ಅಕ್ರಮಗಳ ಆಗರವಾಗಿರುವ ಹಾಗೂ ರಾಜ್ಯದ ಜನತೆಗೆ ವಂಚನೆ ಎಸಗಿರುವ ನೈಸ್‌ ಸಂಸ್ಥೆಯ ಬಿಎಂಐಸಿ ರಸ್ತೆ ಯೋಜನೆಯನ್ನು ಸಂಪೂರ್ಣವಾಗಿ ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಪ್ರತಿಪಕ್ಷಗಳಾದ ಜೆಡಿಎಸ್‌ ಮತ್ತು ಬಿಜೆಪಿ ಒಕ್ಕೊರಲಿನಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.

ಬೆಂಗಳೂರು (ಜು.22) :  ಅಕ್ರಮಗಳ ಆಗರವಾಗಿರುವ ಹಾಗೂ ರಾಜ್ಯದ ಜನತೆಗೆ ವಂಚನೆ ಎಸಗಿರುವ ನೈಸ್‌ ಸಂಸ್ಥೆಯ ಬಿಎಂಐಸಿ ರಸ್ತೆ ಯೋಜನೆಯನ್ನು ಸಂಪೂರ್ಣವಾಗಿ ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಪ್ರತಿಪಕ್ಷಗಳಾದ ಜೆಡಿಎಸ್‌ ಮತ್ತು ಬಿಜೆಪಿ ಒಕ್ಕೊರಲಿನಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.

ನೈಸ್‌ ವಿರುದ್ಧ ಬಿಜೆಪಿ ಶಾಸಕರ ಪೈಕಿ ಕೆಲವರು ಬಿಡಿ ಬಿಡಿಯಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೇ ಹೊರತು ಇಡೀ ಪಕ್ಷದ ವತಿಯಿಂದ ವಿರೋಧಿಸುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಬಿಜೆಪಿಯು ಜೆಡಿಎಸ್‌ ಜತೆ ಕೈಜೋಡಿಸಿ ಪೂರ್ಣ ಪ್ರಮಾಣದಲ್ಲಿ ವಿರೋಧಿಸಿದೆ.

ಶುಕ್ರವಾರ ವಿಧಾನಸೌಧದಲ್ಲಿನ ಜೆಡಿಎಸ್‌ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ, ವಿಧಾನಮಂಡಲದ ಜಂಟಿ ಸದನ ಸಮಿತಿ ವರದಿಯ ಪ್ರಕಾರ ಹಾಗೂ ನ್ಯಾಯಾಲಯಗಳು ನೀಡಿರುವ ಆದೇಶದಂತೆ ಆ ಇಡೀ ಯೋಜನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಜತೆಗೆ ಸಿಬಿಐ ತನಿಖೆ ನಡೆಯಬೇಕು ಎಂದು ಆಗ್ರಹಪಡಿಸಿದರು.

ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ದೇವೇಗೌಡರು ಸ್ಪಷ್ಟಪಡಿಸಲಿ: ಸಚಿವ ಚಲುವರಾಯಸ್ವಾಮಿ

ನೈಸ್‌ ಅಕ್ರಮ ರಾಜ್ಯದಲ್ಲಿ ಹಾಡಹಗಲೇ ನಡೆದಿರುವ ಲೂಟಿ. ಜನರ ಭೂಮಿ ಹಾಗೂ ಹಣವನ್ನು ಕೊಳ್ಳೆ ಹೊಡೆಯಲಾಗಿದೆ. ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ನೈಸ್‌ ವಿರುದ್ಧದ ನಮ್ಮ ಹೋರಾಟ ಹಲವಾರು ಮಜಲುಗಳನ್ನು ಮುಟ್ಟಲಿದೆ. ಒಂದು ವೇಳೆ ಯೋಜನೆಯನ್ನು ವಶಕ್ಕೆ ಪಡೆಯದಿದ್ದರೆ ಜೆಡಿಎಸ್‌ ಮತ್ತು ಬಿಜೆಪಿ ಸದನದ ಒಳಗೆ-ಹೊರಗೆ ಜಂಟಿ ಹೋರಾಟ ನಡೆಸಲಿವೆ ಎಂದು ಉಭಯ ನಾಯಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸರ್ಕಾರ ಸದನ ಸಮಿತಿ ವರದಿ ಇಟ್ಟುಕೊಂಡು ಸುಮ್ಮನಿದ್ದರೆ ಯಾರಿಗೆ ಲಾಭ? ಈ ಯೋಜನೆಯನ್ನು ಸ್ಕ್ರ್ಯಾಪ್‌ ಮಾಡಿದರೆ 30 ಸಾವಿರ ಕೋಟಿ ಹಣ ಸಿಗುತ್ತದೆ. ಅದನ್ನು ಸರ್ಕಾರದ ವಿವಿಧ ಭಾಗ್ಯಗಳಿಗೆ ಬಳಸಬಹುದು ಎಂದೂ ಸಲಹೆ ನೀಡಿದರು.

ಭೂಮಿ ಕಬಳಿಸುವ ಈಸ್ಟ್‌ ಇಂಡಿಯಾ ಕಂಪನಿ:

ಕುಮಾರಸ್ವಾಮಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳು ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ. ನೈಸ್‌ ರಸ್ತೆಯ ಅಕ್ರಮ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಹಿಂದಿನ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಈ ಅಕ್ರಮಕ್ಕೆ ಸಂಬಂಧಿಸಿದಂತೆ ಅನೇಕ ಕ್ರಮಗಳು ಜರುಗಿವೆ. ನ್ಯಾಯಾಲಯಗಳಲ್ಲಿ ನೈಸ್‌ ವಿರುದ್ಧ, ಸರ್ಕಾರದ ಪರವಾಗಿ ಅನೇಕ ಆದೇಶಗಳು ಬಂದಿವೆ. ಇದಕ್ಕೆ ಹಿಂದಿನ ಬಿಜೆಪಿ ಸರ್ಕಾರ ಶ್ರಮಿಸಿದೆ. ಅದಕ್ಕಾಗಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಈ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೆವು. ಮೊದಲು ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಿದೆವು. ಬಳಿಕ ಅದನ್ನು ನಿಯಮ 69ಕ್ಕೆ ಬದಲಿಸಿ ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದರು. ಆದರೂ ಅವಕಾಶ ಸಿಗಲಿಲ್ಲ. ನಾಡಿನ ಹಿತಾಸಕ್ತಿ ಕಾಪಾಡಲು ನಾವು ಬಿಜೆಪಿ ಜತೆ ಹೋರಾಟಕ್ಕೆ ಮುಂದಾಗಿದ್ದೇವೆ. ಜನರ ಭೂಮಿ ಕಬಳಿಸುವ ಈ ಈಸ್ಟ್‌ ಇಂಡಿಯಾ ಕಂಪನಿ ವಿರುದ್ಧ ಹೋರಾಡುತ್ತೇವೆ ಎಂದರು.

ಈಗ ‘ಬ್ರ್ಯಾಂಡ್‌ ಬೆಂಗಳೂರು’ ಎಂದು ಜಪ ಮಾಡುತ್ತಿರುವವರೇ ಹಿಂದೆ ನೈಸ್‌ ಒಳಗೆ ನೈಸ್‌ ಆಗಿ ಸೇರಿಕೊಂಡು ಸಹಕಾರ ನೀಡಿದ್ದರು. ಈಗ ಅವರೇ ಅಧಿಕಾರದಲ್ಲಿ ಇದ್ದಾರೆ. ಈಗ ಎರಡೂ ಪಕ್ಷಗಳ ವತಿಯಿಂದ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದೇವೆ. ನೈಸ್‌ ರಸ್ತೆಯ ಸುತ್ತಮುತ್ತ ನಮ್ಮ ಪಕ್ಷವೂ ಒಳಗೊಂಡಂತೆ ಬೇರೆ ಯಾವುದೇ ಪಕ್ಷದ ರಾಜಕಾರಣಿಗಳ ಭೂಮಿ ಇದ್ದರೆ ಈ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಹರಿಹಾಯ್ದರು.

2012ರೊಳಗೆ ಕಾಂಕ್ರೀಟ್‌ ರಸ್ತೆ ಮಾಡದೆ ಟೋಲ… ಸಂಗ್ರಹ ಮಾಡುವಂತಿಲ್ಲ ಎನ್ನುವ ಷರತ್ತು ಯೋಜನೆಯಲ್ಲಿ ಇದೆ. ಆದರೆ, ಅಕ್ರಮವಾಗಿ ಟೋಲ… ಸಂಗ್ರಹ ಮಾಡಲಾಗಿದೆ. ಈವರೆಗೂ ವಸೂಲು ಮಾಡಲಾಗಿರುವ 1325 ಕೋಟಿ ರುಪಾಯಿ ಟೋಲ್‌ ಹಣವನ್ನು ಸರ್ಕಾರ ವಾಪಸ್‌ ಪಡೆಯಬೇಕು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಸರ್ಕಾರ ಕೂಡಲೇ ಹಣ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು.

ಹೆಚ್ಚುವರಿ ಭೂಮಿ ವಾಪಸ್‌ ಪಡೆಯಬೇಕು:

ಬೊಮ್ಮಾಯಿ ಮಾತನಾಡಿ, ನೈಸ್‌ ಯೋಜನೆಯಲ್ಲಿ ಅಕ್ರಮದ ಬಗ್ಗೆ ನಮ್ಮ ಕಾಲದಲ್ಲಿ ಅನೇಕ ಕ್ರಮಗಳು ಆಗಿವೆ. ಆ ನಿಟ್ಟಿನಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಒಂದಾಗಿ ಹೋರಾಟ ಮಾಡಲು ನಿರ್ಧಾರ ಮಾಡಿವೆ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಬದಲಿಗೆ ಅನೇಕ ತಿರುವುಗಳು ಇರುತ್ತವೆ ಎಂದು ಹೇಳಿದರು.

ಈ ರಸ್ತೆ ಕಾಮಗಾರಿಗೆ ಹೆಚ್ಚುವರಿ ಸಾಕಷ್ಟುಭೂಮಿಯನ್ನೂ ಪಡೆದುಕೊಳ್ಳಲಾಗಿದೆ. ಈ ಹೆಚ್ಚುವರಿ ಭೂಮಿಯನ್ನು ಏನು ಮಾಡಬೇಕು ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಸರ್ಕಾರಕ್ಕೆ ಇದೆ ಎಂಬ ಮಾತನ್ನು ಸುಪ್ರೀಂಕೋರ್ಚ್‌ ಸ್ಪಷ್ಟವಾಗಿ ಹೇಳಿದೆ. ಅಲ್ಲದೆ, ಮತ್ತೆ ಹೊಸದಾಗಿ ಭೂಮಿ ಸ್ವಾಧೀನಕ್ಕೆ ಪಡೆಯುವ ಹುನ್ನಾರವನ್ನು ನೈಸ್‌ ಕಂಪನಿ ನಡೆಸಿದೆ. ಯೋಜನೆಗೆ ನೀಡಲಾಗಿರುವ ಹೆಚ್ಚುವರಿ ಭೂಮಿಯನ್ನು ಕಾನೂನು ಪ್ರಕಾರವೇ ಹಿಂಪಡೆಯಲು ಸಂಪುಟ ಉಪ ಸಮಿತಿ ಕೂಡ ಸ್ಪಷ್ಟವಾಗಿ ಶಿಫಾರಸು ಮಾಡಿದೆ. ಈ ನಿಟ್ಟಿನಲ್ಲಿ ಈಗಿನ ರಾಜ್ಯ ಸರ್ಕಾರ ನೈಸ್‌ ಯೋಜನೆಯಿಂದ ಹೆಚ್ಚುವರಿ ಭೂಮಿಯನ್ನು ಈ ಕೂಡಲೇ ವಾಪಸ್‌ ಪಡೆಯಲು ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹೆಚ್ಚುವರಿ ಜಮೀನು ಅಂತಿಮವಾಗಿ ರಿಯಲ್‌ ಎಸ್ಟೇಟ್‌ ದಂಧೆಗೆ ಬಳಕೆ ಆಗುತ್ತಿದೆ. ಸರ್ಕಾರ ಅದನ್ನು ತಡೆದು ವಶಕ್ಕೆ ಪಡೆಯಬೇಕು. ಈಗಾಗಲೇ ಬೆಂಗಳೂರು ಮೈಸೂರು ನಡುವೆ ಸುಸಜ್ಜಿತ ಎP್ಸ…ಪ್ರೆಸ್‌ ಹೆದ್ದಾರಿ ನಿರ್ಮಾಣ ಆಗಿರುವುದರಿಂದ ನೈಸ್‌ ರಸ್ತೆ ಅಗತ್ಯ ಇಲ್ಲ. ಟೋಲ… ಕೂಡ ಹೆಚ್ಚುವರಿಯಾಗಿ ಸಂಗ್ರಹ ಆಗಿದ್ದು, ಅದರ ಲೆಕ್ಕಪರಿಶೋಧನೆ ನಡೆಸಿ ಹಣವನ್ನು ವಸೂಲಿ ಮಾಡಬೇಕು ಎಂದರು.

ವಿಪಕ್ಷಗಳ ಗೈರಿನಲ್ಲಿ ಮೇಲ್ಮನೆಯಲ್ಲೂ ಬಜೆಟ್‌ ಪಾಸ್‌

ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ, ಜೆಡಿಎಸ್‌ ಶಾಸಕಾಂಗ ಪಕ್ಷದ ಉಪನಾಯಕಿ ಶಾರದಾಪೂರಾರ‍ಯನಾಯಕ್‌ ಮತ್ತಿತರರು ಇದ್ದರು.

ಈಗ ‘ಬ್ರ್ಯಾಂಡ್‌ ಬೆಂಗಳೂರು’ ಎಂದು ಜಪ ಮಾಡುತ್ತಿರುವವರೇ ಹಿಂದೆ ನೈಸ್‌ ಒಳಗೆ ನೈಸ್‌ ಆಗಿ ಸೇರಿಕೊಂಡು ಸಹಕಾರ ನೀಡಿದ್ದರು. ಈಗ ಅವರೇ ಅಧಿಕಾರದಲ್ಲಿ ಇದ್ದಾರೆ. ನೈಸ್‌ ರಸ್ತೆಯ ಸುತ್ತಮುತ್ತ ನಮ್ಮ ಪಕ್ಷವೂ ಒಳಗೊಂಡಂತೆ ಬೇರೆ ಯಾವುದೇ ಪಕ್ಷದ ರಾಜಕಾರಣಿಗಳ ಭೂಮಿ ಇದ್ದರೆ ಈ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಲಿ.

- ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ