ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್, ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಡೆಯನ್ನು ವಿರೋಧಿಸಿದ ಬೆಂಗಳೂರು ನಗರ ಘಟಕ ಅಧ್ಯಕ್ಷ ಎಚ್.ಎಂ.ರಮೇಶ್‌ಗೌಡ
ಬೆಂಗಳೂರು(ನ.25): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಪೋಸ್ಟರ್ ಅಂಟಿಸಿದ ಕಿಡಿಗೇಡಿಗಳ ಬಂಧನಕ್ಕೆ ಸರ್ಕಾರ ಮೀನಮೇಷ ಎಣಿಸುತ್ತಿದ್ದು, ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸದಿದ್ದರೆ ವಿಧಾನಸೌಧದಲ್ಲಿನ ಗೃಹ ಸಚಿವರ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.
ಶುಕ್ರವಾರ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಪಕ್ಷದ ಬೆಂಗಳೂರು ನಗರ ಘಟಕ ಅಧ್ಯಕ್ಷ ಎಚ್.ಎಂ.ರಮೇಶ್‌ಗೌಡ, ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್, ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಡೆಯನ್ನು ವಿರೋಧಿಸಿದರು.
'ಸಿಎಂ ಇಬ್ರಾಹಿಂಗೂ ಹಣ ಕೊಟ್ಟಿದ್ದೆ'; ಎಚ್‌ಡಿಕೆ ಹಣ ಪಡೆದಿದ್ದಾರೆ ಎಂಬ ಇಬ್ರಾಹಿಂ ಆರೋಪಕ್ಕೆ ಶರವಣ ತಿರುಗೇಟು!
ತಿಪ್ಪೇಸ್ವಾಮಿ ಮಾತನಾಡಿ, ಜೆಡಿಎಸ್ ಪಕ್ಷದ ಕಚೇರಿಯ ಆವರಣದಲ್ಲೇ ನಮ್ಮ ನಾಯಕರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ವೈಯಕ್ತಿಕ ತೇಜೋವಧೆ, ವ್ಯಕ್ತಿ ನಿಂದನೆ ಆಧಾರವಾಗಿ ದೂರು ದಾಖಲಿಸಿದ್ದೇವೆ. ಆದರೆ ಇಲ್ಲಿಯವರೆಗೂ ಪೋಲಿಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಸರ್ಕಾರ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಕಡಿವಾಣ ಹಾಕಬೇಕಾಗಿದೆ. ಇಲ್ಲವಾದರೆ ಪರಸ್ಪರ ಪ್ರತಿಭಟನೆಗಳು ನಡೆಯುತ್ತವೆ, ಗೃಹ ಇಲಾಖೆ ಇದನ್ನು ಸೂಕ್ಷ್ಮವಾಗಿ ಗಮನಹರಿಸಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ರಮೇಶ್‌ಗೌಡ ಮಾತನಾಡಿ, ಪಕ್ಷದ ನಾಯಕರ ಮತ್ತು ನನ್ನ ತೇಜೋವಧೆ ಮಾಡುವ ಕೆಲಸ ಮಾಡಲಾಗುತ್ತಿದೆ. ಪೋಸ್ಟರ್ ಅಂಟಿಸಿದ ಕಾಂಗ್ರೆಸ್‌ನ ಮನೋಹರ್ ವಿರುದ್ಧ ಆ ಪಕ್ಷದ ವರಿಷ್ಠ ನಾಯಕರಿಗೆ ಪತ್ರ ಬರೆಯುತ್ತೇನೆ. ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಅವರ ವಿರುದ್ಧ ಪೋಸ್ಟರ್ ಅಂಟಿಸಿದ್ದಾರೆ. ಮನೋಹರ್ ಪೋಸ್ಟರ್ ಅಂಟಿಸಿರುವುದಕ್ಕೆ ನಮ್ಮ ಬಳಿ ಸಾಕ್ಷಿ ಪುರಾವೆಗಳಿವೆ ಎಂದು ಆರೋಪಿಸಿದರು.
ಎ.ಪಿ.ರಂಗನಾಥ್ ಮಾತನಾಡಿ, ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಾನೂನು ಮಾಡುವುದು ಸರಿಯಲ್ಲ. ಎಲ್ಲಾ ಪಕ್ಷಕ್ಕೂ ಒಂದೇ ನಿಯಮ. ಜೆಡಿಎಸ್ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲಿಸುವ ಸರ್ಕಾರ, ಪೋಸ್ಟರ್ ಅಂಟಿಸಿದವರು ರಾಜರೋಷವಾಗಿ ಓಡಾಡಿಕೊಂಡಿರಲು ಬಿಟ್ಟಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎಂದು ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕೆ.ಮಂಜು, ಪ್ರವೀಣ್, ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.
