Asianet Suvarna News Asianet Suvarna News

ಹಾವು ಮುಂಗುಸಿಯಂತಾಡುವ ಅಣ್ಣ ತಂಗಿ ಜಗನ್, ಶರ್ಮಿಳಾ: ಅಣ್ಣ ಅತ್ತಿಗೆ ಬಳಿ ಪಡೆದ ಸಾಲ ಒಂದೆರಡು ಕೋಟಿ ಅಲ್ಲ!

ಕಡಪಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಆಂಧ್ರ ಪ್ರದೇಶ ಸಿಎಂ ಜಗನ್ ಸೋದರಿ ಶರ್ಮಿಳಾ ರೆಡ್ಡಿ ಆಸ್ತಿ ಘೋಷಣೆ ಮಾಡಿದ್ದು, ಆಸ್ತಿಗೆ ಸರಿ ಸಮಾನವಾದಷ್ಟು ಸಾಲವನ್ನು ಕೂಡ ಹೊಂದಿದ್ದಾರೆ.

Kadapa Lok sabha constituency congress candidate YS Sharmila Reddy Richer than her Businessmen husband her asset details here akb
Author
First Published Apr 22, 2024, 3:34 PM IST

ಅಮರಾವತಿ: ಆಂಧ್ರ ಪ್ರದೇಶದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ಕುಟುಂಬದೊಳಗಿನ ರಾಜಕೀಯ ಕಲಹ ಇಂದು ನಿನ್ನೆಯದ್ದಲ್ಲ, ಅಣ್ಣ ಜಗನ್ ಜೊತೆ ಕಿತ್ತಾಡಿಕೊಂಡು ಕಾಂಗ್ರೆಸ್ ಸೇರಿರುವ ಜಗನ್ ಮೋಹನ್ ರೆಡ್ಡಿ ಸೋದರಿ ಹಾಗೂ ಅವಿಭಾಜಿತ ಆಂಧ್ರ ಪ್ರದೇಶ ಸಿಎಂ ಆಗಿದ್ದ ವೈಸಿ ರಾಜಶೇಖರ ರೆಡ್ಡಿ ಪುತ್ರಿಯೂ ಆಗಿರುವ ಶರ್ಮಿಳಾ ರೆಡ್ಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಂಧ್ರ ಪ್ರದೇಶದ ಕಡಪಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದು, ಸೋದರ ಸಂಬಂಧಿಗೆ ಪ್ರಬಲ ಸ್ಪರ್ಧೆಯೊಡ್ಡಲು ಸಿದ್ಧರಾಗಿದ್ದಾರೆ. ಹೀಗಾಗಿ ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ವಿವರದ ಅಫಿಡವಿಟ್ ಅನ್ನು ಕೂಡ ಶರ್ಮಿಳಾ ನೀಡಿದ್ದು ಇವರ ಸಾಲವೇ ಕೋಟ್ಯಾಂತರ ರೂಪಾಯಿ ಇದೆ. ಅದರಲ್ಲೂ ತನ್ನ ಸ್ವಂತ ಸಹೋದರ ಜಗನ್ ವಿರುದ್ಧ ಸದಾ ಮುಸುಕಿನ ಗುದ್ದಾಟ ಹಾಗೂ ಕೆಲವೊಮ್ಮೆ ಬಹಿರಂಗವಾಗಿಯೇ ವಾಗ್ದಾಳಿ ನಡೆಸುವ ಶರ್ಮಿಳಾ, ಅವರ ಬಳಿಯೇ ಕೋಟ್ಯಾಂತರ ಮೊತ್ತದಲ್ಲಿ ಸಾಲ ಮಾಡಿದ್ದಾರೆ. ಬರೀ ಜಗನ್ ಬಳಿ ಮಾತ್ರವಲ್ಲ, ಅತ್ತಿಗೆ ಬಳಿಯೂ ಕೋಟಿ ಲೆಕ್ಕದಲ್ಲಿ ಸಾಲ ಮಾಡಿದ್ದಾರೆ ಶರ್ಮಿಳಾ ರೆಡ್ಡಿ. ಚುನಾವಣಾ ಆಯೋಗಕ್ಕೆ ಸ್ವತ ಅವರೇ ಸಲ್ಲಿಸಿರುವ ಆಸ್ತಿ ಘೋಷಣೆಯ ಅಫಿಡವಿಟ್‌ನಲ್ಲಿ ಈ ಡಿಟೇಲ್ ಇದೆ. 

ಆಂಧ್ರ ಪ್ರದೇಶದ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷೆಯೂ ಆಗಿರುವ ವೈಎಸ್ ಶರ್ಮಿಳಾ ರೆಡ್ಡಿ ಅವರು ತಮ್ಮ ಕುಟುಂಬದ ಆಸ್ತಿ ಘೋಷಣೆ ಮಾಡಿದ್ದು, ಒಟ್ಟು 132.56 ಕೋಟಿ ಮೊತ್ತದ ಆಸ್ತಿಯನ್ನು ಹೊಂದುವ ಮೂಲಕ  ಪತಿ ಉದ್ಯಮಿ ಎಂ ಅನಿಲ್ ಕುಮಾರ್‌ಗಿಂತ ತಾವೇ ಶ್ರೀಮಂತರಾಗಿದ್ದಾರೆ. ಗಂಡ ಹೆಂಡತಿ ಇಬ್ಬರೂ ಸೇರಿ ಒಟ್ಟು 118.58 ಕೋಟಿ ಸಾಲವನ್ನು ಹೊಂದಿದ್ದಾರೆ. ಉದ್ಯಮಿಯಾಗಿರುವ ಗಂಡ ಅನಿಲ್‌ ಕುಮಾರ್‌ಗೆ ಶರ್ಮಿಳಾ ಅವರು 30 ಕೋಟಿ ಸಾಲ ನೀಡಿದ್ದಾರೆ. ಇದರ ಜೊತೆಗೆ ಶರ್ಮಿಳಾ ಅವರ ತಾಯಿ ವಿಜಯಮ್ಮ ಅವರಿಂದಲೂ ಅನಿಲ್‌ ಕುಮಾರ್ 40 ಲಕ್ಷ ರೂ ಸಾಲ ಪಡೆದಿದ್ದಾರೆ.  ಇದಲ್ಲದೇ ರೋಧ ಇನ್ಫ್ರಾಸ್ಟ್ರಕ್ಚರ್‌ನಲ್ಲಿ 4 ಕೋಟಿ ಸಾಲ ಮಾಡಿದ್ದಾರೆ. ಹಾಗೆಯೇ ಎಂ ರತನ್ ಎಂಬುವವರ ಬಳಿ 50 ಲಕ್ಷ ವೈಯಕ್ತಿಕ ಸಾಲ ಮಾಡಿದ್ದಾರೆ. 

ಲೋಕ ಕದನ: ವೈಎಸ್‌ಆರ್‌ ಕೋಟೆಯಲ್ಲಿ ಸೋದರನಿಗೆ ಸೋದರಿ ಶರ್ಮಿಳಾ ಸವಾಲು

ಅಫಿಡವಿಟ್‌ನಲ್ಲಿ ಶರ್ಮಿಳಾ ಅವರು ತಮ್ಮ ಉದ್ಯೋಗವನ್ನ ಉದ್ಯಮಿ ಹಾಗೂ ಕೃಷಿಕೆ ಎಂದು ಹೇಳಿಕೊಂಡಿದ್ದಾರೆ. ಇತ್ತ ಶರ್ಮಿಳಾ ಅವರು ತಮ್ಮ ಸೋದರ ಜಗನ್‌ ಅವರಿಂದ 82.58 ಕೋಟಿ ಸಾಲ ಪಡೆದಿದ್ದಾರೆ. ಹಾಗೆಯೇ ಅತ್ತಿಗೆ ವೈಎಸ್ ಭಾರತಿ ಅವರ ಬಳಿಯೂ 19.56 ಕೋಟಿ ಸಾಲ ಪಡೆದಿದ್ದಾರೆ. ಇದರ ಜೊತೆಗೆ 8.31 ಕೋಟಿ ಮೊತ್ತದ ಚಿನ್ನಾಭರಣವನ್ನು ಶರ್ಮಿಳಾ ಹೊಂದಿದ್ದಾರೆ.  ಪತಿ ಅನಿಲ್‌ ಕುಮಾರ್ ಅವರು 1.24 ಕೋಟಿ ಮೊತ್ತದ ಆಭರಣ ಹೊಂದಿದ್ದಾರೆ. ಶರ್ಮಿಳಾ ಅವರ ಬಳಿ 123.26 ಕೋಟಿ ಮೊತ್ತದ ಚರಾಸ್ತಿ ಇದೆ.  9.29 ಕೋಟಿ ಮೊತ್ತದ ಸ್ಥಿರಾಸ್ತಿ ಇದೆ.  ಪತಿ ಅನಿಲ್ ಕುಮಾರ್ ಬಳಿ 45.19 ಕೋಟಿ ಮೊತ್ತದ ಚರಾಸ್ತಿ ಇದ್ದು,  4.05 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.  

ಇದರ ಜೊತೆಗೆ ಶರ್ಮಿಳಾ ವಿರುದ್ಧ 8 ಕ್ರಿಮಿನಲ್ ಪ್ರಕರಣಗಳಿವೆ. ಇದರಲ್ಲಿ ಆರು ಪ್ರಕರಣಗಳು ನೆರೆಯ ತೆಲಂಗಾಣ ರಾಜ್ಯದಲ್ಲಿ ವಿವಿಧ ಪ್ರತಿಭಟನೆಗಳಲ್ಲಿ ಭಾಗಿಯಾದಾಗ ದಾಖಲಾದ ಪ್ರಕರಣಗಳಾಗಿವೆ. ತೆಲಂಗಾಣದಲ್ಲಿ 2021ರಲ್ಲಿ ಶರ್ಮಿಳಾ ವೈಎಸ್‌ಆರ್ ತೆಲಂಗಾಣ ಪಾರ್ಟಿಯನ್ನು ಸ್ಥಾಪಿಸಿದ್ದರು. ಆದರೆ ಈ ವರ್ಷದ ಚುನಾವಣೆಯ ವೇಳೆ ಅದನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿದ್ದರು. 

ಚುನಾವಣಾ ಪ್ರಚಾರದ ವೇಳೆ ಕಲ್ಲು ತೂರಾಟ, ಸಿಎಂ ಜಗನ್ ಮೋಹನ್ ರೆಡ್ಡಿಗೆ ಗಾಯ!

ಕಡಪಾದಲ್ಲಿ ಸೋದರ ಜಗನ್‌ ನೇತೃತ್ವದ ವೈಎಸ್ಆರ್ ಪಕ್ಷದಿಂದ ಶರ್ಮಿಳಾ ಸೋದರ ಸಂಬಂಧಿಯೇ ಆಗಿರುವ ಅವಿನಾಶ್ ರೆಡ್ಡಿ ಸ್ಪರ್ಧಿಸಿದ್ದು, ಸೋದರ ಸಂಬಂಧಿಯನ್ನು ಸೋಲಿಸುವ ಹುರುಪಿನಲ್ಲಿ ಶರ್ಮಿಳಾ ಇದ್ದಾರೆ. ಇನ್ನು ನಾಮಪತ್ರ ಸಲ್ಲಿಕೆ ವೇಳೆ ವೈ ಎಸ್ ಸುನೀತಾ ರೆಡ್ಡಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕಿ ತುಳಸಿ ರೆಡ್ಡಿ ಶರ್ಮಿಳಾ ಜೊತೆಗಿದ್ದರು. ಇವರಲ್ಲಿ ಸುನೀತಾ ರೆಡ್ಡಿ ಕೆಲವರ್ಷಗಳ ಹಿಂದೆ ಕೊಲೆಯಾದ ವಿವೇಕಾನಂದ ರೆಡ್ಡಿಯವರ ಪುತ್ರಿಯಾಗಿದ್ದಾರೆ. ಕಡಪಾದಲ್ಲಿ ಶರ್ಮಿಳಾ ವಿರುದ್ಧ ಕಣಕ್ಕಿಳಿದಿರುವ ಅವಿನಾಶ್ ರೆಡ್ಡಿ ಅವರೇ ವಿವೇಕಾನಂದ ಅವರ ಹತ್ಯೆ ಮಾಡಿದ್ದಾರೆ ಎಂದು ಶರ್ಮಿಳಾ ಹಾಗೂ ಸುನೀತಾ ರೆಡ್ಡಿ ಆರೋಪಿಸಿದ್ದಾರೆ. 
 

Follow Us:
Download App:
  • android
  • ios