Asianet Suvarna News Asianet Suvarna News

ಕುಟುಂಬ ರಾಜಕಾರಣ ಬಿಜೆಪಿ ಮಾಡಿಲ್ವಾ? : ಎಚ್‌ಡಿಕೆ ತಿರುಗೇಟು

  • ನಮ್ಮ ಪಕ್ಷದ್ದು ಕುಟುಂಬ ರಾಜಕಾರಣವಾದರೆ ಬಿಜೆಪಿಯವರದ್ದು ಯಾವ ರಾಜಕಾರಣ’
  • ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಖಾರವಾಗಿ ಪ್ರಶ್ನೆ
HD Kumaraswamy reacts on family politics allegation snr
Author
Bengaluru, First Published Nov 14, 2021, 7:35 AM IST
  • Facebook
  • Twitter
  • Whatsapp

 ಬೆಂಗಳೂರು (14): ‘ನಮ್ಮ ಪಕ್ಷದ್ದು ಕುಟುಂಬ ರಾಜಕಾರಣವಾದರೆ (Family politics) ಬಿಜೆಪಿಯವರದ್ದು (BJP) ಯಾವ ರಾಜಕಾರಣ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD kumaraswamy) ಖಾರವಾಗಿ ಪ್ರಶ್ನಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಸಕ ಅಪ್ಪಚ್ಚು ರಂಜನ್‌ (appachu Ranjan) ಸಹೋದರ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ (Jagadish Shettar) ತಮ್ಮ ಸಹ ವಿಧಾನಪರಿಷತ್‌ ಸದಸ್ಯರು. ಉದಾಸಿ ಕುಟುಂಬದ ಕಥೆ ಏನು? ಕುಟುಂಬ ರಾಜಕಾರಣ ಅಲ್ಲಿಯೂ ಇಲ್ಲವೇ? ಪಕ್ಷಕ್ಕೆ ಬಂದು ಜನರಿಂದ ಗೆದ್ದವರನ್ನು ಹಣ ಕೊಟ್ಟು ಖರೀದಿ ಮಾಡಿದ್ದು ಯಾವ ಪಕ್ಷ? ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಾಗದೆ ಅನ್ಯ ಪಕ್ಷಗಳಿಂದ ಶಾಸಕರನ್ನು (MLA) ಸೆಳೆದವರು ಯಾರು? ನಿಮ್ಮ ಸರ್ಕಾರಗಳು ಹೇಗೆ ಬಂದವು ಎನ್ನುವುದನ್ನು ನೀವು ಅರ್ಥ ಮಾಡಿಕೊಂಡು ಮಾತನಾಡಬೇಕು’ ಎಂದು ವಾಗ್ದಾಳಿ ನಡೆಸಿದರು.

‘ಪಕ್ಷಕ್ಕೆ ಬಂದವರು ನಂಬಿಕೆ ದ್ರೋಹ ಮಾಡಿ ಹೋದರೆ ಪಕ್ಷವನ್ನು ಉಳಿಸಿಕೊಳ್ಳಲು ನಾವೇನು ಮಾಡಬೇಕು? ಕೆಲವೊಮ್ಮೆ ಇಂತಹ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಬಿಜೆಪಿಯವರು ಕ್ಷುಲ್ಲಕ ವಿಚಾರ ಮಾತನಾಡುವುದು ಬೇಡ’ ಎಂದರು.

‘ಕಾಂಗ್ರೆಸ್‌ (Congress) ಪಕ್ಷದ್ದು ಓಲೈಕೆ ರಾಜಕಾರಣ, ಜೆಡಿಎಸ್‌ ಪಕ್ಷದ್ದು ಕುಟುಂಬ ರಾಜಕಾರಣ’ ಎಂದು ಬಿಜೆಪಿ ಮಾಡಿರುವ ಟ್ವೀಟ್‌ಗೆ ತಿರುಗೇಟು ನೀಡಿದರು.

MLC ಚುನಾವಣೆಯಲ್ಲಿ ಆಸಕ್ತಿ ಇಲ್ಲ :   ಪರಿಷತ್‌ ಚುನಾವಣೆಗೆ (MLC Election) ಸ್ಪರ್ಧಿಸುವ ಆಕಾಂಕ್ಷೆ ನನಗಿಲ್ಲ. ಹಾಸನ (Hassan) ಜಿಲ್ಲೆಯಿಂದ ಅಭ್ಯರ್ಥಿ ಆಯ್ಕೆ ಸಂಬಂಧ ಶುಕ್ರವಾರ ನಡೆದ ಸಭೆಯಲ್ಲಿ ಶೇ.70ಕ್ಕೂ ಹೆಚ್ಚು ಮಂದಿ ನಮ್ಮ ತಾಯಿ ಭವಾನಿ (bhavani Revanna) ಅವರ ಹೆಸರು ಪ್ರಸ್ತಾಪಿಸಿದ್ದಾರೆ. ಪಕ್ಷದ ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ (HD Devegowda) ಮೊಮ್ಮಗ ಡಾ. ಸೂರಜ್‌ ರೇವಣ್ಣ (suraj revanna) ಹೇಳಿದ್ದಾರೆ.

ಗನ್ನಿಕಡದ ಅವರ ತೋಟದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಹೊಳೆನರಸೀಪುರ ತಾಲೂಕಿನ ಎರಡು ಹೋಬಳಿಗಳ ಜವಾಬ್ದಾರಿ ವಹಿಸಿದ್ದಾರೆ. ನಾನು ನನ್ನ ಎರಡು ಹೋಬಳಿಗಳಲ್ಲಿ ಪಕ್ಷ ಸಂಘಟನೆ ಕೆಲಸ ಮಾಡಿಕೊಂಡಿದ್ದೇನೆ. ಮೇಲಾಗಿ ಈಗಾಗಲೇ ಎಚ್‌ಡಿಸಿಸಿ ಬ್ಯಾಂಕ್‌ನಲ್ಲಿ (HDCC Bank) ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದು, ಬ್ಯಾಂಕ್‌ನ ವ್ಯವಸ್ಥೆಯನ್ನು ಹಿರಿಯರ ಮಾರ್ಗದರ್ಶನದಲ್ಲಿ ನಡೆಸಿಕೊಂಡು ಬರುತ್ತಿದ್ದೇನೆ. ನನಗೆ ಪರಿಷತ್‌ ಚುನಾವಣೆಯಲ್ಲಿ ಸ್ಪ​ರ್ಧಿಸುವ ಆಸಕ್ತಿ ಇಲ್ಲ ಎಂದರು ಸೂರಜ್.

ನಮ್ಮ ತಂದೆ, ತಾತ, ಆರು ಜನ ಶಾಸಕರು ಯಾವ ರೀತಿಯ ತೀರ್ಮಾನ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಪರಿಷತ್‌ ಚುನಾವಣೆಗೆ ಯಾರು ಅಭ್ಯರ್ಥಿ ಆಗುತ್ತಾರೋ ನನಗೆ ಮಾಹಿತಿ ಇಲ್ಲ. ಆದರೆ ಸಭೆಯಲ್ಲಿ ನಮ್ಮ ತಾಯಿ ಹೆಸರು ಪ್ರಸ್ತಾಪ ಮಾಡಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. ಅವರಿಗೆ ಕೊಟ್ಟರೆ ಪಕ್ಷದ ಗೆಲುವಿಗೆ ಸಹಕಾರಿಯಾಗುವ ಸಾಧ್ಯತೆ ಇದೆ ಎಂದರು.

ಅಮ್ಮನೋ - ಮಗನೊ  : ವಿಧಾನ ಪರಿಷತ್‌ ಚುನಾವಣೆ (Karnataka MLC Election) ಘೋಷಣೆ ಬೆನ್ನಲ್ಲೇ ಜೆಡಿಎಸ್‌ (JDS) ಪಾಳಯದೊಳಗೆ ಅಭ್ಯರ್ಥಿ ಆಯ್ಕೆ ಚಟುವಟಿಕೆಗಳು ಬಿರುಸುಗೊಂಡಿದೆ. ಹಾಸನ (Hassan) ಜಿಲ್ಲೆಯ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಶುಕ್ರವಾರ ಸಂಸದ ಪ್ರಜ್ವಲ್‌ ರೇವಣ್ಣ (Prajwal revanna) ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಭವಾನಿ ರೇವಣ್ಣ (Bhavani Revanna) ಅವರ ಹೆಸರೇ ಗಟ್ಟಿ ಧ್ವನಿಯಲ್ಲಿ ಕೇಳಿಬಂದಿದೆ. ಆದರೆ, ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ (HD Devegowda) ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರಂಭದಿಂದ ಕೊನೆವರೆಗೂ ವಿಧಾನ ಪರಿಷತ್‌ ಅಭ್ಯರ್ಥಿಯಾಗಿ ಭವಾನಿ ರೇವಣ್ಣ ಹಾಗೂ ಸೂರಜ್‌ ರೇವಣ್ಣ (Suraj Revanna) ಅವರ ಹೆಸರು ಬಿಟ್ಟರೆ ಬೇರಾವ ಹೆಸರುಗಳೂ ಕೇಳಿಬರಲಿಲ್ಲ. ಮೊದಲಿಗೆ ಬೇಲೂರು ಶಾಸಕರಾದ ಕೆ.ಎಸ್‌.ಲಿಂಗೇಶ್‌ ಭವಾನಿ ರೇವಣ್ಣ ಹೆಸರು ಸೂಚಿಸಿದ್ದು, ನಾನು ಶಾಸಕನಾಗುವುದಕ್ಕೂ ಮುನ್ನ ಜಿಲ್ಲಾ ಜೆಡಿಎಸ್‌ (JDS) ಅಧ್ಯಕ್ಷನಾಗಿದ್ದೆ. ಹಾಗಾಗಿ ತಳಮಟ್ಟದಿಂದಲೂ ನಮ್ಮ ಕಾರ್ಯಕರ್ತರ ಮನದಾಳದ ಮಾತು ಏನು ಎನ್ನುವುದು ಗೊತ್ತಿದೆ. ಗ್ರಾಪಂಗಳಲ್ಲಿ ಶೇ.75 ರಷ್ಟು ಜೆಡಿಎಸ್‌ನವರೇ ಇದ್ದಾರೆ. ಭವಾನಿ ರೇವಣ್ಣ ಈಗಾಗಲೇ ಜಿಪಂ ಸದಸ್ಯರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಾಕಷ್ಟುಅನುಭವ ಹೊಂದಿದ್ದಾರೆ. ಹಾಗಾಗಿ ಅವರನ್ನು ಈ ಬಾರಿಯ ಪರಿಷತ್‌ ಚುನಾವಣೆಗೆ ಅಭ್ಯರ್ಥಿಯನ್ನಾಗಿಸುವುದು ಸೂಕ್ತ ಎಂದರು. ಶ್ರವಣ ಬೆಳಗೊಳ ಶಾಸಕ ಸಿ.ಎನ್‌.ಬಾಲಕೃಷ್ಣ ಕೂಡ ಇದಕ್ಕೆ ಸಹಮತ ಸೂಚಿಸಿದರು.

ಚರ್ಚಿಸಿ ನಂತರ ತೀರ್ಮಾನ-ದೇವೇಗೌಡ

ಜೆಡಿಎಸ್‌ (JDS) ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಜೆಡಿಎಸ್‌ ವರಿಷ್ಠ ದೇವೇಗೌಡ  (HD Devegowda), ಜೆಡಿಎಸ್‌ ಕುಟುಂಬಕ್ಕೆ ಸೀಮಿತವಾದ ಪಕ್ಷವಲ್ಲ. ಪಕ್ಷಕ್ಕಾಗಿ ದುಡಿದ ನೂರಾರು ಕಾರ್ಯಕರ್ತರಿದ್ದಾರೆ. ಅವರನ್ನೆಲ್ಲಾ ಭೇಟಿ ಮಾಡಿ ಮಾತನಾಡಿದ ನಂತರವೇ ಹಾಸನದಿಂದ ಜೆಡಿಎಸ್‌ನಿಂದ ವಿಧಾನ ಪರಿಷತ್‌ ಅಭ್ಯರ್ಥಿ ಯಾರೆಂದು ತೀರ್ಮಾನ ಮಾಡುತ್ತೇವೆ. ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು, ಕಾರ್ಯಕರ್ತರು ಭವಾನಿ ರೇವಣ್ಣ ಹಾಗೂ ಸೂರಜ್‌ ರೇವಣ್ಣ ಹೆಸರನ್ನು ಸೂಚಿಸಿದ್ದಾರೆ. ಆದರೆ ಪಕ್ಷಕ್ಕಾಗಿ ದುಡಿದಿರುವ ಸಾವಿರಾರು ಕಾರ್ಯಕರ್ತರಿದ್ದಾರೆ. ಹಾಗಾಗಿ ನಾನು ತಾಲೂಕು ಮಟ್ಟಕ್ಕೆ ಹೋಗಿ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಸದಸ್ಯರನ್ನು ಭೇಟಿ ಮಾಡಿ ತಳಮಟ್ಟದಿಂದ ಅಭಿಪ್ರಾಯ ಸಂಗ್ರಹಿಸಬೇಕು. ಆ ನಂತರವೇ ನಮ್ಮ ಪಕ್ಷದ ಅಭ್ಯರ್ಥಿ ಯಾರೆಂದು ಆಯ್ಕೆ ಮಾಡಲಾಗುವುದು.ಅಂತಿಮವಾಗಿ ನಮಗೆ ಯಾವುದೇ ಕೆಟ್ಟ ಹೆಸರು ಬರಬಾರದು ಎಂದರು.

ಇನ್ನೂ ಕೆಲ ಜಿಪಂ, ತಾಪಂ ಸದಸ್ಯರು ಡಿಸಿಸಿ ಬ್ಯಾಂಕ್‌  (DCC Bank)ನಿರ್ದೇಶಕರಾಗಿರುವ ಸೂರಜ್‌ ರೇವಣ್ಣ ಅವರ ಹೆಸರನ್ನು ಸೂಚಿಸಿದರು. ಆದರೆ, ಬಹುತೇಕ ಹಿರಿಯ ನಾಯಕರಾರೂ ಸೂರಜ್‌ ಬಗ್ಗೆ ಅಷ್ಟುಒಲವು ತೋರಲಿಲ್ಲ. ಭವಾನಿ ರೇವಣ್ಣ ಹೆಸರೇ ಹೆಚ್ಚಾಗಿ ಸೂಚಿಸಲ್ಪಟ್ಟಿತಾದರೂ ಜೆಡಿಎಸ್‌ ವರಿಷ್ಠರಾದ ದೇವೇಗೌಡರು ಮಾತ್ರ ಇನ್ನೂ ಈ ಹೆಸರನ್ನು ಅಂತಿಮಗೊಳಿಸಿಲ್ಲ.

ಸಭೆಯಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ (HD Revanna), ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ಎ.ಟಿ.ರಾಮಸ್ವಾಮಿ ಹಾಗೂ ಇತರರು ಪಾಲ್ಗೊಂಡಿದ್ದರು.

ಶಿವಲಿಂಗೇಗೌಡ ಕಿಡಿ :  ಪ್ರಜ್ವಲ್‌ ರೇವಣ್ಣ ಮನೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಆರು ಜೆಡಿಎಸ್‌ ಶಾಸಕರು, ಜಿಪಂ ಮತ್ತು ತಾಪಂ ಮಾಜಿ ಸದಸ್ಯರು ಭಾಗಿಯಾಗಿದ್ದರು. ಸಭೆಯಲ್ಲಿ ಮುಖ್ಯ ವಿಷಯ ಚರ್ಚೆಗೆ ಬರುವುದಕ್ಕೂ ಮುನ್ನ ತಮಗೆ ಸಭೆ ಬಗ್ಗೆ ಸರಿಯಾಗಿ ಮಾಹಿತಿ ಕೊಡದ ಜೆಡಿಎಸ್‌ ರಾಜ್ಯಾಧ್ಯಕ್ಷರ ಮೇಲೆ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರು ಕೆಂಡಾ ಮಂಡಲರಾಗಿ ಕೂಗಾಡಿದರು. ಅವರನ್ನು ಸಮಾಧಾನಪರಿಸಲು ಯತ್ನಿಸಿದ ಶ್ರವಣ ಬೆಳಗೊಳ ಶಾಸಕರನ್ನೂ ಗದರಿಸಿ ಸುಮ್ಮನಾಗಿಸಿದರು. ನಂತರ ದೇವೇಗೌಡರು ಸಭೆಗೆ ಆಗಮಿಸುತ್ತಲೇ ಎಲ್ಲವೂ ಶಾಂತವಾಗಿ ಸಭೆ ಸೇರಿದ ಮುಖ್ಯ ಉದ್ದೇಶದ ಬಗ್ಗೆ ಚರ್ಚೆಗಳು ಆರಂಭವಾದವು.

Follow Us:
Download App:
  • android
  • ios