ಟಿಪ್ಪು ಸುಲ್ತಾನ ಮತಾಂಧನಾಗಿರಲಿಲ್ಲ. ಅವರು ಅನೇಕ ಹಿಂದು ದೇವಸ್ಥಾನಗಳಿಗೆ ದಾನ ನೀಡಿದ್ದು ಇತಿಹಾಸ ತಿಳಿಸುತ್ತದೆ: ಸಿ.ಎಂ.ಇಬ್ರಾಹಿಂ 

ಬಸವನಬಾಗೇವಾಡಿ(ನ.29):  ದೇಶದ ಹಿತಕ್ಕಾಗಿ ತನ್ನ ಪುತ್ರರನ್ನೇ ಪಣಕ್ಕೆ ಇಟ್ಟಧೀಮಂತ ಸುಲ್ತಾನ ಟಿಪ್ಪು ಸುಲ್ತಾನ. ರೈತರ ಹಿತಕ್ಕಾಗಿ ಕೆಆರ್‌ಎಸ್‌ ಡ್ಯಾಂಗೆ ಅಡಿಗಲ್ಲು ಇಟ್ಟಿರುವುದು ಟಿಪ್ಪುಸುಲ್ತಾನ ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಇಂತಹ ಧೀಮಂತ ನಾಯಕನ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ಪಟ್ಟಣದ ನಾಗೂರ ರಸ್ತೆಯಲ್ಲಿ ಟಿಪ್ಪು ಸುಲ್ತಾನ ಅಭಿಮಾನಿಗಳ ಮಹಾವೇದಿಕೆಯು ಹಮ್ಮಿಕೊಂಡಿದ್ದ ಮೈಸೂರ ಹುಲಿ ಟಿಪ್ಪುಸುಲ್ತಾನವರ 272ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ ಮತಾಂಧನಾಗಿರಲಿಲ್ಲ. ಅವರು ಅನೇಕ ಹಿಂದು ದೇವಸ್ಥಾನಗಳಿಗೆ ದಾನ ನೀಡಿದ್ದು ಇತಿಹಾಸ ತಿಳಿಸುತ್ತದೆ. ಇಂದಿಗೂ ನಂಜನಗೂಡಿನ ನಂಜುಡೇಶ್ವರ ದೇವಸ್ಥಾನಕ್ಕೆ ನೀಡಿದ ಅಮೂಲ್ಯ ರತ್ನಕ್ಕೆ ಪೂಜೆ ನೆರವೇರುತ್ತಿದೆ. ಶೃಂಗೇರಿ ಮಠಕ್ಕೆ ಕೂಡಾ ಸಹಾಯ ಮಾಡಿದ್ದನ್ನು ಇತಿಹಾಸದ ಪುಟಗಳಿಂದ ತಿಳಿಯುತ್ತದೆ ಎಂದರು.

GROUND REPORT: ವಿಜಯಪುರದಲ್ಲಿ ಟಿಕೆಟ್‌ಗಾಗಿ ಜಿದ್ದಾಜಿದ್ದಿ!

ನಿನ್ನ ಪಕ್ಕದ ಮನೆಯವರು ತೃಪ್ತಿಯಿಂದ ಇಲ್ಲದೇ ಹೋದರೆ ನೀನು ಮುಸ್ಲಿಂನಲ್ಲ ಎಂದು ಇಸ್ಲಾಂ ಧರ್ಮ ಹೇಳುತ್ತದೆ. ಕಷ್ಟದಲ್ಲಿರುವವರನ್ನು ಸಲುಹುವುದೇ ಇಸ್ಲಾಂ ಧರ್ಮದಲ್ಲಿದೆ. ಹಿಜಾಬ್‌ ಎಂದರೆ ಸೆರಗು. ಇದನ್ನು ಅರಿಯದೇ ಹಿಜಾಬ್‌ ಬಗ್ಗೆ ಗೊಂದಲ ಸೃಷ್ಟಿಮಾಡಿದರು ಎಂದ ಅವರು ರಾಜ್ಯದಲ್ಲಿ ಜೆಡಿಎಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ರೈತರು ಬದುಕುವ ಕಾನೂನು ಜಾರಿಗೆ ತರುತ್ತೇವೆ. ಜನರಿಗೆ ಅನೇಕ ಸೌಲಭ್ಯಗಳನ್ನು ನೀಡುವ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುತ್ತೇವೆ ಎಂದರು.

ಜೆಡಿಎಸ್‌ ಪಕ್ಷದ ವಕ್ತಾರೆ ನಜ್ಮಾ ನಜೀರ ಚಿಕ್ಕನೇರಳೆ ಮಾತನಾಡಿ, ಟಿಪ್ಪು ಸುಲ್ತಾನರ ಬಗ್ಗೆ ಎಷ್ಟುತೇಜೋವಧೆ ಮಾಡುತ್ತಾರೋ ಅಷ್ಟುನಮ್ಮ ಸಮಾಜದ ಯುವಜನಾಂಗ ಟಿಪ್ಪು ಸುಲ್ತಾನರ ಹೆಚ್ಚು ತಿಳಿದುಕೊಳ್ಳಲು ಮುಂದಾಗುತ್ತಾರೆ. ಅವರು ಮತಾಂಧರಾಗಿರಲಿಲ್ಲ. ದ್ವೇಷವನ್ನು ಬಿತ್ತುವದೇ ಸಾಮಾನ್ಯ ಸಂಗತಿಯಾಗಿದೆ. ಇದು ನಿಲ್ಲಬೇಕು. ಟಿಪ್ಪು ಸುಲ್ತಾನರು ಮಹಿಳೆಯರಿಗೂ ಸಾಕಷ್ಟು ಗೌರವ ಸ್ಥಾನ ನೀಡಿದ್ದರು. ಕನ್ನಡ ಭಾಷೆಗೆ ಸಾಕಷ್ಟು ಗೌರವ ನೀಡಿದ್ದರು. ಟಿಪ್ಪು ಸುಲ್ತಾನ ಜನಸ್ನೇಹಿಯಾಗಿದ್ದರು. ಇಂದು ಹಿಂದು-ಮುಸ್ಲಿಂ ಬಾಂಧವರ ಮಧ್ಯೆ ದ್ವೇಷ ಮೂಡಿಸುತ್ತಿರುವುದು ವಿಷಾದನೀಯ ಎಂದರು.

Ticket Fight: ಯತ್ನಾಳ ವಿರುದ್ಧ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲಿ 20 ಆಕಾಂಕ್ಷಿಗಳು

ಜಿಪಂ ಮಾಜಿ ಅಧ್ಯಕ್ಷೆ ಅಪ್ಸರಾಬೇಗಂ ಚಪ್ಪರಬಂದ ಮಾತನಾಡಿ, ಟಿಪ್ಪುಸುಲ್ತಾನ ಒಂದು ದೊಡ್ಡ ಶಕ್ತಿ. ಸಮಾಜದಲ್ಲಿ ಒಡಕು ಮಾಡುತ್ತಿರುವದರಿಂದಾಗಿ ನಮ್ಮ ಸಮಾಜ ಬಾಂಧವರು ಒಗ್ಗೂಟ್ಟಿನಿಂದ ಜೀವನ ಮಾಡಬೇಕಿದೆ. ಬೇರೆಯವರನ್ನು ತೆಗಳುವ ಬದಲು ನಾವು ಮೊದಲು ಅಭಿವೃದ್ಧಿ ಹೊಂದವುದು ತುಂಬಾ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಇದಕ್ಕಾಗಿ ಸಮಯ ನೀಡಬೇಕಿದೆ ಎಂದರು.

ಮುಖಂಡರಾದ ಮಹ್ಮದ ಪಟೇಲ ಬಿರಾದಾರ, ಅಲ್ಲಾಭಕ್ಷ ಬಿಜಾಪುರ, ಮೊದಿನ ಶಾಬಾದಿ, ನಯಮ ಅಪಘಾನ, ಅನ್ವರ ಮಕಾಂದರ ಮಾತನಾಡಿದರು. ವೇದಿಕೆಯಲ್ಲಿ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ದಾದಾಫೀರ ಶೇಖ, ಜೆಡಿಎಸ್‌ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಕಮಲಸಾಬ ಕೊರಬು, ರಾಜೇಸಾಬ ಚಳ್ಳಿಗಿಡದ, ಸಾಧಿಕ ಗಡೇದ, ಸೊಹೇಬ ಇನಾಮದಾರ, ಫಯಾಜ ಅಹ್ಮದ ಕಲಾದಗಿ ಇತರರು ಇದ್ದರು. ಎಸ್‌.ಪಿ.ಮಡಿಕೇಶ್ವರ ಸ್ವಾಗತಿಸಿ, ನಿರೂಪಿಸಿದರು.