ಕಾಂಗ್ರೆಸ್‌-ಬಿಜೆಪಿಯಿಂದ ಜೆಡಿಎಸ್‌ಗೆ ಬಂದಿರುವ 22 ಜನರ ಪೈಕಿ ಬಹಳಷ್ಟು ಜನರಿಗೆ ಗೆಲ್ಲುವ ಅವಕಾಶವಿದೆ. ಹೀಗಾಗಿ ಈ ಬಾರಿ ರಾಜಕೀಯದಲ್ಲಿ ಯಾರೂ ಕೂಡ ಜೆಡಿಎಸ್‌ ಪಕ್ಷವನ್ನು ಕಡೆಗಣಿಸುವಂತಿಲ್ಲ ಎಂಬ ಸಂದೇಶ ಹೋಗಲಿದೆ: ಶರವಣ 

ಬೆಂಗಳೂರು(ಮೇ.11):  ಯಾವ ಸಮೀಕ್ಷೆಗಳು ಏನೇ ಹೇಳಿದರೂ ನಾವು ದೊಡ್ಡ ಸಮೀಕ್ಷೆ ಮಾಡಿದ್ದೇವೆ. ಈ ಬಾರಿ ಜೆಡಿಎಸ್‌ ಪಕ್ಷವು ಹೆಚ್ಚು ಸ್ಥಾನ ಪಡೆದು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಜೆಡಿಎಸ್‌ ವಕ್ತಾರ ಹಾಗೂ ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ಸಂಜೆ ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಮತದಾನದ ವೈಖರಿ ನೋಡಿದಾಗ ಜೆಡಿಎಸ್‌ ಪಕ್ಷ ರಾಜ್ಯದ ರಾಜಕಾರಣದ ಚಿತ್ರಣವನ್ನು ರೂಪಿಸಲಿದೆ. ನಮ್ಮ ಸಮೀಕ್ಷೆಯಲ್ಲಿ ಜನರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳನ್ನು ಗುಲಾಮಿ ಪಕ್ಷಗಳು ಎಂದು ತಿಳಿದುಕೊಂಡಿದ್ದಾರೆ. ಈ ಹೈಕಮಾಂಡ್‌ ಸಂಸ್ಕೃತಿಯನ್ನು ಜನ ತಿರಸ್ಕರಿಸಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಮತದಾನದ ಪ್ರಮಾಣ ನೋಡಿದಾಗ ಜೆಡಿಎಸ್‌ ಇನ್ನೂ ಶಕ್ತಿಶಾಲಿಯಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸವಿದೆ ಎಂದು ಹೇಳಿದರು.

Karnataka Election Exit Poll ಕಾಂಗ್ರೆಸ್‌ಗೆ ಭರ್ಜರಿ ಗೆಲುವಿನ ಭವಿಷ್ಯ ನುಡಿದ ಚಾಣಾಕ್ಯ,ಇಂಡಿಯಾ ಟುಡೆ!

ಈ ಸಮೀಕ್ಷೆಗಳು ವೈಜ್ಞಾನಿಕವಾಗಿಲ್ಲ. 2004ರಲ್ಲಿ ಜೆಡಿಎಸ್‌ ಪಕ್ಷವನ್ನು ಇತರೆಯಲ್ಲಿ ಗುರುತಿಸಿ ಕೇವಲ 8 ಸ್ಥಾನ ಗೆಲ್ಲಲಿದೆ ಎಂದು ಹೇಳಲಾಗಿತ್ತು. ಆದರೆ, ಆಗ ಜೆಡಿಎಸ್‌ 58 ಸ್ಥಾನ ಗೆದ್ದಿತ್ತು. 30-40 ಸಾವಿರ ಜನರ ಮಾದರಿ ತೆಗೆದು ಸಮೀಕ್ಷೆ ಮಾಡಿ ತೀರ್ಪು ನೀಡುವುದು ಎಷ್ಟು ಸರಿ? ಸಮೀಕ್ಷೆಗಳು ಎಷ್ಟೇ ಹತ್ತಿರ ಇದ್ದರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ, ಒಂದೊಂದು ಸಮೀಕ್ಷೆ ಬೇರೆಯೇ ಇದೆ. ವೈಜ್ಞಾನಿಕ ಸಮೀಕ್ಷೆಗಳು ಎಂದಾಗ ಒಂದೇ ಆಗಿರಬೇಕು. ಆದರೆ, ಈ ಸಮೀಕ್ಷೆಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎಂದು ಅವರು ಪರೋಕ್ಷವಾಗಿ ಸಮೀಕ್ಷೆಗಳನ್ನು ನಿರಾಕರಿಸಿದರು.

ಕಾಂಗ್ರೆಸ್‌-ಬಿಜೆಪಿಯಿಂದ ಜೆಡಿಎಸ್‌ಗೆ ಬಂದಿರುವ 22 ಜನರ ಪೈಕಿ ಬಹಳಷ್ಟು ಜನರಿಗೆ ಗೆಲ್ಲುವ ಅವಕಾಶವಿದೆ. ಹೀಗಾಗಿ ಈ ಬಾರಿ ರಾಜಕೀಯದಲ್ಲಿ ಯಾರೂ ಕೂಡ ಜೆಡಿಎಸ್‌ ಪಕ್ಷವನ್ನು ಕಡೆಗಣಿಸುವಂತಿಲ್ಲ ಎಂಬ ಸಂದೇಶ ಹೋಗಲಿದೆ ಎಂದು ಶರವಣ ಹೇಳಿದರು.