Asianet Suvarna News Asianet Suvarna News

ದಿನಕೊಂದು ತೀರ್ಮಾನ, ಕ್ಷಣಕೊಂದು ಹೇಳಿಕೆ: ಅತಂತ್ರ ಸ್ಥಿತಿಯಲ್ಲಿ ಜೆಡಿಎಸ್‌ ಘೋಷಿತ ಅಭ್ಯರ್ಥಿಗಳು

ಅತಂತ್ರ ಸ್ಥಿತಿಯಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಕಡೂರು ಹಾಗೂ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಪಕ್ಷದ ಘೋಷಿತ ಅಭ್ಯರ್ಥಿಗಳು. 

JDS Declared Candidates Confused For High Command Decision in Chikkamagaluru grg
Author
First Published Apr 15, 2023, 8:50 AM IST | Last Updated Apr 15, 2023, 9:02 AM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಏ.15):  ಜೆಡಿಎಸ್ ವರಿಷ್ಠರ ದಿನಕೊಂದು ತೀರ್ಮಾನ, ಕ್ಷಣಕೊಂದು ರೀತಿಯ ಹೇಳಿಕೆಗಳು  ಚಿಕ್ಕಮಗಳೂರು ಜಿಲ್ಲೆಯ ಕಡೂರು ಹಾಗೂ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಪಕ್ಷದ ಘೋಷಿತ ಅಭ್ಯರ್ಥಿಗಳನ್ನು ಅತಂತ್ರ ಸ್ಥಿತಿಗೆ ದೂಡಿರುವ ಜೊತೆಗೆ ಕಾರ್ಯಕರ್ತರು ಗೊಂದಲಕ್ಕೆ ಸಿಕ್ಕಿದ್ದಾರೆ.

ಕಡೂರಿನಲ್ಲಿ ನಿಯೋಜಿತ ಅಭ್ಯರ್ಥಿ ಧನಂಜಯ್ ಅತಂತ್ರ : 

ಕಡೂರು ಕ್ಷೇತ್ರಕ್ಕೆ ಬೆಂಗಳೂರು ಮೂಲದ ಉದ್ಯಮಿ ಧನಂಜಯ ಅವರೇ ಅಭ್ಯರ್ಥಿ ಎಂದು ಕಳೆದ ಎರಡು ತಿಂಗಳ ಹಿಂದೆಯೇ ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಪಕ್ಷದ ರಾಜ್ಯಾಧ್ಯಕ್ಷರು ಘೋಷಿಸಿ ಕ್ಷೇತ್ರದಲ್ಲಿ ಚುನಾವಣೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆಯನ್ನೂ ನೀಡಿದ್ದರು. ಅಂದಿನಿಂದ ಕಡೂರಿನಲ್ಲೇ ಬೀಡುಬಿಟ್ಟಿದ್ದ ಧನಂಜಯ್ ದೊಡ್ಡ ದೊಡ್ಡ ಕಟೌಟ್, ಪೋಸ್ಟರ್, ಬ್ಯಾನರ್ಗಳನ್ನು ಹಾಕಿ, ಸಭೆ, ಸಮಾರಂಭ, ಔತಣ ಕೂಟಗಳನ್ನೂ ಏರ್ಪಡಿಸಿದ್ದರು. ಇಡೀ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಜನತೆಗೆ ತಮ್ಮನ್ನು ಪರಿಚಯಿಸಿಕೊಂಡಿದ್ದರು. ಮೊನ್ನೆಯಷ್ಟೇ ಕಡೂರಿಗೆ ಆಗಮಿಸಿದ್ದ ಪಂಚರತ್ನ ರಥಯಾತ್ರೆಯನ್ನು ಮುಂದೆ ನಿಂತು ಯಶಸ್ವಿಗೊಳಿಸಿದ್ದರು. ಇದೀಗ ಇದ್ದಕ್ಕಿದ್ದಂತೆ ವೈಎಸ್ವಿ ದತ್ತ ಅವರ ನಿವಾಸಕ್ಕೇ ಆಗಮಿಸಿ ಮರಳಿ ಪಕ್ಷಕ್ಕೆ ಬರಮಾಡಿಕೊಂಡಿರುವ ಜೆಡಿಎಸ್ ನಾಯಕರು ನೀವೇ ಅಧಿಕೃತ ಅಭ್ಯರ್ಥಿ ಎಂದು ಭರವಸೆ ನೀಡಿ ಹೋಗಿದ್ದಾರೆ. 

ನಾನು, ಭವಾನಿ ಹಾಸನ ಬಿಟ್ಟು ಎಲ್ಲೂ ಹೋಗಲ್ಲ: ಎಚ್‌.ಡಿ.ರೇವಣ್ಣ

ಈ ಕುರಿತು ಧನಂಜಯ ಅವರಿಗೆ ಯಾವುದೇ ಸುಳಿವು ನೀಡದಿರುವುದು ಈಗ ಅವರನ್ನು ರೊಚ್ಚಿಗೆಬ್ಬಿಸಿದೆ. ಈಗಾಗಲೇ ಲಕ್ಷಾಂತರ ರೂ. ಖರ್ಚು ಮಾಡಿ ಚುನಾವಣೆಗೆ ಸಿದ್ಧತೆ ನಡೆಸಿಕೊಂಡಿದ್ದ ಧನಂಜಯ ಅವರಿಗೆ ಈ ನಡೆ ಸಹಜವಾಗಿಯೇ ನೋವು ತಂದಿದೆ. ಅದನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿರುವ ಅವರು ತಾವೇ ಅಧಿಕೃತ ಅಭ್ಯರ್ಥಿ. ಇದನ್ನೂ ಮೀರಿ ಪಕ್ಷ ದತ್ತ ಅವರಿಗೆ ಟಿಕೆಟ್ ನೀಡಿದಲ್ಲಿ ಜನತೆ ಅವರ ಠೇವಣಿ ಕಳೆಯುತ್ತಾರೆ ಎಂದು ಗುಡುಗಿದ್ದಾರೆ.

ಇದು ಧನಂಜಯ ಅವರು ಎದುರಿಸಬೇಕಾದ ಅತಂತ್ರ ಸ್ಥಿತಿಯಾದರೆ, ವರಿಷ್ಠರ ದ್ವಂದ್ವ ತೀರ್ಮಾನಗಳಿಂದಾಗಿ ವೈಎಸ್ವಿ ದತ್ತ ಅವರಿಗೂ ನೆಮ್ಮದಿ ಇಲ್ಲದಂತಾಗಿದೆ. ಮರಳಿ ಗೂಡಿಗೆ ಸೇರಿದ್ದೇನೆ ಎಂದು ಸಮಾಧಾನ ಪಟ್ಟುಕೊಳ್ಳುವ ವೇಳೆಗೆ ಟಿಕೆಟ್ ವಿಚಾರದಲ್ಲಿ ಧನಂಜಯ ಅವರು ಅಪಸ್ವರ ಎತ್ತಿರುವುದು ದತ್ತ ಅವರನ್ನು ಚಿಂತೆಗೀಡುಮಾಡಿದೆ. ಅಲ್ಲದೆ ಈ ಎಲ್ಲಾ ಬೆಳವಣಿಗೆಗಳನ್ನು ಮತದಾರರೂ ಸೂಕ್ಷ್ಮವಾಗಿ ಗಮನಿಸುತ್ತಿರುವುದರಿಂದ ಟಿಕೆಟ್ ಸಿಕ್ಕರೂ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಎನ್ನುವ ಭಯ ದತ್ತ ಹಾಗೂ ಬೆಂಬಲಿಗರನ್ನು ಕಾಡುತ್ತಿರುವುದು ಸುಳ್ಳಲ್ಲ. 

ಹಳೆಗಂಡನ ಪಾದವೇ ಗತಿ ಮರಳಿ ಜೆಡಿಎಸ್‌ಗೆ ವೈಎಸ್‌ವಿ ದತ್ತಾ, ಏ.18 ನಾಮಪತ್ರ ಸಲ್ಲಿಕೆ

ಕುಮಾರಸ್ವಾಮಿ ಆಗಮನದಿಂದ ಘೋಷಿತ ಅಭ್ಯರ್ಥಿ ಅತಂತ್ರ 

ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್ ಸ್ಥಿತಿ ಕಡೂರು ಕ್ಷೇತ್ರಕ್ಕಿಂತ ಭಿನ್ನವಾಗೇನೂ ಇಲ್ಲ. ಟಿಕೆಟ್ ಸಿಗದ ಕಾರಣಕ್ಕೆ ಬಿಜೆಪಿ ತೊರೆದಿರುವ ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಜೆಡಿಎಸ್ ಕದ ತಟ್ಟಿರುವುದರಿಂದ ಇಲ್ಲಿಯೂ ಘೋಷಿತ ಅಭ್ಯರ್ಥಿ ಬಿ.ಬಿ.ನಿಂಗಯ್ಯ ಅತಂತ್ರರಾಗಿದ್ದಾರೆ. ನಿನ್ನೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕುಮಾರಸ್ವಾಮಿ ನೇರವಾಗಿ ಬೆಂಗಳೂರಿನ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ಧಾವಿಸಿದ್ದಾರೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಜೊತೆಗೆ ಮೂಡಿಗೆರೆ ಕ್ಷೇತ್ರಕ್ಕೆ ಟಿಕೆಟ್ ನೀಡುವುದು ಖಚಿತ ಎಂದು ಹೇಳಲಾಗುತ್ತಿದೆ.ಈ ಕಾರಣಕ್ಕೆ ಹೊಳೆನರಸೀಪುರ ಹಾಗೂ ಬೆಂಗಳೂರಿಗೆ ಧಾವಿಸಿದ್ದ ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಬಾರದು. ಬಿ.ಬಿ.ನಿಂಗಯ್ಯ ಅವರನ್ನು ಕಡೆಗಣಿಸಬಾರದು ಎಂದು ವರಿಷ್ಠರನ್ನು ಒತ್ತಾಯಿಸಿದ್ದಾರೆ. ಇದನ್ನೂ ಮೀರಿ ಎಂ.ಪಿ.ಕುಮಾರಸ್ವಾಮಿ ಅವರಿಗೆ ಮಣೆ ಹಾಕಿದ್ದೇ ಆದಲ್ಲಿ ಮೂಡಿಗೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios