Council Election Result : ಫಲಿಸದ ಜಿಟಿಡಿ - ಸಂದೇಶ್ ಮಾಸ್ಟರ್ ಪ್ಲಾನ್ : ಸಾರಾ ಹೋರಟಕ್ಕೆ ಜಯ
- ಮೈಸೂರಲ್ಲಿ ಗೆಲುವಿನ ಓಟ ಮುಂದುವರೆಸಿದ ಕಾಂಗ್ರೆಸ್, ಜೆಡಿಎಸ್
- ದಶಕದ ನಂತರ ‘ಕಮಲ’ ಅರಳಿಸುವ ಬಿಜೆಪಿ ಯತ್ನ ಮತ್ತೊಮ್ಮೆ ವಿಫಲ
ವರದಿ : ಅಂಶಿ ಪ್ರಸನ್ನಕುಮಾರ್
ಮೈಸೂರು (ಡಿ.15): ಗೆಲುವಿನ ಓಟ ಮುಂದುವರೆಸಿದ ಕಾಂಗ್ರೆಸ್, ಜೆಡಿಎಸ್, ದಶಕದ ನಂತರ ‘ಕಮಲ’ ಅರಳಿಸುವ ಬಿಜೆಪಿ ಯತ್ನ ಮತ್ತೊಮ್ಮೆ ವಿಫಲ. ಇದು ಮೈಸೂರು- ಚಾಮರಾಜನಗರ (Mysuru Chamarajanagar) ದ್ವಿಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯ (MLC Election) ಸ್ಥೂಲ ನೋಟ. 1987 ರಿಂದ ಇಲ್ಲಿಯವರೆಗೆ ನಡುವೆ ಮೂರು ವರ್ಷ ಹೊರತುಪಡಿಸಿದರೆ ಐದು ಬಾರಿ ಚುನಾವಣೆಗಳು (Election) ನಡೆದಿವೆ. ಇದಲ್ಲದೇ ಒಂದು ಉಪ ಚುನಾವಣೆ ಕೂಡ ನಡೆದಿದೆ. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ (Congress) ಟಿ.ಎನ್. ನರಸಿಂಹಮೂರ್ತಿ- ಜನತಾಪಕ್ಷದ ವಿ.ಎಚ್. ಗೌಡ, ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್ ಸಿ. ರಮೇಶ್- ಜನತಾದಳದ ವೈ. ಮಹೇಶ್, ಮೂರನೇ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎನ್. ಮಂಜುನಾಥ್- ಜೆಡಿಎಸ್‌ನ ಬಿ. ಚಿದಾನಂದ, ನಾಲ್ಕನೇ ಚುನಾವಣೆಯಲ್ಲಿ ಜೆಡಿಎಸ್‌ನ (JDS) ಸಂದೇಶ್ ನಾಗರಾಜ್- ಬಿಜೆಪಿಯ(BJP) ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಗೆದ್ದಿದ್ದರು. ಮಲ್ಲಿಕಾರ್ಜುನಪ್ಪ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್. ಧರ್ಮಸೇನ ಗೆದ್ದಿದ್ದರು.
2009 ರಲ್ಲಿ ನಡೆದ ಚುನಾವಣೆಯಲ್ಲಿ ಮಂಜುನಾಥ್ ಅವರಿಗೆ ಎರಡನೇ ಬಾರಿ ಟಿಕೆಟ್ ನೀಡಲಾಗಿತ್ತು. ಆದರೆ ಸೋತಿದ್ದರು. ಆದರೆ ಈ ಬಾರಿ ಕಾಂಗ್ರೆಸ್ (ಆರ್. ಧರ್ಮಸೇನ) ಹಾಗೂ ಜೆಡಿಎಸ್ (ಸಂದೇಶ್ ನಾಗರಾಜ್) ಹಾಲಿ ಸದಸ್ಯರಿಗೆ ಟಿಕೆಟ್ ನೀಡಿರಲಿಲ್ಲ. ಬದಲಿಗೆ ಕಾಂಗ್ರೆಸ್ ದಲಿತರಲ್ಲಿಯೇ ಎಡಗೈ ಜನಾಂಗದ ಡಾ.ಡಿ. ತಿಮ್ಮಯ್ಯ ಅವರಿಗೆ ಟಿಕೆಟ್ ನೀಡಿತ್ತು. ಜೆಡಿಎಸ್ (JDS) ಒಕ್ಕಲಿಗ ಜನಾಂಗದ ಸಿ.ಎನ್. ಮಂಜೇಗೌಡ ಅವರಿಗೆ ಟಿಕೆಟ್ ನೀಡಿತ್ತು. ಬಿಜೆಪಿಯು (bjp) ಹಿಂದುಳಿದ ವರ್ಗದಲ್ಲಿಯೇ ಸೂಕ್ಷ್ಮಾತಿಸೂಕ್ಷ್ಮ ಮಡಿವಾಳ ಜನಾಂಗದ ಆರ್. ರಘು ಕೌಟಿಲ್ಯ ಅವರಿಗೆ ಎರಡನೇ ಬಾರಿಗೆ ಟಿಕೆಟ್ ನೀಡಿತ್ತು.
ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ತವರು ಕ್ಷೇತ್ರ ಇದಾಗಿದ್ದರಿಂದ ಕಾಂಗ್ರೆಸ್‌ಗೆ ಮೊದಲ ಸುತ್ತಿನಲ್ಲಿಯೇ ಗೆಲ್ಲುವುದು ಪ್ರತಿಷ್ಠೆಯಾಗಿತ್ತು. ಅದೇ ರೀತಿ 2009 ರಲ್ಲಿ ರಾಜ್ಯದಲ್ಲಿ ಬಿಜೆಪಿ (BJP) ಅಧಿಕಾರದಲ್ಲಿದ್ದಾಗ ಬಿಜೆಪಿಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಗೆದ್ದಿದ್ದರು. ಇದಾದ ನಂತರ ಈಗಲೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಗೆಲ್ಲಲೇಬೇಕು ಎಂದು ಬಿಜೆಪಿ ಹೋರಾಟ ನಡೆಸಿತ್ತು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಮಾಜಿ ಸಚಿವ ಜಿ.ಟಿ. ದೇವೇಗೌಡರು (GT Devegowda) ಪಕ್ಷದಿಂದ ದೂರವಿದ್ದು, ಸಿದ್ದರಾಮಯ್ಯ (Siddaramaiah) ಅವರೊಂದಿಗೆ ವೇದಿಕೆ ಹಂಚಿಕೊಂಡು ಕಾಂಗ್ರೆಸ್ ಸೇರುವ ಮುನ್ಸೂಚನೆ ನೀಡಿರುವುದರಿಂದ ಕ್ಷೇತ್ರ ಉಳಿಸಿಕೊಳ್ಳುವುದು ಜೆಡಿಎಸ್‌ಗೆ ಸವಾಲಾಗಿತ್ತು. ಇದರಿಂದಾಗಿಯೇ ಮೂರು ಪ್ರಮುಖ ಪಕ್ಷಗಳು ಗೆಲುವುದನ್ನು ಪ್ರತಿಷ್ಛೆಯಾಗಿ ತೆಗೆದುಕೊಂಡಿದ್ದವು.
ಉಭಯ ಜಿಲ್ಲೆಗಳ 15 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗೆಸ್-6 (Congress), ಬಿಜೆಪಿ-5 (BJP), ಜೆಡಿಎಸ್-4 ಶಾಸಕರನ್ನು ಹೊಂದಿದೆ. ಇಬ್ಬರು ಸಂಸದರು ಕೂಡ ಬಿಜೆಪಿಗೆ ಸೇರಿದವರು. ಇದಲ್ಲದೇ ಜೆಡಿಎಸ್-3, ಬಿಜೆಪಿ-1, ಕಾಂಗ್ರೆಸ್-1 ವಿಧಾನ ಪರಿಷತ್ ಸದಸ್ಯರನ್ನು ಹೊಂದಿತ್ತು. ಈ ಬಾರಿ ಜಿಲ್ಲಾ ಹಾಗೂ ತಾಪಂ ಸದಸ್ಯರಿಲ್ಲ. ಆದರೆ ಉಭಯ ಜಿಲ್ಲೆಗಳಲ್ಲೂ ಕಾಂಗ್ರೆಸ್‌ಗೆ ಭದ್ರ ನೆಲೆ ಇದೆ. ಆಯ್ಕೆಯಾಗಿರುವ ಗ್ರಾಪಂ ಸದಸ್ಯರಲ್ಲಿ ಕಾಂಗ್ರೆಸ್‌ನವರೇ ಹೆಚ್ಚು. ಹೀಗಾಗಿ ಆ ಪಕ್ಷಕ್ಕೆ ಗೆಲುವು ಸುಲಭವಾಗಿತ್ತು. ಆದರೂ ಸ್ವತಃ ಸಿದ್ದರಾಮಯ್ಯ ಅವರೇ ಉಭಯ ಜಿಲ್ಲೆಗಳ ಎಲ್ಲಾ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರ, ಮುಖಂಡರ ಸಭೆ ನಡೆಸಿ, ಸಲಹೆ ಸೂಚನೆಗಳನ್ನು ನೀಡಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ, ಮಾಜಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ತನ್ವೀರ್ ಸೇಠ್, ಸಿ. ಪುಟ್ಟರಂಗಶೆಟ್ಟಿ, ಶಾಸಕರಾದ ಆರ್. ನರೇಂದ್ರ, ಎಚ್.ಪಿ. ಮಂಜುನಾಥ್, ಅನಿಲ್ ಚಿಕ್ಕಮಾದು, ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ವಾಸು, ಕಳಲೆ ಕೇಶಮೂರ್ತಿ, ಎಸ್. ಬಾಲರಾಜ್, ಎಸ್, ಜಯಣ್ಣ, ಎ.ಆರ್. ಕೃಷ್ಣಮೂರ್ತಿ, ಮುಖಂಡರಾದ ಡಿ. ರವಿಶಂಕರ್, ಸುನೀಲ್ ಬೋಸ್, ಎಚ್.ಎಂ. ಗಣೇಶ್ ಪ್ರಸಾದ್ ಸೇರಿದಂತೆ ಮುಖಂಡರು, ಪದಾಧಿಕಾರಿಗಳು ಸಾಥ್ ನೀಡಿದ್ದರು.
ಮೂರೂವರೆ ಸಾವಿರ ಚುನಾಯಿತ ಪ್ರತಿನಿಧಿಗಳು ಇದ್ದಾರೆ ಎಂದು ಹೇಳಿಕೊಂಡಿದ್ದ ಕಾಂಗ್ರೆಸ್ ಸುಲಭವಾಗಿ ಗೆಲ್ಲುವುದು ಖಚಿತವಾಗಿತ್ತು. ಆದರೆ ಅದಕ್ಕಾಗಿ ಇತರೆ ಪಕ್ಷಗಳ ಜೊತೆ ಪೈಪೋಟಿಗೆ ಬಿದ್ದು ಹಣವನ್ನು ಕೂಡ ಹಂಚಬೇಕಾಯಿತು.
ಈ ಕ್ಷೇತ್ರದಲ್ಲಿ ಹಿಂದಿನ ಜನತಾ ಪರಿವಾರ, ಈಗ ಅದರ ಪ್ರಾತಿನಿಧಿಕ ಸ್ವರೂಪವಾದ ಜೆಡಿಎಸ್ ಯಾವತ್ತೂ ಸೋತಿಲ್ಲ. ಹೀಗಾಗಿ ಆ ಪಕ್ಷಕ್ಕೂ ಗೆಲ್ಲುವುದು ಮುಖ್ಯವಾಗಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕರಾದ ಸಾ.ರಾ. ಮಹೇಶ್, ಕೆ. ಮಹದೇವ್, ಎಂ. ಅಶ್ವಿನ್‌ಕುಮಾರ್, ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಮಾಜಿ ಶಾಸಕರಾದ ಚಿಕ್ಕಣ್ಣ, ಮುಖಂಡರು, ಪಕ್ಷದ ಪದಾಧಿಕಾರಿಗಳು ಪ್ರಚಾರ ನಡೆಸಿದ್ದರು. ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್‌ಗೆ ನೆಲೆ ಇದೆ. ಜೆಡಿಎಸ್‌ನಿಂದ ದೂರವಿರುವ ಜಿ.ಟಿ. ದೇವೇಗೌಡರು ಚಾಮುಂಡೇಶ್ವರಿ ಹಾಗೂ ಹುಣಸೂರು ಕ್ಷೇತ್ರಗಳಲ್ಲಿ ತಮ್ಮ ಪ್ರಭಾವ ಬಳಸಿ, ತಮ್ಮ ಬೆಂಬಲಿಗರ ಮತಗಳು ಜೆಡಿಎಸ್‌ಗೆ ಹೋಗದಂತೆ ನೋಡಿಕೊಂಡರು. ಇದಲ್ಲದೇ ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್ ಅವರು ಕೂಡ ಪಕ್ಷದ ವಿರುದ್ಧವಾಗಿದ್ದರು. ಜೆಡಿಎಸ್ ಅತಿ ಹೆಚ್ಚು ಹಣವನ್ನು ವ್ಯಯ ಮಾಡಿದರೂ ಗೆಲ್ಲಲು ಕೊನೆಕ್ಷಣದವರೆಗೂ ತಿಣುಕಾಡಬೇಕಾಯಿತು. ಆದರೆ ಸಾ.ರಾ. ಮಹೇಶ್ ಒಂದು ರೀತಿಯಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ, ಗೆಲುವು ಕೈತಪ್ಪಿ ಹೋಗದಂತೆ ನೋಡಿಕೊಂಡು, ಪಕ್ಷದ ಮಾನ ಉಳಿಸಲು ಹಗಲುರಾತ್ರಿ ಶ್ರಮಿಸಿದ್ದು ಫಲ ನೀಡಿದೆ.
ಬಿಜೆಪಿ ಪರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa), ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ಸಂಸದರಾದ ವಿ. ಶ್ರೀನಿವಾಸಪ್ರಸಾದ್, ಪ್ರತಾಪ್ ಸಿಂಹ (Prathap Simha), ಸಚಿವರಾದ ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ (Eshwarappa), ಎಸ್.ಟಿ. ಸೋಮಶೇಖರ್, ಸಿ. ನಾರಾಯಣಗೌಡ, ಶಾಸಕರಾದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ಬಿ. ಹರ್ಷವರ್ಧನ್, ಸಿ.ಎಸ್. ನಿರಂಜನಕುಮಾರ್, ಎನ್. ಮಹೇಶ್, ಮಾಜಿ ಸಚಿವರಾದ ಸಿ.ಎಚ್. ವಿಜಯಶಂಕರ್, ಮಾಜಿ ಶಾಸಕರಾದ ಡಾ.ಎನ್.ಎನ್. ಭಾರತಿಶಂಕರ್, ಎಚ್.ಸಿ. ಬಸವರಾಜು, ಸಿದ್ದರಾಜು, ಗೋ. ಮಧುಸೂದನ್, ತೋಂಟದಾರ್ಯ ಪಕ್ಷದ ಪದಾಧಿಕಾರಿಗಳು, ಮುಖಂಡರು, ನಿಗಮ, ಮಂಡಳಿಗಳ ಅಧ್ಯಕ್ಷರು ಕೆಲಸ ಮಾಡಿದ್ದರು. ಜೆಡಿಎಸ್‌ಗಿಂತ ಸ್ವಲ್ಪ ಕಡಿಮೆ, ಕಾಂಗ್ರೆಸ್‌ಗಿಂತ ಸ್ವಲ್ಪ ಹೆಚ್ಚು ಹಣ ಕೂಡ ಹಂಚಿಕೆ ಮಾಡಿತ್ತು. ಈ ಪಕ್ಷಕ್ಕೆ ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ ನೆಲೆ. ನಗರ ಹೊರತುಪಡಿಸಿ ಮೈಸೂರು ಜಿಲ್ಲೆಯಲ್ಲಿ ಅಷ್ಟುಭದ್ರವಾಗಿಲ್ಲ. ಆದರೂ ಕೂಡ ಜೆಡಿಎಸ್‌ನ ಒಡಕಿನ ಲಾಭ ಪಡೆಯಲು ಯತ್ನಿಸಿತು. ಮೊದಲ ಪ್ರಾಶಸ್ತ್ಯದ ಮತಗಳು ಎಣಿಕೆ ಮುಗಿದಾಗ ಜೆಡಿಎಸ್‌ಗಿಂತ ಮುಂದಿದ್ದ ಬಿಜೆಪಿ ಗೆಲವು ತನ್ನದೇ ಎಂದು ಬೀಗಿತು. ಆದರೆ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಹಿನ್ನಡೆ ಅನುಭವಿಸಿತು. ಅಂತಿಮವಾಗಿ ಸೋಲನ್ನು ಒಪ್ಪಿಕೊಂಡಿತು. ಬಿಜೆಪಿ ಕಳೆದ ಬಾರಿ ಕೂಡ ಕಡಿಮೆ ಅಂತರದಲ್ಲಿ ಸೋತಿತ್ತು. ರಘು ಅವರೇ ಅಭ್ಯರ್ಥಿಯಾಗಿದ್ದರು.
ಮೂರನೇ ಬಾರಿ ಸ್ಪರ್ಧಿಸಿದ್ದ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಎಷ್ಟೇ ಬೊಬ್ಬೆ ಹಾಕಿದರೂ ಯಾವುದೇ ಪ್ರಯೋಜನವಾಗಿಲ್ಲ. ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದಲ್ಲಿ ಮತದಾರರು ಯಾವ ರೀತಿ ಪಾಠ ಕಲಿಸುತ್ತಾರೆ ಎಂಬುದನ್ನು ಇತರೆ ನಾಲ್ಕು ಅಭ್ಯರ್ಥಿಗಳಿಗೆ ಸಿಕ್ಕಿರುವ ಮತಗಳ ಮೂಲಕ ತಿಳಿಯಬಹುದು.