Asianet Suvarna News Asianet Suvarna News

ಮೈತ್ರಿ ಇದ್ದರೂ 49+ ಕ್ಷೇತ್ರದಲ್ಲಿ ಜೆಡಿಎಸ್‌ ಏಕಾಂಗಿ ಸಂಘಟನೆ..!

ಸದ್ಯಕ್ಕೆ ಬಿಜೆಪಿಯೊಂದಿಗಿನ ಮೈತ್ರಿಯು ಸರಾಗವಾಗಿ ನಡೆಯುತ್ತಿದೆ. ಆದರೆ, ಇದು ಎಷ್ಟು ವರ್ಷಗಳ ಕಾಲ ಮುಂದುವರಿಯಲಿದೆ ಎಂಬುದನ್ನು ನಿಶ್ಚಿತವಾಗಿ ಹೇಳುವಂತಿಲ್ಲ. ಹೀಗಾಗಿ ಭವಿಷ್ಯದಲ್ಲಿ ಮೈತ್ರಿ ಮುರಿದು ಬಿದ್ದರೂ ಸ್ಥಳೀಯ ನಾಯಕತ್ವಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸುವುದು ಪಕ್ಷದ ಸಂಘಟನೆಯ ಮತ್ತೊಂದು ಮುಖ್ಯ ಉದ್ದೇಶ ಎನ್ನಲಾಗಿದೆ.

JDS organization in 49 constituencies  in karnataka grg
Author
First Published Aug 8, 2024, 6:17 AM IST | Last Updated Aug 8, 2024, 10:04 AM IST

ಪ್ರಭುಸ್ವಾಮಿ ನಟೇಕರ್‌

ಬೆಂಗಳೂರು(ಆ.08): ರಾಜ್ಯದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದರೂ ಪಕ್ಷದ ಸಂಘಟನೆಯಲ್ಲಿ ಮೈಮರೆಯದೆ ರಾಜ್ಯದಲ್ಲಿ ತನ್ನ ಅಸ್ತಿತ್ವ ಕಾಪಾಡಿಕೊಂಡು ಬಲವಾಗಿ ನೆಲೆಯೂರಲು ತಳಮಟ್ಟದಿಂದ ಸಂಘಟನೆಗೆ ಜೆಡಿಎಸ್‌ ಕಾರ್ಯೋನ್ಮುಖವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 19 ಕ್ಷೇತ್ರ ಮತ್ತು ಎರಡನೇ ಸ್ಥಾನ ಗಳಿಸಿರುವ 30ಕ್ಕೂ ಹೆಚ್ಚಿನ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಸಂಘಟನೆ ಗಟ್ಟಿಗೊಳಿಸಲು ಪಕ್ಷ ನಿರ್ಧಾರ ಕೈಗೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸದ್ಯಕ್ಕೆ ಬಿಜೆಪಿಯೊಂದಿಗಿನ ಮೈತ್ರಿಯು ಸರಾಗವಾಗಿ ನಡೆಯುತ್ತಿದೆ. ಆದರೆ, ಇದು ಎಷ್ಟು ವರ್ಷಗಳ ಕಾಲ ಮುಂದುವರಿಯಲಿದೆ ಎಂಬುದನ್ನು ನಿಶ್ಚಿತವಾಗಿ ಹೇಳುವಂತಿಲ್ಲ. ಹೀಗಾಗಿ ಭವಿಷ್ಯದಲ್ಲಿ ಮೈತ್ರಿ ಮುರಿದು ಬಿದ್ದರೂ ಸ್ಥಳೀಯ ನಾಯಕತ್ವಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸುವುದು ಪಕ್ಷದ ಸಂಘಟನೆಯ ಮತ್ತೊಂದು ಮುಖ್ಯ ಉದ್ದೇಶ ಎನ್ನಲಾಗಿದೆ.

ತಾಕತ್ತಿದ್ದರೆ ಬಿಜೆಪಿ-ಜೆಡಿಎಸ್‌ನವರು ಎನ್‌ಸಿಆರ್‌ಬಿ ವರದಿ ಬಿಡುಗಡೆಗೊಳಿಸಿ: ಸಚಿವ ಸಂತೋಷ್ ಲಾಡ್

ಪಕ್ಷವನ್ನು ಸದೃಢಗೊಳಿಸಲು ಸ್ಥಳೀಯ ಮಟ್ಟದಲ್ಲಿ ನಾಯಕತ್ವಕ್ಕೆ ಒತ್ತು ನೀಡಲು ಪಕ್ಷದ ಮುಖಂಡರು ಮುಂದಾಗಿದ್ದಾರೆ. ಸದಸ್ಯತ್ವ ನೋಂದಣಿ ಹೆಚ್ಚಳಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಇದರ ಜತೆಗೆ ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವ ಕಾರ್ಯ ಕೈಗೊಳ್ಳಲು ಪಕ್ಷವು ತೀರ್ಮಾನಿಸಿದೆ. ಸ್ಥಳೀಯ ನಾಯಕತ್ವ ನೀಡಿ ಪಕ್ಷದ ಸದಸ್ಯತ್ವ ನೋಂದಣಿಯ ಗುರಿಯನ್ನು ನೀಡುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಪಕ್ಷದ ಸದಸ್ಯತ್ವ ಹೆಚ್ಚಿಸಿ ಪಕ್ಷವನ್ನು ಬಲಗೊಳಿಸುವ ತಂತ್ರಗಾರಿಕೆ ಮಾಡಲಾಗಿದೆ. ಒಟ್ಟಾರೆ ಪಕ್ಷದ ಸದೃಢತೆಗೆ ಬೇಕಾದ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ವಿಧಾನಸಭೆ ಚುನಾವಣೆಯಲ್ಲಿ ತನ್ನ ಭದ್ರಕೋಟೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸೋಲನುಭವಿಸಿ ಪಕ್ಷ ಮುಖಭಂಗ ಅನುಭವಿಸಿದೆ. 30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಥವಾ ಬಿಜೆಪಿ ಬಳಿಕ ಜೆಡಿಎಸ್‌ ಎರಡನೇ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಕ್ಷೇತ್ರಗಳತ್ತ ಹೆಚ್ಚಿನ ನಿಗಾವಹಿಸಿ ಈಗಿನಿಂದಲೇ ಸಂಘಟನಾತ್ಮಕವಾಗಿ ಶ್ರಮವಹಿಸಿದರೆ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಆ ಕ್ಷೇತ್ರಗಳನ್ನು ತಮ್ಮದಾಗಿಸಿಕೊಳ್ಳಬಹುದು ಎಂಬ ನಿರೀಕ್ಷೆ ಸ್ಥಳೀಯ ನಾಯಕರದ್ದಾಗಿದೆ. ಈ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸಬೇಕಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಕೋರ್‌ ಕಮಿಟಿ ಸಭೆಯಲ್ಲಿ ನಿರ್ಣಯಿಸಿದಂತೆ ಕೇಡರ್‌ ಮಾದರಿಯಲ್ಲಿ ಪಕ್ಷವನ್ನು ಕಟ್ಟಲು ಪಕ್ಷದ ಮುಖಂಡರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಇದರ ಜತೆಗೆ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಹಿಂದಿನ ಆಡಳಿತಾವಧಿಯಲ್ಲಿ ಕೈಗೊಂಡ ಯೋಜನೆಗಳು, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಆಡಳಿತಾವಧಿಯಲ್ಲಿನ ಕೊಡುಗೆ ಮತ್ತು ವಿಧಾನಸಭೆ ಚುನಾವಣೆ ವೇಳೆ ಘೋಷಿಸಿದ ಪಂಚರತ್ನ ಕಾರ್ಯಕ್ರಮಗಳನ್ನು ಜನತೆಯ ಮುಂದಿಡಲಾಗುವುದು. ಇದಲ್ಲದೆ, ಪ್ರಸ್ತುತ ಕೇಂದ್ರ ಸಚಿವರಾಗಿರುವುದರಿಂದ ರಾಜ್ಯಕ್ಕೆ ಅವರು ನೀಡುವ ಕೊಡುಗೆಗಳನ್ನು ಜನರ ಮುಂದಿಟ್ಟು ಜೆಡಿಎಸ್‌ ಅನ್ನು ಸದೃಢಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ.

ಎಚ್‌ಡಿಕೆ ಯೂ ಟರ್ನ್ ಕುಮಾರ, ಕ್ಷಣಕ್ಕೊಂದು ಬಣ್ಣ: ಡಿಕೆಶಿ ವ್ಯಂಗ್ಯ

ಇನ್ನು, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಿಂದಾಗಿ ಜೆಡಿಎಸ್‌ ಭದ್ರಕೋಟೆಯಲ್ಲಿ ಪಕ್ಷಕ್ಕೆ ಸೋಲಾಗಿದೆ. ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ, ಮುಡಾ ಹಗರಣವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ತಂತ್ರಗಾರಿಕೆ ರೂಪಿಸಲಾಗಿದೆ. ಈ ಹಗರಣಗಳನ್ನು ಮುಂದಿನ ವಿಧಾನಸಭೆ ಚುನಾವಣೆವರೆಗೆ ಕೊಂಡೊಯ್ದು ಜೆಡಿಎಸ್‌ ಗೆಲುವಿಗೆ ಪೂರಕ ವಾತಾವರಣ ರೂಪಿಸುವ ರಾಜಕೀಯ ತಂತ್ರಗಾರಿಕೆ ಹೊಂದಲಾಗಿದೆ ಎಂದು ತಿಳಿದು ಬಂದಿದೆ.

ಮುನ್ನೆಚ್ಚರಿಕೆ

- ಗೆದ್ದ, 2ನೇ ಸ್ಥಾನ ಗಳಿಸಿದ ಕ್ಷೇತ್ರಗಳ ಮೇಲೆ ಗಮನ
- ದೋಸ್ತಿ ಮುರಿದರೂ ಪಕ್ಷ ದುರ್ಬಲವಾಗದಂತೆ ಕ್ರಮ

ಕಾರ್ಯತಂತ್ರವೇನು?

- ಸದ್ಯಕ್ಕೆ ಬಿಜೆಪಿ ಜತೆಗಿನ ಮೈತ್ರಿ ಚೆನ್ನಾಗಿದ್ದರೂ ಎಷ್ಟು ವರ್ಷ ಇದು ಮುಂದುವರೆಯುತ್ತದೆ ಎಂಬುದು ಸ್ಪಷ್ಟವಿಲ್ಲ
- ಹೀಗಾಗಿ ತನ್ನ ಅಸ್ತಿತ್ವವಿರುವ ಕ್ಷೇತ್ರಗಳಲ್ಲಿ ಪಕ್ಷವನ್ನು ಶಕ್ತಿಯುತವಾಗಿ ಮಾಡಲು ಜೆಡಿಎಸ್‌ ಸದ್ದಿಲ್ಲದೇ ನಿರ್ಧಾರ
- ಸ್ಥಳೀಯ ಮಟ್ಟದಲ್ಲಿ ನಾಯಕತ್ವಕ್ಕೆ ಒತ್ತು, ಸದಸ್ಯತ್ವ ಹೆಚ್ಚಳಕ್ಕೆ ಕ್ರಮ
- ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಮುಖಂಡರ ಜೊತೆ ಸಂಪರ್ಕ
- ಕೋರ್ ಕಮಿಟಿ ನಿರ್ಧಾರದಂತೆ ಕೇಡರ್‌ ಆಧಾರಿತವಾಗಿ ಬಲವರ್ಧನೆ
- ಎಚ್‌ಡಿಕೆ, ಗೌಡರ ಕೊಡುಗೆ, ಪಂಚರತ್ನ ಕಾರ್ಯಕ್ರಮದ ಬಗ್ಗೆ ಪ್ರಚಾರ

Latest Videos
Follow Us:
Download App:
  • android
  • ios