2023ರಲ್ಲಿ ನಡೆಯಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಶಾಸಕ ಎಂ.ವಿ.ವೀರಭದ್ರಯ್ಯನವರು ಅನಾರೋಗ್ಯದ ನೆಪವೊಡ್ಡಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಅವರ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್‌ ಕಾರ್ಯಕರ್ತರು ಶಾಸಕರನ್ನು ತಡೆದು ನೀವೇ ಮುಂದಿನ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರಕ್ಕೆ ಸ್ಪರ್ಧಿಸಬೇಕೆಂದು ಕಣ್ಣೀರು ಹಾಕಿದ ಪ್ರಸಂಗ ಗುರುವಾರ ನಡೆದಿದೆ. 

ಮಧುಗಿರಿ (ಅ.07): 2023ರಲ್ಲಿ ನಡೆಯಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಶಾಸಕ ಎಂ.ವಿ.ವೀರಭದ್ರಯ್ಯನವರು ಅನಾರೋಗ್ಯದ ನೆಪವೊಡ್ಡಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಅವರ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್‌ ಕಾರ್ಯಕರ್ತರು ಶಾಸಕರನ್ನು ತಡೆದು ನೀವೇ ಮುಂದಿನ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರಕ್ಕೆ ಸ್ಪರ್ಧಿಸಬೇಕೆಂದು ಕಣ್ಣೀರು ಹಾಕಿದ ಪ್ರಸಂಗ ಗುರುವಾರ ನಡೆದಿದೆ. ಕಳೆದ 3 ದಿನಗಳ ಹಿಂದಷ್ಟೇ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿಯವರು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಎಂ.ವಿ.ವೀರಭದ್ರಯ್ಯ ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದರಂತೆ. 

ಇದರಿಂದ ಆತಂಕಕ್ಕೆ ಒಳಗಾದ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರು ಮಧುಗಿರಿ ಕಸಬಾ ವ್ಯಾಪ್ತಿಯ ಶ್ರೀ ವೇಣುಗೋಪಾಲ ಸ್ವಾಮಿ ದೇಗುಲದ 50 ಲಕ್ಷದ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಲು ಆಗಮಿಸಿದ್ದ ವೇಳೆ, ಮುಂಬರುವ ಚುನಾವಣೆಯಲ್ಲೂ ನೀವೇ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರು ಕಣ್ಣೀರು ಸುರಿಸಿ ಒತ್ತಡ ಹಾಕಿದಾಗ ಕಾರ್ಯಕರ್ತರ ಒತ್ತಾಯಕ್ಕೆ ಶಾಸಕರೂ ಸಹ ಕಣ್ಣೀರು ಹಾಕಿದರು. ಕಾಮಗಾರಿ ಲೋಕಾರ್ಪಣೆ ಮಾಡಿ ಹೊರ ಬರುತ್ತಿದ್ದಂತೆ ಅಡ್ಡಲಾಗಿ ಕೂತ ಸಾವಿರಾರು ಕಾರ್ಯಕರ್ತರು ನೀವೆ ಮುಂದೆಯೂ ಸ್ಪರ್ಧಿಸಿದರೆ ಗೆಲ್ಲುತ್ತೀರಿ. ನಮ್ಮಿಂದ ತಪ್ಪುಗಳಾಗಿದ್ದರೆ ಕ್ಷಮಿಸಿ ಕ್ಷೇತ್ರ ತೊರೆಯುವ ಮಾತನ್ನು ವಾಪಸ್‌ ಪಡೆಯಬೇಕೆಂದು ಒತ್ತಾಯಿಸಿದರು.

ತುಮಕೂರಿನಲ್ಲಿ ಮತ್ತೊಂದು ಜೆಡಿಎಸ್‌ ವಿಕೆಟ್‌ ಪತನ, 2023ರ ಚುನಾವಣೆಯಿಂದ ಹಿಂದೆ ಸರಿದ ಶಾಸಕ

ನಾನು ಅನಾರೋಗ್ಯ ಮತ್ತು ವೈಯಕ್ತಿಕ ಸಮಸ್ಯೆಗಳಿಂದ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದು ಕುಮಾಸ್ವಾಮಿ ಅವರಿಗೆ ತಿಳಿಸಿದ್ದೇನೆ. ಮತ್ತೆ ಟಿಕೆಟ್‌ ಕೇಳಿ ಸಣ್ಣವನಾಗುವುದು ನನಗೆ ಇಷ್ಟವಿಲ್ಲ ಎಂದು ಕಾರ್ಯಕರ್ತರಿಗೆ ತಿಳಿಸ್ದಿದಾರೆ ಎನ್ನಲಾಗಿದೆ. ಪುರಸಭೆ ಅಧ್ಯಕ್ಷ ತಿಮ್ಮರಾಯಪ್ಪ ಮಾತನಾಡಿ, ನಿಮ್ಮಿಂದ 5 ವರ್ಷ ಕ್ಷೇತ್ರ ನೆಮ್ಮದಿಯಾಗಿದೆ. ಎಲ್ಲರಿಗೂ ಚಿನ್ನದ ತಗಡು ಹೊದಿಸಲು ಸಾಧ್ಯವಿಲ್ಲ, ಬೀದಿಯಲ್ಲಿ ಮಾತನಾಡುವವರ ಮಾತಿಗೆ ಕಿವಿಗೊಡಬೇಡಿ. ನೀವು ಅರ್ಜಿ ಹಾಕಿ ಗೆಲುವು ನಮ್ಮ ಜವಾಬ್ದಾರಿ. ಆದರೆ ನೀವು ಸ್ಪರ್ಧಿಸಲ್ಲ ಎಂದು ಹೇಳಬಾರದು ಎಂದರು.

ಸದಸ್ಯ ಚಂದ್ರಶೇಖರ್‌ ಬಾಬು ಮಾತನಾಡಿ, ಹಿಂದೆ ನಾನೇ ನಿಲ್ತೀನಿ ಹಾಗೂ ಗೆಲ್ತೀನಿ ಎಂದವರು ಈಗ ಹಿಂದೇಟು ಹಾಕಲು ಕೆಲವರ ಹಗುರವಾದ ಮಾತು ಕಾರಣ. ನಿಮ್ಮ ಸರಳತೆಯನ್ನು ಕೆಲವರು ದುರುಪಯೋಗ ಮಾಡಿಕೊಂಡಿದ್ದು ನಿಮ್ಮ ನೋವಿಗೆ ಕಾರಣ. ರಾಜಣ್ಣರನ್ನು ಸೋಲಿಸಲು ನೀವಲ್ಲದೆ ಯಾರಿಂದಲೂ ಸಾಧ್ಯವಿಲ್ಲ. ಶಾಸಕರಾದರೆ ಮುಂದೆ ಮಂತ್ರಿ ಕೂಡ ಆಗಲಿದ್ದು ನಿಮ್ಮ ಪರವಾಗಿ ನಾವು ಇರ್ತೀವಿ ಎಂದರು. ಟೌನ್‌ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಎಂ.ಆರ್‌.ಜಗನ್ನಾಥ್‌ ಮಾತನಾಡಿ, ಕೆಲವರ ಹಗುರವಾದ ಮಾತು ನೋವಿಗೆ ಕಾರಣವಾಗಿದೆ. ಇಂತಹ ವ್ಯಕ್ತಿತ್ವ ಇರುವ ಶಾಸಕರನ್ನು ಕಳೆದುಕೊಂಡರೆ ಮತ್ತೆ ಸಿಗಲ್ಲ. 

ಅವರಿಗೆ ಶಕ್ತಿಯಾಗಿ ನಾವು ಸೈನಿಕರಂತೆ ಕೆಲಸ ಮಾಡಿದರೆ ವಿರೋಧಿಗಳು ಯಾರಾದರೂ ಸರಿ ಸೋಲು ನಿಶ್ಚಿತ. ಸಮಸ್ಯೆಗಳು ಏನಿದ್ದರೂ ಎದುರಿಸುವ ಶಕ್ತಿ ನಿಮಗಿದೆ. ಕ್ಷೇತ್ರದ ಸಲುವಾಗಿ ನೀವು ಸ್ಪರ್ಧಿಸಿ ಇಲ್ಲ ಎನ್ನುವಂತಿಲ್ಲ. ಬೇಕಾದರೆ ಕುಮಾರಸ್ವಾಮಿಗೆ ಮನವಿ ಮಾಡುತ್ತೇವೆ ಎಂದರು.ಜೆಡಿಎಸ್‌ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಮುಖಂಡ ತುಂಗೋಟಿ ರಾಮಣ್ಣ ಮಾತನಾಡಿ, ಕಾಂಗ್ರೆಸ್‌ನವರೂ ಕೂಡ ನಿಮ್ಮ ಅಭಿವೃದ್ಧಿ ಹಾಗೂ ನಡತೆಯನ್ನು ಒಪ್ಪಿದ್ದಾರೆ. ಇಂತಹ ಸರಳತೆಯ ನೀವು ಚುನಾವಣೆಯಿಂದ ಹಿಂದೆ ಸರಿಯುವುದು ಬೇಡ. 4 ವರ್ಷದಲ್ಲಿ ಕೆಲವು ಸಮಸ್ಯೆಗಳಾಗಿದ್ದು ಸರಿಪಡಿಸಿಕೊಳ್ಳಲು ಸಾಕಷ್ಟುಅವಕಾಶವಿದ್ದು ಗೆಲ್ಲುವ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ದೇಗುಲ ಸಮಿತಿಯ ಆಡಳಿತ ಮಂಡಳಿ ಸದಸ್ಯರು, ಕುಂಚಿಟಿಗ ಒಕ್ಕಲಿಗ ಸಂಘದ ಅಧ್ಯಕ್ಷ ರಾಜಶೇಖರ್‌, ಉಪಾಧ್ಯಕ್ಷ ಜಗದೀಶ್‌, ಮುಖಂಡರಾದ ಗುಂಡಗಲ್ಲು ಶಿವಣ್ಣ, ಮಿಲ್‌ ಚಂದ್ರು, ಗೋಪಾಲ್‌, ಸೈಯದ್‌ ಗೌಸ್‌, ನಾಸೀರ್‌, ಜಬೀ, ಚೌಡಪ್ಪ, ಗ್ರಾ.ಪಂ. ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ಬಿಜೆಪಿ ಮಹಾನ್‌ ಸುಳ್ಳುಗಾರನೆಂದು ಮತ್ತೆ ಸಾಬೀತು: ಸಿದ್ದರಾಮಯ್ಯ

ಕಣ್ಣೀರು ಹಾಕಿದ ಶಾಸಕ ಎಂ.ವಿ.ವೀರಭದ್ರಯ್ಯ: ಮಾಜಿ ಶಾಸಕರು ನನ್ನ ಬಗ್ಗೆ ಎಂದೂ ಟೀಕೆ ಮಾಡಿಲ್ಲ. ಗೌಡರ ಬಗ್ಗೆ ಹಾಗೂ ಹಿಂದೆ ಅವರು ಆಡಿದ ಮಾತಿಗೆ ಫಲ ಉಂಡಿದ್ದಾರೆ. ನನ್ನ ಕಾರ್ಯಕರ್ತರ ಶಕ್ತಿ ಏನೆಂದು ನನಗೆ ಗೊತ್ತು. ಈ ಗೊಂದಲ ಪರಿಹರಿಸುವುದು ನನಗೆ ದೊಡ್ಡ ವಿಷಯವಲ್ಲ. ಕುಟುಂಬದ ಒತ್ತಡದಿಂದ ಹಿಂದೆ ಸರಿಯುವುದಾಗಿ ಹೇಳಿದ್ದೇನೆ. ರಾಜಕೀಯ ಹೊರತಾಗಿಯೂ ನಾನು ಕ್ಷೇತ್ರದ ಒಡನಾಟದಲ್ಲಿ ಇರುತ್ತೇನೆ ಎಂದ ಶಾಸಕರ ಮಾತಿಗೆ ಕಾರ್ಯಕರ್ತರು ಕಾರು ತಡೆದು ಕಣ್ಣೀರು ಹಾಕಿದರು. ಆಗ ಶಾಸಕರ ಕಣ್ಣಲ್ಲೂ ನೀರು ಹರಿಯಿತು.