಧಾರ ಮಾಡಿದ್ದೇನೆ. ಬಸವಣ್ಣನವರು ಹೇಳಿದ ಹಾಗೆ ಯಾವುದೇ ಜಾತಿ ಮತ ಭೇದ ಇಲ್ಲದ ಹಾಗೆ, ಮೇಲು ಕೀಳು ಇಲ್ಲದ ಹಾಗೆ ಕೆಲಸ ಮಾಡಲು ನಿರ್ಧರಿಸಿದ್ದೇನೆ. ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡುವ ಸಲುವಾಗಿ ವಾಜಪೇಯಿ ಅವರನ್ನ ಸ್ಮರಿಸುತ್ತಾ ಸಾರ್ವಜನಿಕ ಬದುಕಿಗೆ ಬರಬೇಕು ಅಂತ ತೀರ್ಮಾನಿಸಿದ್ದೇನೆ. "ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಕಟ್ಟಿ ಮುಂದೆ ಹೆಜ್ಜೆ ಹಾಕುತ್ತೇನೆ ಎಂದು ಹೇಳಿದರು.
ಅಮಿತ್ ಶಾ ಹೇಳಿಕೆ ತೀವ್ರ ನೋವು ತರಿಸಿತ್ತು: ನಾನು ಜೈಲಿನಿಂದ 2018 ರಲ್ಲಿ ಹೊರಗೆ ಬಂದ ಮೇಲೆ ರಾಜಕೀಯ ಬೇಡವೆಂದು ನಿರ್ಧರಿಸಿದ್ದೆನು. ಆಗ ಅಮಿತ್ ಶಾ ಬೆಂಗಳೂರಿಗೆ ಬಂದಿದ್ದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಅಂತ ಘೋಷಣೆ ಮಾಡಿದರು. ಅಮಿತ್ ಶಾ ಅವರನ್ನ ಪತ್ರಕರ್ತರು 2018 ರಲ್ಲಿ ಚುನಾವಣೆಯಲ್ಲಿ ಜರ್ನಾಧನ ರೆಡ್ಡಿ ಪಾತ್ರ ಏನು ಅಂತ ಕೇಳಿದರು. ಆಗ ಬಿಜೆಪಿಗೂ ಅವರಿಗೂ ಸಂಬಂಧ ಇಲ್ಲ ಅಂತ ಅಮಿತ್ ಶಾ ಹೇಳಿದರು. ನಾನು ಟಿವಿಯಲ್ಲಿ ಅದನ್ನ ನೋಡಿದೆ. ಅಮಿತ್ ಶಾ ಯಾಕೆ ಹೀಗೆ ಹೇಳಿದರು ಎಂದು ನನ್ನ ಶ್ರೀಮತಿ ನೊಂದುಕೊಂಡರು. ನಾನು ಅವೆಲ್ಲ ದೇವರಿಗೆ ಬಿಡೋಣ ಅಂತ ಸುಮ್ಮನಾದೆ. ಆದಾಗ ಎರಡು ದಿನಕ್ಕೆ ರಾಮುಲು ಫೋನ್ ಮಾಡಿ ದೆಹಲಿಗೆ ಬಾ ಅಮಿತ್ ಶಾ ಭೇಟಿ ಆಗಬೇಕು ಅಂತ ಹೇಳಿದ್ದಾರೆ ಅಂದರು. ನಾನು ಹೋಗಿ ಅಮಿತ್ ಶಾ ಭೇಟಿಯಾದಾಗ ಮಾಧ್ಯಮಗಳಲ್ಲಿ ಹೇಳಿದ ಮಾತಿಗೆ ಬೇಜಾರ್ ಆಗಬೇಡಿ. ನನ್ನ ಹೇಳಿಕೆಯಿಂದ ಬಿಜೆಪಿಗೆ ಕಷ್ಟ ಆಗುತ್ತೆ ಅಂತ ಎಲ್ಲರೂ ಹೇಳಿದ್ದಾರೆ. ನಿಮ್ಮ ರಾಮುಲು ಸಂಬಂಧ ಉತ್ತಮವಾಗಿದ್ದು, ಅವರನ್ನು ವಿಧಾನಸಭೆಗೆ ಕಳಿಸುವುದಾಗಿ ತಿಳಿಸಿದರು.
Assembly election: ಮಾಜಿ ಸಚಿವ ಜನಾರ್ಧನ ರೆಡ್ಡಿ ಸುದ್ದಿಗೋಷ್ಠಿ ಆರಂಭ: ಹೊಸ ಪಕ್ಷ ಘೋಷಣೆ ಆಗುತ್ತಾ?
ರಾಮುಲು ಪರವಾಗಿ ಕೆಲಸ ಮಾಡುವಂತೆ ಅಮಿತ್‌ಶಾ ಸೂಚನೆ: ಅಮಿತ್ ಶಾ ಅವರು ನಾನು ಈಗ ಹೇಳಿಕೆ ಕೊಟ್ಟು ಪಕ್ಷಕ್ಕೆ ತೆಗೆದುಕೊಂಡರೆ ಸರಿ ಅಲ್ಲ. ರಾಮುಲು ಮೊಳಕಾಲ್ಮೂರಿಗೆ ಹೋಗ್ತಾರೆ ನೀವು ಸಹಾಯ ಮಾಡಿ ಎಂದು ಹೇಳಿದರು. ಆಗ ನಾನು ವಾಜಪೇಯಿ, ಅಡ್ವಾಣಿ ಅವರ ಜೊತೆಗಿನ ಸಂಬಂಧ ಹೇಳಿದೆ ಅಮಿತ್ ಶಾ ಅವರಿಗೂ ಹೇಳಿದೆ. ಬಿಜೆಪಿ ನನ್ನ ಕಣಕಣದಲ್ಲಿ ಇದೆ. ಬಿಜೆಪಿಗೋಸ್ಕರ ಏನು ಬೇಕಾದರೂ ಮಾಡ್ತೀನಿ ಅಂತ ಹೇಳಿದ್ದರು. ಚುನಾವಣೆ ಆದ ಮೇಲೆ ಉತ್ತಮ ಸ್ಥಾನ ಕೊಡುತ್ತೇವೆ ಎಂದು ಭರವಸೆಯನ್ನೂ ನೀಡಿದ್ದರಿಂದ ನಾನು ರಾಮುಲು ಪರವಾಗಿ ಕೆಲಸ ಮಾಡಿದೆ ಎಂದರು.
104 ಸ್ಥಾನ ಬಂದರೂ ಸ್ಥಾನಮಾನ ಸಿಗಲಿಲ್ಲ: ರಾಜ್ಯದಲ್ಲಿ ಬಿಜೆಪಿಗೆ 104 ಸ್ಥಾನ ಬಂತು. ಬಳಿಕ ಅಮಿತ್ ಶಾ ಜೊತೆ ಸಂಪರ್ಕ ಮಾಡಲು ಪ್ರಯತ್ನ ಮಾಡಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಬಿಜೆಪಿಗೆ ಸೇರೋಕೆ ರೆಡ್ಡಿ ಕಾಯ್ತಿದ್ದಾರೆ. ಬಿಜೆಪಿ ಸರಿಯಾಗಿ ನಡೆಸಿಕೊಳ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದವು. 2018 ರಲ್ಲಿ ಸ್ವಂತ ನಿರ್ಧಾರ ತಗೋಬೇಕಿತ್ತು. ಆದರೆ ನಾನು ತೆಗೆದುಕೊಳ್ಳಲಿಲ್ಲ ಎಂದರು.
ಮೊಳಕಾಲ್ಮೂರಿಗೆ ಸೀಮಿತಗೊಳಿಸಿ ಎಡವಟ್ಟು: ವಿಜಯೇಂದ್ರ ಅವರು ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದರು. ಆದರೆ ವಿಜಯೇಂದ್ರಗೆ ಟಿಕೆಟ್ ಕೊಡೊಲ್ಲ ಅಂತ ಮೊದಲೇ ಹೈಕಮಾಂಡ್ ಹೇಳಬೇಕಿತ್ತು. ನಾಮಪತ್ರ ಸಲ್ಲಿಕೆಗೆ ಅವರು ರೆಡಿ ಮಾಡಿಕೊಂಡಿದ್ದರು. ರಾಮುಲು ಕೂಡಾ ವಿಜಯೇಂದ್ರ ನಾಮಪತ್ರ ಸಲ್ಲಿಕೆಗೆ ಹೋಗಬೇಕು ಅಂತ ಹೇಳಿದ್ದರು. ಆದರೆ ವೇದಿಕೆ ಮೇಲೆ ಯಡಿಯೂರಪ್ಪ ವಿಜಯೇಂದ್ರ ಸ್ಪರ್ಧೆ ಮಾಡೊಲ್ಲ ಎಂದು ಹೇಳಿದರು. ಯಾರ ಒತ್ತಡ ಹಾಕಿದ್ದಾರೋ ಅಂತ ನಮಗೆ ಅನ್ನಿಸಿತು. ತಂದೆ ಬಾಯಲ್ಲಿ ಹೀಗೆ ಹೇಳಿಸೋಕೆ ಏನೆಲ್ಲ ಒತ್ತಡ ಇತ್ತೋ? ಅವತ್ತು ವಿಜಯೇಂದ್ರಗೆ ಟಿಕೆಟ್ ಕೊಟ್ಟಿದ್ದರೆ ಇನ್ನಷ್ಟು ಸ್ಥಾನ ಬಿಜೆಪಿಗೆ ಬರುತ್ತಿತ್ತು. ನನ್ನನ್ನ ಮೊಳಕಲ್ಮೂರಿಗೆ ಸೀಮಿತ ಮಾಡದೇ ಇದ್ದಿದ್ದರೆ 130 ಸ್ಥಾನ ಬಿಜೆಪಿಗೆ ಬರುತ್ತಿತ್ತು ಎಂದು ಹೇಳಿದರು.
ಜನಾರ್ದನರೆಡ್ಡಿಗೆ ಶುಭಕೋರಿ ಶ್ರೀಕನಕದುರ್ಗಮ್ಮ ದೇವಿಗೆ 101 ತೆಂಗಿನಕಾಯಿ ಸಮರ್ಪಣೆ
ಸತ್ಯವಾಗಿ ಹೇಳ್ತೇನೆ ಅಕ್ರಮ ಗಣಿಗಾರಿಕೆ ಮಾಡಿಲ್ಲ: ನಮ್ಮ ಏಳಿಗೆಯನ್ನು ಸಹಿಸದ ರಾಜಕೀಯ ವಿರೋಧಿಗಳು ನಮ್ಮ ಗಣಿಗಾರಿಕೆ ಉದ್ಯಮ ಹಾಗೂ ಜೀವನವನ್ನು ನಾಶ ಮಾಡುವ ಉದ್ದೇಶದಿಂದಲೇ ಅಕ್ರಮ ಗಣಿಗಾರಿಕೆಯ ಕುರಿತು ಅಪಪ್ರಚಾರ ಮಾಡಿದ್ದರು. ಸತ್ಯವಾಗಿ ಹೇಳ್ತೀನಿ., ನಾನು ಅಕ್ರಮ ಗಣಿಗಾರಿಕೆ ಮಾಡಿಲ್ಲ. ನಾನು ಮಾಡಿದ್ದು ಸಕ್ರಮ ಗಣಿಗಾರಿಕೆ. ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ನಾನು ನಿರ್ದೋಷಿಯಾಗಿ ಬರ್ತೀನಿ ಎಂದು ಹೇಳಿದರು.
ಆಕ್ರಮಣಕಾರಿಯಾಗಿ ಬಂಧನವಾಯ್ತು: ಅಕ್ರಮ ಗಣಿಗಾರಿಕೆ ವಿಚಾರವಾಗಿ ಅಕ್ರಮವಾಗಿ ನನ್ನನ್ನ ಬಂಧನ ಮಾಡೋಕೆ ಬಂದವರು ಆಕ್ರಮಣಕಾರಿಯಾಗಿ ಬಂಧನ ಮಾಡಿದರು. ನನ್ನ ಬಂಧನ ಮಾಡಲೇಬೇಕು ಅಂತ ನಿರ್ಧರಿಸಿದ್ದರು. ಸುಷ್ಮಾ ಸ್ವರಾಜ್ ಗೆ ಸಹಾಯ ಮಾಡಿದ್ದಕ್ಕೆ 2011 ರಲ್ಲಿ ನನಗೆ ಬಂಧನ ಮಾಡಿದ್ದಾರೆ. ನಾನು ಕಷ್ಟದಲ್ಲಿ ಇದ್ದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಬಿಟ್ಟು ಇನ್ಯಾರು ನನ್ನ ಮನೆಗೆ ಬಂದಿರಲಿಲ್ಲ. ಅವರು ಇಬ್ಬರು ಮಾತ್ರ ನನಗೆ ಧೈರ್ಯ ತುಂಬಿದ್ದರು. ಅವರನ್ನು ನಾನು ನೆನಪು ಮಾಡಿಕೊಳ್ತೀನಿ ಎಂದರು.
ಎಲ್ಲರನ್ನು ಮೆರೆಸಿದ ನಾನೇ ಮೋಸ ಹೋದೆ: ರಾಜ್ಯ ರಾಜಕಾರಣದಲ್ಲಿ ನನ್ನವರೇ ಅಂತ ನಾನು ಎಲ್ಲರನ್ನು ಮೆರೆಸಿದರೂ ನಾನೇ ಮೋಸ ಹೋದೆ. ಇದನ್ನ ನನ್ನ ಸ್ನೇಹಿತರು ಈಗಲೂ ಹೇಳ್ತಾರೆ. ನನ್ನ ಜೊತೆ ಕಷ್ಟದಲ್ಲಿ ಯಾರು ಬಂದಿಲ್ಲ. ನಾನು ಚೆನ್ನಾಗಿ ಇದ್ದಾಗ ಎಲ್ಲರು ಹೊಗಳಿದ್ದರು. ಆದರೆ, ಕಷ್ಟದಲ್ಲಿ ಯಾರು ಬಂದಿಲ್ಲ. ಹೆಲಿ ಟೂರಿಸಂ ಮಾಡೋ ಕೆಲಸಕ್ಕೆ ನಾನು ಕೈ ಹಾಕಿದ್ದೆ. ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಇದಕ್ಕೆ ಸಹಿ ಆಗಿತ್ತು. ಕೃಷ್ಣದೇವರಾಯ ಪುತ್ಥಳಿ, ಬಸವಣ್ಣ ಪುತ್ಥಳಿ ನಿರ್ಮಾಣ ಮಾಡೋ ಕನಸು ಇತ್ತು. ಪ್ರವಾಸೋದ್ಯಮ ಅಭಿವೃದ್ಧಿ ಗೆ ಪ್ಲ್ಯಾನ್ ಮಾಡಿದ್ದೆ ಎಲ್ಲವೂ ಕನಸಾಗಿಯೇ ಉಳಿಯಿತು ಎಂದು ತಿಳಿಸಿದರು.