'3 ಸೀಟಿಗಾಗಿ ಅಮಿತ್ ಶಾ ಮುಂದೆ ನಿಮ್ಮ ಮಗ ನಿಮ್ಮನ್ನ ಅಡ ಇಡ್ತಿದ್ದಾರೆ..' ದೇವೇಗೌಡರಿಗೆ ಇಬ್ರಾಹಿಂ ಎಚ್ಚರಿಕೆ!
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮತ್ತೆ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಕೇವಲ ಮೂರು ಸೀಟಿಗಾಗಿ ಎಚ್‌ಡಿ ದೇವೇಗೌಡರನ್ನ ಅಮಿತ್ ಶಾ ಮುಂದೆ ಅಡ ಇಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.
ನವದೆಹಲಿ (ಅ.25): ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅಸಮಾಧಾನ ಮುಂದುವರಿದಿದೆ. ಬುಧವಾರ ನವದೆಹಲಿಯಲ್ಲಿ ಮಾತನಾಡಿದ ಅಮಿತ್ ಶಾ, ಈ 3 ಸೀಟಿಗೆ ಅಮಿತ್ ಶಾ ಮುಂದೆ ನಿಮ್ ಮಗ ನಿಮ್ಮನ್ನ ಅಡ ಇಡುತ್ತಿದ್ದಾರೆ. ಏನ್ ಪರಿಸ್ಥಿತಿ ಬಂದಿದೆ ನಿಮಗೆ. ಕೆಂಪೇಗೌಡರ ನಾಡು ನಮ್ಮ ಕರ್ನಾಟಕ. ಕುಮಾರಸ್ವಾಮಿ ಗೆ ಬುದ್ದಿ ಹೇಳಿ. ನಾವು ಇಂಡಿಪೆಂಡೆoಟ್ ಆಗಿ ನಿಂತರೂ ಸಹ 3 ಸೀಟು ಗೆಲ್ಲುತ್ತೇವೆ. ಆದರೆ, ಇವರ ಜೊತೆ ಹೋದರೆ 1 ಸೀಟ್ ನ್ನು ಸಹ ನಾವು ಗೆಲ್ಲೋದಕ್ಕೆ ಆಗೋದಿಲ್ಲ' ಎಂದು ಹೇಳಿದ್ದಾರೆ. ಜನತಾದಳದ ಎಲ್ಲಾ ರಾಜ್ಯದ ನಾಯಕರು ಒಟ್ಟಾಗಿ ಸೇರಿ ಮೀಟಿಂಗ್ ಮಾಡುತ್ತಿದ್ದೇವೆ. ಕೇರಳ, ಮಹಾರಾಷ್ಟ್ರ, ಬಿಹಾರ ರಾಜ್ಯದ ಜನತಾದಳದ ನಾಯಕರ ಜೊತೆ ಸಭೆ ಮಾಡುತ್ತಿದ್ದೇನೆ. ಗುರುವಾರ ಮೀಟಿಂಗ್ ಮಾಡುತ್ತೇವೆ. ಜನತಾದಳ ನಮ್ದೇ ಒರಿಜಿನಲ್ ಸ್ಟ್ರೆಂಥ್. ಮೀಟಿಂಗ್ ಮಾಡಿ ನಾವು ದೇವೇಗೌಡರಿಗೆ ಹೇಳುತ್ತೇವೆ. ನೀವು ಹಿರಿಯರು ಇದ್ದೀರಿ, ನಿಮ್ಮನ್ನ ನಾವು ತಂದೆ ಸ್ಥಾನದಲ್ಲಿ ಕಾಣುತ್ತಿದ್ದೇವೆ. ಕರ್ನಾಟಕದಿಂದ ಹೋದ ಏಕೈಕ ಪ್ರಧಾನ ಮಂತ್ರಿ ನೀವು. ಮಕ್ಕಳ ಮಾತು ಕೇಳಿ ಹಾಳಾಗಬೇಡಿ. ದೇಶ ಮುಖ್ಯ, ನಾವು ನಿಮ್ಮ ಮಕ್ಕಳಂತೆ. ಜನತಾದಳ U, S ಆಗಿದ್ದೆ ಈ ಸಿದ್ಧಾಂತದ ಮೇಲೆ. ರಾಮ್ ವಿಲಾಸ್ ಪಾಸ್ವಾನ್, ಜೆ ಎಚ್ ಪಟೇಲ್ ಬಿಜೆಪಿ ಜೊತೆ ಹೋದರು ಅಂತ ಅದುನ್ನ ಬಿಟ್ಟು ಬಂದು. ನಾನು ಸಿದ್ದರಾಮಯ್ಯ ಎಲ್ಲಾ ಸೇರಿ ಈ ಪಕ್ಷವನ್ನು ಕಟ್ಟಿದ್ದೇವೆ ಎಂದು ಇಬ್ರಾಹಿಂ ಹೇಳಿದ್ದಾರೆ.
ಈಗ ನೀವು ಮಕ್ಕಳ ಮಾತು ಕೇಳಿ ನಮ್ಮನ್ನ ನಡು ನೀರಿನಲ್ಲಿ ಬಿಟ್ಟು ಹೋಗುತ್ತಿದ್ದೀರಿ. ಆದರೆ, ನಾವು ಹೋರಾಟ ಮಾಡೋದನ್ನ ನಿಮ್ಮಿಂದಲೇ ಕಲಿತಿದ್ದೇವೆ. ಅದಕ್ಕೆ ನಾನು ತಿರುಗಾಟ ಮಾಡುತ್ತಿದ್ದೇನೆ. ಇಷ್ಟಾದ ಮೇಲೂ ಸಹ ಅವರು ಒಪ್ಪದೇ ಇದ್ದರೆ, ಮುಂದೆ ನಾವು ತೀರ್ಮಾನ ಮಾಡ್ತೇವೆ ಜೆಡಿಎಸ್‌ಅನ್ನು ಹೇಗೆ ಉಳಿಸಬೇಕು ಅಂತ ನಾವು ತೀರ್ಮಾನ ಮಾಡುತ್ತೇವೆ. ಎಲ್ಲಾ ರಾಜ್ಯದ ನಾಯಕರು ಸೇರಿ ನಾವು ತೀರ್ಮಾನ ಮಾಡ್ತೇವೆ. ಸಭೆ ಪಾಟ್ನಾದಲ್ಲಿ ಮಾಡಿ ಅಂತ ಹೇಳಿದ್ದಾರೆ, ನಾನು ಬೆಂಗಳೂರಲ್ಲೇ ಮಾಡೋಣ ಅಂತಾ ಹೇಳಿದ್ದೇನೆ. ಅದಕ್ಕೆ ನಾಳೆ ನಾವೆಲ್ಲಾ ಸೇರಿ ಒಂದು ತೀರ್ಮಾನಕ್ಕೆ ಬರುತ್ತೇವೆ. ಎಲ್ಲಿ ಸಭೆ ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಮುಂದಿನ ನಡೆ ಏನು ಎಂಬುದರ ಬಗ್ಗೆ ತೀರ್ಮಾನ ಮಾಡೋಕೆ ನಾಳೆ ಸಭೆ ಸೇರುತ್ತಿದ್ದೇವೆ. ಅವರ ಬಳಿಕ ಏನು ಇಲ್ಲಾ, ಲಿಸ್ಟ್ ಇಲ್ಲಾ ಏನು ಇಲ್ಲಾ, ಸುಮ್ನೆ ಮನೇಲಿ ಕುಳಿತುಕೊಂಡು ಏನೋನೋ ಬರೀತೀದ್ದಾರೆ ಅಷ್ಟೇ. ನಾನು ಎಲೆಕ್ಟೆಡ್ ಪ್ರೆಸಿಡೆಂಟ್, ನನ್ನನ್ನ ತೆಗಿಯೋಕೆ ಬರೋದೇ ಇಲ್ಲಾ. ಜನತಾದಳ ಪ್ರಕಾರ ಅವಿಶ್ವಾಸ ತಂದು ಅದು ಪಾಸ್ ಆದ್ಮೇಲೆ 45 ದಿನಕ್ಕೆ ನಾನು ರಾಜೀನಾಮೆ ಕೊಡಬೇಕು. ಇನ್ನು ಗಂಡ ಸತ್ತೇ ಇಲ್ಲಾ, ನೀವು ತಗಬಂದು ಎರಡನೇ ಮದುವೆಗೆ ರೆಡಿ ಅಂದ್ರೆ ಹೇಗೆ? ಕೋರ್ಟ್ ಗೆ ಹೋಗೋ ಅವಶ್ಯಕತೆ ಬೀಳೋಲ್ಲ ಅಂತ ನಾನು ಅನ್ಕೊಂಡಿದ್ದೇನೆ. ಎಲೆಕ್ಷನ್ ಕಮಿಷನ್ ಅವರೇ ತೀರ್ಮಾನ ಮಾಡುತ್ತಾರೆ. ನಮ್ ಗೌಡ್ರು ಒಪ್ಪದೇ ಇದ್ದರೆ ಮುಂದೆ ಅನಿವಾರ್ಯ, ಅಧ್ಯಕ್ಷರನ್ನ ಬದಲಾವಣೆ ಮಾಡ್ಬೇಕಾಗುತ್ತೆ. ಅವರ ಜೊತೇಲಿ ಯಾರು ಇಲ್ಲಾ, ಗೌಡರಿಗೆ ಅವಮಾನ ಆಗೋಕೆ ಬಿಡಬಾರದು, ಅವರಿಗೆ ಗೌರವ ಕೊಡ್ಬೇಕು. ಅವ್ರು ತಂದೆ ಸಮಾನ, ನಮ್ ಜೊತೆ ನೀವೇ ನಾಯಕರಾಗಿ ಮುಂದುವರೆಯಿರಿ ಅಂತ ಕೇಳುತ್ತೇವೆ ಎಂದು ಇಬ್ರಾಹಿಂ ಹೇಳಿದ್ದಾರೆ.
ಅರೇಂಜ್ ಮ್ಯಾರೇಜ್ ಆದರೆ ನಿಲ್ಲೋದಿಲ್ಲ. ಇನ್ನು ಬಸ್ ಸ್ಟ್ಯಾಂಡ್ ನಲ್ಲಿ ಲವ್ ಮಾಡಿದ್ದು ಉಳಿಯುತ್ತಾ? ಪಾರ್ಟಿಯಲ್ಲಿ ತೀರ್ಮಾನ ಆಗಿದ್ಯಾ, ಯಾರಿಗೆ ಏನು ಅಧಿಕಾರ ಇದೆ. ಶಾಸಕರು ಎಲ್ಲಾ ಕಾದು ನೋಡಬೇಕು. ಈ ಹಿಂದೆ ಕೇಳಿದ್ರೆ ಅಂತದ್ದು ಯಾವ್ದು ಇಲ್ಲಾ ಅಂತಾನೆ ಗೌಡ್ರು ನನ್ ಹತ್ರ ಹೇಳುತ್ತಾ ಬಂದಿದ್ದರು. ಅವರು ಮನಸ್ಸು ಬದಲಾಯಿಸಿಲ್ಲ ಅಂದ್ರೆ ರೆಸಲ್ಯೂಷನ್ ಮಾಡಿ ಬೇರೆ ಅಧ್ಯಕ್ಷರನ್ನ ಆಯ್ಕೆ ಮಾಡ್ತೇವೆ. ಉಚ್ಚಾಟನೆ ಮಾಡೋಕೆ ನಾವು ಹೋಗಲ್ಲ. ಆದ್ರೆ ಅನಿವಾರ್ಯವಾಗಿ ಅಧ್ಯಕ್ಷರನ್ನ ಬದಲಾವಣೆ ಮಾಡುತ್ತೇವೆ ಅಷ್ಟೇ. ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದ್ದೇವೆ ಅಂತ ಅನೌನ್ಸ್ ಮಾಡೋಕೆ ಕುಮಾರಸ್ವಾಮಿ ಯಾರು? ಅವರು ಓನ್ಲಿ MLA ಅಷ್ಟೇ. ಹೆಣ್ಣಿಗೆ ಧಾರೆ ಎರೆಯೋದು ಅವ್ರ ಅಪ್ಪ ಆಗಿರಬೇಕು. ಯಾರೋ ಬಸ್ ಸ್ಟ್ಯಾಂಡ್ ನಲ್ಲಿ ಇರೋನು ಬಂದು ಧಾರೆ ಎರೆಯೋಕೆ ಆಗುತ್ತಾ? ಗೋವಾ ಸಿಎಂ ಗೆ ಬುದ್ದಿ ಇಲ್ಲ. ರಾಜ್ಯ ಬಿಜೆಪಿ ನಾಯಕರನ್ನ ಸಹಿತ ಅವ್ರು ಕರೆದಿಲ್ಲ. ಏನನ್ನೂ ಸಹ ಕೇಳಿಲ್ಲ ಈ ಕರ್ನಾಟಕ ದಲ್ಲಿ ಇರೋ ಬಿಜೆಯವ್ರು ಸಹ ಆ ಕಡೆನೂ ಇಲ್ಲಾ ಈ ಕಡೆನೂ ಇಲ್ಲಾ. ಅವ್ರು ಮರ್ಯಾದಿ ಹೋಗುತ್ತೆ ಅಂತ ಹಾಗಿದ್ದಾರೆ ಅಷ್ಟೇ ಅವ್ರಿಗೆ ಸ್ವಲ್ಪ ಆದ್ರೂ ನೈತಿಕತೆ ಇದ್ರೆ, ನಾನೇನಾದ್ರೂ ಬಿಜೆಪಿ ಅಧ್ಯಕ್ಷ ಆಗಿದ್ದರೆ, ಅವತ್ತೇ ರಾಜೀನಾಮೆ ಕೊಟ್ಟು ಹೊರಗೆ ಬರುತ್ತಿದ್ದೆ ಎಂದು ಇಬ್ರಾಹಿಂ ಕಿಡಿಕಾರಿದ್ದಾರೆ.
ನೂರಕ್ಕೆ ನೂರರಷ್ಟು ನನ್ನ ಮನಸು ಜೆಡಿಎಸ್‌ನಲ್ಲಿದೆ; ಇನ್ನೊಮ್ಮೆ ಮೈತ್ರಿ ಪರಿಶೀಲಿಸಿ ಗೌಡ್ರೆ: ಇಬ್ರಾಹಿಂ
ನಾಳೆ ಮಹತ್ವದ ಸಭೆ: ಜನತಾದಳ ಎಲ್ಲವಕ್ಕಿಂತ ಆಕ್ಟಿವ್ ಆಗಿದೆ. ನಾವು ರಾಜ್ಯಾಧ್ಯಕ್ಷ ಆಗಿಯೇ ಇರುತ್ತೇವೆ ಅಷ್ಟೇ, ರಾಷ್ಟ್ರ ಅಧ್ಯಕ್ಷ ಆಗೋಲ್ಲ. ನಾಳೆ ಮಧ್ಯಾಹ್ನ 3 ಗಂಟೆಗೆ ಸಭೆ ಸೇರ್ತೇವೆ. ಎಲ್ಲಾ ರಾಜ್ಯದವರೂ ಬರುತ್ತಾರೆ. ಈಗಲೂ ಸಹ ನಿಮ್ಮ ಮುಖಾಂತರ ದೇವೇಗೌಡ್ರಿಗೆ ಪ್ರಾರ್ಥನೆ ಮಾಡ್ತೇನೆ. ಕೈ ಮುಗಿದು ಹೇಳ್ತೇನೆ ಬೇಡ, 91 ವರ್ಷ ಆಗಿದೆ ನಿಮಗೆ ವಾಜಪೇಯಿ ನಿಮಗೆ ಬೆಂಬಲ ಕೊಡ್ತೀನಿ ಅಂದಾಗ್ಲೇ ನೀವ್ ಬಿಟ್ಟು ಬಂದವರು ನೀವು ಎಂದು ಹೇಳುತ್ತೇವೆ ಎಂದಿದ್ದಾರೆ.
ಸಿಎಂ ಇಬ್ರಾಹಿಂ ಯಾವ ಸಭೆಯಲ್ಲೂ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರಲಿಲ್ಲ: ಶಾಸಕ ಎ.ಮಂಜು