ಹಿಂದುಳಿದ ವರ್ಗಕ್ಕೆ ಚೊಂಬು ಕೊಟ್ಟ ಸಿಎಂ ಸಿದ್ದರಾಮಯ್ಯ: ಉಮೇಶ್ ಜಾಧವ್ ಆಕ್ರೋಶ
ಸಿದ್ದರಾಮಯ್ಯನವರು ಕೋಲಿ, ಹಡಪದ, ಸವಿತಾ, ಗಾಣಿಗ, ವಿಶ್ವಕರ್ಮ, ಈಡಿಗ, ಕ್ಷತ್ರಿಯ, ಕುರುಬ, ಕುಂಬಾರ, ಉಪ್ಪಾರ, ಮಡಿವಾಳ, ನೇಕಾರ ಮುಂತಾದ ಹಿಂದುಳಿದ ಸಮುದಾಯಗಳ ಮೀಸಲಾತಿ ಹಕ್ಕನ್ನು ಕಸಿದುಕೊಂಡಿದ್ದಾರೆ. ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ ಖರ್ಗೆ ಮೌನ ವಹಿಸಿರುವುದು ಹಿಂದುಳಿದ ವರ್ಗಗಳಿಗೆ ದ್ರೋಹ ಮಾಡುವ ಹುನ್ನಾರವಲ್ಲವೆ? ಎಂದು ಕಿಡಿಕಾರಿದ ಜಾಧವ್
ಕಲಬುರಗಿ(ಏ.28): ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಮುಸ್ಲಿಮರನ್ನು ಸೇರ್ಪಡೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಈಗ ಮತ್ತೆ ಚೊಂಬು ಕೊಟ್ಟಿದ್ದಾರೆ ಎಂದು ಲೋಕಸಭಾ ಕಣದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಕೂಡಲೇ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಮುಸ್ಲಿಮರ ಸೇರ್ಪಡೆಯ ಕುರಿತಾಗಿ ರಹಸ್ಯವಾಗಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆದಿದ್ದು ಓಬಿಸಿ ಕಮಿಷನ ಸಿಎಂ ಗೆ ನೋಟಿಸ್ ಕೂಡ ನೀಡಿದ್ದಾರೆ.
ಸಚಿವ ಖಂಡ್ರೆ ಆಪ್ತ ಮೋದಿಗೆ ಐಟಿ ಶಾಕ್, ಕಾರು ಸಹಿತ ಹಣ ಜಪ್ತಿ, ಬೆಂಗಳೂರಿನಿಂದ ರೈಲಲ್ಲಿ ಬಂತಾ 2 ಕೋಟಿ!?
ಆ ಮೂಲಕ ಸಿದ್ದರಾಮಯ್ಯ ನವರು ಕೋಲಿ, ಹಡಪದ, ಸವಿತಾ, ಗಾಣಿಗ, ವಿಶ್ವಕರ್ಮ, ಈಡಿಗ, ಕ್ಷತ್ರಿಯ, ಕುರುಬ, ಕುಂಬಾರ, ಉಪ್ಪಾರ, ಮಡಿವಾಳ, ನೇಕಾರ ಮುಂತಾದ ಹಿಂದುಳಿದ ಸಮುದಾಯಗಳ ಮೀಸಲಾತಿ ಹಕ್ಕನ್ನು ಕಸಿದುಕೊಂಡಿದ್ದಾರೆ. ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ ಖರ್ಗೆ ಮೌನ ವಹಿಸಿರುವುದು ಹಿಂದುಳಿದ ವರ್ಗಗಳಿಗೆ ದ್ರೋಹ ಮಾಡುವ ಹುನ್ನಾರವಲ್ಲವೆ? ಎಂದು ಜಾಧವ್ ಕಿಡಿಕಾರಿದ್ದಾರೆ.
ಎಸ್ಸಿ, ಎಸ್ಟಿ ಮೀಸಲಾತಿಯನ್ನು ಕಬಳಿಸಿ ತಮ್ಮ ವೋಟ್ ಬ್ಯಾಂಕ್ ಮುಸ್ಲಿಮರಿಗೆ ಕೊಡುವ ಕಾಂಗ್ರೆಸ್ ಸರಕಾರದ ಈ ಕುಟಿಲ ಕ್ರಮ ಬಹಳ ಅಪಾಯಕಾರಿ ಬೆಳವಣಿಗೆಯಾಗಿದೆ. ಸಿದ್ದರಾಮಯ್ಯ ತನ್ನ ತುಷ್ಟಿಕರಣ ರಾಜಕಾರಣಕ್ಕಾಗಿ ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರಿಸುವ ಮೂಲಕ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ತಿದ್ದುಪಡಿ ಬಿಜೆಪಿ ಮಾಡುತ್ತಿದೆ ಎಂದು ಬಾಯಿ ಬಡಿದುಕೊಳ್ಳುವ ಕಾಂಗ್ರೆಸ್ ಈಗ ಸಂವಿಧಾನದ ಹಕ್ಕು ಕಸಿಯುತ್ತಿರುವ ಬಗ್ಗೆ ರಾಜ್ಯದ ಜನತೆಗೆ ಉತ್ತರ ನೀಡಲಿ. ಬಿಜೆಪಿ ಆಡಳಿತ ವಿದ್ದಾಗ ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ಶೇಕಡಾ ಎರಡರಷ್ಟು ಮೀಸಲಾತಿ ಕಲ್ಪಿಸಲು ಮುಂದಾದಾಗ ಕಾಂಗ್ರೆಸ್ ಅದನ್ನು ಪ್ರಬಲವಾಗಿ ವಿರೋಧಿಸಿತು. ಈಗ ಚುನಾವಣೆಯ ಕಾರಣದಿಂದ ದಲಿತ ಒಬಿಸಿ ಮೀಸಲಾತಿ ಕಬಳಿಸುತ್ತಿಲ್ಲ ಮುಸ್ಲಿಮರಿಗೆ ನೀಡುತ್ತಿಲ್ಲ ಎಂದು ಸಿದ್ದರಾಮಯ್ಯ ಹಸಿಹಸಿ ಸುಳ್ಳು ಹೇಳುತ್ತಿದ್ದಾರೆ. ಹಾಗಿದ್ದರೆ ಈ ಪ್ರಸ್ತಾಪ ಒಬಿಸಿ ರಾಷ್ಟ್ರೀಯ ಕಮಿಷನ್ ಗೆ ಕಳುಹಿಸದಿದ್ದರೆ ಸಿಎಂಗೆ ಕಮಿಷನ ನೋಟಿಸ್ ನೀಡಿರುವುದು ಯಾಕೆ? ಎಂದು ಜಾಧವ್ ಪ್ರಶ್ನಿಸಿದರು.
ಕೋಲಿ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವ ಪ್ರಸ್ತಾಪದ ಬಗ್ಗೆ ಬಿಜೆಪಿಯು ಸಂಸತ್ತಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಶೀಘ್ರದಲ್ಲೇ ಅನುಷ್ಠಾನಗೊಳ್ಳುವ ಹಂತದಲ್ಲಿದ್ದರೂ ಕಳೆದ 50 ವರ್ಷಗಳಿಂದ ರಾಜಕೀಯದಲ್ಲಿ ವಿವಿಧ ಸ್ಥಾನಮಾನಗಳಲ್ಲಿ ಇದ್ದ ಮಲ್ಲಿಕಾರ್ಜುನ ಖರ್ಗೆಯವರು ಈ ಬಗ್ಗೆ ತುಟಿ ಬಿಚ್ಚಲಿಲ್ಲ. ಗುರುಮಠಕಲ್ ಕ್ಷೇತ್ರದ 90 ಸಾವಿರ ಮತಗಳನ್ನು ಸುಳ್ಳು ಹೇಳಿ ಬುಟ್ಟಿಗೆ ಹಾಕಿ ಎಂಟು ಸಲ ಗೆದ್ದರೂ ಕೋಲಿ ಸಮಾಜಕ್ಕೆ ನ್ಯಾಯ ಕೊಡಲು ಸಾಧ್ಯವಾಗಲಿಲ್ಲ.
ರಾಜ್ಯಸಭೆಯಲ್ಲಿ ಎಸ್ ಟಿ ಬಿಲ್ ಚರ್ಚೆಗೆ ಬಂದಾಗ ಸಭಾತ್ಯಾಗ ಮಾಡಿ ಈ ಬಗ್ಗೆ ಕೋಲಿ ಬಂಧುಗಳ ಧ್ವನಿ ಯಾಗದೆ ಮೋಸ ಮಾಡಿದರು. ಕೋಲಿ , ದಲಿತ ಮತ್ತು ಹಿಂದುಳಿದ ವರ್ಗಗಳ ಉದ್ಧಾರಕರೆಂದು ಮೊಸಳೆ ಕಣ್ಣೀರು ಸುರಿಸುವ ಖರ್ಗೆ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷದ ನಿಜ ಬಣ್ಣ ಈಗ ಬಯಲಾಗಿದೆ. ಕಾಂಗ್ರೆಸ್ ನವರು ಮತ ಕೇಳಲು ಬಂದಾಗ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಮುಸ್ಲಿಮರ ಸೇರ್ಪಡೆ ಯಾಕೆ ಮಾಡುತ್ತಿದ್ದೀರಿ? ಎಂಬ ಪ್ರಶ್ನೆಯನ್ನು ಕೇಳಿ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಸಮುದಾಯದವರು ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಬಿಜೆಪಿಯ ತೆಂಗಿನ ಚಿಪ್ಪು ಜಾಹೀರಾತಿಗೆ ಸಿಎಂ ಸಿದ್ದರಾಮಯ್ಯ ಗರಂ
ಭಾರತ ಸ್ವಾತಂತ್ರ್ಯ ಗಳಿಸಿ 75 ವರ್ಷ ಸಂದರೂ ಕಾಂಗ್ರೆಸ್ ಪಕ್ಷವು ಮುಗ್ಧ ಜನರಿಗೆ ಇನ್ನೂ ಚೊಂಬು ಕೊಡುವುದನ್ನು ನಿಲ್ಲಿಸಿಲ್ಲ. ಅದಕ್ಕೆ ಈ ಬಾರಿ ಹಿಂದುಳಿದ ವರ್ಗಗಳು ಕಾಂಗ್ರೆಸ್ಸಿಗೆ ತಕ್ಕ ಶಿಕ್ಷೆ ನೀಡಲಿದ್ದಾರೆ ಎಂದು ಜಾಧವ್ ಹೇಳಿದ್ದಾರೆ.