Asianet Suvarna News Asianet Suvarna News

ಚುನಾವಣೆಗೂ ಮುನ್ನವೇ ರಾಜಕೀಯ ಚದುರಂಗದಾಟ ಆರಂಭಿಸಿದ ವಿಜಯೇಂದ್ರ: ಜೆಡಿಎಸ್‌ಗೆ ಬಿಗ್‌ ಶಾಕ್‌?

ಹಿಂದಿನ ಎರಡು  ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಹೆಚ್. ಟಿ. ಬಳಿಗಾರ್ ಜೆಡಿಎಸ್ ತೊರೆದು ಬಿಜೆಪಿ ಸೇರಲಿದ್ದಾರೆಯೇ? 

JDS Leader HT Baligar Likely Join BJP at Shikaripur in Shivamogga grg
Author
First Published Nov 16, 2022, 8:40 PM IST

ಶಿವಮೊಗ್ಗ(ನ.16): ಶಿಕಾರಿಪುರ ಕ್ಷೇತ್ರದಿಂದ ತಮ್ಮ ಸ್ಪರ್ಧೆ ಖಚಿತವಾಗುತ್ತಿದ್ದಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಕ್ಷೇತ್ರದತ್ತ ವಿಶೇಷ ಗಮನ ಹರಿಸಿ ಮತದಾರರನ್ನ ಸೆಳೆಯುವಲ್ಲಿ ವಿಶೇಷ ಶ್ರಮ ಹಾಕಲಾರಂಭಿಸಿದ್ದಾರೆ. ಇದೀಗ ತಮಗೆ ಪ್ರಬಲ ಎದುರಾಳಿಗಳಲ್ಲಿ ಒಂದು ವಿಕೆಟ್ ಅನ್ನು ಚುನಾವಣಾ ಪೂರ್ವದಲ್ಲಿಯೇ ಬೀಳಿಸಲು ಸಿದ್ಧತೆ ನಡೆಸಿದಂತೆ ಕಂಡು ಬರುತ್ತಿದೆ. ಆ ಮೂಲಕ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಚದುರಂಗದಾಟವನ್ನು ಶುರು ಮಾಡಿದ್ದಾರೆ.

ಹೌದು, ಹಿಂದಿನ ಎರಡು  ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಹೆಚ್. ಟಿ. ಬಳಿಗಾರ್ ಜೆಡಿಎಸ್ ತೊರೆದು ಬಿಜೆಪಿ ಸೇರಲಿದ್ದಾರೆಯೇ? ಮೂಲಗಳ ಪ್ರಕಾರ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ ಅಂತ ಹೇಳಲಾಗುತ್ತಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಾಯಿ ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಅವರೇ ಬಳಿಗಾರ್ ಜೊತೆ ಮಾತುಕತೆ ನಡೆಸಿದ್ದು, ಇದು ಯಶಸ್ವಿಯಾದಂತೆ ಕಾಣುತ್ತಿದೆ.
ಬಿಜೆಪಿ ನಾಯಕರ ಜೊತೆಗಿನ ಮಾತುಕತೆ ಬಳಿಕ ಇದೀಗ ಬಳಿಗಾರ್ ಅವರು ಕಾರ್ಯಕರ್ತರ ಮತ್ತು ತಮ್ಮ ಬೆಂಬಲಿಗರ ಸಭೆಯನ್ನು ಕರೆದಿದ್ದಾರೆ. ಇಂದು(ಬುಧವಾರ) ಶಿರಾಳಕೊಪ್ಪದಲ್ಲಿ ಒಂದು ಸಭೆ ನಡೆದಿದೆ. ನಾಳೆ(ಗುರುವಾರ) ಶಿಕಾರಿಪುರದಲ್ಲಿ ಇನ್ನೊಂದು ಸಭೆ ನಡೆಯಲಿದೆ ಅಂತ ತಿಳಿದು ಬಂದಿದೆ. 

ಸಿಎಂಗೆ ತಾಕತ್ತಿದ್ರೆ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲಿ: ಮಧು ಬಂಗಾರಪ್ಪ

ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ 2013 ಮತ್ತು 2018 ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಳಿಗಾರ್ ಅವರು ಒಮ್ಮೆ 15 ಸಾವಿರ ಮತ್ತು ಇನ್ನೊಮ್ಮೆ 13 ಸಾವಿರ ಮತಗಳನ್ನು ಪಡೆದಿದ್ದರು. ಕಳೆದ ಒಂದೂವರೆ ದಶಕದಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಪಡೆಯನ್ನು ಕಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಸ್ವಂತ ಅಸ್ತಿತ್ವವೇನೂ ಇಲ್ಲ. ಬದಲಾಗಿ ಬಳಿಗಾರ್ ಅವರ ಸಂಘಟನಾ ಶಕ್ತಿಯೇ ಆಸ್ತಿಯಾಗಿದೆ. 

ಹಲವು ಚುನಾವಣೆಗಳಲ್ಲಿ ಇಲ್ಲಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿದೆ. ಈ ಬಾರಿ ವಿಜಯೇಂದ್ರ ಅವರು ಸ್ಪರ್ಧಿಸಲು ಮುಂದಾಗಿದ್ದು, ಈ ಕ್ಷೇತ್ರದಲ್ಲಿ ಯಾವುದೇ ರಿಸ್ಕ್‌ ತೆಗೆದುಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಹಿರಿಯರು ಬಂದಂತೆ ಕಾಣುತ್ತಿದೆ. ಈ ಕಾರಣಕ್ಕೆ ಮೊದಲ ವಿಕೆಟ್ ಆಗಿ ಬಳಿಗಾರ್ ಅವರನ್ನು ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಭವಿಷ್ಯ ಕೂಡ ಇಲ್ಲ ಎಂಬುದು ನಿಚ್ಚಳ. ಹೀಗಾಗಿ ಭವಿಷ್ಯದ ರಾಜಕೀಯ ಮತ್ತು ಅಧಿಕಾರದ ದೃಷ್ಟಿಯಿಂದ ಬಳಿಗಾರ್ ಕೂಡ ತಮ್ಮ ರಾಜಕೀಯದಲ್ಲಿ ಸ್ಪಷ್ಟ ನಿಲುವಿಗೆ ಬರಲು ಸಿದ್ಧರಾಗಿದ್ದಾಾರೆ ಎನ್ನಲಾಗುತ್ತಿದೆ. ತಮ್ಮ ಬೆಂಬಲಿಗರ ಮನವೊಲಿಕೆಗೆ ಪ್ರಯತ್ನ ಹಾಕುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಸ್ಪಷ್ಟ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.  
 

Follow Us:
Download App:
  • android
  • ios