ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಕಾವೇರಿ ಕೊಳ್ಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಜೆಡಿಎಸ್‌ ಸಾಥ್‌ ನೀಡಿದ್ದು, ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ಶನಿವಾರ ಬೃಹತ್‌ ಪ್ರತಿಭಟನೆ ನಡೆಸಿದೆ. 

ಮಂಡ್ಯ (ಸೆ.03): ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಕಾವೇರಿ ಕೊಳ್ಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಜೆಡಿಎಸ್‌ ಸಾಥ್‌ ನೀಡಿದ್ದು, ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ಶನಿವಾರ ಬೃಹತ್‌ ಪ್ರತಿಭಟನೆ ನಡೆಸಿದೆ. ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ ನೇತೃತ್ವದಲ್ಲಿ ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದ ಜೆಡಿಎಸ್‌ ನಾಯಕರು, ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಈ ಹಿಂದೆ, ‘ನಮ್ಮ ನೀರು- ನಮ್ಮ ಹಕ್ಕು’ ಎಂದು ಹೋರಾಟ ನಡೆಸಿದ್ದ ಕಾಂಗ್ರೆಸ್ಸಿಗರಿಗೆ ಮರ್ಯಾದೆಯೇ ಇಲ್ಲ ಎಂದು ಹರಿಹಾಯ್ದರು.

ಈ ಮಧ್ಯೆ, ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕೆಆರ್‌ಎಸ್‌ ಬಳಿ ನಡೆಯುತ್ತಿರುವ ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ಶನಿವಾರ 4 ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾಕಾರರು ಕಾವೇರಿ ನದಿಗಿಳಿದು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಇದೇ ವೇಳೆ, ಶ್ರೀರಂಗಪಟ್ಟಣದಲ್ಲಿ ರೈತರು ತಲೆ ಮೇಲೆ ಚಪ್ಪಡಿ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದರೆ, ಪಾಂಡವಪುರದಲ್ಲಿ ರೈತರಿಂದ ಅರೆ ಬೆತ್ತಲೆ ಮೆರವಣಿಗೆ ನಡೆಸಲಾಯಿತು. ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ರಾಗಿ ಖರೀದಿ ಹಣ ಬಿಡುಗಡೆ ಮಾಡಲು ಸಿಎಂ ಸಿದ್ದರಾಮಯ್ಯ ಆದೇಶ

ಸರ್ಕಾರದ ವಿರುದ್ಧ ಜೆಡಿಎಸ್‌ ನಾಯಕರ ಕಿಡಿ: ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಸೂಚನೆ ಮೇರೆಗೆ ಜೆಡಿಎಸ್‌ನ ಶಾಸಕರು, ಮಾಜಿ ಶಾಸಕರೆಲ್ಲರೂ ಒಟ್ಟಾಗಿ ಹೋರಾಟಕ್ಕಿಳಿದಿದ್ದರು. ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಕೆ.ಸುರೇಶ್‌ಗೌಡ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೂ ಸಾಗಿತು. ಪ್ರತಿಭಟನೆ ವೇಳೆ ಮಾತನಾಡಿದ ನಾಯಕರು, ‘ನಮ್ಮ ನೀರು-ನಮ್ಮ ಹಕ್ಕು’ ಎಂಬ ಘೋಷ ವಾಕ್ಯದೊಂದಿಗೆ ಮೇಕೆದಾಟು ಪಾದಯಾತ್ರೆ ನಡೆಸಿದ ಕಾಂಗ್ರೆಸ್ಸಿಗರಿಗೆ ಮರ್ಯಾದೆಯೇ ಇಲ್ಲ. ಈಗ ನಮ್ಮ ನೀರನ್ನೆಲ್ಲಾ ತಮಿಳುನಾಡಿಗೆ ಹರಿಸುತ್ತಿದ್ದಾರೆ ಎಂದು ಟೀಕಿಸಿದರು. ತಕ್ಷಣ ನೀರು ಬಿಡುಗಡೆ ಸ್ಥಗಿತಕ್ಕೆ ಆಗ್ರಹಿಸಿದರು.

ಈ ಮಧ್ಯೆ, ಶ್ರೀರಂಗಪಟ್ಟಣದಲ್ಲಿ ಭೂಮಿ ತಾಯಿ ಹೋರಾಟ ಸಮಿತಿಯಿಂದ ರೈತ ಮುಖಂಡ ಕೆ.ಎಸ್‌.ನಂಜುಂಡೇಗೌಡ ನೇತೃತ್ವದಲ್ಲಿ ರೈತರು ತಲೆ ಮೇಲೆ ಚಪ್ಪಡಿ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದರು. ಪಟ್ಟಣದ ಕುವೆಂಪು ವೃತ್ತದಿಂದ ತಾಲೂಕು ಕಚೇರಿವರೆಗೂ ಚಪ್ಪಡಿ ಕಲ್ಲನ್ನು ತಲೆಯ ಮೇಲೆ ಹೊತ್ತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪಾಂಡವಪುರದಲ್ಲಿ ಬಿಜೆಪಿ ಮುಖಂಡ ಎಚ್‌.ಎನ್‌.ಮಂಜುನಾಥ್‌ ನೇತೃತ್ವದಲ್ಲಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ ರೈತರು, ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿ ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ, ಕೆಆರ್‌ಎಸ್‌ ಜಲಾಶಯದ ಬಳಿ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತರು ಕಾವೇರಿ ನದಿಗೆ ಇಳಿದು ಪ್ರತಿಭಟನೆ ನಡೆಸಿದರು. ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತಸಂಘ ನಡೆಸುತ್ತಿರುವ ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ಶನಿವಾರ 4ದಿನಕ್ಕೆ ಕಾಲಿಟ್ಟಿತು. ಇದೇ ವೇಳೆ, ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಚಾಮರಾಜನಗರದಲ್ಲಿಯೂ ಪ್ರತಿಭಟನೆ ನಡೆಯಿತು. ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಭಾವಚಿತ್ರ ಹರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್‌್ತ ಏರ್ಪಡಿಸಲಾಗಿತ್ತು.

ಕಾಡನ್ನು ಉಳಿಸಿದರೆ ಕಾಡು ನಮ್ಮನ್ನು ಉಳಿಸುತ್ತದೆ: ಸಚಿವ ಮಹದೇವಪ್ಪ

ತಮಿಳುನಾಡಿಗೆ ನೀರು ಕೊಡಬಾರದು ಎಂಬ ಉದ್ದೇಶ ನಮ್ಮದಲ್ಲ. ಆದರೆ, ನಮ್ಮಲ್ಲಿಯೇ ನೀರಿಲ್ಲ. ಇರುವ ನೀರಿನಲ್ಲಿಯೇ ನಮ್ಮ ಬೆಳೆ ರಕ್ಷಣೆ ಮಾಡಿಕೊಳ್ಳಬೇಕು. ಕುಡಿಯಲು ನೀರು ಕೊಡಬೇಕು. ಹೀಗಾಗಿ ನೀರು ಬಿಡಲು ಸಾಧ್ಯವಿಲ್ಲ.
- ಸಿದ್ದರಾಮಯ್ಯ ಮುಖ್ಯಮಂತ್ರಿ