HD Kumaraswamy: ಕನ್ನಡ ಸಂಘಟನೆಗಳು ಚುನಾವಣೆಗೆ ನಿಂತರೆ ಜೆಡಿಎಸ್ ಬೆಂಬಲ
ರಾಜ್ಯ ಎದುರಿಸುತ್ತಿರುವ ನೆಲ, ಜಲ, ಭಾಷೆ ವಿಚಾರದಲ್ಲಿ ನಮ್ಮ ಹಕ್ಕುಗಳನ್ನು ಸಾಧಿಸಿಕೊಳ್ಳಬೇಕಾದಲ್ಲಿ ಮುಂದಿನ 2023ರಲ್ಲಿ ರಾಷ್ಟ್ರೀಯ ಪಕ್ಷಗಳಿಲ್ಲದ ಕನ್ನಡಿಗರದ್ದೇ ಸರ್ಕಾರ ಬರಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.
ಬೆಂಗಳೂರು (ಫೆ.10): ರಾಜ್ಯ ಎದುರಿಸುತ್ತಿರುವ ನೆಲ, ಜಲ, ಭಾಷೆ ವಿಚಾರದಲ್ಲಿ ನಮ್ಮ ಹಕ್ಕುಗಳನ್ನು ಸಾಧಿಸಿಕೊಳ್ಳಬೇಕಾದಲ್ಲಿ ಮುಂದಿನ 2023ರಲ್ಲಿ ರಾಷ್ಟ್ರೀಯ ಪಕ್ಷಗಳಿಲ್ಲದ ಕನ್ನಡಿಗರದ್ದೇ ಸರ್ಕಾರ ಬರಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಪ್ರತಿಪಾದಿಸಿದ್ದಾರೆ.
ಸಣ್ಣ ಸಣ್ಣ ಗುಂಪುಗಳಾಗಿ ಹೋರಾಟ ನಡೆಸುವ ಬದಲು ಎಲ್ಲರೂ ಒಗ್ಗೂಡಿ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ಒಂದು ಧ್ವನಿಯಾಗಿ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿದರೆ ಬೆಂಬಲ ನೀಡುವುದಾಗಿಯೂ ಅವರು ಘೋಷಿಸಿದ್ದಾರೆ. 2023ರ ವಿಧಾನಸಭೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಲೇ ಸಿದ್ಧತೆ ಆರಂಭಿಸಿರುವ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ಪುರಭವನದಲ್ಲಿ ಆಯೋಜಿಸಿದ ‘ಕನ್ನಡ ಮನಸ್ಸುಗಳ ಮುಕ್ತ ಮಾತುಕತೆ’ ಹೆಸರಲ್ಲಿ ಸಂವಾದ ನಡೆಸಿದರು.
‘ನಮ್ಮ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿ ಎಂಬ ಉದ್ದೇಶದಿಂದ ಈ ಸಭೆ ಕರೆದಿಲ್ಲ. ಸಂಘಟನೆಯ ಮುಖಂಡರ ಪೈಕಿ ಹಲವು ಮಂದಿ ಉತ್ತಮ ವಾಗ್ಮಿಗಳು ಇರಬಹುದು. ವಿಷಯಾಧರಿತವಾಗಿ ಚರ್ಚೆ ನಡೆಸುವ ಸಾಮರ್ಥ್ಯ ಇರುವ ಕನ್ನಡಪರ ಸಂಘಟನೆಯ ಮುಖಂಡರು ಚುನಾವಣೆಗೆ ಸ್ಪರ್ಧಿಸುವ ಮನಸ್ಸು ಮಾಡಬೇಕು. ಕನ್ನಡಕ್ಕೆ ಅವಮಾನವಾದಾಗ ಮಾತ್ರ ಯಾವುದೋ ಒಂದು ದಿನ ಹೋರಾಟ ನಡೆಸಿದರೆ ಸಾಲದು. ಪ್ರತಿನಿತ್ಯ ಕನ್ನಡಪರ ಧ್ವನಿ ಎತ್ತಬೇಕಾದರೆ ಜನರ ಮಧ್ಯೆ ಹೋಗಬೇಕು. ಪ್ರತಿಭೆ ಇರುವವರಿಗೆ ಅವಕಾಶ ಸಿಕ್ಕರೆ ಜನಗಳಿಂದ ಆಯ್ಕೆಯಾಗಬಹುದು. ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಶಿವಸೇನೆ ತನ್ನ ಭಾಷೆಯ ರಕ್ಷಣೆಗಾಗಿ ಹೋರಾಟ ನಡೆಸಿ, ಈಗ ವಿಧಾನಸಭೆಗೆ ಪ್ರವೇಶಿಸಿದೆ. ಅದೇ ರೀತಿ ರಾಜ್ಯದಲ್ಲಿಯೂ ಕನ್ನಡಪರ ಸಂಘಟನೆಗಳು ಚಿಂತನೆ ನಡೆಸಬೇಕು’ ಎಂದು ಸಲಹೆ ನೀಡಿದರು.
Karnataka JDS ಅನಿತಾ ಕುಮಾರಸ್ವಾಮಿ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡಲ್ಲ, ಅಧಿಕೃತ ಘೋಷಣೆ
‘ನಮಗೆ ರೈತ ಸಂಘಗಳ ಜತೆ ಕೆಲವೊಂದು ಭಿನ್ನಾಭಿಪ್ರಾಯ ಇರಬಹುದು. ಆದರೂ ರೈತರ ಪರವಾಗಿ ಕೆಲಸ ಮಾಡುವವರಿಗೂ ಮುಕ್ತವಾದ ಅವಕಾಶ ನೀಡುತ್ತೇವೆ’ ಎಂದು ಭರವಸೆ ನೀಡಿದರು. ‘ಶೇ.100ಕ್ಕೆ ಶೇ.60-70ರಷ್ಟುಕಮಿಷನ್ ಹೋಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನೀವುಗಳು ಮಾತ್ರ ಕನ್ನಡ... ಕನ್ನಡ ಎನ್ನುತ್ತಿದ್ದೀರಿ. ಪರಿವರ್ತನೆ ಮುಂದಾಗಿ, ರಾಜ್ಯವು ಯಾರಪ್ಪನ ಸ್ವತ್ತಲ್ಲ. ಕನ್ನಡಿಗರ ಆಸ್ತಿಯಾಗಿದೆ. ಕನ್ನಡಪರ ಸಂಘಟನೆಗಳೇ ಕಣಕ್ಕಿಳಿಯುವ 5-6 ಮಂದಿ ಆಯ್ಕೆ ಮಾಡಿ, ಅವರಿಗೆ ಬೆಂಬಲ ನೀಡುತ್ತೇವೆ. ಇನ್ನು, ಮುಂದಿನ ಬಿಬಿಎಂಪಿ ಚುನಾವಣೆಗೆ 10 ಮಂದಿಯಾದರೂ ಕಣಕ್ಕಿಳಿಯಬೇಕು. ಪಕ್ಷದ ಕಾರ್ಯಕರ್ತರು ಹೋರಾಟಗಾರರೊಂದಿಗೆ ಕೈ ಜೋಡಿಸಲಿದ್ದಾರೆ.
ಅಲ್ಲದೇ, ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕನಿಷ್ಠ 30-35 ಕ್ಷೇತ್ರದಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಲಾಗುವುದು. ಮೊದಲು ಬೂತ್‌ಮಟ್ಟದಲ್ಲಿ ಮಹಿಳೆಯರನ್ನು ಸಂಘಟಿಸಬೇಕು. ಯಾರ ಹಂಗೂ ಇಲ್ಲದೆ ಶಾಶ್ವತವಾದ ಸರ್ಕಾರ ತರಲು ಕೆಲಸ ಮಾಡಬೇಕು. ನಮ್ಮ ಗುರಿ ಏನಿದ್ದರೂ 130 ಸ್ಥಾನಗಳನ್ನು ಗೆಲ್ಲುವುದು. ಇಷ್ಟುಸ್ಥಾನಗಳನ್ನು ಗೆಲ್ಲಲು ಕನ್ನಡಪರ ಸಂಘಟನೆಗಳು ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.
‘ನಗರ ಪ್ರದೇಶದಲ್ಲಿ ಲಭ್ಯವಾಗುವಂತೆ ಗ್ರಾಮೀಣ ಭಾಗದಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ಕಲ್ಪಿಸುವ ಚಿಂತನೆ ಇದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಜೆಡಿಎಸ್ ಬಾಗಿಲು ಮುಚ್ಚುತ್ತೇನೆ. ಆರ್‌ಟಿಇಗೆ ವೆಚ್ಚ ಮಾಡುವ ಮೊತ್ತವನ್ನು ಸರ್ಕಾರಿ ಶಾಲೆಯ ಮೂಲಸೌಕರ್ಯಗಳಿಗೆ ಒದಗಿಸಿ ಅಭಿವೃದ್ಧಿಗೊಳಿಸಬಹುದು. ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಆವರಣದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ಮಾಡಲಾಗುವುದು. ಆಂಗ್ಲ ಮಾಧ್ಯಮದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಲಾಗುವುದು’ ಎಂದು ಕುಮಾರಸ್ವಾಮಿ ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡಪರ ಸಂಘಟನೆ ಹೋರಾಟಗಾರರಾದ ಶಿವರಾಮೇಗೌಡ, ಪ್ರವೀಣ್ ಶೆಟ್ಟಿ, ಗುರುದೇವ್ ನಾರಾಯಣ, ಚಿತ್ರ ಸಾಹಿತಿ ಕವಿರಾಜ್, ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಬೋರೆಲಿಂಗೇಗೌಡ ಇತರರು ಉಪಸ್ಥಿತರಿದ್ದರು.
Hijab Row: ಹಿಜಾಬ್ ವಿವಾದದ ಹಿಂದಿರುವ ಸಂಘಟನೆಗಳ ಬಗ್ಗೆ ಮಾಹಿತಿ ಇದೆ: ಎಚ್‌ಡಿಕೆ
ಆರ್ಥಿಕ ಶಕ್ತಿ ನಾನು ನೀಡುವೆ: ಕನ್ನಡಪರ ಸಂಘಟನೆಗಳು ಸಣ್ಣ ಸಣ್ಣ ಗುಂಪುಗಳಾಗಿ ಹೋರಾಟ ನಡೆಸುತ್ತಿವೆ. ಬದಲಿಗೆ ಎಲ್ಲಾ ಸಂಘಟನೆಗಳು ಒಂದಾಗಿ ಚುನಾವಣೆ ಎದುರಿಸಿದರೆ ರಾಷ್ಟ್ರೀಯ ಪಕ್ಷಗಳು ಸಂಘಟನೆ ವಿರುದ್ಧ ನಿಲ್ಲುವುದಿಲ್ಲ. ಬೀದಿಯಲ್ಲಿ ಹೋರಾಟ ಮಾಡುವ ಬದಲು ವಿಧಾನಸೌಧಕ್ಕೆ ಪ್ರವೇಶಿಸಿ, ನಾನು ಆರ್ಥಿಕ ಶಕ್ತಿ ತುಂಬುತ್ತೇನೆ.
-ಎಚ್.ಡಿ.ಕುಮಾರಸ್ವಾಮಿ