ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈಜೋಡಿಸಿ: ರಾಜ್ಯಪಾಲ ಗೆಹ್ಲೋಟ್
ಇಡೀ ಸಮಾಜ ಮತ್ತು ದೇಶದಲ್ಲಿ ನೈತಿಕತೆಯನ್ನು ಉಂಟುಮಾಡುವುದು ಮತ್ತು ಮಾನವೀಯ ಮೌಲ್ಯಗಳೊಂದಿಗೆ ಆಧುನಿಕ ಜ್ಞಾನವನ್ನು ಸಂಯೋಜಿಸುವ ಮೂಲಕ, ಧರ್ಮ-ಸಂಸ್ಕೃತಿ, ರಾಷ್ಟ್ರದ ಏಕತೆ-ಸಮಗ್ರತೆಯನ್ನು ಕಾಪಾಡುವ ಮತ್ತು ಸಮಾನತೆ ಹಾಗೂ ಸಾಮರಸ್ಯ ಕಾಪಾಡುವುದು ಇಂದಿನ ಶಿಕ್ಷಣದ ಅವಶ್ಯಕತೆಯಿದೆ ಎಂದ ಥಾವರ್‌ಚಂದ್ ಗೆಹ್ಲೋಟ್
ಬೀದರ್(ಡಿ.27): ದೇಶದ ಪ್ರಧಾನಿ ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕ ಮೌಲ್ಯಗಳೊಂದಿಗೆ ಜೋಡಿಸುವ ಮೂಲಕ ಏಕ ಭಾರತ, ಶ್ರೇಷ್ಠ ಭಾರತ ಮತ್ತು ಆತ್ಮನಿರ್ಭರ್ ಭಾರತ್ ಮಾಡಲು ಬದ್ಧರಾಗಿದ್ದು, ಈ ಚಿಂತನೆಯನ್ನು ಮುಂದಕ್ಕೆ ಕೊಂಡೊಯ್ಯಲು ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ರಾಜ್ಯಪಾಲ ವರ್‌ಚಂದ್ ಗೆಹ್ಲೋಟ್ ನುಡಿದರು.
ಅವರು ಸೋಮವಾರ ಇಲ್ಲಿನ ಗುರುನಾನಕ್ ದೇವ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾನಕ್ ಝೀರಾ ಸಾಹಿಬ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಸರ್ದಾರ್ ಜೋಗಾ ಸಿಂಗ್ ಕಲ್ಯಾಣ ಕರ್ನಾಟಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಇಡೀ ಸಮಾಜ ಮತ್ತು ದೇಶದಲ್ಲಿ ನೈತಿಕತೆಯನ್ನು ಉಂಟುಮಾಡುವುದು ಮತ್ತು ಮಾನವೀಯ ಮೌಲ್ಯಗಳೊಂದಿಗೆ ಆಧುನಿಕ ಜ್ಞಾನವನ್ನು ಸಂಯೋಜಿಸುವ ಮೂಲಕ, ಧರ್ಮ-ಸಂಸ್ಕೃತಿ, ರಾಷ್ಟ್ರದ ಏಕತೆ-ಸಮಗ್ರತೆಯನ್ನು ಕಾಪಾಡುವ ಮತ್ತು ಸಮಾನತೆ ಹಾಗೂ ಸಾಮರಸ್ಯ ಕಾಪಾಡುವುದು ಇಂದಿನ ಶಿಕ್ಷಣದ ಅವಶ್ಯಕತೆಯಿದೆ ಎಂದು ಹೇಳಿದರು.
ಈಶ್ವರ ಖಂಡ್ರೆ ರಾಜಕೀಯ ಸನ್ಯಾಸ ಪಡೆಯಲಿ: ಡಿಕೆಸಿ ಆಗ್ರಹ
ಸಿಖ್ಖರ 10ನೇ ಗುರುಗಳಾದ ಗೋಬಿಂದ್ ಸಿಂಗ್ ಅವರ ಮಾನವೀಯತೆಯ ರಕ್ಷಣೆಗಾಗಿ ಮಾಡಿದ ತ್ಯಾಗದ ನೆನಪಿಗಾಗಿ ಪ್ರತಿ ವರ್ಷ ಡಿ. 26 ರಂದು ವೀರ್‌ಬಾಲ್ ದಿವಸ್ ಆಚರಿಸಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಇಂದು ಇದನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದು ಹೇಳಿದರು. ಸರ್ದಾರ್ ಜೋಗಾ ಸಿಂಗ್ ಅವರು ದೂರದೃಷ್ಟಿಯುಳ್ಳ, ಕಠಿಣ ಪರಿಶ್ರಮಿ ವ್ಯಕ್ತಿಯಾಗಿದ್ದು, ಸಮಾಜಕ್ಕೆ ಎಲ್ಲ ರೀತಿಯಲ್ಲೂ ನಿಸ್ವಾರ್ಥ ಸೇವೆ ಸಲ್ಲಿಸಲು ಬದ್ಧರಾಗಿದ್ದರು. ಸಮಾಜದ ಕಲ್ಯಾಣಕ್ಕಾಗಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲು ಪ್ರೇರೇಪಿಸಿದೆ ಎಂದರು.
ನಾನಕ್ ಜೀರಾ ಸಾಹಿಬ್ ಫೌಂಡೇಶನ್ ಹಿರಿಯ ನಾಗರಿಕರಿಗಾಗಿ ಆಹಾರ, ಬಟ್ಟೆ, ವಸತಿ, ವೈದ್ಯಕೀಯ ಮತ್ತು ಮನರಂಜನೆಯಂತಹ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಗುರುನಾನಕ್ ದೇವ್ ವೃದ್ಧಾಶ್ರಮ ಸಹ ನಡೆಸುತ್ತಿರುವುದು ಶ್ಲಾಘನೀಯ. ಈ ಕಾರ್ಯ ಹೀಗೆ ನಿರಂತರವಾಗಿರಲಿ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಭವ್ಯ ಇತಿಹಾಸವಿದೆ. ತಮ್ಮ ಪವಿತ್ರ ಹೆಜ್ಜೆ ಗುರುತುಗಳಿಂದ ಈ ಪ್ರದೇಶವನ್ನು ಪವಿತ್ರಗೊಳಿಸಿದ್ದ ಇಲ್ಲಿನ ಪ್ರಸಿದ್ಧ ಗುರುದ್ವಾರಕ್ಕೆ ಎರಡು ಬಾರಿ ಭೇಟಿ ನೀಡುವ ಸೌಭಾಗ್ಯ ನನ್ನದಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ಕುಲಪತಿಗಳಾದ ಪ್ರೊ. ದಯಾನಂದ ಅಗಸರ್, ಬೀದರ ಶಾಸಕ ರಹೀಮ್ ಖಾನ್ ಮಾತನಾಡಿದರು. ಈ ಸಂದರ್ಭದಲ್ಲಿ ನಾನಕ್ ಝೀರಾ ಸಾಹಿಬ್ ಫೌಂಡೇಶನ್ ಅಧ್ಯಕ್ಷ ಡಾ. ಸರ್ದಾರ ಬಲಬೀರ್ ಸಿಂಗ್, ಉಪಾಧ್ಯಕ್ಷೆ ರೇಷ್ಮಾ ಕೌರ್, ಟ್ರಸ್ಟಿಗಳಾದ ನಾನಕಸಿಂಗ್, ಪ್ರೀತಮಸಿಂಗ್. ಡಾ. ಸಿ ಮನೋಹರ ವೇದಿಕೆಯಲ್ಲಿದ್ದರು.