Asianet Suvarna News Asianet Suvarna News

ಜನ ನಮಗೆ 123 ಸೀಟು ಕೊಟ್ಟಿಲ್ಲ, ಪಂಚರತ್ನಕ್ಕೂ ಅವಕಾಶ ನೀಡಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ನನಗೆ 123 ಸೀಟು ಬಂದಿಲ್ಲ. ಪಂಚರತ್ನ ಜಾರಿಗೆ ಜನರು ಅವಕಾಶವನ್ನೂ ಕೊಟ್ಟಿಲ್ಲ. ಹೀಗಾಗಿ ಪಕ್ಷವನ್ನು ವಿಸರ್ಜನೆ ಮಾಡುವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. 

JDS will not dissolve Says Former CM HD Kumaraswamy gvd
Author
First Published Jun 1, 2023, 3:40 AM IST

ಬೆಂಗಳೂರು (ಜೂ.01): ನನಗೆ 123 ಸೀಟು ಬಂದಿಲ್ಲ. ಪಂಚರತ್ನ ಜಾರಿಗೆ ಜನರು ಅವಕಾಶವನ್ನೂ ಕೊಟ್ಟಿಲ್ಲ. ಹೀಗಾಗಿ ಪಕ್ಷವನ್ನು ವಿಸರ್ಜನೆ ಮಾಡುವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಜೆಡಿಎಸ್‌ ಪಕ್ಷವನ್ನು ಯಾವಾಗ ವಿಸರ್ಜಿಸುತ್ತೀರಿ ಎಂಬ ಪ್ರಶ್ನೆಗಳಿಗೆ ಟ್ವೀಟರ್‌ ಮೂಲಕ ಇತಿಶ್ರೀ ಹಾಕುವ ಪ್ರಯತ್ನ ಮಾಡಿದ್ದಾರೆ. ‘ಕೆಲವರ ವಿವೇಕರಹಿತ ಹೇಳಿಕೆಗಳಿಗೆ ಉತ್ತರಿಸುವುದು ಬೇಡವೆಂದು ಭಾವಿಸಿದ್ದೆ. ನಾನು ಸೋತ ನೋವಿನಲ್ಲಿದ್ದೇನೆ. ಕಾಂಗ್ರೆಸ್‌ನವರು ಗೆದ್ದ ಅಹಂನಲ್ಲಿದ್ದಾರೆ. ಅಹಂ ಅಳಿಯುತ್ತದೆ ಎನ್ನುವ ಕನಿಷ್ಠ ಅರಿವು ಅವರಿಗೆ ಇದ್ದಂತೆ ಇಲ್ಲ. ಆ ಅರಿವು ಬರುವ ಕಾಲವೂ ದೂರವಿಲ್ಲ. ಕಾಯುವ ತಾಳ್ಮೆ ನನಗಿದೆ’ ಎಂದು ಹರಿಹಾಯ್ದಿದ್ದಾರೆ.

ನನಗೆ 123 ಕ್ಷೇತ್ರಗಳನ್ನು ಕೊಟ್ಟರೆ ನಾನು ಭರವಸೆ ಕೊಟ್ಟಂತೆ ಪಂಚರತ್ನ ಯೋಜನೆಗಳನ್ನು ಜಾರಿ ಮಾಡದಿದ್ದರೆ ಜೆಡಿಎಸ್‌ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ. ಆಮೇಲೆ ಎಂದೂ ವೋಟು ಕೇಳಲು ನಿಮ್ಮ ಮನೆ ಬಾಗಿಲಿಗೆ ಬರುವುದಿಲ್ಲ ಎಂದು ಜನರಿಗೆ ಹೇಳಿದ್ದು, ಹೌದು. ಚುನಾವಣೆ ಫಲಿತಾಂಶ ಬಂದಿದೆ. ನನಗೆ ಜನರು 123 ಕ್ಷೇತ್ರ ಕೊಡಲಿಲ್ಲ. ಈಗ ಪಂಚರತ್ನ ಜಾರಿ ಮತ್ತು ಪಕ್ಷ ವಿಸರ್ಜನೆ ಪ್ರಶ್ನೆ ಎಲ್ಲಿ? ಸಾಮಾನ್ಯ ಜ್ಞಾನವೇ ಇಲ್ಲದ ಸಚಿವರಿಗೆ ಈ ಪರಿ ಅಜ್ಞಾನವಿದೆ ಎಂದು ನಾನಂತೂ ಎಣಿಸಿರಲಿಲ್ಲ. ಇಷ್ಟುಅವಿವೇಕವುಳ್ಳ ಇವರ ಮುಂದಿನ ಆಡಳಿತದ ಈಗಲೇ ಆತಂಕವಾಗುತ್ತಿದೆ ಎಂದು ಹೇಳಿದ್ದಾರೆ.

ಮೋದಿ, ಶಾ ದಂಡೆತ್ತಿ ಬಂದು ಬಿಜೆಪಿಯನ್ನು ಮುಳುಗಿಸಿದರು: ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ

‘ವಿಧಾನಸಭೆ ಚುನಾವಣೆಯಲ್ಲಿ ಸೋತರೆ ಜೆಡಿಎಸ್‌ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಅವರು ಯಾವಾಗ ವಿಸರ್ಜನೆ ಮಾಡುತ್ತಾರೆ? ಪಕ್ಷಕ್ಕೆ ಯಾವಾಗ ಅಂತಿಮ ಸಂಸ್ಕಾರ ಮಾಡುತ್ತಾರೆ?’ ಎಂದು ಕೆಲ ಅರೆಬೆಂದ ಸಚಿವರು, ಶಾಸಕರು ಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅವರೆಲ್ಲರ ಅಜ್ಞಾನಕ್ಕೆ ನನ್ನ ಸಾಂತ್ವನವಿದೆ. ಅವರ ಕನ್ನಡ ಭಾಷಾ ಜ್ಞಾನದ ಬಗ್ಗೆ ಕಾಳಜಿ ಇದೆ. ಆ ಮಾಹಾಶಯರು ನನ ಹೇಳಿಕೆಗಳನ್ನೊಮ್ಮೆ ತಿಳಿಯಲಿ. ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿವೆ. ಕನ್ನಡ ಓದಲು ಬಾರದಿದ್ದರೆ ನನ್ನ ಬಳಿ ಬರಲಿ. ಮನದಟ್ಟು ಆಗುವ ರೀತಿ ಹೇಳುತ್ತೇನೆ. ಕನ್ನಡವನ್ನು ಕಲಿಸುತ್ತೇನೆ’ ಎಂದು ತಿರುಗೇಟು ನೀಡಿದ್ದಾರೆ.

ಗ್ಯಾರಂಟಿ ಜಾರಿಗೆ ನಮ್ಮ ಪಕ್ಷಕ್ಕೆ ಬಿಟ್ಟ ವಿಚಾರ: ಕಾಂಗ್ರೆಸ್‌ ನೀಡಿರುವ ಗ್ಯಾರಂಟಿ ಯೋಜನೆ ಜಾರಿ ಮಾಡುವುದು ನಮ್ಮ ಪಕ್ಷಕ್ಕೆ ಬಿಟ್ಟ ವಿಚಾರ. ಇದರಲ್ಲಿ ಬೇರೆಯವರು ಮೂಗು ತೂರಿಸುವುದು ಅವಶ್ಯಕತೆ ಇಲ್ಲ ಎಂದು ಶಾಸಕ ಕೆ.ಎಂ.ಉದಯ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ನೇರವಾಗಿ ಹರಿಹಾಯ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಜಾರಿಗೆ ಮುನ್ನ ಅರ್ಥಿಕ ವ್ಯವಸ್ಥೆಗಳನ್ನು ಗಮನದಲ್ಲಿಟ್ಟುಕೊಂಡೆ ಘೋಷಣೆ ಮಾಡಲಾಗಿದೆ. 

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ತಲಾ 1 ಸಾವಿರ ರು. ಸಹಾಯಧನ: ಶಾಸಕ ಪ್ರದೀಪ್‌ ಈಶ್ವರ್‌ ಭರವಸೆ

ಮಾಜಿ ಸಿಎಂ ಕುಮಾರಸ್ವಾಮಿ ಗ್ಯಾರಂಟಿ ಯೋಜನೆಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾ ಅಸಂಬದ್ಧ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇವರನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿರುವುದು ದೌರ್ಭಾಗ್ಯವಾಗಿದೆ ಎಂದು ಕಿಡಿಕಾರಿದರು. ಕುಮಾರಸ್ವಾಮಿ ಸರ್ಕಾರ ಕೈಗೊಂಡ ಯೋಜನೆಗಳ ಬಗ್ಗೆ ಕಾಲೆಳೆಯುವ ಪ್ರವೃತ್ತಿ ಮತ್ತು ಗೂಬೆ ಕೂರಿಸುವುದರಲ್ಲಿ ನಿಸ್ಸಿಮರಾಗಿದ್ದಾರೆ. ಸೋಲಿನ ಹತಾಶೆಯಿಂದ ಕಂಗಾಲಾಗಿರುವ ಅವರು ಇಂತಹ ಹೇಳಿಕೆ ನೀಡುವ ಮೊದಲು ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಕೆಲಕಾಲ ತಾಳ್ಮೆ ವಹಿಸಿ ಟೀಕೆ ಮಾಡುವುದು ಸೂಕ್ತ ಎಂದರು.

Follow Us:
Download App:
  • android
  • ios