ಉತ್ತಮ ಕಾರ್ಯಕ್ರಮ ಕೊಡದಿದ್ದರೆ 2028ರಲ್ಲಿ ಜೆಡಿಎಸ್ ಪಕ್ಷ ವಿಸರ್ಜನೆ: ಎಚ್‌ಡಿಕೆ
ಜೆಡಿಎಸ್ ಪಕ್ಷ ರೈತರಿಗೆ ಸಾಲ ಮುಕ್ತರನ್ನಾಗಿ ಮಾಡಲು ಒಳ್ಳೆಯ ಕಾರ್ಯಕ್ರಮ ಕೊಡದಿದ್ದರೆ 2028ರಲ್ಲಿ ಜೆಡಿಎಸ್ ಪಕ್ಷವನ್ನೇ ವಿಸರ್ಜಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾವುಕರಾಗಿ ಹೇಳಿದರು.
ವಿಜಯಪುರ (ಜ.19): ಜೆಡಿಎಸ್ ಪಕ್ಷ ರೈತರಿಗೆ ಸಾಲ ಮುಕ್ತರನ್ನಾಗಿ ಮಾಡಲು ಒಳ್ಳೆಯ ಕಾರ್ಯಕ್ರಮ ಕೊಡದಿದ್ದರೆ 2028ರಲ್ಲಿ ಜೆಡಿಎಸ್ ಪಕ್ಷವನ್ನೇ ವಿಸರ್ಜಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾವುಕರಾಗಿ ಹೇಳಿದರು. ಬುಧವಾರ ಮೂರನೇ ಹಂತದ ಪಂಚರತ್ನ ರಥಯಾತ್ರೆ ಅಂಗವಾಗಿ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ರೈತರು ಸಾಲ ಮಾಡಿಕೊಂಡು ಸಂಕಷ್ಟದಲ್ಲಿದ್ದಾರೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರನ್ನು ಸಾಲ ಮುಕ್ತರನ್ನಾಗಿ ಮಾಡಲಾಗುವುದು. ಜೆಡಿಎಸ್‌ಗೆ ಸ್ಪಷ್ಟಬಹುಮತ ನೀಡಿ ಐದು ವರ್ಷ ಪೂರ್ಣಾವಧಿ ಅಧಿಕಾರ ನೀಡಿದರೆ ರೈತರಿಗೆ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಒಂದೊಮ್ಮೆ ಜೆಡಿಎಸ್‌ನಿಂದ ರೈತರಿಗೆ ಒಳ್ಳೆಯ ಕಾರ್ಯಕ್ರಮ ನೀಡದಿದ್ದರೆ 2028ರಲ್ಲಿ ಪಕ್ಷವನ್ನೇ ವಿಸರ್ಜಿಸುತ್ತೇನೆ. ಮುಂದೆ ನಿಮ್ಮ ಬಳಿ ಮತ ಕೇಳಲು ಬರುವುದಿಲ್ಲ ಎಂದು ಕುಮಾರಸ್ವಾಮಿ ಭಾವುಕರಾದರು. ಸಿಂದಗಿಯಲ್ಲಿ ಜನರು ದೇವೇಗೌಡರು ನೀಡಿದ ನೀರಾವರಿ ಯೋಜನೆ ನೆನಪಿಟ್ಟುಕೊಂಡಿದ್ದಾರೆ. ನಮ್ಮ ತಪ್ಪಿನಿಂದ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದೇವೆ. ಅಂದು ದೇವೇಗೌಡರನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿದ್ದೀರಿ. ದೇವೇಗೌಡರ ಮೇಲೆ ನೀವು ಇಟ್ಟಿರುವ ಪ್ರೀತಿಯನ್ನು ನಾನು ಮರೆತಿಲ್ಲ. ಬಿಜೆಪಿ ಜನರ ತೆರಿಗೆ ಹಣ ಲೂಟಿ ಮಾಡುತ್ತಿದೆ. ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ರೈತರಿಗಾಗಿ ಕಾರ್ಯಕ್ರಮ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ತಿಂಗಳಲ್ಲಿ ಸ್ಯಾಂಟ್ರೋ ರವಿ ಕೇಸ್ ಮುಚ್ಚಿ ಹಾಕ್ತಾರೆ: ಎಚ್.ಡಿ.ಕುಮಾರಸ್ವಾಮಿ
ಪ್ರಧಾನಿ ಹಕ್ಕುಪತ್ರ ವಿತರಣೆ ಒಂದು ನಾಟಕ: ಕಲಬುರಗಿ ಜಿಲ್ಲೆಯ ಮಳಖೇಡ ಗ್ರಾಮದಲ್ಲಿ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹಕ್ಕುಪತ್ರ ವಿತರಣೆ ಮಾಡಲು ರಾಜ್ಯಕ್ಕೆ ಆಗಮಿಸುತ್ತಿರುವುದು ಒಂದು ನಾಟಕ ಎಂದು ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು. ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಗ್ರಾಮ ಮಾಡಿ ಹಕ್ಕುಪತ್ರ ವಿತರಿಸಲು ಪ್ರಧಾನಿ ಬರುತ್ತಿರುವುದು ಅದೇನು ದೇಶ ಸೇವೆ ಮಾಡಿದಂತಲ್ಲ ಎಂದ ಅವರು, ನಾರಾಯಣಪುರ ಸ್ಕಾಡಾ ಯೋಜನೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಅನುದಾನ ನೀಡಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆಗೆ ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಶೇ.40 ಕಮಿಷನ್ ಹಣದಿಂದ ರಾಜ್ಯದ ಅಭಿವೃದ್ಧಿ ಆಗಲ್ಲ: ಶೇ.40 ಕಮಿಷನ್‌ದಿಂದ ವಿಧಾನಸೌಧದಿಂದ ಆಡಳಿತ ಮಾಡಿದರೇ ರಾಜ್ಯಅಭಿವೃದ್ಧಿ ಆಗುವುದಿಲ್ಲ. ಗ್ರಾಮ ಪಂಚಾಯತಿಯಿಂದ ಅಭಿವೃದ್ಧಿ ಆಗಬೇಕು. ಆ ಕನಸನ್ನು ಜೆಡಿಎಸ್ ಹೊತ್ತುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದ ಅಂಜುಮನ್ ಶಾಲಾ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿರುವ ಜಾತ್ಯತೀತ ಜನತಾದಳದ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಯಾವ ಪಕ್ಷಗಳನ್ನು ಟೀಕಿಸುವುದಿಲ್ಲ. ಪಕ್ಷಗಳನ್ನು ಟೀಕಿಸುವುದರಿಂದ ಜನತೆ ಬದುಕು ಹಸನಾಗುವುದಿಲ್ಲ. ಅದರ ಬದಲು ಜನತೆಯ ಕಲ್ಯಾಣಕ್ಕಾಗಿ ಆಲೋಚಿಸಿ ವಿವಿಧ ಯೋಜನೆಗಳನ್ನು ವಿನ್ಯಾಸಗೊಳಿಸುವ ಮೂಲಕ ಅದು ಸಾರ್ಥಕವಾಗುತ್ತದೆ ಎಂದರು. ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಆದರೆ, ಆ ಪಕ್ಷದ ಶಾಸಕರ ಮಧ್ಯ ನಡೆಯುತ್ತಿರುವ ಜಗಳ ಬೀದಿಗೆ ಬಂದಿದೆ. ಅವರು ಬಳಸುವ ಪದಗಳನ್ನು ರಾಜ್ಯದ ಜನತೆ ಆಲಿಸುತ್ತಿದ್ದಾರೆ. ಇದು ಬೇಕೆ ಎಂದು ಪ್ರಶ್ನಿಸಿದರು.
ಉತ್ತರ ಕರ್ನಾಟಕದಲ್ಲಿ 35 ಕ್ಷೇತ್ರ ಗೆಲ್ಲುವ ಸಂಕಲ್ಪ: ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ
2006ರಲ್ಲಿ ರೈತರಿಗೆ ಸಾಲಮನ್ನಾ ಮಾಡಿದೆ. ಕಬ್ಬಿಗೆ ಸೂಕ್ತ ಬೆಲೆ ನೀಡಿದೆ ಮತ್ತು ರೈತರ ಬದುಕಿಗೆ ಅನೇಕ ಆಸರೆ ಆಗುವಂತಹ ಯೋಜನೆಗಳನ್ನು ಮಾಡಿದೆ. ಆದರೆ, ಕಾಂಗ್ರೆಸ್ ಬಿಜೆಪಿ ರೈತರ ಯೋಜನೆ ಬಗ್ಗೆ ಅನೇಕ ಚರ್ಚೆ ಮಾಡುತ್ತಾರೆ ಹೊರತು ಕಾರ್ಯರೂಪಕ್ಕೆ ತರುವುದು ಮರೆಯುತ್ತಾರೆ. ದೇವೇಗೌಡರು ಕೆಲವೇ ತಿಂಗಳು ಪ್ರಧಾನಿಯಾಗಿದ್ದಾಗ ಈ ಭಾಗಕ್ಕೆ ಸುಮಾರು .18 ಸಾವಿರ ಕೋಟಿ ಹಣವನ್ನು ನೀರಾವರಿ ಕ್ಷೇತ್ರಕ್ಕೆ ನೀಡಿದ್ದಾರೆ. ಪಂಚರತ್ನ ಯೋಜನೆಗಳಿಗೆ ಯಾವುದೇ ರೀತಿಯ ಜಾತಿ, ಧರ್ಮ, ಕುಲ ಯಾವುದು ಇಲ್ಲ. ಇದೊಂದು ರಾಜ್ಯದ 6.5 ಕೋಟಿ ಜನತೆಯ ಕಲ್ಯಾಣಕ್ಕಾಗಿ ನಿರ್ಮಾಣಗೊಂಡ ಯೋಜನೆಗಳಾಗಿವೆ. ಒಂದು ಬಾರಿ 5 ವರ್ಷ ಸಂಪೂರ್ಣವಾಗಿ ಜೆಡಿಎಸ್‌ಗೆ ಅಧಿಕಾರ ನೀಡಿ, ಈ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಿಯೇ ತೀರುತ್ತೇವೆ ಎಂದು ಭರವಸೆ ನೀಡಿದರು.