ಕೊಡಗು: ಕಾಂಗ್ರೆಸ್ ಅಭ್ಯರ್ಥಿ ಮಂತರ್‌ಗೆ ಜಿವಿಜಯ ಮುನಿಸಿನ ಬಿಸಿ, ಮತಗಳ ವಿಭಜನೆ ಆಗುವ ಆತಂಕ..!

ಒಂದು ವೇಳೆ ಜಿವಿಜಯ ಉಲ್ಟಾ ಹೊಡೆದಿದ್ದೇ ಆದಲ್ಲಿ, ಕಾಂಗ್ರೆಸ್‌ಗೆ ಇದು ಪೆಟ್ಟು ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ ಟಿಕೆಟ್ ಕೈತಪ್ಪಿರುವುದರಿಂದ ತೀವ್ರ ಅಸಮಾಧಾನಗೊಂಡಿರುವ ಜಿವಿಜಯ ಅವರ ಮುನಿಸು ಕಾಂಗ್ರೆಸ್ ಅಭ್ಯರ್ಥಿ ಮಂತರ್ ಗೌಡ ಅವರಿಗೆ ಸಂಕಷ್ಟ ತಂದೊಡ್ಡುತ್ತಾ ಎನ್ನುವ ಅನುಮಾನ ಮೂಡಿದೆ. 

Fear of Division of Votes in Chikkamagaluru grg

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ, ಕೊಡಗು

ಕೊಡಗು(ಏ.20):  ಎರಡೂವರೆ ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗಿನಲ್ಲಿ ತಮ್ಮ ಕೋಟೆ ಸ್ಥಾಪಿಸಬೇಕೆಂಬ ಛಲಕ್ಕೆ ಬಿದ್ದಿರುವ ಕಾಂಗ್ರೆಸ್ ಮೊದಲೆರಡು ಪಟ್ಟಿಯಲ್ಲೇ ಎರಡು ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಿಸಿತ್ತು. ಆದರೆ ಟಿಕೆಟ್ ಘೋಷಣೆ ಬೆನ್ನಲ್ಲೇ ಮಡಿಕೇರಿ ಕ್ಷೇತ್ರದಲ್ಲಿ ಟಿಕೆಟ್ ಕೈತಪ್ಪಿದ ಆಕಾಂಕ್ಷಿಗಳಲ್ಲಿ ಶುರುವಾದ ಮುನಿಸು ಇಂದಿಗೂ ತಣ್ಣಗಾಗಿಲ್ಲ. 

ಟಿಕೆಟ್ ಕೈತಪ್ಪಿದ್ದರಿಂದ ಬಂಡಾಯ ಸಾರಿದ್ದ ಹರಪಳ್ಳಿ ರವೀಂದ್ರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ ಕೆಪಿಸಿಸಿ ಅವರ ಮುನಿಸನ್ನು ತಣ್ಣಗಾಗಿಸಿ ಅವರ ಕೈಯಲ್ಲೇ ಮಂತರ್ ಗೌಡ ಅವರಿಗೆ ಬಿ. ಫಾರಂ ಕೊಟ್ಟು ಕಳುಹಿಸಿತ್ತು. ಆದರೆ ಜೆಡಿಎಸ್ ತೊರೆದು ವರ್ಷದ ಹಿಂದೆಯೇ ಕಾಂಗ್ರೆಸ್ ಸೇರಿದ್ದ ಬಿ.ಎ. ಜಿವಿಜಯ ಅವರ ಮುನಿಸು ಮಾತ್ರ ಇಂದಿಗೂ ತಣ್ಣಗಾಗಿಲ್ಲ. ಅದು ಎಷ್ಟರ ಮಟ್ಟಿಗೆ ಎಂದರೆ ಮಡಿಕೇರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗಮಿಸಿದರೂ ಜಿವಿಜಯ ಅತ್ತ ತಿರುಗಿ ನೋಡಿಲ್ಲ. ಇತ್ತ ಯಾವುದೇ ಪ್ರಚಾರಕ್ಕೂ ಭಾಗವಹಿಸದೆ ಸಂಪೂರ್ಣ ಮೌನಿಯಾಗಿಯೇ ಇದ್ದಾರೆ. 

KODAGU: 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಒಗ್ಗೂಡಿಸಿ ಶಾಸಕ ಬೋಪಯ್ಯ ವಿರುದ್ಧ ಪೊನ್ನಣ್ಣ ಶಕ್ತಿ ಪ್ರದರ್ಶನ!

ಈ ಮೌನದ ಹಿಂದೆ ಏನು ಮರ್ಮ ಅಡಗಿದೆಯೋ ಗೊತ್ತಿಲ್ಲ. ತಮ್ಮ ಮುನಿಸನ್ನು ಬಹಿರಂಗವಾಗಿಯೂ ವ್ಯಕ್ತಪಡಿಸಿದೆ ಇರುವ ಜಿವಿಜಯ ಮಾಧ್ಯಮಗಳ ಪ್ರಶ್ನೆಗಳಿಗೂ ಪ್ರತಿಕ್ರಿಯಿಸದೆ ಸೈಲೆಂಟ್ ಆಗಿಯೇ ಇದ್ದಾರೆ. ಅವರ ಈ ನಡೆ ಒಕ್ಕಲಿಗ ಸಮುದಾಯದವರಾಗಿರುವ ಎರಡು ಬಾರಿ ಶಾಸಕರಾಗಿದ್ದ, ಮಾಜಿ ಸಚಿವರಾಗಿರುವ ಜಿವಿಜಯ ಅವರ ಮತಗಳು ಕಾಂಗ್ರೆಸ್ ನಿಂದ ಕೈತಪ್ಪುತ್ತವೆಯೇ ಎನ್ನುವ ಅನುಮಾನ ಮೂಡಿಸಿದೆ. ಜಿವಿಜಯ ಅವರದೇ ಆದ ಐದಾರು ಸಾವಿರ ಮತಗಳನ್ನು ಹೊಂದಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ಹೆಚ್ಚಿದ್ದು ಅವರನ್ನೇ ನಂಬಿಕೊಂಡಿರುವ ಮಂತರ್ ಗೌಡಗೆ ಜಿವಿಜಯ ಅವರ ಈ ಮೌನ ಆತಂಕ ತಂದೊಡ್ಡಿದೆ. ಜಿವಿಜಯ ಸಮಾವೇಶಕ್ಕೆ ಹಾಜರಾಗದಿರುವುದನ್ನು ಹೆಚ್ಚು ಪ್ರಸ್ತಾಪಿಸದ ಡಿ.ಕೆ.ಶಿವಕುಮಾರ್ ನಾನು ಇಲ್ಲಿಂದಲೇ ಅವರಿಗೆ ನಮಸ್ಕರಿಸುತ್ತೇನೆ ಎಂದಿದ್ದರು. 

ಇದು ನೀವು ಅಲ್ಲಿಯೇ ಇರಿ ಎನ್ನುವ ಅರ್ಥವೋ, ಇಲ್ಲ ಅಭ್ಯರ್ಥಿ ಮಂತರ್ ಗೌಡಗೆ ನಿಮ್ಮ ಸಹಾಯ ಇರಲಿ ಎನ್ನುವ ಕೋರಿಕೆಯೋ ಗೊತ್ತಿಲ್ಲ. ಇನ್ನು ಮಂತರ್ ಗೌಡ ನಾಮಪತ್ರ ಸಲ್ಲಿಸುವಾಗಲೂ ಜಿವಿಜಯ ಅತ್ತ ತಲೆ ಹಾಕಿರಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಮಂತರ್ ಗೌಡ ಅವರಿಗೆ ಯಾವುದೇ ಮುನಿಸಿಲ್ಲ. ಇನ್ನು ಎರಡರಿಂದ ಮೂರು ದಿನ ಸಮಯಾವಕಾಶ ಕೊಡಿ ಎಂದು ಕೇಳಿದ್ದಾರೆ. ಎಲ್ಲವೂ ಸರಿ ಹೋಗಲಿದೆ ಎಂದು ಹೇಳಿದ್ದಾರೆ. 

ಒಂದು ವೇಳೆ ಜಿವಿಜಯ ಉಲ್ಟಾ ಹೊಡೆದಿದ್ದೇ ಆದಲ್ಲಿ, ಕಾಂಗ್ರೆಸ್‌ಗೆ ಇದು ಪೆಟ್ಟು ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ ಟಿಕೆಟ್ ಕೈತಪ್ಪಿರುವುದರಿಂದ ತೀವ್ರ ಅಸಮಾಧಾನಗೊಂಡಿರುವ ಜಿವಿಜಯ ಅವರ ಮುನಿಸು ಕಾಂಗ್ರೆಸ್ ಅಭ್ಯರ್ಥಿ ಮಂತರ್ ಗೌಡ ಅವರಿಗೆ ಸಂಕಷ್ಟ ತಂದೊಡ್ಡುತ್ತಾ ಎನ್ನುವ ಅನುಮಾನ ಮೂಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ರಾಜಕಾರಣಿ ಹಾಗೂ ಕಾಂಗ್ರೆಸ್ ಮುಖಂಡ ಎಂ.ಸಿ. ನಾಣಯ್ಯ ಅವರು ಜಿವಿಜಯ ಅವರು ನನಗೆ ಟಿಕೆಟ್ ಬೇಕು ನೀವೆಲ್ಲಾ ನನಗೆ ಸಪೋರ್ಟ್ ಮಾಡಬೇಕು ಎಂದು ಕೇಳಿದ್ದರು. ನಾನು ಕೂಡ ಆಗಲಿ ನೋಡೋಣ ಎಂದಿದ್ದೆ. ಆದರೆ ಇಂದಿನ ಚುನಾವಣಾ ವ್ಯವಸ್ಥೆಯಲ್ಲಿ ಯುವಕರು ಅನಿವಾರ್ಯವಾಗಿರುವುದರಿಂದ ಈಗ ಮಡಿಕೇರಿ ಕ್ಷೇತ್ರದಲ್ಲಿ ಮಂತರ್ ಗೌಡ ಮತ್ತು ವಿರಾಜಪೇಟೆ ಕ್ಷೇತ್ರದಲ್ಲಿ ಪೊನ್ನಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ. ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸಬೇಕಾಗಿರುವುದು ನಮ್ಮ ಜವಾಬ್ದಾರಿ ಎಂದು ಎಂ. ಸಿ. ನಾಣಯ್ಯ ಹೇಳಿದ್ದಾರೆ.

ಮಡಿಕೇರಿ ಕ್ಷೇತ್ರದಲ್ಲಿ ಜಿದ್ದಾಜಿದ್ದಿ: ಕಾಂಗ್ರೆಸ್-ಬಿಜೆಪಿ ಪಕ್ಷಗಳಿಂದ ಸಾವಿರಾರು ಬೆಂಬಲಿಗರಿಂದ ಶಕ್ತಿ ಪ್ರದರ್ಶನ

ಮತ್ತೊಂದೆಡೆ ಎಸ್ ಡಿಪಿಐ ನಿಂದ ಅಮಿನ್ ಮೊಹಿನ್ಸಿನ್ ಕೂಡ ಕಣದಲ್ಲಿದ್ದು ಮುಸ್ಲಿಂ ಮತಗಳು ವಿಭಜನೆಯಾಗಿ ಕಾಂಗ್ರೆಸ್‌ಗೆ ಮುಳುವಾಗಿ ಬಿಡುತ್ತಾ ಎನ್ನುವಂತಾಗಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios