ಜ.5ರಿಂದ ಬೀದರ್‌ ಜಿಲ್ಲೆಯಲ್ಲಿ ಜೆಡಿಎಸ್‌ ಪಂಚರತ್ನ ರಥಯಾತ್ರೆ

ಯಾತ್ರೆಗೆ ಮಾಜಿ ಸಿಎಂ ಎಚ್‌ಡಿಕೆ, ಸಿಎಂ ಇಬ್ರಾಹಿಂ ಭಾಗಿ, ಕಾರಂಜಾ ರೈತರ ಪರವಾಗಿ ನಾವಿದ್ದೇವೆ: ಬಂಡೆಪ್ಪ ಖಾಶೆಂಪೂರ್‌

JDS Pancharatna Yatra Will Be Held in Bidar from January 5th grg

ಬೀದರ್‌(ಜ.03):  ಕಾಂಗ್ರೆಸ್‌ನ ಭಾರತ ಜೋಡೋ, ಬಿಜೆಪಿಯ ಜನ ಸಂಕಲ್ಪ ಯಾತ್ರೆ ಬರೀ ಗೊಳ್ಳು. ಜನಪರ ನೀತಿಯನ್ನು ತಿಳಿಸದೇ ಕೇವಲ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದರೆ ನಾವು, ನಮಗೆ ಬಹುಮತ ಬಂದು ಅಧಿಕಾರಕ್ಕೆ ಬಂದ್ರೆ 5 ವರ್ಷದಲ್ಲಿ ಏನ್ಮಾಡ್ತೇವೆ, ಇಲ್ಲಾಂದ್ರೆ ಪಕ್ಷವನ್ನೇ ವಿಸರ್ಜನೆ ಮಾಡ್ತೇವೆ ಎಂಬ ಧೃಢ ನಿರ್ಧಾರವನ್ನು ಜನರ ಮುಂದಿಡುವ ಪಂಚರತ್ನ ಯಾತ್ರೆಯನ್ನು ಜ. 5ರಿಂದ 8ರ ವರೆಗೆ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸುತ್ತಿದ್ದೇವೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಖಾಶೆಂಪೂರ್‌ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತಂತೆ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷದಿಂದ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಿಎಂ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರಾದ ಎಚ್‌ಡಿ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸೇರಿದಂತೆ ಪಕ್ಷದ ಹಿರಿಯ ನಾಯಕರು ಪಾಲ್ಗೊಳ್ಳುತ್ತಿದ್ದಾರೆಂದು ತಿಳಿಸಿದರು.

ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈಜೋಡಿಸಿ: ರಾಜ್ಯಪಾಲ ಗೆಹ್ಲೋಟ್‌

ಜ. 5ರಂದು ಬೀದರ್‌ ವಿಧಾನಸಭಾ ಕ್ಷೇತ್ರ, 6ರಂದು ಬೀದರ್‌ ದಕ್ಷಿಣ, 7ರಂದು ಹುಮಾನಾಬಾದ್‌, 8ರಂದು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಬೃಹತ್‌ ಮಟ್ಟದಲ್ಲಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ನಡೆಯುತ್ತದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಆ ದಿನದ ಸಂಜೆ ಸಮಯದಲ್ಲಿ ದೊಡ್ಡಮಟ್ಟದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ರಾತ್ರಿ ಕ್ಷೇತ್ರದ ಒಂದು ಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ ಎಂದರು.

ಬೆಲ್ಲ, ಸಕ್ಕರೆ ಹಾರವಷ್ಟೇ ಅಲ್ಲ ಸಜ್ಜೆ, ಜೋಳದ ರೊಟ್ಟಿಹಾರದಿಂದ ಸ್ವಾಗತ:

ಎಲ್ಲಾ ಕಡೆಗಳಲ್ಲಿ ದೊಡ್ಡಮಟ್ಟದ ವಿವಿಧ ರೀತಿಯ ಹಾರಗಳೊಂದಿಗೆ ಸನ್ಮಾನಿಸಲು ಅಭಿಮಾನಿಗಳು, ಕಾರ್ಯಕರ್ತರು ಈಗಾಗಲೇ ತಯಾರಿ ನಡೆಸಿದ್ದಾರೆ. ಹಾರದ ಸ್ವಾಗತ ಗಿನ್ನಿಸ್‌ ದಾಖಲೆ ತಲುಪಿಯಾಗಿದೆ. ಜಿಲ್ಲೆಯಲ್ಲಿ ದುಬಲಗುಂಡಿ ಉಂಡಿ ಹಾರ, ಬೆಲ್ಲದ ಅಚ್ಚಿನ ಹಾರ, ಸಕ್ಕರೆ ಅಚ್ಚಿನ ಹಾರ, ಸಜ್ಜೆ ರೊಟ್ಟಿ, ಜೋಳದ ರೊಟ್ಟಿಹಾರ ಅಲ್ಲದೆ ಕಮಲಾಪೂರ ಕೆಂಪು ಬಾಳೆ ಹಣ್ಣಿನ ಹಾರ ಸೇರಿದಂತೆ ವಿವಿಧ ರೀತಿಯ ಹಾರಗಳನ್ನು ಹಾಕಿ ಸ್ವಾಗತಿಸಲಾಗುತ್ತಿದೆ ಎಂದು ಬಂಡೆಪ್ಪ ಖಾಶೆಂಪೂರ್‌ ತಿಳಿಸಿದರು.

ಪ್ರಾದೇಶಿಕ ಪಕ್ಷವಾಗಿ ಅಧಿಕಾರದಲ್ಲಿದ್ದಾಗಲೆಲ್ಲಾ ಹೆಚ್ಚು ಅಭಿವೃದ್ಧಿ:

ನಮ್ಮ ಜಾತ್ಯತೀತ ಜನತಾದಳ ಪಕ್ಷ ಒಂದು ಪ್ರಾದೇಶಿಕ ಪಕ್ಷವಾಗಿ ಅಧಿಕಾರದಲ್ಲಿ ಇದ್ದಾಗಲೆಲ್ಲಾ ಜನಪರ ಕೆಲಸಗಳನ್ನು ಮಾಡುತ್ತಾ ನೆಲೆ ಉಳಿಸಿಕೊಂಡು ಬಂದಿದೆ. ದೇವೇಗೌಡರು ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ರಾಜ್ಯಕ್ಕೆ ನೀರಾವರಿ ಯೋಜನೆಗಳನ್ನು ನೀಡಿದ್ದಾರೆ. ಕುಮಾರಸ್ವಾಮಿ 2 ಬಾರಿ ಸಿಎಂ ಆಗಿ ಅನೇಕ ಜನಪ್ರಿಯ, ಜನಪರ ಕಾರ್ಯಕ್ರಮ ತಂದಿದ್ದಾರೆ, ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದರು.

ಮನೆ ಮನೆಗೆ ಪಂಚರತ್ನ ಮುಂದಿನ ದಿನಗಳಲ್ಲಿ ಭರ್ಜರಿಯಾಗಿ ನಡೆಯಲಿದೆ:

ಪಂಚರತ್ನ ರಥಯಾತ್ರೆ ಕಾರ್ಯಕ್ರಮದ ನಂತರ ಮುಂದಿನ ದಿನಗಳಲ್ಲಿ ಮನೆಮನೆಗೆ ಪಂಚರತ್ನ ಎಂಬ ಕಾರ್ಯಕ್ರಮ ನಡೆಲಿದೆ. ಕುಮಾರಸ್ವಾಮಿ ನಾಲ್ಕು ದಿನದ ಬೀದರ್‌ ಜಿಲ್ಲೆಯ ಪ್ರವಾಸವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲೆಯ ಜನತೆಗೆ ಶಾಸಕ ಬಂಡೆಪ್ಪ ಖಾಶೆಂಪುರ್‌ ಮನ ಮಾಡಿದರು.

ಮೇಹಕರ್‌ ಏತ ನೀರಾವರಿ ಯೋಜನೆ: ಮೂರು ವರ್ಷಗಳ ಹೋರಾಟಕ್ಕೆ ಸಂದ ಜಯ, ಖಂಡ್ರೆ

ಕಾರಂಜಾ ರೈತರ ಪರವಾಗಿ ನಾವಿದ್ದೇವೆ, ಸರ್ಕಾರ ಬಂದ್ರೆ ಬೇಡಿಕೆ ಈಡೇರಿಕೆ:

ಕಾರಂಜಾ ಸಂತ್ರಸ್ತರ ರೈತರ ಪರವಾಗಿ ನಾವಿದ್ದೇವೆ. ನಾನು ಅವರ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದೇನೆ. ನಮ್ಮೊಂದಿಗೆ ಅವರು ನಿರಂತರವಾಗಿ ಸಂಪರ್ಕದಲ್ಲಿ ಇದ್ದಾರೆ. ಸಮಯ ಮಾಡಿಕೊಂಡು ಕುಮಾರಸ್ವಾಮಿ ಅವರನ್ನು ಕಾರಂಜಾ ಸಂತ್ರಸ್ತರ ಹೋರಾಟದ ಸ್ಥಳಕ್ಕೆ ಕರೆದುಕೊಂಡು ಹೋಗಿ ಮನವಿ ಸ್ವೀಕರಿಸುತ್ತೇವೆ. ಈ ಸರ್ಕಾರ ಕಾರಂಜಾ ಸಂತ್ರಸ್ತ ಪರವಾಗಿಲ್ಲ. ಮುಂದಿನ ದಿನಗಳಲ್ಲಿ ನಾವು ಅಧಿಕಾರಕ್ಕೆ ಬಂದಾಗ ಕಾರಂಜಾ ಸಂತ್ರಸ್ತ ರೈತರ ಬೇಡಿಕೆಗಳನ್ನು ಈಡೇರಿಸುತ್ತೇವೆಂದು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷರಾದ ರಮೇಶ್‌ ಪಾಟೀಲ್‌ ಸೋಲಪೂರ್‌, ಪಕ್ಷದ ಪ್ರಮುಖರಾದ ಅಶೋಕ್‌ ಕುಮಾರ್‌ ಕರಂಜೆ, ಮಾರುತಿ ಬೌದ್ಧೆ, ಸಜ್ಜದ್‌ ಸಾಹೇಬ್‌, ಅಸದುದ್ದಿನ್‌ ಸಾಹೇಬ್‌, ರಾಜಶೇಖರ ಜವಳೆ, ಅಶೋಕ್‌ ಕೊಡಗೆ ಸೇರಿದಂತೆ ಅನೇಕರಿದ್ದರು.

Latest Videos
Follow Us:
Download App:
  • android
  • ios