ಶ್ರಾವಣ ಬಳಿಕ ಜೆಡಿಎಸ್ ರಾಜ್ಯ ಪ್ರವಾಸ
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ಪಕ್ಷದ ಸಂಘಟನೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ. ಈ ಸೂಚನೆಯ ಮೇರೆಗೆ ಸಮಿತಿಯ ಸದಸ್ಯರು ಗಮನಹರಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಬೆಂಗಳೂರು(ಆ.20): ತಳಮಟ್ಟದಿಂದ ಪಕ್ಷವನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್ ಇತ್ತೀಚೆಗೆ ನೂತನ ಕೋರ್ ಕಮಿಟಿ ರಚಿಸಿದ್ದು, ಶ್ರಾವಣ ಮಾಸದ ಬಳಿಕ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟಿಸುವಲ್ಲಿ ಕಾರ್ಯಪ್ರವೃತ್ತವಾಗಲಿದೆ.
ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ 21 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಮೊದಲ ಸಭೆ ನಡೆಸಿದ್ದು, ಮತ್ತೊಮ್ಮೆ ಸೆ.1ರಂದು ಸಭೆ ಕರೆದಿದೆ. ಮುಂಬರುವ ಲೋಕಸಭೆ, ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷವನ್ನು ಸದೃಢಗೊಳಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ಪಕ್ಷದ ಸಂಘಟನೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ. ಈ ಸೂಚನೆಯ ಮೇರೆಗೆ ಸಮಿತಿಯ ಸದಸ್ಯರು ಗಮನಹರಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ಜೆಡಿಎಸ್ ಕಾರ್ಯಕರ್ತನ ಬರ್ಬರ ಕೊಲೆ: ಎಚ್.ಡಿ ರೇವಣ್ಣ ಆಪ್ತನ ಕೊಲೆಯ ರಹಸ್ಯ ಇಲ್ಲಿದೆ..
ಸಮಿತಿಯು ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ವಿಭಾಗವಾರು ಮುಖಂಡರ ಸಭೆ ನಡೆಸಲಿದೆ. ಮೈಸೂರು, ಕಲಬುರಗಿ, ಬೆಳಗಾವಿ ಮತ್ತು ಬೆಂಗಳೂರು ವಿಭಾಗವಾರು ಸಭೆ ನಡೆಸಿ, ಸ್ಥಳೀಯ ಮುಖಂಡರೊಂದಿಗೆ ಗಂಭೀರವಾಗಿ ಸಮಾಲೋಚನೆ ನಡೆಸಿ ಮುಂದಿನ ನಡೆಯ ಬಗ್ಗೆ ತೀರ್ಮಾನ ಮಾಡಲಾಗುವುದು. ಇದಲ್ಲದೇ, ಕೋರ್ ಕಮಿಟಿ ಸದಸ್ಯರಿಗೆ ಕೆಲವೊಂದು ಜಿಲ್ಲೆಯ ಹೊಣೆ ನೀಡಿ ಆಯಾ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ನೀಡಲಾಗುವುದು. ಸೆ.1ರಂದು ಕೋರ್ ಕಮಿಟಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಪ್ರವಾಸದ ರೂಪರೇಷೆ ರೂಪಿಸಲಾಗುವುದು. ಶ್ರಾವಣ ಮಾಸದ ಬಳಿಕ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಪ್ರವಾಸದ ರೂಪರೇಷೆ ರೂಪಿಸಲು ಕಾಲಾವಕಾಶದ ಅಗತ್ಯತೆ ಇದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರದಿಂದ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ, ಭಾನುವಾರದಿಂದಲೂ ಪ್ರವಾಸ ಆರಂಭಿಸುವುದು ಕಷ್ಟಕರ ಎಂಬುದನ್ನು ಮನಗಂಡು ಸೆ.1ರಿಂದ ಪ್ರವಾಸ ಕೈಗೊಳ್ಳುವ ಕುರಿತು ಚರ್ಚೆ ನಡೆಸಲಾಗಿತ್ತು.
ಪ್ರವಾಸದ ರೂಪರೇಷೆ ಅಂತಿಮಗೊಂಡಿಲ್ಲದಿರುವುದರಿಂದ ಶ್ರಾವಣ ಮಾಸದ ಬಳಿಕ ಪ್ರವಾಸ ಕೈಗೊಳ್ಳುವ ಬಗ್ಗೆ ಸಮಿತಿಯ ಸದಸ್ಯರು ನಿರ್ಣಯಿಸಿದ್ದಾರೆ. ಸಮಿತಿಯ ಅಧ್ಯಕ್ಷರು ನೀಡುವ ಜಿಲ್ಲೆಯ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿ ಪಕ್ಷವನ್ನು ಸಂಘಟಿಸುವಲ್ಲಿ ತೊಡಗಿಸಿಕೊಳ್ಳಲು ಸದಸ್ಯರು ಮುಂದಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಥವಾ ಯುಪಿಎ ಜತೆ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸಲು ಪಕ್ಷದ ವರಿಷ್ಠರು ಈಗಾಗಲೇ ತೀರ್ಮಾನಿಸಿದ್ದಾರೆ. ಅವರ ನಿರ್ಧಾರಕ್ಕೆ ಬದ್ಧವಾಗಿ ಸಮಿತಿಯು ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.