JDS Pancharatna Rathayatra: ಮೈತ್ರಿ ಸರ್ಕಾರ ಬೀಳಿಸಿದ್ದೇ ಸಿದ್ದರಾಮಯ್ಯ: ಎಚ್‌ಡಿಕೆ
ಜೆಡಿಎಸ್ ಪಕ್ಷ ಅವಕಾಶವಾದಿ ಪಕ್ಷ, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಲಜ್ಜೆಗೆಟ್ಟಸರ್ಕಾರ ಎಂದು ಆರೋಪಿಸುವ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು. ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಮೈತ್ರಿ ಸರ್ಕಾರವನ್ನು ಬೀಳಿಸಿದ್ದೇ ಸಿದ್ದರಾಮಯ್ಯ.
ಕೋಲಾರ (ನ.19): ಜೆಡಿಎಸ್ ಪಕ್ಷ ಅವಕಾಶವಾದಿ ಪಕ್ಷ, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಲಜ್ಜೆಗೆಟ್ಟಸರ್ಕಾರ ಎಂದು ಆರೋಪಿಸುವ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು. ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಮೈತ್ರಿ ಸರ್ಕಾರವನ್ನು ಬೀಳಿಸಿದ್ದೇ ಸಿದ್ದರಾಮಯ್ಯ. ಈವತ್ತು ರಾಜ್ಯದಲ್ಲಿ ನಡೀತಾ ಇರೋದು ಪರೋಕ್ಷವಾಗಿ ಸಿದ್ದರಾಮಯ್ಯನವರ ಸರ್ಕಾರ. ಅಧಿಕಾರಕ್ಕಾಗಿ ನಾವು ಯಾವ ಕಾಲದಲ್ಲಿಯೂ, ಯಾರ ಮನೆ ಬಾಗಿಲಿಗೂ ಅರ್ಜಿ ಹಿಡಿದುಕೊಂಡು ಹೋಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಶುಕ್ರವಾರ ‘ಪಂಚರತ್ನ ರಥಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ಈ ಹಿಂದೆ ಮಳೆಯಿಂದಾಗಿ ಅನಿವಾರ್ಯವಾಗಿ ಯಾತ್ರೆಯನ್ನು ರದ್ದು ಮಾಡಬೇಕಾಯಿತು. ಈಗ ಇದೇ ನೆಲದಿಂದ ಯಾತ್ರೆಗೆ ಮತ್ತೆ ಚಾಲನೆ ನೀಡುತ್ತಿದ್ದೇವೆ. ಈ ಇಳಿವಯಸ್ಸಿನಲ್ಲಿಯೂ ದೇವೇಗೌಡರು ಜನಪರ ಕಾಳಜಿ ತೋರುತ್ತಿದ್ದಾರೆ ಎಂದರು.
ವಿಧಾನಸಭೆ ಚುನಾವಣೆಗೆ 100 ಅಭ್ಯರ್ಥಿಗಳ ಪಟ್ಟಿ ಸಿದ್ಧ : HD Kumaraswamy
ಬಿಜೆಪಿಯಿಂದ ವೀರಶೈವರಿಗೆ ಮೋಸ: ಈಗಿನ ಸರ್ಕಾರಕ್ಕೆ ತೀರ್ಮಾನ ಕೈಗೊಳ್ಳಲು ದೆಹಲಿಯಿಂದ, ಮೋದಿಯಿಂದ ಲಕೋಟೆ ಬರಬೇಕು. ಈ ಹಿಂದೆ ಯಡಿಯೂರಪ್ಪನವರು ಕಷ್ಟಪಟ್ಟು ಮುಖ್ಯಮಂತ್ರಿಯಾಗಿದ್ದರು. ಆದರೆ, ಬಿಜೆಪಿಯವರು ಅವರನ್ನು ಕೆಳಗಿಳಿಸುವ ಮೂಲಕ ಅವರಿಗೆ, ವೀರಶೈವರಿಗೆ ಮೋಸ ಮಾಡಿದರು. ಈಗ ಬೊಮ್ಮಾಯಿಯವರು ರಬ್ಬರ್ ಸ್ಟಾಂಪ್ ಇದ್ದಂತೆ ಎಂದು ವ್ಯಂಗ್ಯವಾಡಿದರು. ಎತ್ತಿನಹೊಳೆ ಹೆಸರಿನಲ್ಲಿ 13 ಸಾವಿರ ಕೋಟಿ ಖರ್ಚಾದರೂ ಒಂದು ಹನಿ ನೀರು ಇಲ್ಲಿಗೆ ಬರಲಿಲ್ಲ. 2006ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಯರಗೋಳ್ ಡ್ಯಾಂ ಕಟ್ಟಲು 250 ಕೋಟಿ ರು.ಕೊಟ್ಟೆ.
ಆದರೆ, ನೀವು ಆ ಡ್ಯಾಂಗೂ ಬೆಂಗಳೂರಿನ ವಿಷಪೂರಿತ ಕೊಳಚೆ ನೀರನ್ನು ತಂದಿರಿ ಎಂದು ಸಿದ್ದರಾಮಯ್ಯ ಹಾಗೂ ರಮೇಶ್‌ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ಹಿಂದಿನ ಕಾಂಗ್ರೆಸ್ ಆಡಳಿತಾವಧಿಯಲ್ಲಿ ರೈತ ಕುಟುಂಬಗಳು ಆತ್ಮಹತ್ಯೆ ಮಾಡಿಕೊಂಡರೂ ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವಾಗಲಿಲ್ಲ. ರೈತರ ಸಂಕಷ್ಟಕ್ಕೆ ಅವರು ಸ್ಪಂದಿಸಲಿಲ್ಲ. ಆಗಲೂ ನಮ್ಮ ಪಕ್ಷವೇ ನೊಂದವರ ಕುಟುಂಬಕ್ಕೆ ಸಾಂತ್ವನ ಹೇಳಿದೆ. ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ರೈತರ 25 ಸಾವಿರ ಕೋಟಿ ರು.ಸಾಲ ಮನ್ನಾ ಮಾಡಿದ ಸಾಧನೆ ನಮ್ಮದು ಎಂದರು.
ಕೊಳಚೆ ನೀರು ಕೊಟ್ಟಿದ್ದೇ ಸಿದ್ದರಾಮಯ್ಯ ಸಾಧನೆ: ಕುಮಾರಸ್ವಾಮಿ ವ್ಯಂಗ್ಯ
ನನಗೆ ಯಾವುದೇ ಜಾತಿ ಇಲ್ಲ. ನನ್ನ ಬಳಿ ಬರುವವರು ಬಡವರು. ಆದರೂ, ನಾನು 2 ಬಾರಿ ಈ ರಾಜ್ಯದ ಸಿಎಂ ಆಗಿದ್ದೇನೆ. ಈ ರಾಜ್ಯಕ್ಕೆ ನನ್ನಂತ ವ್ಯಕ್ತಿಬೇಕೋ?, ದುರಂಹಕಾರದ ವ್ಯಕ್ತಿ ಬೇಕೋ? ಅಥವಾ ರಾಜ್ಯದ ಆಸ್ತಿಯನ್ನು ಲೂಟಿ ಮಾಡುವವರು ಬೇಕೋ?, ನೀವೇ ನಿರ್ಧರಿಸಿ. ಮೂರನೇ ಬಾರಿಗೆ ನನಗೆ ಆಶೀರ್ವಾದ ಮಾಡಿ. ಜನಪರ ಆಡಳಿತ ಬರಲು ಬೆಂಬಲ ಕೊಡಿ ಎಂದರು. ನಮ್ಮ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದು ನಾನು ಮುಖ್ಯಮಂತ್ರಿ ಆಗುವುದು ಮುಖ್ಯವಲ್ಲ, ಜನರ ಸಮಸ್ಯೆಗಳನ್ನು ಬಗೆಹರಿಸಲು, ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯಕ್ರಮ ನೀಡುವ ಅವಕಾಶ ಕೊಡಿ ಎಂದು ನಿಮ್ಮಲ್ಲಿ ಮನವಿ ಮಾಡಲು ಪಂಚರತ್ನ ರಥಯಾತ್ರೆ ಮಾಡುತ್ತಿದ್ದೇವೆ ಎಂದರು.