ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪತ್ರ ಚರ್ಚಿಸಲು ಜೆಡಿಎಸ್ ನಿಯೋಗಕ್ಕೆ ಸಮಯ ನೀಡುವಂತೆ ಪತ್ರ
ಬೆಂಗಳೂರು (ಆ.29): ರಾಜ್ಯದಲ್ಲಿ ಪ್ರಮುಖ ನೀರಾವರಿ ಯೋಜನೆಗಳ ಅನುಷ್ಠಾನ, ನೆರೆ ಸಂತ್ರಸ್ತರಿಗೆ ಪರಿಹಾರ, ಕೋವಿಡ್‌ನಿಂದ ಮೃತಪಟ್ಟಕುಟುಂಬದವರಿಗೆ ಪರಿಹಾರ ಸೇರಿದಂತೆ ರಾಜ್ಯದ ಅಭ್ಯುದಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಜೆಡಿಎಸ್ ನಿಯೋಗಕ್ಕೆ ಸಮಯ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.
ಎಲ್ಲ ಶಾಸಕರು ಪ್ರತಿ ಮಂಗಳವಾರ ಮತ್ತು ಬುಧವಾರ ವಿಧಾನಮಂಡಲದ ವಿವಿಧ ಸಮಿತಿಗಳ ಸಭೆಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸುವುದರಿಂದ ಆ.31ರಂದು ಮಧ್ಯಾಹ್ನ ಸಮಯ ನೀಡಬೇಕು. ನಿಯೋಗದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಹ ಇರಲಿದ್ದಾರೆ. ಕಳೆದ ಒಂದು ತಿಂಗಳನಿಂದ ತಮ್ಮನ್ನು ಭೇಟಿ ಮಾಡಲು ಸಮಯ ನಿಗದಿಪಡಿಸುವಂತೆ ಹಿರಿಯ ಅಧಿಕಾರಿಗಳಿಗೆ ಕೋರಿದರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಅಧಿಕಾರಿಗಳ ಉದಾಸೀನತೆ ಮತ್ತು ಅಸಡ್ಡೆತನದಿಂದ ಈವರೆಗೆ ತಮ್ಮ ಭೇಟಿಗೆ ಸಮಯ ನಿಗದಿಮಾಡಿಲ್ಲ, ಹೀಗಾಗಿ ಪತ್ರ ಬರೆಯಬೇಕಾಯಿತು ಎಂದು ಉಲ್ಲೇಖಿಸಲಾಗಿದೆ.
ಜಿಟಿ ದೇವೇಗೌಡರು ಜೆಡಿಎಸ್ ಬಿಟ್ಟು ಹೋದರೆ ಪಕ್ಷಕ್ಕೇನೂ ನಷ್ಟವಿಲ್ಲ: ಎಚ್‌ಡಿಕೆ
ಕೇಂದ್ರ ಸರ್ಕಾರದಲ್ಲಿ ನೆನೆಗುದಿಗೆ ಬಿದ್ದಿರುವ ರಾಜ್ಯದ ಪ್ರಮುಖ ಯೋಜನೆಗಳಾದ ಮೇಕೆದಾಟು, ಕೃಷ್ಣಾ ಮೇಲ್ದಂಡೆ ಯೋಜನೆ (2ನೇ ಹಂತ), ಮಹದಾಯಿ ಯೋಜನೆಗಳಿಗೆ ಅನುಮತಿ, ಮಂಜೂರಾತಿ ಮತ್ತು ತೀರ್ಮಾನ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಹೇರುವ ಸಂಬಂಧ ತಮ್ಮೊಂದಿಗೆ ಚರ್ಚಿಸಬೇಕಾಗಿದೆ. ಎತ್ತಿನಹೊಳೆ ಯೋಜನೆಯ ಭೈರಗೊಂಡ್ಲು ಜಲಾಶಯದ ಶೇಖರಣಾ ಸಾಮರ್ಥ್ಯ ಕಡಿಮೆ ಮಾಡಿ ಪರ್ಯಾಯ ಪ್ರಸ್ತಾವನೆಯಿಂದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಪ್ರಸ್ತಾವಿತ ಕುಡಿಯುವ ನೀರು ಪೂರೈಕೆ ಯೋಜನೆಗೆ ಉಂಟಾಗುವ ಪರಿಣಾಮದ ಕುರಿತು ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಪ್ರವಾಹ ಸಂತ್ರಸ್ತರಿಗೆ ನೀಡುವ ಪರಿಹಾರ ಮತ್ತು ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯಿಂದ ಉಂಟಾಗಿರುವ ಹಾನಿಗೆ ಶೀಘ್ರವೇ ಪರಿಹಾರ ನೀಡಬೇಕು. ಅಲ್ಲದೇ, ಕೋವಿಡ್ ಸೋಂಕಿನಿಂದ ಮೃತಪಟ್ಟಕುಟುಂಬದವರಿಗೆ ನೀಡುವ ಪರಿಹಾರವನ್ನು ಒಂದು ಲಕ್ಷ ರು.ನಿಂದ ಐದು ಲಕ್ಷ ರು.ಗೆ ಹೆಚ್ಚಿಸಬೇಕು. ಯಾವುದೇ ಷರತ್ತು ವಿಧಿಸಬಾರದು. ಈ ಎಲ್ಲಾ ವಿಚಾರಗಳ ಕುರಿತು ಚರ್ಚಿಸಲು ಜೆಡಿಎಸ್ ನಿಯೋಗಕ್ಕೆ ಸಮಯಾವಕಾಶ ನೀಡಬೇಕು ಎಂದು ಕೋರಿದ್ದಾರೆ.
