Asianet Suvarna News Asianet Suvarna News

ಮೈಸೂರು ಜೆಡಿಎಸ್‌ ಚುನಾವಣಾ ಅಭ್ಯರ್ಥಿ ಪಟ್ಟಿ ಬಿಡುಗಡೆ; ಚಾಮುಂಡೇಶ್ವರಿಯಿಂದ ಜಿಟಿಡಿ, ಹುಣಸೂರಿನಿಂದ ಮಗ ಸ್ಪರ್ಧೆ

JDS Mysore Election Candidates List: ನಿನ್ನೆ ಅತೃಪ್ತ ಶಾಸಕ ಜಿ.ಟಿ. ದೇವೇಗೌಡ ಅವರನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಇಂದು ಮೈಸೂರು ಭಾಗದ ಕೆಲ ಕ್ಷೇತ್ರಗಳ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 

JDS announces vidhan sabha candidates for mysore region gt devegowda to contest from chamundeshwari
Author
First Published Oct 21, 2022, 11:00 AM IST

ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಈಗಾಗಲೇ ಸಿದ್ಧತೆ ಆರಂಭಿಸಿದೆ. ಅನಾರೋಗ್ಯದ ಹೊರತಾಗಿಯೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಖುದ್ದು ಅಖಾಡಕ್ಕಿಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದ ಜಿ.ಟಿ. ದೇವೇಗೌಡ ಮತ್ತು ಗೌಡರ ಕುಟುಂಬದ ನಡುವೆ ಇದ್ದ ಭಿನ್ನಮತ ಶಮನಕ್ಕಾಗಿ ಗೌಡರೇ ಜಿ.ಟಿ. ದೇವೇಗೌಡ ಮನೆಗೆ ತೆರಳಿ ಮಾತನಾಡಿದರು. ದೊಡ್ಡ ಗೌಡರೇ ಮನೆಗೆ ಬಂದಿದ್ದೇ ತಡ ಎಲ್ಲಾ ವೈಮನಸ್ಸನ್ನೂ ಬದಿಗೊತ್ತಿ ಜಿ.ಟಿ. ದೇವೇಗೌಡ ನನ್ನ ಕುಟುಂಬ ಎಂದೆಂದಿಗೂ ಜೆಡಿಎಸ್‌ ಜೊತೆ ಇರುತ್ತದೆ. ಎಚ್‌ಡಿ ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದೇ ನನ್ನಗುರಿ ಎಂದು ಹೇಳಿದ್ದರು. ಇದೀಗ ಇಂದು ಅವರೇ ಮೈಸೂರು ಭಾಗದ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಮೊನ್ನೆಯವರೆಗೂ ಒಬ್ಬರಿಗೊಬ್ಬರು ಮಾತು ಕೂಡ ಆಡುತ್ತಿರಲಿಲ್ಲ ಆದರೆ ಇಂದು ಜೆಡಿಎಸ್‌ನ ಮೈಸೂರು ಭಾಗದ ಚುನಾವಣಾ ಜವಾಬ್ದಾರಿಯನ್ನು ಜಿ.ಟಿ.ಡಿ ಹೊತ್ತಿರುವುದು ಸ್ಪಷ್ಟವಾಗಿದೆ. 

ಚಾಮುಂಡೇಶ್ವರಿಯಿಂದ ಜಿ.ಟಿ.ಡಿ, ಹುಣಸೂರಿನಿಂದ ಮಗ ಹರೀಶ್‌ ಗೌಡ ಸ್ಪರ್ಧೆ:

ಚಾಮುಂಡಿ ಬೆಟ್ಟದಲ್ಲಿ‌ ಮೈಸೂರು ಭಾಗದ ಕ್ಷೇತ್ರಗಳ ಮೊದಲ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಜಿ.ಟಿ ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಮತ್ತೆ ಸ್ಪರ್ಧಿಸುವುದಾಗಿ ಘೋಷಿಸಿದರು. ಚಾಮುಂಡೇಶ್ವರಿಗೆ ಜಿ.ಟಿ.ಡಿ, ಹುಣಸೂರಿಗೆ ಜಿ.ಟಿ.ಡಿ‌ ಮಗ ಹರೀಶ್, ಕೆ.ಆರ್ ನಗರಕ್ಕೆ ಸಾ.ರಾ ಮಹೇಶ್, ಪಿರಿಯಾಪಟ್ಟಣಕ್ಕೆ ಕೆ.ಮಹದೇವ್, ನರಸೀಪುರಕ್ಕೆ ಅಶ್ಚಿನ್, ಎಚ್.ಡಿ ಕೋಟೆ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್ ಗ ಬಹುತೇಕ ಅಂತಿಮ ಎಂದು ಪ್ರಕಟಿಸಿದ ಜಿ.ಟಿ.ಡಿ. 

"ನಾನು ನಿನ್ನೆಯಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಮನಸ್ಸು ಮೂರು ವರ್ಷಗಳ ನಂತರ ಸಮಾಧಾನದಲ್ಲಿದೆ. ನಾನು ನನ್ನ‌ಮನೆಯವರು ಹೆಚ್ಚು ಖುಷಿಯಲ್ಲಿದ್ದೇವೆ. ಇನ್ನೂ ಯಾವ ಗೊಂದಲಗಳು ಉಳಿದಿಲ್ಲ. ಚಾಮುಂಡಿ ತಾಯಿಗೆ ಎಚ್‌ಡಿ ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೊಂದು ತಿಂಗಳನಲ್ಲಿ ನಾನು ವಾಕ್ ಮಾಡುವ ಶಕ್ತಿಕೊಡು ಎಂದು ತಾಯಿ ಮುಂದೆ ಬೇಡಿದ್ದಾರೆ. ಜನವರಿ ತಿಂಗಳಿನಲ್ಲಿ ಎಚ್.ಡಿ ದೇವೇಗೌಡರು ಚಂಡಿಕಾ ಹೋಮ ನಡೆಸಲಿದ್ದಾರೆ. ಎಚ್.ಡಿ ದೇವೇಗೌಡರ ಉತ್ಸಾಹ ನಾವೇ ಅಚ್ಚರಿಗೆ ಒಳಗಾಗಿದ್ದೇವೆ. ಅವರೇ ನಮಗೆ ಪ್ರೇರಣೆ. ಅವರನ್ನ ಸಂತೋಷವಾಗಿಡುವುದೇ ನಮ್ಮ ಸಂತೋಷ," ಎಂದು ಚಾಮುಂಡಿ ಬೆಟ್ಟದಲ್ಲಿ ಜಿ.ಟಿ.ಡಿ ಹೇಳಿದ್ದಾರೆ. 

ಇದನ್ನೂ ಓದಿ: ನನ್ನ ಕಣ್ಮುಂದೆ ಜೆಡಿಎಸ್‌ಗೆ ಮತ್ತೆ ಅಧಿಕಾರ: ದೇವೇಗೌಡ

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಟ ಎಚ್.ಡಿ ದೇವೇಗೌಡ ಅವರು ಜಿ.ಟಿ ದೇವೇಗೌಡ ನಾಯಕತ್ವದ ಬಗ್ಗೆ ಒಂದೇ ಒಂದು ಅಪಸ್ವರ ಕೇಳಿದರು ನಾನು ಸಹಿಸುವುದಿಲ್ಲಾ.
ಅಪಸ್ವರ ಎತ್ತುವವರು ಹೊರಗೆ ಹೋಗಬಹುದು. ಮೈಸೂರು ಜಿಲ್ಲೆಯ ಎಲ್ಲಾ ಉಸ್ತುವಾರಿ ಜಿ.ಟಿ.ಡಿಗೆ ಕೊಟ್ಟಿದ್ದೇವೆ. ಅವರ ನಾಯಕತ್ವದಲ್ಲೇ ಎಲ್ಲಾ ನಡೆಯುತ್ತದೆ.
ಅವರ ತೀರ್ಮಾನವೇ ಅಂತಿಮ. ಅವರ ಬಗ್ಗೆ ಕೊಂಕು ಮಾತನಾಡಿದ್ದಾರೆ ನಾನು ಸಹಿಸುವುದಿಲ್ಲಾ, ಎಂದು ಜಿ.ಟಿ.ಡಿ ವಿರೋಧಿಗಳಿಗೆ ಜೆಡಿಎಸ್ ವರಿಷ್ಟ ಎಚ್.ಡಿ ದೇವೇಗೌಡ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ಮೂಲಕ ದಳಪತಿಗಳ ಬಲಗೈ ಬಂಟ ಮತ್ತೆ ಹಿಂದಿನಷ್ಟೇ ಗೌಡರ ಕುಟುಂಬಕ್ಕೆ ಆಪ್ತರು ಎಂಬುದನ್ನು ದೇವೇಗೌಡರು ಪುನರುಚ್ಚರಿಸಿದ್ದಾರೆ. 

ಮತ್ತೆ ಅಧಿಕಾರಕ್ಕೆ ಬರಲು ಸರ್ಕಸ್‌:

ಕಳೆದ ಚುನಾವಣೆಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಎಚ್‌ಡಿಡಿ ಮತ್ತು ಎಚ್‌ಡಿಕೆ ಚಿಂತಿಸುತ್ತಿದ್ದಾರೆ. ಒಂದು ವೇಳೆ 25-30 ಕ್ಷೇತ್ರಗಳಿಗಿಂತ ಹೆಚ್ಚು ಗೆದ್ದರೆ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಸರ್ಕಾರ ರಚಿಸಲು ಜೆಡಿಎಸ್‌ ಸಹಾಯ ಬೇಕಾಗಲಿದೆ. ಆಗ ಮತ್ತೆ ಕಿಂಗ್‌ ಮೇಕರ್‌ ಆಗಿ ಎಚ್‌ಡಿಕೆ ಗುರುತಿಸಿಕೊಳ್ಳಲಿದ್ದಾರೆ. ಆ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕನಸೂ ಈಡೇರುವ ಸಾಧ್ಯತೆಯಿದೆ. 

ಇದನ್ನೂ ಓದಿ: ಅಖಾಡಕ್ಕಿಳಿದ ಮಾಜಿ ಪ್ರಧಾನಿ, ಭಾವುಕರಾದ ಜಿಟಿಡಿ: ದೇವೇಗೌಡರ ಭೇಟಿಯಿಂದ ಸಂಧಾನ ಯಶಸ್ವಿ

ಬಿಜೆಪಿ - ಜೆಡಿಎಸ್‌ ಒಳ ಒಪ್ಪಂದ:

ಮೂಲಗಳ ಪ್ರಕಾರ ಜೆಡಿಎಸ್‌ ಮತ್ತು ಬಿಜೆಪಿ ಈಗಾಗಲೇ ಒಳ ಒಪ್ಪಂದ ಮಾಡಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದಾರೆ. ಈ ಕಾರಣಕ್ಕಾಗಿಯೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಅರಿವಿದ್ದರೂ ಹೆಚ್ಚು ಕ್ಷೇತ್ರದಲ್ಲಿ ಅಹಿಂದ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಬಿಜೆಪಿ ಜೊತೆ ಯಾವುದೇ ಒಪ್ಪಂದ ಇಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳ ಜೊತೆ ಚುನಾವಣಾ ಪೂರ್ವ ಅಥವಾ ಚುನಾವಣಾ ನಂತರ ಮೈತ್ರಿಗೆ ಜೆಡಿಎಸ್‌ ಸೇರುವುದಿಲ್ಲ ಎಂದು ಆಗಾಗ ಕುಮಾರಸ್ವಾಮಿ ಹೇಳುತ್ತಲೇ ಬಂದಿದ್ದಾರೆ. ಮೂಲಗಳು ಹೇಳುತ್ತಿರುವ ಮಾತುಗಳು ಸತ್ಯವೆಂದು ತಿಳಿಯಬೇಕಾದರೆ ಜೆಡಿಎಸ್‌ ಸಂಪೂರ್ಣ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕು. 

Follow Us:
Download App:
  • android
  • ios