Asianet Suvarna News Asianet Suvarna News

ಕೈಗೊಂಬೆಯಂತೆ ಮಲ್ಲಿಕಾರ್ಜುನ ಖರ್ಗೆ ಕೆಲಸ: ಸಿ.ಎಂ.ಇಬ್ರಾಹಿಂ

ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದರಿಂದ, ರಾಜ್ಯ ಕಾಂಗ್ರೆಸ್‌ನಲ್ಲಿ ಇದೀಗ ಮೂರು ಬಣಗಳಾದಂತಾಗಿದೆ. ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದರಿಂದ ಮಹತ್ವದ ಬದಲಾವಣೆ ನಿರೀಕ್ಷಿಸುವಂತಿಲ್ಲ. ಮತ್ತೊಬ್ಬರ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.

jds state president cm ibrahim slams on aicc president mallikarjun kharge gvd
Author
First Published Oct 28, 2022, 11:37 PM IST

ಹುಬ್ಬಳ್ಳಿ (ಅ.28): ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದರಿಂದ, ರಾಜ್ಯ ಕಾಂಗ್ರೆಸ್‌ನಲ್ಲಿ ಇದೀಗ ಮೂರು ಬಣಗಳಾದಂತಾಗಿದೆ. ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದರಿಂದ ಮಹತ್ವದ ಬದಲಾವಣೆ ನಿರೀಕ್ಷಿಸುವಂತಿಲ್ಲ. ಮತ್ತೊಬ್ಬರ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು. ಇದೇ ವೇಳೆ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿಬಿಜೆಪಿಗೆ ಹೋಗಿ ಅನಾಥರಾಗಿದ್ದಾರೆ. ಹೊರಟ್ಟಿಮರಳಿ ಬಂದರೆ ಗೌರವದಿಂದ ಸ್ವಾಗತಿಸುತ್ತೇವೆ ಎಂದು ಮುಕ್ತ ಆಹ್ವಾನ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ, ಖರ್ಗೆ ಎಐಸಿಸಿ ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಕೆಪಿಸಿಸಿಯಲ್ಲಿನ ಬಣಗಳ ಸಂಖ್ಯೆ ಮೂರಕ್ಕೇರಿದೆ. ಈ ಹಿಂದೆ ಖರ್ಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಪಕ್ಷ 80 ಸ್ಥಾನ ಗೆಲವು ಕಂಡು ಸೋತಿತ್ತು. ಇದೀಗ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಕೈಗೊಂಬೆಯಂತೆ ಕೆಲಸ ಮಾಡುತ್ತಾರೆ ಎಂದರು. ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆಗೆ ಗೊತ್ತು-ಗುರಿ ಇಲ್ಲ. ಅವರು ಜನರ ಸಂಕಷ್ಟಅರಿತು, ಸ್ಪಂದಿಸಲು ಯಾತ್ರೆ ಮಾಡುತ್ತಿಲ್ಲ. ಯಾತ್ರೆ ಹೆಸರಲ್ಲಿ ಸಾವಿರಾರು ಜನರನ್ನು ಜಮಾಯಿಸಲಾಗುತ್ತಿದೆ. ಇದರಿಂದ ಪಕ್ಷಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.

ಈಶ್ವರಪ್ಪ ಬಾಯ್‌ಬಿಟ್ರೆ ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಯಾಗುತ್ತೆ: ಸಿ.ಎಂ.ಇಬ್ರಾಹಿಂ ಆರೋಪ

ರಾಹುಲ್‌ ಯಾತ್ರೆ ನೋಡಿ, ಬಿಜೆಪಿ ಜನಸಂಕಲ್ಪ ಸಮಾವೇಶ ಮಾಡುತ್ತಿದೆ. ಅದರಲ್ಲಿ ಜನರಿಗಾಗಿ ಮಾಡಿದ ಕೆಲಸಗಳ ಬಗ್ಗೆ ಹೇಳುತ್ತಿಲ್ಲ. ಬಿಜೆಪಿಯವದ್ದು ಪರ್ಸೆಂಟೇಜ್‌ ವ್ಯವಹಾರವಷ್ಟೆ. ಇದಕ್ಕೆ ಭಿನ್ನವಾಗಿ ಜೆಡಿಎಸ್‌ ಪಂಚರತ್ನ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ಮುಂದೆ ಕೈಗೊಳ್ಳಲಿರುವ ಯೋಜನೆಗಳ ಬಗ್ಗೆ ಜನರಿಗೆ ಹೇಳುತ್ತಿದ್ದೇವೆ. ಜನ ನಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೊರಟ್ಟಿಅನಾಥ: ಬಿಜೆಪಿಗೆ ಹೋಗಿರುವ ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿಸ್ಥಿತಿ ಅನಾಥ ಮಗುವಿನಂತಾಗಿದೆ. ಅವರಿಗೆ ಸ್ಪೀಕರ್‌ ಸ್ಥಾನವೂ ಸಿಗಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಪರಿಷತ್‌ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿ ಜೆಡಿಎಸ್‌ಗೆ ಬಂದರೆ, ಹಿಂದಿನಂತೆಯೇ ಗೌರವ- ಸ್ಥಾನಮಾನ ಸಿಗಲಿದೆ ಎಂದರು.

ಶಿವಮೊಗ್ಗ ಆವಾಂತರಕ್ಕೆ ಈಶ್ವರಪ್ಪ ಕಾರಣ: ಕೆ.ಎಸ್‌. ಈಶ್ವರಪ್ಪ ಅವರಿಗೆ ಸೋಲಿನ ಭೀತಿ ಕಾಡುತ್ತಿರುವುದರಿಂದ, ಶಿವಮೊಗ್ಗದಲ್ಲಿ ಆವಾಂತರಗಳು ನಡೆಯುತ್ತಿವೆ. ಅವರನ್ನು ಹದ್ದುಬಸ್ತಿನಲ್ಲಿಟ್ಟರೆ ಎಲ್ಲ ಸರಿಯಾಗಲಿದೆ. ಅವರ ಬಾಯಿ ಯಂತ್ರದಂತೆ. ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಶಿವಮೊಗ್ಗದ ಘಟನೆಗಳಿಗೆ ಪರೋಕ್ಷವಾಗಿ ಅವರೇ ಕಾರಣ ಎಂದು ಶಿವಮೊಗ್ಗ ಕೊಲೆ ಕುರಿತು ಸಿ.ಎಂ. ಇಬ್ರಾಹಿಂ ಪ್ರತಿಕ್ರಿಯಿಸಿದರು. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಏನೂ ಆಗಲಿಲ್ಲ. ಯಡಿಯೂರಪ್ಪ ಅಥವಾ ಅವರ ಪುತ್ರ ಸಂಸದ ಬಿ.ವೈ. ರಾಘವೇಂದ್ರ ಮಾತಾಡಿದರೆ ಗಲಭೆಯಾಗಲ್ಲ. 

ಕಾಂಗ್ರೆಸ್‌ಗೆ 80 ಕ್ಷೇತ್ರದಲ್ಲಿ ಅಭ್ಯರ್ಥಿ ಇಲ್ಲ: ಸಿ.ಎಂ.ಇಬ್ರಾಹಿಂ

ಆದರೆ, ಈಶ್ವರಪ್ಪ ಮಾತನಾಡಿದರೆ ಗಲಭೆಯಾಗುತ್ತವೆ. ಚುನಾವಣೆ ಹತ್ತಿರ ಬಂದಾಗಲೇ ಇವೆಲ್ಲ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೃಹ ಸಚಿವ ಅರಗ ಜ್ಞಾನೇಂದ್ರ ಶಿವಮೊಗ್ಗದವರೇ ಆದರೂ, ಹೆಸರಿಗಷ್ಟೇ ಮಿನಿಸ್ಟರ್‌. ಅವರ ಮಾತನ್ನು ಅವರ ಮನೆಯವರೇ ಕೇಳುತ್ತಿಲ್ಲ. ಇನ್ನು ಹೊರಗಿನವರು ಕೇಳುತ್ತಾರೆಯೇ? ಚುನಾವಣೆ ಸಂದರ್ಭದಲ್ಲಿ ಇಂತಹದ್ದನ್ನು ನಡೆಸುವುದೇ ಅವರ ಪಕ್ಷದ ನೀತಿಯಾದರೆ, ಏನೂ ಮಾಡಲಾಗದು. ಶಿವಮೊಗ್ಗ, ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಅವರು ಇಂತಹ ಆವಾಂತರಗಳನ್ನೇ ಮಾಡಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.

Follow Us:
Download App:
  • android
  • ios