ಇತ್ತೀಚಿನ ದಿನಗಳಲ್ಲಿ ಬಿಜೆಪಿ ಜತೆ ಹೆಚ್ಚು ಒಡನಾಟ ಆರಂಭಿಸಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕುಟುಂಬದ ಸದಸ್ಯರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ ಬೆನ್ನಲ್ಲೇ ದೇವೇಗೌಡರು ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.
ಬೆಂಗಳೂರು(ಜು.26): ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಲ್ಲಿ ಜೆಡಿಎಸ್ ಸೇರ್ಪಡೆಯಾಗಲಿದೆ ಎಂಬ ಊಹಾಪೋಹಗಳಿಗೆ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತೆರೆ ಎಳೆದಿದ್ದಾರೆ. ‘ಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಫಲಿತಾಂಶದ ಬಳಿಕ ಯಾವ ಪರಿಸ್ಥಿತಿ ಇರುತ್ತದೋ ಆಗ ನೋಡುತ್ತೇವೆ’ ಎಂದು ಗೌಡರು ಸ್ಪಷ್ಟವಾಗಿ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಿಜೆಪಿ ಜತೆ ಹೆಚ್ಚು ಒಡನಾಟ ಆರಂಭಿಸಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕುಟುಂಬದ ಸದಸ್ಯರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ ಬೆನ್ನಲ್ಲೇ ದೇವೇಗೌಡರು ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅವರು ಎಡಬಲದಲ್ಲಿದ್ದರು.
ಕಾಂಗ್ರೆಸ್ ತೆಕ್ಕೆಗೆ ಒಲಿದ ಮನ್‌ಮುಲ್ ಅಧ್ಯಕ್ಷ ಗಾದಿ: ಯುದ್ಧಕ್ಕೂ ಮುನ್ನ ಜೆಡಿಎಸ್ ಶಸ್ತ್ರತ್ಯಾಗ
ಹೊಂದಾಣಿಕೆ ಇಲ್ಲದೇ ಸ್ಪರ್ಧೆ:
‘ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎಲ್ಲೆಲ್ಲಿ ಪಕ್ಷಕ್ಕೆ ಗೆಲ್ಲುವ ಸಾಮರ್ಥ್ಯ ಇದೆಯೋ ಅಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಆದರೆ, ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ. ಚುನಾವಣಾ ಫಲಿತಾಂಶದಲ್ಲಿ ನಮಗೆ 2 ಸ್ಥಾನ ಬರುತ್ತದೆಯೋ, 5 ಸ್ಥಾನ ಬರುತ್ತದೆಯೋ ಅಥವಾ ಸೊನ್ನೆ ಬರುತ್ತದೆಯೋ ಗೊತ್ತಿಲ್ಲ. ಫಲಿತಾಂಶದ ಸಂದರ್ಭದಲ್ಲಿ ಯಾವ ಪರಿಸ್ಥಿತಿ ಬರುತ್ತದೆಯೋ, ಆಗ ನೋಡುತ್ತೇವೆ. ಪಕ್ಷದ ಕಾರ್ಯಕರ್ತರು ಧೃತಿಗೆಡಬೇಕಾದ ಅಗತ್ಯ ಇಲ್ಲ’ ಎಂದು ತಿಳಿಸಿದರು.
ಜೆಡಿಎಸ್‌ನ ಜಾತ್ಯತೀತತೆ ಬಗ್ಗೆ ಕಾಂಗ್ರೆಸ್ ಪ್ರಸ್ತಾಪಿಸಿದೆ. ಕಾಂಗ್ರೆಸ್ ಸಮಯ ಬಂದಾಗ ಜಾತ್ಯತೀತವಾಗುತ್ತದೆ. ಬೇಕಾದಾಗ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಕಾಂಗ್ರೆಸ್ ಅಗತ್ಯವೆನಿಸಿದರೆ ಜಾತ್ಯತೀತತೆ. ದರ್ದು ಬಂದಾಗ ಜಾತ್ಯತೀತತೆ ಇರುವುದಿಲ್ಲ. ಮಂಡ್ಯದಲ್ಲಿ ಬಿಜೆಪಿ ಜತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿಕೊಂಡಿಲ್ಲವೇ? ಸಮಯಕ್ಕೆ ತಕ್ಕಂತೆ ಕಾಂಗ್ರೆಸ್ ವರ್ತನೆ ಮಾಡುತ್ತದೆ. ಅವರಿಗೆ ಬೇಕಾದ ಹೊಂದಾಣಿಕೆ ಮಾಡಿಕೊಳ್ಳಬಹುದು. ನಾವು ಬಿಜೆಪಿಗೆ ಬೆಂಬಲ ನೀಡಿದರೆ ಮನಬಂದಂತೆ ಮಾತನಾಡಲಾಗುತ್ತದೆ’ ಎಂದು ಕಾಂಗ್ರೆಸ್ ನಡೆಯ ಬಗ್ಗೆ ಟೀಕಿಸಿದರು.
‘1983ರಿಂದ ಈವರೆಗೆ ಜನತಾದಳ ಇದೆ. ನಾಳೆ ಬೆಳಗ್ಗೆ ಯಾರೋ ಪಕ್ಷವನ್ನು ಉರುಳಿಸಿಬಿಡುತ್ತೇನೆ ಎಂದು ಭಾವಿಸಿದರೆ ಅದು ಭ್ರಮೆ. ಪಕ್ಷವನ್ನು ಉರುಳಿಸುವುದು ಯಾರಿಂದಲೂ ಸಾಧ್ಯವಿಲ್ಲ. ಈ ಹಿಂದೆ ಜನತಾ ಪಕ್ಷ ಬಿಜೆಪಿ ಜತೆಗೆ ಸಂಬಂಧ ಮಾಡಿರಲಿಲ್ಲವೇ? ಇವತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವತ್ತು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿರಲಿಲ್ಲವೇ? ಬಿಜೆಪಿ ಬೆಂಬಲದಿಂದ ರಚನೆಯಾದ ದಿವಂಗತ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರದಲ್ಲಿ ನಾನು ಲೋಕೋಪಯೋಗಿ ಸಚಿವನಾಗಿದ್ದು, ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದರು. ರಾಜಕೀಯದಲ್ಲಿ ಯಾವ ಸಂದರ್ಭದಲ್ಲಿ ಬೇಕಾದರೂ ಯಾವ ಬದಲಾವಣೆಗಳು ಆಗಬಹುದು. ಎಚ್.ಡಿ.ಕುಮಾರಸ್ವಾಮಿ ಮಾತ್ರ ಬಿಜೆಪಿ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದಾರಾ? ಹಿಂದೆ ರಾಮಕೃಷ್ಣ ಹೆಗಡೆ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿರಲಿಲ್ಲವೇ?’ ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ದೇವೇಗೌಡರು, ‘ಪ್ರತಿಪಕ್ಷಗಳ ಸ್ಥಾನದಲ್ಲಿದ್ದಾಗ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಇದು ಹೊಸದೇನಲ್ಲ. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಜತೆಯೂ ಸೇರಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ ಉದಾಹರಣೆಯಿದೆ. ಹೀಗಾಗಿ, ಈಗ ಬಿಜೆಪಿ ಜತೆ ಕುಮಾರಸ್ವಾಮಿ ಅವರು ಹೋರಾಟ ನಡೆಸಿದ್ದಕ್ಕೆ ಅನ್ಯತಾ ಭಾವಿಸಬೇಕಿಲ್ಲ’ ಎಂದು ಸಮಜಾಯಿಷಿ ನೀಡಿದರು.
ಜೆಡಿಎಸ್‌ನಿಂದ ಸೆಕ್ಯುಲರ್ ಪದ ತೆಗೆಯಲಿ: ವಿ.ಎಸ್.ಉಗ್ರಪ್ಪ
ಕಾಂಗ್ರೆಸ್ಸಿಗರ ಬೆದರಿಕೆಯಿಂದ ನನಗೆ ಆಹ್ವಾನವಿಲ್ಲ: ಗೌಡ ಆರೋಪ
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ವಿರುದ್ಧ ಪ್ರತಿಪಕ್ಷಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ ಮಹಾಮೈತ್ರಿಕೂಟದ ಸಭೆಗೆ ಕೆಲವು ಕಾಂಗ್ರೆಸ್ ನಾಯಕರು ಬೆದರಿಕೆ ಹಾಕಿದ್ದರಿಂದ ತಮಗೆ ಆಹ್ವಾನ ನೀಡಲಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆರೋಪಿಸಿದರು.
‘ಸಭೆಗೆ ದೇವೇಗೌಡ ಅವರನ್ನು ಆಹ್ವಾನಿಸಿದರೆ ನಾವು ಬರುವುದಿಲ್ಲ ಎಂದು ಕಾಂಗ್ರೆಸ್‌ನ ಒಂದು ಗುಂಪು ಬೆದರಿಕೆ ಹಾಕಿತ್ತು. ಹೀಗಾಗಿ ನಮಗೆ ಆಹ್ವಾನ ನೀಡಲಿಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎನ್‌ಸಿಪಿ ಮುಖಂಡ ಶರದ್ ಪವಾರ್ ಸೇರಿ ಎಲ್ಲರೂ ನನ್ನ ಸ್ನೇಹಿತರೇ. ನನ್ನನ್ನು ಕರೆದರೆ ಕೆಲವು ಕಾಂಗ್ರೆಸ್ಸಿಗರು ಬರುವುದಿಲ್ಲ ಎಂದು ನಿತೀಶ್ ಕುಮಾರ್‌ಗೆ ಬೆದರಿಕೆ ಹಾಕಿದ್ದರಿಂದ ನಾನು ಸಭೆಗೆ ಹೋಗಿಲ್ಲ’ ಎಂದರು.
