'ಡಿಕೆಶಿ ಮೇಲೂ ಒತ್ತಡ ಹಾಕಿದ್ದಾರೆ : ಟಾರ್ಗೆಟ್ 2023 - ಕಿಂಗ್ ಮೇಕರ್ ಸ್ಥಾನ ಬಿಟ್ಟು ಕೊಡಲ್ಲ'
ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಮೇಲೂ ಒತ್ತಡ ಹಾಕಲಾಗುತ್ತಿದೆ. ಆದರೆ ಕಿಂಗ್ ಮೇಕರ್ ಸ್ಥಾನ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರು (ಫೆ.24): ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಮುಡಿದು ಬೀಳಲು ಸಿದ್ದರಾಮಯ್ಯ ನೇರ ಕಾರಣ. ಅವರ ಮಾತುಗಳಿಂದಲೇ ಮೈತ್ರಿ ಮುರಿದು ಬಿದ್ದಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದರು.
ಮೈಸೂರಿನಲ್ಲಿಂದು ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಕಳೆದ ಬಾರಿ ಅವರ ಒತ್ತಡದಿಂದಲೇ ಮೇಯರ್ ಸ್ಥಾನ ಬಿಟ್ಟು ಮೈತ್ರಿ ಆಗಿದ್ದೆವು. ಈಗ ಅವರ ಹೇಳಿಕೆಗಳಿಂದ ಬೇಸತ್ತು ಮೈತ್ರಿ ಮುರಿದುಕೊಂಡಿದ್ದೇವೆ. ನಾವು ಯಾರೊಂದಿಗೂ ಹೋಗುವುದಿಲ್ಲ. ನಾಮಪತ್ರ ಸಲ್ಲಿಸುತ್ತೇವೆ. ಯಾರಿಗೆ ಅವಕಾಶ ಇದೆ ಅವರು ಮೇಯರ್ ಆಗುತ್ತಾರೆ ಎಂದು ಹೇಳಿದರು.
ದೇವೇಗೌಡರು ಯಾರೊಂದಿಗೂ ಹೊಂದಾಣಿಕೆ ಬೇಡ ಎಂದು ಎರಡು ಪಕ್ಷಗಳಿಂದ ಅಂತರ ಕಾಯ್ದುಕೊಳ್ಳಲು ಹೇಳಿದ್ದಾರೆ. ಅದಕ್ಕಾಗಿ ನಾವು ಯಾರ ಜೊತೆಗೂ ಮೈತ್ರಿ ಆಗಿಲ್ಲ. ಎರಡು ಪಕ್ಷಗಳಿಂದ ನಮಗೆ ಅನ್ಯಾಯ ಆಗಿದೆ. ಹಾಗಾಗಿ ನಮ್ಮ ಶಕ್ತಿ ತೋರಿಸುವ ಸಂದರ್ಭ ಬಂದಿದೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಬೇಕಿದೆ. ಅದಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್‌ಡಿಕೆ ಹೇಳಿದರು.
ಮೈಸೂರು ಮೇಯರ್ ಚುನಾವಣೆ: ಮೈತ್ರಿ ಬಗ್ಗೆ ದೇವೇಗೌಡ್ರು, ಕುಮಾರಣ್ಣ ಪ್ಲ್ಯಾನೇ ಬೇರೆ! ...
ಕರ್ನಾಟಕವನ್ನು ಅತ್ಯಂತ ಲಘುವಾಗಿ ಕಾಣುತ್ತಿರುವ ಪಕ್ಷ ಬಿಜೆಪಿ. ಈ ಹಿನ್ನೆಲೆ ಎರಡು ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದೇವೆ. ಅಕ್ಕಪಕ್ಕದ ರಾಜ್ಯಗಳಂತೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಬೇಕು. ಕೆಲವರು ನಮ್ಮನ್ನ ಬಿ ಟೀಮ್ ಎಂದು ಕರೆದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನ ಗಳಿಸಲು ಕಾರಣವಾದರು ಎಂದರು.
ಕಾಂಗ್ರೆಸ್ ನ ಎಲ್ಲಾ ನಾಯಕರು ಲಘುವಾಗಿ ಮಾತನಾಡುವುದಿಲ್ಲ. ಆದರೆ ಕೆಲವರು ಲಘುವಾಗಿ ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರು ಪದೇ ಪದೇ ನಮ್ಮ ಪಕ್ಷವನ್ನು ಕೆಣಕುವ ಹೇಳಿಕೆಗಳೇ ನೀಡುದ್ದಾರೆ. ಜಿ ಟಿ ದೇವೇಗೌಡ ಸಂದೇಶ್ ನಾಗರಾಜ್ ನಮ್ಮ ಅಭ್ಯರ್ಥಿಗೆ ಮತ ಹಾಕುತ್ತಾರೆ.ಡಿಕೆಶಿ ಮೇಲು ಒತ್ತಾಯ ಹಾಕಿ ಕೈ ಕಟ್ಟಿಹಾಕಿದ್ದಾರೆ. ಕಿಂಗ್ ಮೇಕರ್ ಸ್ಥಾನ ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ಗುರಿ 2023, ಯಾರು ಲಘುವಾಗಿ ಮಾತನಾಡುತ್ತಿದ್ದರು ಅವರಿಗೆ ಉತ್ತರ ಕೊಡಲು ಹೊರಟಿದ್ದೇವೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಜಿಟಿಡಿ ಪರಿವರ್ತನೆಯಾಗುತ್ತಾರೆ ? : ಜಿಟಿ ದೇವೇಗೌಡರು ಪರಿವರ್ತನೆಯಾಗುತ್ತಾರೆ ಎಂಬ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಎಚ್‌ಡಿಕೆ ಹಲವಾರು ಸಂದರ್ಭದಲ್ಲಿ ಹಲವಾರು ನಾಯಕರು ಪರಿವರ್ತನೆ ಆಗುವುದನ್ನು ನೋಡಿದ್ದೇವೆ. ಪರಿವರ್ತನೆ ಆಗುವುದು ಅವರಿಗೆ ಬಿಟ್ಟಿದ್ದು. ಈಗಾಗಲೇ ಪಕ್ಷ ಬಿಟ್ಟು ಹೋದಮೇಲೆ ಏನಾಗುತ್ತದೆ ಎಂದು ಈಗಾಗಲೇ ಅವರಿಗೆ ಗೊತ್ತಾಗಿದೆ ಎಂದರು.