ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಜೆಡಿಎಸ್ ಸಜ್ಜು, ಎಚ್ಡಿಕೆಗೆ ಬಾದಾಮಿಯೇ ಟಾರ್ಗೆಟ್
* ಸ್ವಕ್ಷೇತ್ರದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಸಜ್ಜಾದ ಜೆಡಿಎಸ್.....
* ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸಮಾವೇಶ....
* 2023ಕ್ಕೆ ಜೆಡಿಎಸ್ಗೆ ಬಾದಾಮಿಯೇ ಟಾರ್ಗೆಟ್
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.
ಬಾಗಲಕೋಟೆ, (ಮೇ.08): ಮಾಜಿ ಸಿಎಂ ಸಿದ್ದರಾಮಯ್ಯ 2023ಕ್ಕೆ ಬಾದಾಮಿಯಿಂದ ಸ್ಪರ್ಧೆ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಸಿದ್ದರಾಮಯ್ಯನವರಿಗೆ ಸ್ವಕ್ಷೇತ್ರದಲ್ಲೇ ಟಕ್ಕರ್ ಕೊಡೋಕೆ ಇದೀಗ ಜೆಡಿಎಸ್ ಪಕ್ಷ ಮಾತ್ರ ಸನ್ನದ್ದವಾಗಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಜೆಡಿಎಸ್ ಬೃಹತ್ ಸಮಾವೇಶಕ್ಕೆ ವೇದಿಕೆ ಸಜ್ಜಾಗಿದ್ದು, ಇತ್ತ ಸಿದ್ದು ತವರು ನೆಲದಲ್ಲೇ ಜೆಡಿಎಸ್ ಪಕ್ಷ ಶಕ್ತಿ ಪ್ರದರ್ಶನ ನೀಡಲು ಮುಂದಾಗಿದೆ.
ಹೌದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಸಮಾವೇಶವನ್ನ ನಡೆಸುವ ಮೂಲಕ ಸಿದ್ದುಗೆ ಟಕ್ಕರ್ ಕೊಡಲು ಜೆಡಿಎಸ್ ಪಕ್ಷ ಇದೀಗ ಸಜ್ಜಾಗಿದೆ. ನಾಡಿನಾದ್ಯಂತ ಸಂಚರಿಸಿರುವ ಜನತಾ ಜಲಧಾರೆ ಯಾತ್ರೆ ಸದ್ಯ ಬಾಗಲಕೋಟೆ ಜಿಲ್ಲೆಗೆ ಕಾಲಿಟ್ಟಿದ್ದು, ಜಿಲ್ಲೆಯ 7 ವಿಧಾನ ಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಚರಿಸಿ ಕೊನೆಯದಾಗಿ ಬಾದಾಮಿ ಮತಕ್ಷೇತ್ರದಲ್ಲಿ ಸಮಾರೋಪವಾಗಲಿದೆ. ಹೀಗಾಗಿ ಜೆಡಿಎಸ್ ಮುಖಂಡರು ಶತಾಯಗತಾಯ ಈ ಬಾರಿ ಬಾದಾಮಿ ಮತಕ್ಷೇತ್ರದಲ್ಲಿ ಜೆಡಿಎಸ್ ಭಾವುಟ ಹಾರಿಸಲೇಬೇಕೆಂಬ ಉದ್ದೇಶದಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನ ಕರೆತಂದು ಬೃಹತ್ ಪ್ರಮಾಣದಲ್ಲಿ ಜನರನ್ನ ಸೇರಿಸಿ ಸಿದ್ದರಾಮಯ್ಯಗೆ ಟಕ್ಕರ್ ಕೊಡೋಕೆ ಸಜ್ಜಾಗಿದ್ದಾರೆ. ಇವುಗಳ ಮಧ್ಯೆ ಅಲ್ಪಸಂಖ್ಯಾತರ ಮುಖಂಡ, ಮಾಜಿ ಸಚಿವ ಸಿ.ಎಂ.ಇಬ್ರಾಹಿಂರನ್ನ ಸಹ ಕರೆಯಿಸಲಾಗುತ್ತಿದ್ದು, ಈ ಮೂಲಕ ಬಾದಾಮಿ ಮತಕ್ಷೇತ್ರದಲ್ಲಿ ಜೆಡಿಎಸ್ ಹವಾ ಶುರು ಮಾಡೋಕೆ ಹೊರಟಿದೆ.
ನಿಗೂಢ ನಡೆ, ಮಾಜಿ ಸಿಎಂ ಸಿದ್ದರಾಮಯ್ಯನವರ ಅಂತರಂಗ ಬಲ್ಲವರಾರು...?
ಸಿದ್ದು ಸ್ವಕ್ಷೇತ್ರದಲ್ಲಿ ಜೆಡಿಎಸ್ ಸಮಾವೇಶಕ್ಕೆ ಸಿದ್ದತೆ
ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅಷ್ಟೇನು ಪ್ರಭಾವ ಹೊಂದಿರದಿದ್ದರೂ ಸಹ ಇದೀಗ ಸಿದ್ದರಾಮಯ್ಯನವರನ್ನೇ ಟಾರ್ಗೆಟ್ ಮಾಡಿಕೊಂಡು ಸಮಾವೇಶ ನಡೆಸಲು ಮುಂದಾಗುತ್ತಿದೆ. ಕಳೆದ ಬಾರಿಯೂ ಬಿಜೆಪಿ ಕಾಂಗ್ರೆಸ್ ಪಕ್ಷಗಳಿಗೆ ಪೈಪೋಟಿ ನೀಡುವಲ್ಲಿ ಜೆಡಿಎಸ್ ಪಕ್ಷ ಮುಂದಾಗಿತ್ತು. ಹೀಗಾಗಿ ಈಗ ಚುನಾವಣೆ ವರ್ಷ ಆಗಿರೋದರಿಂದ ಮತ್ತೇ ಬಾದಾಮಿಯ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ಇವುಗಳ ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲಿ ಜನತಾ ಜಲಧಾರೆ ಯಾತ್ರೆ ಸಂಪೂರ್ಣ ಸಂಚಾರ ಮಾಡಿದ್ದು, ಉದ್ದೇಶಪೂರ್ವಕವಾಗಿ ಸಿದ್ದುಗೆ ಸ್ವಕ್ಷೇತ್ರದಲ್ಲೇ ಟಾಂಗ್ ಕೊಡೋಕೆ ಬಾದಾಮಿಯಲ್ಲಿಯೇ ಸಮಾರೋಪ ಸಮಾವೇಶ ನಡೆಸಲು ಉದ್ದೇಶಿಸಿದೆ. ಇದರ ಪರಿಣಾಮ ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಅವರ ನೇತೃತ್ವದಲ್ಲಿ ನಾಳೆ ಮೇ 9ರಂದು ಬಾದಾಮಿಯ ಎಪಿಎಂಸಿ ಎದುರಿಗೆ ಇರುವ ಕುಂದಗೋಳ ಆವರಣದಲ್ಲಿ ನಡೆಯಲಿರೋ ಜೆಡಿಎಸ್ ಸಮಾರೋಪ ಸಮಾವೇಶಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು, 25 ಸಾವಿರಕ್ಕೂ ಅಧಿಕ ಜನರನ್ನ ಸೇರಿಸಲು ಮುಂದಾಗಿದೆ.
2023ಕ್ಕೆ ಜಿಲ್ಲೆಯಲ್ಲಿ ಜೆಡಿಎಸ್ಗೆ ಬಾದಾಮಿಯೇ ಟಾರ್ಗೆಟ್
ಕಳೆದ ಬಾರಿ 2018ರ ಚುನಾವಣೆಯಲ್ಲಿ ಬಾದಾಮಿ ವಿಧಾನ ಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿಯಿಂದ ಶ್ರೀರಾಮುಲು ಸ್ಪರ್ಧೆ ಮಾಡಿದ್ದರೆ ಇತ್ತ ಜೆಡಿಎಸ್ನಿಂದ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಸ್ಪರ್ಧೆ ಮಾಡುವ ಮೂಲಕ ಬಿಜೆಪಿ ಮತ್ತು ಕೈ ಪಕ್ಷದ ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸುವಂತೆ ಮಾಡಿದ್ದರು. ಆದರೆ ಈ ಬಾರಿ ಮಾತ್ರ ಹೇಗಾದರೂ ಮಾಡಿ 2023ರ ವಿಧಾನ ಸಭಾ ಚುನಾವಣೆಯಲ್ಲಿ ಬಾದಾಮಿಯನ್ನ ಜೆಡಿಎಸ್ ಪಕ್ಷ ತನ್ನ ತೆಕ್ಕೆಗೆ ಪಡೆಯಲೇಬೇಕು ಎಂಬ ಕಸರತ್ತು ನಡೆಸಲು ಮುಂದಾಗಿದೆ. ಈ ಮಧ್ಯೆ ಸಿದ್ದರಾಮಯ್ಯನವರು ಬಾದಾಮಿಯಿಂದಲೇ ಇನ್ನೊಮ್ಮೆ ಸ್ಪರ್ಧೆ ಮಾಡುವುದಾದರೆ ಸ್ಥಳೀಯ ಆಭ್ಯರ್ಥಿ ಅನ್ನೋ ಟ್ರಂಪ್ಕಾರ್ಡ ಮೂಲಕ ಈ ಬಾರಿ ಜೆಡಿಎಸ್ ಗೆಲ್ಲಿಸಿ ಎಂಬ ಸಂದೇಶವನ್ನ ನೀಡಲು ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಮುಂದಾಗಿದ್ದಾರೆ. ಇವುಗಳ ಮಧ್ಯೆ ಇನ್ನು ಸಿದ್ದರಾಮಯ್ಯನವರು ಈ ಬಾರಿ ಬಾದಾಮಿಯಿಂದ ಒಂದೊಮ್ಮೆ ಸ್ಪರ್ಧೆ ಮಾಡುವುದಾದರೆ ಸೋಲು ಖಚಿತ ಹೀಗಾಗಿ ಅವರು ನಮ್ಮ ಉತ್ತರ ಕರ್ನಾಟಕವನ್ನ ಬಿಟ್ಟು ತಮ್ಮ ಊರಿನ ಕಡೆಗೆ ಸ್ಪರ್ಧೆ ಮಾಡುವಂತಾಬೇಕು ಒಂದೊಮ್ಮೆ ಬಾದಾಮಿಯಿಂದಲೇ ಸ್ಪರ್ಧೆ ಮಾಡುತ್ತಾರೆಂದರೆ ಅವರನ್ನ ಸೋಲಿಸುತ್ತೇವೆ ಎಂದು ಜೆಡಿಎಸ್ ಮುಖಂಡರಾದ ಗೋಪಾಲ ಲಮಾಣಿ, ವಿಜಯ್ ಹಾಗೂ ಎಂ.ಎಂ.ನಧಾಪ್ ಹೇಳಿದ್ದಾರೆ.
ಏನೇ ಮಾಡಿದ್ರೂ ಸಿದ್ದರಾಮಯ್ಯನವರನ್ನ ಸೋಲಿಸಲಾಗೋದಿಲ್ಲ
ಇನ್ನು ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾದಾಮಿಯಲ್ಲಿ ಜೆಡಿಎಸ್ ಸಮಾರೋಪ ಸಮಾವೇಶ ಹಮ್ಮಿಕೊಂಡಿದ್ದಕ್ಕೆ ಕಾಂಗ್ರೆಸ್ ಪಕ್ಷ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ರಾಜ್ಯ ಕಂಡ ಮುತ್ಸದ್ದಿ ಜನಾನುನಾಯಕ, ಅವರನ್ನೇ ಟಾರ್ಗೆಟ್ ಮಾಡಿ ಜೆಡಿಎಸ್ ಸಮಾವೇಶ ಮಾಡಲು ಹೊರಟಿದ್ದು, ಇದು ಯಾವುದೇ ರೀತಿಯಲ್ಲಿ ಸಿದ್ದರಾಮಯ್ಯಗೆ ಎಫೆಕ್ಟ್ ಆಗೋದಿಲ್ಲ. ಯಾಕಂದರೆ ಸಿದ್ದರಾಮಯ್ಯನವರು ಕೋಟ್ಯಂತರ ಅನುದಾನವನ್ನ ತಂದು ಬಾದಾಮಿ ಮತಕ್ಷೇತ್ರದ ಅಭಿವೃದ್ದಿ ಮಾಡಿದ್ದಾರೆ. ಇದರಿಂದ ಜನ ಮತ್ತೊಮ್ಮೆ ಸಿದ್ದರಾಮಯ್ಯನವರು ಮತ್ತೇ ಬಾದಾಮಿಯಿಂದಲೇ ಸ್ಪರ್ಧೆ ಮಾಡಿದರೆ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವಂತೆ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಜು ಮನ್ನಿಕೇರಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರನ್ನೇ ಟಾರ್ಗೆಟ್ ಮಾಡಿ ಜೆಡಿಎಸ್ ಬಾದಾಮಿಯಲ್ಲಿ ಬೃಹತ್ ಸಮಾರೋಪ ಸಮಾವೇಶಕ್ಕೆ ಮುಂದಾಗಿದ್ದು, ಸಮಾವೇಶದ ಎಫೆಕ್ಟ್ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿ ಆಗುತ್ತೇ ಅಂತ ಕಾದು ನೋಡಬೇಕಿದೆ..