ಕೊಡಗು: ವಿರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಜೆಡಿಎಸ್ ನಾಮಪತ್ರ ವಾಪಸ್..?
ಸತತವಾಗಿ ನಾಲ್ಕು ಬಾರಿಯಿಂದ ಗೆಲುವು ಸಾಧಿಸಿರುವ ಬಿಜೆಪಿಯನ್ನು ಮಣಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ಸಿಗೆ ಜೆಡಿಎಸ್ ಬೆಂಬಲವಾಗಿ ನಿಲ್ಲುವ ಮುನ್ಸೂಚನೆ ಸಿಕ್ಕಿದೆ. ಅರ್ಥಾತ್ ಜೆಡಿಎಸ್ ಅಭ್ಯರ್ಥಿಯಿದ ನಾಮಪತ್ರ ಹಿಂತೆಗೆಸುವ ಸಾಧ್ಯತೆ ಇದೆ. ಇಲ್ಲವೆ ಪಕ್ಷದ ಅಭ್ಯರ್ಥಿ ಫೀಲ್ಡಿಗಿಳಿಯದೆ ಸುಮ್ಮನಿರುವಂತೆ ಸೂಚಿಸುವ ಸಾಧ್ಯತೆ ಇದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಏ.22): ಕೊಡಗಿನ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದ್ದು ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಇಲ್ಲಿ ಕೊಡವ ಮತದಾರರನ್ನು ಬಿಟ್ಟರೆ ಅತೀ ಹೆಚ್ಚು ಮತದಾರರಿರುವುದು ಅಲ್ಪಸಂಖ್ಯಾತರ ಮತಗಳು. 45 ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತರ ಮತಗಳಿದ್ದು, ಇವುಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಕೂಡ ಕ್ಷೇತ್ರದಲ್ಲಿ ತಾನೂ ಗೆಲ್ಲಬೇಕೆಂಬ ಹಂಬಲದೊಂದಿಗೆ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯನ್ನೇ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.
ಆದರೆ ಸತತವಾಗಿ ನಾಲ್ಕು ಬಾರಿಯಿಂದ ಗೆಲುವು ಸಾಧಿಸಿರುವ ಬಿಜೆಪಿಯನ್ನು ಮಣಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ಸಿಗೆ ಜೆಡಿಎಸ್ ಬೆಂಬಲವಾಗಿ ನಿಲ್ಲುವ ಮುನ್ಸೂಚನೆ ಸಿಕ್ಕಿದೆ. ಅರ್ಥಾತ್ ಜೆಡಿಎಸ್ ಅಭ್ಯರ್ಥಿಯಿದ ನಾಮಪತ್ರ ಹಿಂತೆಗೆಸುವ ಸಾಧ್ಯತೆ ಇದೆ. ಇಲ್ಲವೆ ಪಕ್ಷದ ಅಭ್ಯರ್ಥಿ ಫೀಲ್ಡಿಗಿಳಿಯದೆ ಸುಮ್ಮನಿರುವಂತೆ ಸೂಚಿಸುವ ಸಾಧ್ಯತೆ ಇದೆ. ಇದು ಜೆಡಿಎಸ್ ಪಕ್ಷದ ಬಲ್ಲ ಮೂಲಗಳಿಂದಲೇ ಸುವರ್ಣ ನ್ಯೂಸ್‌ಗೆ ಸಿಕ್ಕಿರುವ ಪಕ್ಕಾ ಮಾಹಿತಿ.
ಹೌದು ನಾಮಪತ್ರ ವಾಪಸ್ ಪಡೆಯುವುದಕ್ಕೆ ಇನ್ನೊಂದು ದಿನವಷ್ಟೇ ಬಾಕಿ ಇದ್ದು ವಿರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಆಲಿ ನಾಮಪತ್ರ ವಾಪಸ್ ಪಡೆಯುವ ಎಲ್ಲಾ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ಕೊಡವ ಮತದಾರರೇ ಹೆಚ್ಚಾಗಿರುವ ವಿರಾಜಪೇಟೆ ಕ್ಷೇತ್ರದಲ್ಲಿ ಕಳೆದ ನಾಲ್ಕು ಬಾರಿಯಿಂದ ಅರೆಗೌಡ ಸಮುದಾಯದ ಕೆ.ಜಿ. ಬೋಪಯ್ಯ ಅವರನ್ನು ಗೆಲ್ಲಿಸಲಾಗಿದೆ. ಆದರೆ ಈ ಬಾರಿ ಏನಾದರೂ ಸರಿ ಕಾಂಗ್ರೆಸ್ ಗೆಲ್ಲಬೇಕೆಂಬ ತಂತ್ರಗಳನ್ನು ಎ.ಎಸ್. ಪೊನ್ನಣ್ಣ ಅವರು ರೂಪಿಸಿದ್ದಾರೆ.
ಕೊಡಗಿನಲ್ಲಿ 1,800 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಮಾಡಿದ್ದೇನೆ: ಅಪ್ಪಚ್ಚು ರಂಜನ್
ದೇವೇಗೌಡರಿಗೆ ಆಪ್ತರಾಗಿದ್ದ ಎ.ಕೆ.ಸುಬ್ಬಯ್ಯ ಅವರ ಪುತ್ರ ಪೊನ್ನಣ್ಣ ಅವರು ಜೆಡಿಎಸ್ ಅಭ್ಯರ್ಥಿಯಾದ ಮನ್ಸೂರ್ ಆಲಿ ಅವರ ನಾಮಪತ್ರವನ್ನು ವಾಪಸ್ ತೆಗೆಸುವಂತೆ ಜೆಡಿಎಸ್ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ ಎನ್ನುವ ಗುಸು ಗುಸು ಕೂಡ ಕೇಳಿ ಬಂದಿದೆ. ಈ ಕುರಿತು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ನೂತನ ಜಿಲ್ಲಾಧ್ಯಕ್ಷ ಜಾಸೀರ್ ಅವರನ್ನು ಕೇಳಿದರೆ ಅಲ್ಪಸಂಖ್ಯಾತರನ್ನು ಗುರುತ್ತಿಸಿ ದೇವೇಗೌಡ್ರು, ಕುಮಾರಣ್ಣ ಟಿಕೆಟ್ ನೀಡಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದಕ್ಕಾಗಿ ಕೆಲಸ ಆರಂಭಿಸಿದ್ದೇವೆ. ನಾಮಪತ್ರ ವಾಪಸ್ ತೆಗೆಯುವ ಯಾವುದೇ ಮಾತಿಲ್ಲ. ಒಂದು ವೇಳೆ ನಾಮಪತ್ರ ವಾಪಸ್ ತೆಗೆದುಕೊಳ್ಳಲು ಸೂಚನೆ ಸಿಕ್ಕರೆ, ಪ್ರತಿ ಗ್ರಾಮಕ್ಕೆ ತೆರಳಿ ನಮ್ಮ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅದನ್ನು ಹೈಕಮಾಂಡಿಗೆ ಕಳುಹಿಸಿ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಒಂದು ವೇಳೆ ಉಮೇದುವಾರಿಕೆ ತೆಗೆದುಕೊಳ್ಳುವ ಸೂಚನೆ ಇಲ್ಲದಿದ್ದರೆ ಜಿಲ್ಲಾ ಜೆಡಿಎಸ್ ಮುಖಂಡರು ಹೈಕಮಾಂಡ್‌ನ ಮೇಲೆ ಏಕೆ ಈ ಜವಾಬ್ದಾರಿ ಹಾಕುತ್ತಿದ್ದರು ಎನ್ನುವ ಪ್ರಶ್ನೆ ಉದ್ಭವಿಸಿದೆ. ಈ ವಿಷಯವನ್ನು ಸ್ವತಃ ಅಭ್ಯರ್ಥಿಯಾಗಿರುವ ನಾಪೋಕ್ಲಿನವರಾದ ಮನ್ಸೂರ್ ಆಲಿ ಅವರನ್ನು ಕೇಳಿದರೆ ಕಳೆದ 20 ವರ್ಷಗಳಿಂದಲೂ ಮುಸಲ್ಮಾನರು ಕಾಂಗ್ರೆಸಿಗೆ ಮತ ಹಾಕಿದ್ದಾರೆ. ಆದರೂ ಬಿಜೆಪಿಯೇ ಕ್ಷೇತ್ರದಲ್ಲಿ ಗೆದ್ದಿದೆ. ಜೆಡಿಎಸ್ ನಿಂದ ಅಲ್ಪಸಂಖ್ಯಾತರು ಸ್ಪರ್ಧಿಸಿದರೆ ಕಾಂಗ್ರೆಸ್ ಮತಗಳು ವಿಭಜನೆ ಆಗಿ, ಬಿಜೆಪಿ ಗೆಲುವಿಗೆ ಅನುಕೂಲ ಆಗುತ್ತದೆ ಎನ್ನುವುದು ಸುಳ್ಳು. ಇದು ಜೆಡಿಎಸ್ ಮತದಾರರನ್ನು ಗೊಂದಲಕ್ಕೆ ದೂಡುವ ಹುನ್ನಾರ ಎಂದಿದ್ದಾರೆ.
ಕೊಡಗು: ಕಾಂಗ್ರೆಸ್ ಅಭ್ಯರ್ಥಿ ಮಂತರ್‌ಗೆ ಜಿವಿಜಯ ಮುನಿಸಿನ ಬಿಸಿ, ಮತಗಳ ವಿಭಜನೆ ಆಗುವ ಆತಂಕ..!
ಒಂದು ವೇಳೆ ನಾಮಪತ್ರವನ್ನು ವಾಪಸ್ ಪಡೆಯುವಂತೆ ಸೂಚಿಸಿದರೆ ಅದು ತಪ್ಪು ಸಂದೇಶ ನೀಡಿದಂತೆ ಆಗುತ್ತದೆ. ನಾನು ನನ್ನ ಮತದಾರರಿಂದ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಇಲ್ಲಿ ಸ್ವತಃ ಅಭ್ಯರ್ಥಿ ಹಾಗೂ ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಜಿಲ್ಲಾಧ್ಯಕ್ಷ ಇಬ್ಬರೂ ಒಂದೇ ಉತ್ತರ ನೀಡಿರುವುದನ್ನು ನೋಡಿದರೆ ರಾಜ್ಯ ಮುಖಂಡರ ನಿರ್ದೇಶನದ ಮೇರೆಗೆ ಉಮೇದುವಾರಿಕೆಯನ್ನು ವಾಪಸ್ ಪಡೆಯುವುದು ಖಚಿತ ಎನ್ನಲಾಗುತ್ತಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.