ನಿಗೂಢ ನಡೆ, ಮಾಜಿ ಸಿಎಂ ಸಿದ್ದರಾಮಯ್ಯನವರ ಅಂತರಂಗ ಬಲ್ಲವರಾರು...?
* ಮಾಜಿ ಸಿಎಂ ಸಿದ್ದರಾಮಯ್ಯನವರ ಅಂತರಂಗ ಬಲ್ಲವರಾರು...!
* ಮತ್ತೇ ಬಾದಾಮಿಯಿಂದ ಸ್ಫಧೆ೯ ಮಾಡ್ತಾರಾ ಮಾಜಿ ಸಿದ್ದರಾಮಯ್ಯ...?
* ಒಮ್ಮೆ ಸ್ಫಧೆ೯ ಇಂಗಿತ, ಮತ್ತೊಮ್ಮೆ ಕ್ಷೇತ್ರ ದೂರ ಎನ್ನುವ ರೀಸನ್...
* ಮಾತು ಮಾತಿಗೂ ಸಿದ್ದರಾಮಣ್ಣ ಅಂತ ಹೇಳಿಯೇ ಮನದಾಳ ಬಿಚ್ಚಿಟ್ಟ ಸಿಎಂ ಬೊಮ್ಮಾಯಿ...
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವಣ೯ನ್ಯೂಸ್, ಬಾಗಲಕೋಟೆ.
ಬಾಗಲಕೋಟೆ, (ಏ.23): ಮಾಜಿ ಸಿಎಂ, ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೆಸರು ಹೇಳಿದರೆ ಸಾಕು ಅಲ್ಲಿ ಜನ ಸೇರೋದು ಫಿಕ್ಸ್, ರಾಜ್ಯದಲ್ಲಿ ಸಿದ್ದರಾಮಯ್ಯನವರಿಗಾಗಿ ಅವರದೇ ಆದ ಬೆಂಬಲಿಗರ ಪಡೆ ಇದೆ. ಇವುಗಳ ಮಧ್ಯೆ ಪಕ್ಷ ಯಾವುದೇ ಇರಲಿ ಬಿಡಲಿ ಅವರು ಪ್ರತಿನಿಧಿಸುವ ಸ್ವಕ್ಷೇತ್ರಗಳಿಗೆ ಬರುವ ಅನುದಾನಕ್ಕೇನು ಕಡಿಮೆ ಇಲ್ಲ. ಹೀಗಾಗಿ ಅವರಿಗಾಗಿ ಅದೆಷ್ಟೋ ನಾಯಕರು ತಮ್ಮ ತಮ್ಮ ಕ್ಷೇತ್ರ ಬಿಟ್ಟು ಕೊಡೋಕು ಮುಂದಾಗಿದ್ದಾರೆ. ಆದರೆ ಸಿದ್ದರಾಮಯ್ಯನವರ 2023ರ ಚುನಾವಣೆ ಸ್ಫಧೆ೯ಯ ಕ್ಷೇತ್ರ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಹಾಗಾದರೆ ಸಿದ್ದು ನಡೆ ಏನು, ಸಿದ್ದರಾಮಯ್ಯನವರ ಅಂತರಂಗವನ್ನು ಬಲ್ಲವರಾರು ಅನ್ನೋ ಪ್ರಶ್ನೆ ಈಗ ಕೇಳಿ ಬರುತ್ತಿದೆ.
ಹೌದು, ಕಳೆದ ಬಾರಿ ಅಂದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಅತ್ತ ಚಾಮುಂಡೇಶ್ವರಿ ಇತ್ತ ಉತ್ತರ ಕನಾ೯ಟಕದ ಬಾದಾಮಿಯಿಂದ ಸಿದ್ದರಾಮಯ್ಯನವರು ಸ್ಫಧೆ೯ ಮಾಡಿದ್ದರು. ಅವರ ರಾಜಕೀಯ ವಿರೋಧಿಗಳ ಷಡ್ಯಂತ್ರದಿಂದ ಚಾಮುಂಡೇಶ್ವರಿಯಲ್ಲಿ ಸೋಲು ಅನುಭವಿಸಿದ ಸಿದ್ದರಾಮಯ್ಯ ಇತ್ತ ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಗೆಲವು ಸಾದಿಸಿದ್ದರು. ಒಂದೊಮ್ಮೆ ಬಾದಾಮಿ ಕೈ ಹಿಡಿಯದಿದ್ದರೆ ಅದೇನಾಗುತ್ತಿತ್ತೋ ಗೊತ್ತಿಲ್ಲ ಆದರೆ ಬಾದಾಮಿ ಜನರ ಪ್ರೀತಿ ವಿಶ್ವಾಸದಿಂದ ಸಿದ್ದು ಗೆದ್ದು ಬಂದರು. ಸಾಲದ್ದಕ್ಕೆ ತಾವು ಸ್ವಕ್ಷೇತ್ರ ಬಾದಾಮಿಗೆ ಬಂದಾಗಲೊಮ್ಮೆ ಪ್ರತಿ ಊರಲ್ಲೂ ಬಾದಾಮಿ ಮತಕ್ಷೇತ್ರದ ಜನರ ಋಣ ನನ್ನ ಮೇಲಿದೆ, ಅದನ್ನು ತೀರಿಸುತ್ತೇನೆ ಅಂತ ಹೇಳುತ್ತಲೇ ಬಂದಿದ್ದಾರೆ. ಆದರೆ ಈಗ 2023ರ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವಷ೯ ಬಾಕಿ ಇರುವಾಗಲೇ ಎಲ್ಲೆಡೆ ತಯಾರಿ ಜೋರಾಗಿಯೇ ನಡೆಯುತ್ತಿದ್ದು, ಸಿದ್ದರಾಮಯ್ಯನವರ ನಡೆ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಸಿದ್ದರಾಮಯ್ಯ ಕಡೆಯಿಂದ ಹಣ ಪಡೆದ ಸಿಎಂ ಬೊಮ್ಮಾಯಿ, ವಿಡಿಯೋ ವೈರಲ್
ಸಿದ್ದರಾಮಯ್ಯ ನಡೆ ನಿಗೂಢ
ಮುಂಬರುವ 2023 ವಿಧಾನಸಭಾ ಚುನಾವಣೆಗೆ ಎಲ್ಲಿಂದ ಸ್ಪರ್ಧೆ ಮಾಡಬೇಕೆನ್ನುವ ಗೊಂದಲ ಮಾಜಿ ಸಿಎಂ ಸಿದ್ದರಾಮಯ್ಯನವರಲ್ಲಿದೆ. ಚುನಾವಣೆಗೆ ಒಂದು ವಷ೯ ಬಾಕಿ ಇರುವಾಗ ಸ್ವಕ್ಷೇತ್ರ ಬಾದಾಮಿಗೆ ಬಂದಾಗಲೊಮ್ಮೆ ಬೇರೆಬೇರೆ ಹೇಳಿಕೆಗಳನ್ನು ನೀಡುತ್ತಿರುವ ಸಿದ್ದರಾಮಯ್ಯನವರ ನಡೆಯನ್ನ ನೋಡಿದರೆ ಎಲ್ಲವೂ ಅಸ್ಪಷ್ಟವಾಗಿ ಗೋಚರವಾಗುತ್ತದೆ. ಸ್ಫಧೆ೯ ಬಗ್ಗೆ ಕೇಳಿದಾಗ, ಒಮ್ಮೆ ಕ್ಷೇತ್ರಕ್ಕೆ ಬಂದಾಗ ಚುನಾವಣೆ ಇನ್ನೂ ಒಂದು ವರ್ಷ ಬಾಕಿ ಇದೆ, ನಾನೀಗ ಬಾದಾಮಿ ಶಾಸಕ ಅಂತ ಹೇಳಿ, ಜನರ ಋಣ ತೀರಿಸಬೇಕಿದೆ ಎಂದು ಹೇಳುವ ಸಿದ್ದರಾಮಯ್ಯನವರ ಮಾತಿನಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯನವರು ಬಾದಾಮಿಯಿಂದಲೇ ಸ್ಫಧೆ೯ ಮಾಡಬಹುದೆನ್ನುವ ಲೆಕ್ಕಾಚಾರ ಇರಬಹುದು ಅಂತ ಕಂಡು ಬಂದರೆ, , ಇತ್ತ ಸ್ವಕ್ಷೇತ್ರದಲ್ಲಿ ಕೆಲವೊಂದು ಭಿನ್ನಮತದ ದೃಶ್ಯಗಳನ್ನ ನೋಡಿ ಇತ್ತೀಚಿಗೆ ಸ್ಫಧೆ೯ ಬಗ್ಗೆ ನೋಡೋಣ, ಕ್ಷೇತ್ರ ದೂರವಾಗುತ್ತೆ, ಶಾಸಕರಾದವರು ಜನರಿಗೆ ಸದಾ ಕಾಲ ಸಿಗುವಂತಿರಬೇಕು, ನಮಗೂ ಆತ್ಮ ತೃಪ್ತಿ ಇರಬೇಕಾಗುತ್ತೆ ಎಂದು ಸಿದ್ದರಾಮಯ್ಯ ಹೇಳಿದಾಗ ಮತ್ತೇ ಬಾದಾಮಿಯಿಂದ ಸ್ಫಧೆ೯ ಮಾಡದೇ ಬೇರೆ ಕ್ಷೇತ್ರ ನೋಡುತ್ತಾರಾ ಅನ್ನೋ ಮಾತು ಕೇಳಿ ಬರುತ್ತಿವೆ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರ ಅಂತರಂಗ ಬಲ್ಲವರಾರು ಅನ್ನೋ ಪ್ರಶ್ನೆ ಈಗ ಅವರ ಬೆಂಬಲಿಗರಲ್ಲಿ ಶುರುವಾಗಿದೆ.
ಸ್ವಕ್ಷೇತ್ರಕ್ಕೆ ಕೋಟಿ ಕೋಟಿ ಅನುದಾನಕ್ಕೆ ಗ್ರೀನ್ ಸಿಗ್ನಲ್ ಪಡೆದ ಸಿದ್ದು...
ಸಿದ್ದರಾಮಯ್ಯ ಅಂದರೇನೆ ಹಾಗೆಯೇ ಸ್ವಕ್ಷೇತ್ರದ ಅಭಿವೃದ್ಧಿ ವಿಚಾರ ಅಂತ ಬಂದಾಗ ಯಾವುದೇ ಪಕ್ಷ ಪಂಗಡ ಎನ್ನದೆ ಕಟಿಬದ್ಧರಾಗಿ ನಿಲ್ಲುವ ರಾಜಕಾರಣಿ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರೂ ಸಹ ಅವರ ಕ್ಷೇತ್ರದ ಅನುದಾನಕ್ಕೆ ಏನು ಕಡಿಮೆ ಇಲ್ಲ, ಸ್ವ ಕ್ಷೇತ್ರದ 528ಕೋಟಿ ವೆಚ್ಚದ ಕೆರೂರು ಏತನೀರಾವರಿ ಯೋಜನೆಗೆ ನಾಡದೊರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಕರೆತಂದು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖ್ಯವೇದಿಕೆಯಲ್ಲಿ ಸ್ವಕ್ಷೇತ್ರದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಿಎಂ ಮತ್ತು ಮಾಜಿ ಸಿಎಂ ಸೇರಿದಂತೆ ಎಲ್ಲರ ಬಾಯಲ್ಲೂ ಅಭಿವೃದ್ಧಿಗಾಗಿ ರಾಜಕಾರಣ ಇಲ್ಲ ಎಂಬ ಮಾತುಗಳು ಸ್ಪಷ್ಟವಾಗಿ ಕೇಳಿ ಬಂದವು ಇನ್ನು ತಮ್ಮ ಸ್ವಕ್ಷೇತ್ರದ ಅಭಿವೃದ್ಧಿಗಾಗಿ ಹಾತೊರೆಯುವ ಸಿದ್ದು ತಮ್ಮ ಕ್ಷೇತ್ರಕ್ಕೆ ಸಿಎಂ ಬಂದರೆ ಕೇಳಬೇಕೆ, ಮತ್ತೇ ಸಿಎಂ ಬೊಮ್ಮಾಯಿ ಬಳಿ ವಿವಿಧ ಕಾಮಗಾರಿಗಳಿಗಾಗಿ ಬೇಡಿಕೆ ಇಟ್ಟೆ ಬಿಟ್ಟರು. ಸಿದ್ದರಾಮಯ್ಯನವರು, ತಮ್ಮ ಭಾಷಣದಲ್ಲಿ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಡಿ ಅಂತ ಸಿಎಂ ಬೊಮ್ಮಾಯಿ ಮತ್ತು ಸಚಿವ ಕಾರಜೋಳಗೆ ಮನವಿ ಮಾಡಿದರು. ಇದಕ್ಕಾಗಿ ತಡಮಾಡದ ಸಿಎಂ ಬೊಮ್ಮಾಯಿ ಸಿದ್ದರಾಮಯ್ಯನವರ ಮನವಿ ಪತ್ರಕ್ಕೆ ವೇದಿಕೆಯಲ್ಲೇ ಸಹಿ ಮಾಡಿ ಗ್ರೀನ್ ಸಿಗ್ನಲ್ ನೀಡಿದರು. ಅಲ್ಲದೆ ಸಚಿವ ಗೋವಿಂದ ಕಾರಜೋಳ ಅವರಿಗೂ ಅನುದಾನಕ್ಕಾಗಿ ಮನವಿ ಪತ್ರ ನೀಡಿದರು. ಅದಕ್ಕೆ ಸಚಿವ ಕಾರಜೋಳ ಸಹ ಅಸ್ತು ಎಂದರು. ಈ ನಡುವೆ ವೇದಿಕೆಯಲ್ಲಿ ಸಿಎಂ ಬೊಮ್ಮಾಯಿ ಮಾತು ಮಾತು ಮಾತಿಗೂ ಸಿದ್ದರಾಮಣ್ಣ, ಸಿದ್ದರಾಮಣ್ಣ ಅಂತ ಕರೆಯುವ ಮೂಲಕ ಹಲವೆಡೆ ಹಾಸ್ಯ ಚಟಾಕಿ ಸಹ ಹಾರಿಸಿದರು.
ಸಿಎಂ & ಮಾಜಿ ಸಿಎಂ ಕುಚುಕು ಸ್ನೇಹಕ್ಕೆ ಸಾಕ್ಷಿಯಾಯಿತು ಶಂಕು ಸ್ಥಾಪನೆ..
ಬಾಗಲಕೋಟೆ ಜಿಲ್ಲೆಯ ಕೆರೂರ ಏತ ನೀರಾವರಿ ಯೋಜನೆಯ ಶಂಕು ಸ್ಥಾಪನೆಗಾಗಿ ನಡೆದ ಕಾಯ೯ಕ್ರಮ ಸಿ ಎಂ ಮತ್ತು ಮಾಜಿ ಸಿಎಂ ಅವರ ಸ್ನೇಹಮಯಿ ಘಟನಾವಳಿಗೆ ಸಾಕ್ಷಿಯಾಯಿತು. ಹೌದು, ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಆರತಿ ತಟ್ಟೆಗೆ ಹಣ ಹಾಕುವ ವೇಳೆ ನಸುನಗುತ್ತಲೇ ಸಿಎಂ ಬೊಮ್ಮಾಯಿ ಮಾಜಿ ಸಿಎಂ ಸಿದ್ದರಾಮಯ್ಯನವರಿಂದ ಹಣ ಪಡೆದ ಪ್ರಸಂಗ ನಡೆಯಿತು. ಯಾಕಂದರೆ ಶಂಕು ಸ್ಥಾಪನೆ ಪೂಜೆ ವೇಳೆ ಆರತಿ ತಟ್ಟೆಗೆ ಹಣ ಹಾಕುವ ವಿಚಾರದಲ್ಲಿ ಆರತಿ ತಟ್ಟೆಗೆ ಹಣ ಹಾಕಲು ಸಿಎಮ್ ಜೇಬು ತಡಕಾಡಿದರು. ಇದರಿಂದ ಸ್ಥಳದಲ್ಲಿ ಹಣ ಹಾಕುವ ವೇಳೆ ಸಿಎಮ್ ಮತ್ತು ಮಾಜಿ ಸಿಎಮ್ ಮಧ್ಯೆ ಗೊಂದಲವೆನಿಸಿತು.ಇದರಿಂದ ಸಿಎಂ ಬೊಮ್ಮಾಯಿ ನಸುನಗುತ್ತಲೇ ಸಿದ್ದರಾಮಯ್ಯ ಕಡೆಗೆ ಮುಖ ಮಾಡಿದರು. ಆಗ ಮಾಜಿ ಸಿಎಮ್ ಸಿದ್ದರಾಮಯ್ಯ ಹಣ ಕೊಡಲು ಮುಂದಾದಾಗ, ಸಿದ್ದರಾಮಯ್ಯ ಅವರಿಂದ ಸಿಎಮ್ ಬೊಮ್ಮಾಯಿ ಹಣ ಪಡೆದು ಆರತಿ ತಟ್ಟೆಗೆ ಹಾಕಿದರು.
ಒಟ್ಟಾರೆ ಚುನಾವಣೆ ಇದ್ದಾಗ ಪಕ್ಷ ಪಕ್ಷ ಅಂತ ಸ್ವಾಭಿಮಾನ ಮೆರೆಯುವ ನಾಯಕರು ಅಭಿವೃದ್ಧಿ ಅಂತ ಬಂದಾಗ ಸಿಎಂ, ಮಾಜಿ ಸಿಎಂ ಸೇರಿದಂತೆ ಎಲ್ಲರೂ ಒಟ್ಟಾಗಿ ಒಗ್ಗಟ್ಟು ಪ್ರದಶ೯ನಕ್ಕೆ ಮುಂದಾಗಿದ್ದು ಮಾದರಿ ರಾಜಕಾರಣಕ್ಕೆ ಸಾಕ್ಷಿಯಾಗಿತ್ತು.