ಗದಗ, (ಅ.26): ಎಲ್ಲರೂ ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುವವರೇ. ಎಲ್ಲಾ ರಾಜಕೀಯ ಪಕ್ಷಗಳು ಕೂಡ ಗೊಂದಲಗಳ ಗೂಡು. ಒಬ್ಬೊಬ್ಬರದ್ದು ಒಂದೊಂದು ರೀತಿಯ ಕನಸುಗಳು. ತಿರುಕನು ಕೂಡ ಕನಸಲ್ಲಿ ರಾಜನಾಗಿ ಮೆರೆಯುತ್ತಾನೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.

ಗದಗನಲ್ಲಿ ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಹುದ್ದೆ ವಿಚಾರವಾಗಿ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹೊರಟ್ಟಿ, ನಾನು ಸೇರಿದಂತೆ ಎಲ್ಲರೂ ಸಿಎಂ ಹುದ್ದೆ ಆಕಾಂಕ್ಷಿಗಳೇ. ಸಿಎಂ ಹುದ್ದೆ ಬಗ್ಗೆ ಎಲ್ಲರೂ ಕನಸು ಕಾಣುವವರೇ. ಮುಖ್ಯಮಂತ್ರಿಯಾದಂತೆ ಕನಸು ಕಾಣುವುದು ತಪ್ಪಲ್ಲ, ತಿರುಕ ಕೂಡ ಕನಸಿನಲ್ಲಿ ತಾನು ರಾಜನಾಗಿದ್ದೇನೆ ಎಂದು ತಿಳಿಯುತ್ತಾನೆ. ಹಾಗೇ ಸಿಎಂ ಖುರ್ಚಿ ಕನಸು ಕಾಣುವವರು ಕಾಣಲಿ ಬಿಡಿ ಎಂದು ಹೇಳಿದರು.

'ಸಿದ್ದರಾಮಯ್ಯ-ಡಿಕೆಶಿ ನಡುವೆ ಪೈಪೋಟಿ : ಶುರುವಾಗಿದೆ ಸಿಎಂ ಕುರ್ಚಿಗೆ ಕೈ ಸಂಘರ್ಷ' 

ರಾಜಕೀಯ ಪಕ್ಷಗಳಲ್ಲಿ ಸಾಕಷ್ಟು ಗೊಂದಲಗಳಿವೆ. ರಾಜಕೀಯ ನಾಯಕರ ಹೇಳಿಕೆಗಳನ್ನು ಗಮನಿಸುತ್ತಾ ಹೋದರೆ ರಾಜಕಾರಣ ಮಾಡುವುದೇ ಬೇಡ ಎನಿಸಿಬಿಡುತ್ತದೆ. ಹಾಗಂತ ರಾಜಕಾರಣ ಬಿಡಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎನ್ನುವ ಹಗ್ಗಜಗ್ಗಾಟ ಈಗಾಗಲೇ ಶುರುವಾಗಿದೆ. ಇನ್ನು ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಇದೇ ಲಾಸ್ಟ್ ಎನ್ನುವ ಮಾತುಗಳು ಕೇಳಿಬರುತ್ತಿವೆ.