Asianet Suvarna News Asianet Suvarna News

ಕುಟುಂಬ ರಾಜಕಾರಣದಲ್ಲಿ ಬಿಜೆಪಿ ಎಲ್ಲ ಪಕ್ಷಗಳ ದಾಖಲೆ ಮುರಿದಿದೆ: ಪಟ್ಟಿ ನೀಡಿದ ಜೆಡಿಎಸ್

* ಜೆಡಿಎಸ್ ಹಾಗೈ ಬಿಜೆಪಿ ನಡುವೆ ಟ್ವೀಟ್ ವಾರ್
* ಕುಟುಂಬ ರಾಜಕಾರಣದ ಬಗ್ಗೆ ಆರೋಪ-ಪ್ರತ್ಯಾರೋಪ
* ಕುಟುಂಬ ರಾಜಕೀಯ ಪಕ್ಷ ಎಂದ ಬಿಜೆಪಿಗೆ ತಿರುಗೇಟು ಕೊಟ್ಟ ಜೆಡಿಎಸ್

JDS Hits back at BJP Over family Politics allegation rbj
Author
Bengaluru, First Published Nov 14, 2021, 3:44 PM IST

ಬೆಂಗಳೂರು, (ನ.14): ಕುಟುಂಬ ರಾಜಕಾರಣ ಜೆಡಿಎಸ್ ಸಿದ್ಧಾಂತ ಎಂದಿದ್ದ  ಬಿಜೆಪಿಗೆ ತಿರುಗೇಟು ನೀಡಿರುವ ಜೆಡಿಎಸ್,  ಕುಟುಂಬ ರಾಜಕಾರಣದಲ್ಲಿ ಬಿಜೆಪಿ ದೇಶದ ಎಲ್ಲ ಪಕ್ಷಗಳ ದಾಖಲೆಗಳನ್ನು ಮುರಿದಿದೆ ಎಂದಿದ್ದು,  ದಾಖಲೆ ಸಮೇತ ಕುಟುಂಬ ರಾಜಕಾರಣದ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಶನಿವಾರ ಟ್ವೀಟ್ ಮಾಡಿ ಕುಟುಂಬ ರಾಜಕಾರಣ Family Politics) ಜೆಡಿಎಸ್ ಸಿದ್ಧಾಂತ ಎಂದಿದ್ದ ರಾಜ್ಯ ಬಿಜೆಪಿ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ರೇವಣ್ಣ, ಪ್ರಜ್ವಲ್ ರೇವಣ್ಣ, ಭವಾನಿ, ರೇವಣ್ಣ, ಸೂರಜ್ ರೇವಣ್ಣ….ಕುಟುಂಬ ರಾಜಕಾರಣದ ರೆಂಬೆಕೊಂಬೆಗಳು ಎಷ್ಟೊಂದು ಸಮೃದ್ಧವಾಗಿದೆ” ಎಂದಿತ್ತು. ಇದೀಗ ಜೆಡಿಎಸ್ ಸರಣಿ ಟ್ವೀಟ್‌ಗಳನ್ನು ಮಾಡಿರುವ ಜೆಡಿಎಸ್ (JDS), ಬಿಜೆಪಿಯ ಕುಟುಂಬ ರಾಜಕಾರಣದ (BJP Family  Politics)ಪಟ್ಟಿ ನೀಡಿದೆ. 

ಕುಟುಂಬ ರಾಜಕಾರಣ ಬಿಜೆಪಿ ಮಾಡಿಲ್ವಾ? : ಎಚ್‌ಡಿಕೆ ತಿರುಗೇಟು

ಬಿಜೆಪಿ ಹೇಳುವುದೊಂದು, ಮಾಡುವುದು ಇನ್ನೊಂದು. ಮನೆಯಲ್ಲಿ ಒಂದು ಮುಖ. ಬೀದಿಯಲ್ಲಿ ಇನ್ನೊಂದು ಮುಖ ಒಡಕು ರಾಜಕಾರಣದ ಪಕ್ಷಕ್ಕೆ ಹೊಲಸು ರಾಜಕಾರಣದಲ್ಲಿ ಹೆಚ್ಚು ನಂಬಿಕೆ ಎನ್ನುವುದು ಆಪರೇಷನ್ ಕಮಲದ ಮೂಲಕ ರಚನೆ ಮಾಡಿದ ಸರಕಾರಗಳೇ ಸಾಕ್ಷಿ ಎಂದು ಟ್ವೀಟ್ ಮಾಡಿದೆ. 

ಕುಟುಂಬ ರಾಜಕಾರಣದಲ್ಲಿ ಬಿಜೆಪಿ ದೇಶದ ಎಲ್ಲ ಪಕ್ಷಗಳ ದಾಖಲೆಗಳನ್ನು ಮುರಿದಿದೆ. ಕರ್ನಾಟಕದ ಮಟ್ಟಿಗಂತೂ ಕೇಸರಿ ಕಲಿಗಳದ್ದು ಸಾರ್ವಕಾಲಿಕ ದಾಖಲೆಯೇ. ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ. ಬಿಜೆಪಿ ನಾಯಕರ ಕುಟುಂಬ ರಾಜಕಾರಣದ ಪಟ್ಟಿ ಈ ಕೆಳಗಿನಂತಿದೆ. 

1. ಯಡಿಯೂರಪ್ಪ ಕುಟುಂಬ: ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ. ಹಿರಿಮಗ ಲೋಕಸಭೆ ಸದಸ್ಯ, ಕಿರಿಮಗ ಪಕ್ಷದ ಉಪಾಧ್ಯಕ್ಷ.

2. ಶೆಟ್ಟರ್ ಕುಟುಂಬ: ಜಗದೀಶ್ ಶೆಟ್ಟರ್ ಶಾಸಕರು, ಮಾಜಿ ಸಚಿವ, ಮಾಜಿ ಸಿಎಂ; ಅವರ ತಮ್ಮ ಹಾಲಿ ವಿಧಾನ ಪರಿಷತ್ ಸದಸ್ಯ.

3. ಅಣ್ಣಾ ಸಾಹೇಬ್ ಕುಟುಂಬ: ಪತಿ ಲೋಕಸಭೆ ಸದಸ್ಯ, ಪತ್ನಿ ರಾಜ್ಯದಲ್ಲಿ ಕ್ಯಾಬಿನೆಟ್ ಸಚಿವೆ.

4. ಬಳ್ಳಾರಿ ರೆಡ್ಡಿ ಕುಟುಂಬ: ಕರುಣಾಕರ ರೆಡ್ಡಿ ಶಾಸಕ, ಅವರ ಸಹೋದರ ಸೋಮಶೇಖರ ರೆಡ್ಡಿ ಕೂಡ ಶಾಸಕ. ಇನ್ನೊಬ್ಬ ಸಹೋದರ ಬಿಜೆಪಿ ನಾಯಕರೇ. ಅವರ ಗೆಳೆಯ ಶ್ರೀರಾಮುಲು ಈಗ ಮಂತ್ರಿ. ಮಾಜಿ ಎಂಪಿ ಶಾಂತಾ ಅವರು ಶ್ರೀರಾಮುಲು ತಂಗಿ. ಸಣ್ಣ ಫಕೀರಪ್ಪ ಕೂಡ ಅವರ ಪೈಕಿಯೇ.

5. ಜಾರಕಿಹೊಳಿ ಕುಟುಂಬ: ರಮೇಶ್ ಜಾರಕಿಹೊಳಿ ಮಾಜಿ ಮಂತ್ರಿ , ಶಾಸಕರು. ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಹಾಲಿ ಶಾಸಕರು, ಕೆಎಂಎಫ್ ಸದಸ್ಯರು.

6. ಲಿಂಬಾವಳಿ ಕುಟುಂಬ: ಅರವಿಂದ ಲಿಂಬಾವಳಿ ಶಾಸಕರು, ಅವರ ಭಾವಮೈದ ರಘು ಕೂಡ ಶಾಸಕರಲ್ಲವೇ..?
 7. ಉದಾಸಿ ಕುಟುಂಬ: ದಿವಂಗತ ಉದಾಸಿ ಅವರು ಮಂತ್ರಿಗಳಾಗಿದ್ದರು. ಅವರ ಮಗ ಈಗ ಸಂಸತ್ ಸದಸ್ಯರಾಗಿದ್ದಾರೆ.

ಪಟ್ಟಿ ಇನ್ನೂ ಇದೆ. ರಾಜ್ಯವಾರು ಬರೆಯುತ್ತಾ ಹೋದರೆ ಪುಟಗಳೇ ಸಾಲುವುದಿಲ್ಲ. ಕುಟುಂಬ ರಾಜಕಾರಣದ  ರೆಂಬೆಕೊಂಬೆಗಳು ಸಮೃದ್ಧವಾಗಿರುವುದು ಎಲ್ಲಿ..? ಯಾವ ಪಕ್ಷದಲ್ಲಿ..? ಕುಟುಂಬ ರಾಜಕಾರಣದ ವಿರಾಟ ದರ್ಶನ ಆಗುತ್ತಿರುತ್ತಿರುವುದು ಎಲ್ಲಿ..? ಎಂದು ಪ್ರಶ್ನಿಸಿದೆ.

ರಾಷ್ಟ್ರ ನಿರ್ಮಾಣ ಬಿಜೆಪಿಯ ಗುರಿಯಲ್ಲ. ಆಪರೇಷನ್ ಕಮಲ ಅದರ ಗರಿ. ಆಪರೇಷನ್ ಕಮಲವನ್ನು ರಾಷ್ಟ್ರೀಕರಣ ಮಾಡಿ ರಾಷ್ಟ್ರಪ್ರೇಮ ಮೆರೆದ ಕುಖ್ಯಾತಿ ಅದರದ್ದು. ಒಡಕು ರಾಜಕಾರಣ ಬಿಜೆಪಿ ನಿತ್ಯ ಕಾಯಕ. ಆಪರೇಷನ್ ಕಮಲ ಅದರ ಅಧಿಕೃತ ರಾಜಧರ್ಮ. ಕುಟುಂಬ ರಾಜಕಾರಣ ಅದರ ಅಧಿಕಾರದ ಸೋಪಾನ. ಸವಕಲು ಹೇಳಿಕೆಗಳಿಂದ ಬೇಳೆ ಬೇಯಿಸಿಕೊಳ್ಳುವುದು ಬಿಟ್ಟು ಜನರ ಕೆಲಸ ಮಾಡಿ. ಬೇರೆಯವರ ತಟ್ಟೆಯತ್ತ ನೋಡುವ ಚಾಳಿ ಬಿಟ್ಟರೆ ಉತ್ತಮ ಎಂದು ಜೆಡಿಎಸ್ ಟಾಂಗ್ ಕೊಟ್ಟಿದೆ.
 

Follow Us:
Download App:
  • android
  • ios