'ಮಾನ ಮರ್ಯಾದೆ ಇದೆಯಾ, ಭಾಷೆ ಕೇಳಿದ್ರೆ ವಾಕರಿಗೆ ಬರ್ತಿದೆ'

ಏಕಪತ್ನಿ ವ್ರತಸ್ಥ ಹೇಳಿಕೆ ನೀಡಿದ ಸಚಿವರಿಗೆ 'ಮಾನ- ಮರ್ಯಾದೆ' ಇದೆಯಾ?/  ಆರೋಗ್ಯ ಸಚಿವ ಡಾ. ಸುಧಾಕರ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗರಂ/ (ಏಕಪತ್ನಿ ವ್ರತಸ್ಥರೆಂದು ಹೇಳಿಕೊಂಡು ಏನೆಲ್ಲಾ ಮಾಡ್ತಾರೆಂಬುದು ಎಲ್ಲರಿಗೂ ತಿಳಿದ ವಿಷಯ/   ನಿಗಮ- ಮಂಡಳಿ ನೇಮಕ, ದುಂದುವೆಚ್ಚ/ ಇದೆಲ್ಲ ಸಾಲ ಮಾಡಿ ತುಪ್ಪ ತಿನ್ನೋ ಕೆಲ್ಸ ತಾನೆ?

jds leader hd kumaraswamy slams  Karnataka BJP Govt  Kalaburagi mah

ಕಲಬುರಗಿ(ಮಾ. 25)  ಏಕಪತ್ನಿ ವ್ರತಸ್ಥ ಎಂದು ಹೇಳಿಕೊಂಡು ಹಿಂದೆ ಏನೆಲ್ಲಾ ಮಾಡ್ತಾರೆ ಅನ್ನೋದು ಎಲ್ಲರಿಗೂ ತಿಳಿದ ವಿಷಯ, ಏಕಪತ್ನಿತ್ವ ಕುರಿತು ಹೇಳಿರುವ ಆ ಸಚಿವರಿಗೆ ಮಾನ ಮರ್ಯಾದೆ ಇದೆಯಾ? ಸದನದಲ್ಲಿ ಅವರು ಬಳಸುವ ಭಾಷೆ ಕೇಳಿದರೆನೇ ವಾಕರಿಕೆ ಬರುತ್ತಿದೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಕಿಡಿ ಕಾರಿದ್ದಾರೆ.

ಉಪ ಚುನಾವಣೆ ಕದನ ಘೋಷಣೆಯಾಗಿರುವ ಬಸವಕಲ್ಯಾಣಕ್ಕೆ ತೆರಳುವ ವೇಳೆ ಕಲಬುರಗಿಯಲ್ಲಿ  ಮಾತನಾಡಿ, ನೀವು 'ಆ' ಕೆಲಸ ಮಾಡಿಲ್ಲ ಎಂದ ಮೇಲೆ ಕೋರ್ಟನಿಂದ ತಡೆಯಾಜ್ಞೆ ತರುವ ಅವಶ್ಯಕತೆ ಏನಿತ್ತು ಎಂದು ಬಾಂಬೆಗೆ ತೆರಳಿದ್ದ ತಂಡದ ಸದಸ್ಯರಿಗೆ ಸವಾಲೆಸೆದರು.

ತಪ್ಪೊಪ್ಪಿಕೊಂಡ ಮಾಜಿ ಸಿಎಂ ಬಹಿರಂಗವಾಗಿ ಹೇಳಿದ್ದೇನು? 

ಕಾಂಗ್ರೆಸ್- ಬಿಜೆಪಿ ಒಳ ಒಪ್ಪಂದಕ್ಕೆ ಸದನ ಕಲಾಪ ಬಲಿ: ಸಿಡಿ ಪ್ರಕರಣದಲ್ಲಿ ವ್ಯವಸ್ಥಿತ ಪಿತೂರಿ ಅಡಗಿದೆ, ಬಿಜೆಪಿ- ಕಾಂಗ್ರೆಸ್ ಮಧ್ಯೆ ಒಳ ಒಪ್ಪಂದವಾಗಿದೆ, ಕೆಸರೆರೆಚಾಟ ಮಾಡಿ ಸಿಡಿ ಪ್ರಕರಣ ಮುಚ್ಚಿ ಹಾಕುವ ಷಡ್ಯಂತ್ರ ನಡೆದಿದೆ. ಕಾಂಗ್ರೆಸ್- ಬಿಜೆಪಿ ಒಳ ಒಪ್ಪಂದಕ್ಕೆ ಸದನ ಕಲಾಪ ಬಲಿಯಾಗಿದೆ ಎಂದು ಎಚ್‍ಡಿಕೆ ದೂರಿದರು.

ಸದನದಲ್ಲಿ ಜನರ ಸಮಸ್ಯೆಗಳ ಪ್ರಸ್ತಾಪವಾಗುತ್ತಿಲ್ಲ. ಅಪ್ರಸ್ತುತ ಸಂಗತಿಗಳೇ ಹೆಚ್ಚು ಚರ್ಚೆಗೊಳಗಾಗುತ್ತಿವೆ. ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್ ಎರಡೂ ಇಂತಹ ವಿಷಯಗಳಿಗೆ ಜೋತುಬಿದ್ದು ಕಾಲಹರಣ ಮಾಡುತ್ತಿವೆ. ನಾವು ಹೊಡೆದ ಹಾಗೆ ಮಾಡ್ತೀವಿ, ನೀವು ಅತ್ತ ಹಾಗೆ ಮಾಡಿರಿ ಎಂದು ಉಭಯ ಪಕ್ಷಗಳು ಒಂದಾಗಿ ಸದನ ಕಲಾಪವನ್ನೇ ನುಂಗಿ ಹಾಕಿವೆ ಎಂದು ಆರೋಪಿಸಿದರು.

ಸಿಡಿ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ ಈ ವಿಚಾರದಲ್ಲಿ ರಾಜ್ಯದ ಜನರನ್ನೇ ಬೆತ್ತಲು ಮಾಡಲು ಹೊರಟಂತಿದೆ.  ಇಂತಹದ್ದೆಲ್ಲವೂ ಸದನದಲ್ಲಿ ಬೇಕಾ? ನಾಡಿನ ಜ್ವಲಂತ ಸಮಸ್ಯೆಗಳು ಪ್ರತಿಧ್ವನಿಸಬೇಕಿದ್ದ ಸದನದಲ್ಲಿ ಅಪ್ರಸ್ತುತ ಸಂಗತಿಗಳೇ ಹೆಚ್ಚು ಸಮಯ ಪಡೆದುಕೊಳ್ಳುತ್ತಿರೇದರಿಂದಲೇ ಈಚೆಗಿನ ದಿನಗಳಲ್ಲಿ ತಾವು ಕಲಾಪದಿಂದ ದೂರ ಇರುತ್ತಿರೋದಾಗಿ ಹೇಳಿದ ಎಚ್‍ಡಿಕೆ ರಾಜ್ಯದ ಜನರ ಭಾವನೆಗಳಿಗೆ, ಸಮಸ್ಯೆಗಳಿಗೆ ಎರಡು ರಾಷ್ಟ್ರೀಯ ಪಕ್ಷಳು ಧಕ್ಕೆಯನ್ನುಂಟು ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಇದು ತುಪ್ಪ ತಿನ್ನೋ ಕೆಲ್ಸ ತಾನೆ?:  ಕೋವಿಡ್ ನಿಂದಾಗಿ ಆರ್ಥಿಕತೆ ಹಳಿ ತಪ್ಪಿದೆ ಎನ್ನುವವರು ಆತುರದಲ್ಲಿ ನೂರೆಂಟು ನಿಗಮ- ಮಂಡಳಿಗೆ ಅಧ್ಯಕ್ಷರ ನೇಮಿಸಿ, ಸಂಪುಟದ ಸ್ಥಾನಮಾನ ನೀಡಿ ಕೋಟ್ಯಾಂತರ ರುಪಾಯಿ ವೆಚ್ಚ ಮಾಡುತ್ತಿದ್ದಾರಲ್ಲ, ಇದು ಸಾಲಮಾಡಿ ತುಪ್ಪ ತಿಂದಂತೆ ತಾನೆ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಯಾರನ್ನೂ ನೆಮ್ಮದಿಯಿಂದ ಬದುಕಲು ಬಿಡದ ಕೆಟ್ಟ ಆಡಳಿತ ನೀಡುತ್ತಿರುವ ಬಿಜೆಪಿ ಸರ್ಕಾರ ಕೊನೆಗೊಳ್ಳಬೇಕು ಎಂದರು.

ಕೋವಿಡ್ ಕಾರಣ ಹೇಳಿ ಎಲ್ಲವನ್ನು ನಿಲ್ಲಿಸಿದವರಿಗೆ ಬಹುಕೋಟಿ ಖರ್ಚಿನ ನಿಗಮ ಮಂಡಳಿ ಅಧ್ಯಕ್ಷರ ನೇಮಕದ ವಿಚಾರ ಕಾಣಲಿಲ್ಲವೆ? ಸ್ವೇಚ್ಛಾಚಾರದ ತೀರ್ಮಾನಗಳಿಂದಾಗಿ ದುಂದುವೆಚ್ಚ ಸಾಗಿದ್ದರೂ ಸಾಲ ಮಾಡಿ ತುಪ್ಪ ತಿಂದಿಲ್ಲ ಎಂದು ಹೇಳಿದರೆ ಯಾರಾದರೂ ನಂಬಲು ಸಾಧ್ಯವೆ? ಎಂದು ಲೇವಡಿ ಮಾಡಿದರು.

ಬಿಜೆಪಿಯವರಿಗೆ ರೈತರು, ಸಾಮಾನ್ಯ ಜನರು, ನೌಕರರ ವರ್ಗ, ಕೂಲಿ ಕಾರ್ಮಿಕರು ಹೀಗೆ ಸಮಾಜದ ಯಾವ ವರ್ಗದ ಬಗ್ಗೆಯೂ ಕಳಕಳಿ ಇಲ್ಲ, ಯಾರನ್ನು ನೆಮ್ಮದಿಯಿಂದ ಬದುಕಲು ಬಿಟ್ಟಿದ್ದಾರೆ ಹೇಳಿ ನೋಡೋಣ? ಸ್ವೇಚ್ಛಾಚಾರದ ತೀರ್ಮಾನಗಳಿಂದಲೇ ಸರಕಾರ ನಡೆಸುತ್ತಿದ್ದಾರೆ, ರಾಜ್ಯವನ್ನ ದಿವಾಳಿ ಅಂಚಿಗೆ ತಳ್ಳುತ್ತಿದ್ದಾರೆ, ಮೇಲೆ ಸಾಲ ಮಾಡಿ ತುಪ್ಪ ತಿಂದಿಲ್ಲ ಅಂತಾರೆ, ಇವರನ್ನ ನಂಬೋಕಾಗುತ್ತಾ? ಎಂದು ಪ್ರಶ್ನಿಸಿದರು.

ಬಸವಕಲ್ಯಾಣದಿಂದ ಹೊಸ ರಾಜಕೀಯ ಸಂದೇಶ: ನಮ್ಮ ಪಾಲಿನ ಕೇಂದ್ರಾನುದಾನ ಬಂದಿಲ್ಲ, ಜಿಎಸ್‍ಟಿ ಹಣದಲ್ಲಿ ಕಡಿತವಾಗಿದೆ. 15 ನೇ ಹಣಕಾಸು ಆಯೋಗದ ಪಾಲೂ ನಮಗೆ ದಕ್ಕಿಲ್ಲ, ಸಾಲದ ಹೊರೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ದಿನದ ಕೆಲಸಗಳಿಗೂ ಸಾಲವನ್ನೇ ಅವಲಂಬಿಸಬೇಕಾದಂತಹ ಅನಿವಾರ್ಯತೆಗೆ ಇವರು ರಾಜ್ಯವನ್ನ ತಳ್ಳುತ್ತಿದ್ದಾರೆ. ರೈತರ ಆದಾಯ ದುಪ್ಪಟ್ಟಿರಲಿ, ವೆಚ್ಚ ಹೆಚ್ಚುತ್ತಿದೆ. ಇಂಧನ ಬೆಲೆ ಗಗನಕ್ಕೇರುತ್ತಿದೆ. ಇಂತಹ ಕೆಟ್ಟ ಆಡಳಿತ ಕೊನೆಯಾಗಬೇಕು, ಅದಕ್ಕೇ ಬಸವಕಲ್ಯಾಣದಿಂದ ಅಲ್ಪಸಂಖ್ಯಾತ ಸಮಾಜದ ಅಭ್ಯರ್ಥಿಗೆ ತಾಲವು ಕಣಕ್ಕಿಳಿಸಿದ್ದಾಗಿ ಹೇಳಿದ ಕುಮಾರಸ್ವಾಮಿ ಅಲ್ಲಿಂದಲೇ ಹೊಸ ರಾಜಕೀಯ ಸಂದೇಶ ಸಾರುವ ಸವಾಲು ಸ್ವೀಕರಿಸಿದ್ದಾಗಿ ಹೇಳಿದರು.

 

Latest Videos
Follow Us:
Download App:
  • android
  • ios