ಯಾವ ಮುಖ ಇಟ್ಕೊಂಡು ನಡ್ಡಾ ಹಾಸನಕ್ಕೆ ಬಂದಿದ್ರು: ರೇವಣ್ಣ
ಜೆಡಿಎಸ್ ಬಗ್ಗೆ ಮಾತನಾಡೋ ಯಾವ ನೈತಿಕತೆ ಅವರಿಗಿದೆ, ಬಿಜೆಪಿ, ನಡ್ಡಾ ವಿರುದ್ಧ ಎಚ್‌ಡಿ.ರೇವಣ್ಣ ವಾಗ್ದಾಳಿ
ಹಾಸನ(ಫೆ.24): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಯಾವ ಮುಖ ಹೊತ್ತುಕೊಂಡು ಹಾಸನ ಜಿಲ್ಲೆಗೆ ಬಂದಿದ್ದರು. ನಮ್ಮ ಕುಟುಂಬದ ವಿರುದ್ಧ ಮಾತನಾಡೋ ಯಾವ ನೈತಿಕತೆ ಅವರಿಗಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೊಡುಗೆ ಏನು ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಬೆಂಗಳೂರು-ಹಾಸನ, ಕಡೂರು-ಚಿಕ್ಕಮಗಳೂರು ರೈಲ್ವೆ ಮಾರ್ಗ ಮಾಡಿದ್ದು ರೇವಣ್ಣನವರ ಅಪ್ಪ. ದೇವೇಗೌಡರು ಎಂದರು.
ತಮ್ಮ ಸರ್ಕಾರದ ಅವಧಿಯಲ್ಲಿ ಹಾಸನ-ಬೇಲೂರು-ಚಿಕ್ಕಮಗಳೂರು ರೈಲ್ವೆ ಮಾರ್ಗಕ್ಕೆ ಮಂಜೂರಾತಿ ನೀಡಿದ್ದೇವೆ ಎಂದು ನಡ್ಡಾ ಹೇಳಿದ್ದಾರೆ. ನಡ್ಡಾ ಯಾರೊ ಬರೆದು ಕೊಟ್ಟಭಾಷಣವನ್ನು ಓದಿ ಹೋಗುವುದು ಬೇಡ. ರೈಲ್ವೆ ಮಾರ್ಗ ಮಂಜೂರಾತಿ ಮಾಡಿದ್ದು ಬಿಜೆಪಿ ಎಂದಾದರೆ ದಾಖಲೆ ಇಟ್ಟುಕೊಂಡು ಮಾತನಾಡಲಿ. ಕಳೆದ 3 ವರ್ಷಗಳಿಂದ ಬಿಜೆಪಿ ಸರ್ಕಾರದಿಂದ ಯಾವ ಅಭಿವೃದ್ಧಿ ಆಗಿದೆ?. ಬಿಜೆಪಿ ಎಂದರೆ ಕಾಮಗಾರಿ ತಡೆ ಹಿಡಿಯುವ ಪಕ್ಷ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಿನಬೆಳಗಾದರೆ ಬಿಜೆಪಿಯವರಿಗೆ ನಮ್ಮ ಕುಟುಂಬದ ಜಪ ಮಾಡುವುದೆ ಕೆಲಸವಾಗಿದೆ ಎಂದು ಟಾಂಗ್ ನೀಡಿದರು.
Karnataka Election: ಹಾಸನದಲ್ಲಿ ಜೆಡಿಎಸ್ ಗೆಲುವಿನ ಮಂತ್ರ: ಪ್ರೀತಂ ಗೌಡಗೆ ಠಕ್ಕರ್ ಕೊಡಲು ರೇವಣ್ಣ ಪ್ಲಾನ್
ಟಿಕೆಟ್ ಬಗ್ಗೆ ಎಚ್‌ಡಿಕೆ ತೀರ್ಮಾನ:
ರಾಜ್ಯದ ಇತರೆಡೆ ಟಿಕೆಟ್ ಹಂಚಿಕೆ ಕುರಿತು ಕುಮಾರಸ್ವಾಮಿ ಹಾಗೂ ಇಬ್ರಾಹಿಂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಹಾಸನ ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿಯವರು ಏನು ನಿರ್ದೇಶನ ನೀಡುತ್ತಾರೋ ಅದರಂತೆ ನಡೆಯುತ್ತೇವೆ. ನಾನೇ ಎಲ್ಲಾ ಕಡೆ ಹೋಗಿ, ಜನರ ಅಭಿಪ್ರಾಯ ಪಡೆದು, ಹೈಕಮಾಂಡ್‌ಗೆ ವರದಿ ನೀಡುತ್ತೇನೆ. ಅವರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದರು.
ಹಾಸನದಲ್ಲಿ ಭವಾನಿ ಪ್ರಚಾರ:
ಈ ಮಧ್ಯೆ, ಭವಾನಿ ರೇವಣ್ಣ ಅವರು ಗುರುವಾರ ಹಳೇಕೋಟೆಯಲ್ಲಿರುವ ಮನೆ ದೇವರಿಗೆ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ಆಗಮಿಸಿ ಅಲ್ಲಿಯೂ ಪೂಜೆ ಸಲ್ಲಿಸಿದರು. ಬಳಿಕ, ಹಾಸನ ಕ್ಷೇತ್ರದ ದೊಡ್ಡಪುರಕ್ಕೆ ಆಗಮಿಸಿ, ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ, ಪಕ್ಷದ ಪರ ಪ್ರಚಾರ ನಡೆಸಿದರು. ಎಚ್.ಡಿ.ರೇವಣ್ಣ ಹಾಗೂ ಪ್ರಜ್ವಲ್ ಅವರಿಗೆ ಸಾಥ್ ನೀಡಿದರು.
ಈ ಮಧ್ಯೆ, ದೊಡ್ಡಪುರಕ್ಕೆ ಆಗಮಿಸಿದ ಜೆಡಿಎಸ್ ನಾಯಕರಿಗೆ ಭರ್ಜರಿ ಸ್ವಾಗತ ಕೋರಲಾಯಿತು. ಅಲ್ಲದೆ, ಹಾಸನದ ಎಸ್ಪಿ ಕಚೇರಿ ಪಕ್ಕದಲ್ಲಿರುವ ಸಂಸದರ ನಿವಾಸವನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಇದೇ ವೇಳೆ, ಹಾಸನ ಕ್ಷೇತ್ರದ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ, ಸ್ವರೂಪ್ ಕೂಡ ನಗರದ ವಿವಿಧೆಡೆ ಪ್ರತ್ಯೇಕವಾಗಿ ಪ್ರಚಾರ ನಡೆಸಿದರು.