ಪಂಚರತ್ನ ಯೋಜನೆಗಳ ಅನುಷ್ಠಾನಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು: ಎಚ್.ಡಿ.ದೇವೇಗೌಡ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರೂಪಿಸಿರುವ ಪಂಚರತ್ನ ಯೋಜನೆಗಳನ್ನು ಕಾರ್ಯಗತಗೊಳಿಸಲು ಮಾಗಡಿ ಕ್ಷೇತ್ರದಿಂದ ಮಂಜುನಾಥ್ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು.
ಮಾಗಡಿ /ರಾಮನಗರ (ಏ.30): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರೂಪಿಸಿರುವ ಪಂಚರತ್ನ ಯೋಜನೆಗಳನ್ನು ಕಾರ್ಯಗತಗೊಳಿಸಲು ಮಾಗಡಿ ಕ್ಷೇತ್ರದಿಂದ ಮಂಜುನಾಥ್ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು. ಮಾಗಡಿ ಪಟ್ಟಣದ ಕೋಟೆ ಮೈದಾನದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಎಲ್ಲ ವರ್ಗದ ಜನರಿಗೆ ಅನುಕೂಲವಾಗಲಿರುವ ಪಂಚರತ್ನ ಯೋಜನೆ ರೂಪಿಸಿದೆ.
ಅವುಗಳ ಅನುಷ್ಠಾನಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಮಂಜುನಾಥ್ ಅವರನ್ನು ಗೆಲ್ಲಿಸುವ ಮೂಲಕ ಮಾಗಡಿ ಜನರು ಕೊಡುಗೆ ನೀಡಬೇಕು. ಹಣ ಮತ್ತು ಮಂತ್ರಿಗಿರಿಯ ಸ್ಥಾನಕ್ಕೆ ಆಸೆ ಪಡದೆ ತನ್ನ ಮೇಲೆ ಎಷ್ಟೇ ಒತ್ತಡಗಳು ಬಂದರೂ ಅದೆಲ್ಲವನ್ನು ಮೀರಿ ನಿಂತ ಮಂಜುನಾಥ್ ಯೋಗ್ಯ ರಾಜಕಾರಣಿ. ಪಕ್ಷಾಂತರ ಮಾಡದೆ ಪಕ್ಷ ನಿಷ್ಠೆ ಪ್ರದರ್ಶಿಸಿದ ಅವರು, ಕ್ಷೇತ್ರದ ಜನರ ಆಶೋತ್ತರಗಳಿಗೆ ನೆರವಾದವರು. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟುಸತ್ಯವೊ ಮಂಜುನಾಥ್ ಗೆಲುವು ಅಷ್ಟೇ ಸತ್ಯ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯದಲ್ಲಿ ತಿಂದ ಮನೆಗೆ ದ್ರೋಹ ಬಗೆಯುವ ವ್ಯಕ್ತಿ ನಾನಲ್ಲ: ಎಚ್.ಡಿ.ದೇವೇಗೌಡ
ಪಕ್ಷ, ಕ್ಷೇತ್ರಕ್ಕೆ ನಿಯತ್ತಿನ ನಾಯಿ ಆಗಿರುವೆ: ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಮಾತನಾಡಿ, ನೀವು ನನ್ನನ್ನು ಮೇ 10ರವರೆಗೆ ರಕ್ಷಣೆ ಮಾಡಿ, ನಿಮ್ಮನ್ನು 20 ವರ್ಷ ಕಾಯುತ್ತೇನೆ. ಯಾರ ಮೇಲು ದೌರ್ಜನ್ಯ ಎಸಗಲ್ಲ, ದರ್ಪ ಪ್ರದರ್ಶಿಸಲ್ಲ, ಹಗರಣ ಮಾಡುವುದಿಲ್ಲ. ದೇವೇಗೌಡರ ಕುಟುಂಬಕ್ಕೆ ನಂಬಿಕೆ ದ್ರೋಹ ಬಗೆಯಲ್ಲ. ಪಕ್ಷ ಮತ್ತು ನಿಮಗೆ (ಕ್ಷೇತ್ರ) ನಿಯತ್ತಿನ ನಾಯಿಯಾಗಿ ಇರುತ್ತೇನೆ. ದೇವೇಗೌಡರ ಪಾದ ಮುಟ್ಟಿಹೇಳುತ್ತಿದ್ದೇನೆ. ನನಗೂ ಹಲವಾರು ಆಫರ್‌ಗಳು ಬಂದಿದ್ದವು. ಅವರಿಗಿಂತ (ಮಾಜಿ ಶಾಸಕ ಬಾಲಕೃಷ್ಣ) 10 ಪಟ್ಟು ಹೆಚ್ಚಿನ ಆಫರ್‌ಗಳು ಅದಾಗಿದ್ದವು. ಕೋಟಿ ಕೋಟಿ ಹಣ, ಅಧಿಕಾರದ ಆಮಿಷವೊಡ್ಡಿದರು. ನನ್ನ ಮಗಳೂ ಪಕ್ಷ ಬಿಡಬಾರದೆಂದು ಹೇಳಿದಳು. ಅದರಂತೆ ನಾನು ಜೆಡಿಎಸ್ ಪಕ್ಷ ಮತ್ತು ದೇವೇಗೌಡರ ಕುಟುಂಬಕ್ಕೆ ದ್ರೋಹ ಬಗೆಯದೆ ನಿಯತ್ತಿನ ನಾಯಿಯಾಗಿ ಉಳಿದುಕೊಂಡೆ ಎಂದು ಹೇಳಿ ಭಾವುಕರಾದರು.
ದೇವೇಗೌಡರ ಹಣೆ ಬರಹವನ್ನು ತಾವೇ ಬರೆದಿದ್ದು ಅನ್ನುತ್ತಾರೆ. ತುಮಕೂರಿನಲ್ಲಿ ದೇವೇಗೌಡ ಮತ್ತು ಮಂಡ್ಯದಲ್ಲಿ ನಿಖಿಲ್ ಸೋಲಿಸಿದೆವೆಂದು ಸಂಭ್ರಮಿಸಿದರು. ಅವರಂತೆ ನಂಬಿಸಿ ಕತ್ತು ಕುಯ್ಯುವ ಕೆಲಸ ನಾನೆಂದೂ ಮಾಡಿಲ್ಲ ಎಂದು ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಹರಿಹಾಯ್ದರು. ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆದ್ದಿದ್ದ ನೀವು 1999ರಲ್ಲಿ ಅದೇ ಪಕ್ಷದಿಂದ ಗೆಲ್ಲಲು ಆಗುತ್ತಿತ್ತೆ. ನೀವು ಜೆಡಿಎಸ್ ಸೇರದೆ ಹೋಗಿದ್ದರೆ ಮೂರು ಬಾರಿ ಶಾಸಕರಾಗುತ್ತಿರಲಿಲ್ಲ. ದೇವೇಗೌಡ ಮತ್ತು ಕುಮಾರಸ್ವಾಮಿ ಆಶ್ರಯದಲ್ಲಿದ್ದ ಕಾರಣಕ್ಕೆ ಜನರು ನಿಮ್ಮನ್ನು ಗೆಲ್ಲಿಸಿದರು. ಇದು ನಿಮ್ಮ ಅನುಭವಕ್ಕೂ ಬಂದಿರಬೇಕಲ್ಲವೇ ಎಂದು ಛೇಡಿಸಿದರು.
ನಿಮ್ಮಂತೆ 600 ಕೋಟಿ ಹಗರಣ ಮಾಡಲಿಲ್ಲ. ಕಳ್ಳ ಬಿಲ್ಲು, ಸುಳ್ಳು ಬಿಲ್ಲು ಮಾಡಲಿಲ್ಲ. ಯಾರ ಮೇಲು ಒಂದೇ ಒಂದು ಎಫ್‌ಐಆರ್ ಹಾಕಿಸಲಿಲ್ಲ. ನಮ್ಮ ಪಕ್ಷ ಮಾತ್ರವಲ್ಲ ಕಾಂಗ್ರೆಸ್‌ನವರ ಮೇಲೂ ಪ್ರಕರಣ ದಾಖಲಾಗದಂತೆ ನೋಡಿಕೊಂಡಿದ್ದೇನೆ. ನಾನು ಅವ್ಯವಹಾರ ಮಾಡಿರುವುದನ್ನು ಸಾಬೀತು ಪಡಿಸಿದರೆ ರಾಜಕೀಯದಿಂದ ನಿವೃತ್ತಿ ಘೋಷಿಸುತ್ತೇನೆ ಎಂದು ಸವಾಲು ಹಾಕಿದರು. ಶಾಸಕ ಎ.ಮಂಜುನಾಥ್ ಪತ್ನಿ ಲಕ್ಷ್ಮಿ ಮಂಜುನಾಥ್ , ಪುರಸಭೆ ಅಧ್ಯಕ್ಷೆ ವಿಜಯಾ ರೂಪೇಶ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪೂಜಾರಿಪಾಳ್ಯ ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ರಾಮಣ್ಣ, ಮಹಿಳಾ ಘಟಕ ಅಧ್ಯಕ್ಷೆ ಶೈಲಜಾ, ಮುಖಂಡರಾದ ಸುಬ್ಬಾಶಾಸ್ತ್ರಿ, ದೊಡ್ಡಯ್ಯ, ಶಿವರುದ್ರಪ್ಪ, ಶೇಷಪ್ಪ, ಗಂಗಾಧರ್, ಜುಟ್ಟನಹಳ್ಳಿ ಜಯರಾಮು ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಾಲಮನ್ನಾ: ನಿಖಿಲ್ ಕುಮಾರಸ್ವಾಮಿ
ನನ್ನನ್ನು ಸೋಲಿಸಲು ಎಲ್ಲರೂ ಒಂದಾಗಿದ್ದಾರೆ. ಇದನ್ನು ದೇವೇಗೌಡರ ಬಳಿ ಹೇಳಿಕೊಂಡೆ. ಅದಕ್ಕಾಗಿ ಸ್ವತಃ ಅವರೇ ಬಂದು ಆಶೀರ್ವಾದ ಮಾಡಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಬಡವರು, ರೈತರು, ದೀನ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರು, ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಈ ಎಲ್ಲ ವರ್ಗದ ಜನರ ಹಿತದೃಷ್ಟಿಯಿಂದ ಅವರ ಆಶಯದಂತೆ ಜೆಡಿಎಸ್ ಅನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕಿದೆ. ಅವರ ಆಸೆಯನ್ನು ಈಡೇರಿಸಬೇಕು.ಇಲ್ಲದಿದ್ದರೆ ನಮಗೆ ನಾವೇ ದ್ರೋಹ ಮಾಡಿಕೊಂಡಂತಾಗುತ್ತದೆ.
-ಎ.ಮಂಜುನಾಥ್, ಜೆಡಿಎಸ್ ಅಭ್ಯರ್ಥಿ, ಮಾಗಡಿ