ಅಖಾಡಕ್ಕಿಳಿದ ಮಾಜಿ ಪ್ರಧಾನಿ, ಭಾವುಕರಾದ ಜಿಟಿಡಿ: ದೇವೇಗೌಡರ ಭೇಟಿಯಿಂದ ಸಂಧಾನ ಯಶಸ್ವಿ
HD Deve Gowda: ಅನಾರೋಗ್ಯದ ಕಾರಣ ಹಲವು ದಿನಗಳಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಹಿರಿಯ ರಾಜಕಾರಣಿ ಎಚ್ ಡಿ ದೇವೇಗೌಡರು ಇಂದು ಅತೃಪ್ತ ಶಾಸಕ ಜಿ.ಟಿ. ದೇವೇಗೌಡರನ್ನು ಭೇಟಿ ಮಾಡಿದರು. ಗೌಡರ ಭೇಟಿಯಿಂದ ಭಿನ್ನಮತ ಶಮನವಾಗಿದ್ದು ಜೆಡಿಎಸ್‌ನಲ್ಲೇ ಮುಂದುವರೆಯುವುದಾಗಿ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಜೆಡಿಎಸ್ ವರಿಷ್ಠರ ಮೇಲೆ ಮುನಿಸಿಕೊಂಡಿದ್ದ ಜಿ.ಟಿ. ದೇವೇಗೌಡ ಅವರನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಭೇಟಿ ಮಾಡಿದರು. ಭೇಟಿಯಾದ ಮರುಕ್ಷಣವೇ ಭಾವುಕರಾದ ಜಿ.ಟಿ. ದೇವೇಗೌಡ ಕಾಲಿಗೆ ನಮಸ್ಕರಿಸಿ ಕಣ್ಣೀರಿಟ್ಟರು. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸೇರಿದಂತೆ ಹಲವು ನಾಯಕರು ಜಿ.ಟಿ. ದೇವೇಗೌಡರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಭಾವುಕರಾದ ಜಿ.ಟಿ. ದೇವೇಗೌಡ ಗೌಡರ ಕಾಲು ಹಿಡಿದು ಬಿಕ್ಕಿ ಬಿಕ್ಕಿ ಅತ್ತರು. ಮೂರು ವರ್ಷಗಳಿಂದ ಭೇಟಿ ಮಾಡದಿದ್ದರೂ, ಮಾಜಿ ಪ್ರಧಾನಿಗಳೇ ಮನೆಗೆ ಭೇಟಿ ನೀಡಿದ್ದರಿಂದ ಅತೀವ ಸಂತಸವಾಗಿದೆ. ನಾನು ಮತ್ತು ನಮ್ಮ ಕುಟುಂಬ ಜೆಡಿಎಸ್ ಜೊತೆಗೆ ಎಂದಿಗೂ ಇರಲಿದೆ ಎಂದು ಜಿ.ಟಿ. ದೇವೇಗೌಡ ಹೇಳಿದರು.
ಇದನ್ನೂ ಓದಿ: ನನ್ನ ಕಣ್ಮುಂದೆ ಜೆಡಿಎಸ್‌ಗೆ ಮತ್ತೆ ಅಧಿಕಾರ: ದೇವೇಗೌಡ
ಭೇಟಿಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಜಿ.ಟಿ. ದೇವೇಗೌಡ ಅವರು ಜೆಡಿಎಸ್ ಪಕ್ಷದಲ್ಲೇ ಮುಂದುವರೆಯುವುದಾಗಿ ಹೇಳಿದ್ದಾರೆ. "ನಾನು ಕೋವಿಡ್ ಬಂದ ದಿನದಿಂದ ದೇವೇಗೌಡರನ್ನು ಭೇಟಿ ಮಾಡಿರಲಿಲ್ಲ. ಅವರಿಗೆ 91 ವರ್ಷ ವಯಸ್ಸು. ಆದರೂ ಅವರು ಇಂದು ನನ್ನನ್ನು ಭೇಟಿ ಮಾಡಲು ನನ್ನ ಮನೆಗೇ ಬಂದಿದ್ದಾರೆ. ಅವರ ಆರೋಗ್ಯ ಕೂಡ ಸರಿಯಿಲ್ಲ. ಅಷ್ಟಾದರೂ ಬಂದು ಭೇಟಿ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದೇ ನನ್ನ ಗುರಿ. ನಾನು ಮತ್ತು ನನ್ನ ಕುಟುಂಬ ಜೆಡಿಎಸ್ ಜೊತೆ ಎಂದಿಗೂ ಇರುತ್ತೇವೆ. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವತ್ತ ಕೆಲಸ ಮಾಡುತ್ತೇನೆ. ನಾನು ದೂರವಿದ್ದರೂ ದೇವೇಗೌಡರು ನನ್ನನ್ನು ಪ್ರೀತಿಯಿಂದ ನೋಡಿದ್ದಾರೆ. ನಾನು ಕ್ಷಮಿಸಿ ಎಂದು ಕೇಳಿಕೊಂಡಾಗ, ನೀನು ನನ್ನ ಹೆಸರನ್ನು ಉಳಿಸುತ್ತೀಯ ಎಂದಿದ್ದಾರೆ. ಜಿ.ಟಿ. ದೇವೇಗೌಡ ನನ್ನ ಹೆಸರು ಉಳಿಸುತ್ತಾನೆ ಎಂದು ಅವರು ಹಲವಾರು ಬಾರಿ ಹೇಳಿದ್ದಾರೆ," ಎಂದು ಜಿ.ಟಿ. ದೇವೇಗೌಡ ಹೇಳಿದರು.
ಜೆಡಿಎಸ್ ತೊದು ಜಿ.ಟಿ. ದೇವೇಗೌಡ ಕಾಂಗ್ರೆಸ್ ಸೇರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಪಕ್ಷದ ಯಾವುದೇ ಸಭೆಯಲ್ಲೂ ಜಿ.ಟಿ. ದೇವೇಗೌಡ ಭಾಗವಹಿಸಿರಲಿಲ್ಲ. ಆದರೆ ಈಗ ದೇವೇಗೌಡರ ಭೇಟಿ ಬೆನ್ನಲ್ಲೇ ಭಿನ್ನಮತ ಶಮನವಾಗಿದೆ. ಮುಂಬರುವ ಚುನಾವಣೆಯಲ್ಲೂ ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದಲೇ ಜಿ.ಟಿ. ದೇವೇಗೌಡ ಚುನಾವಣೆಗೆ ನಿಲ್ಲಲಿದ್ದಾರೆ. ಜಿ.ಟಿ.ಡಿ. ಎದುರು ಸೋತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯೂ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: ನಾನೇನು ಈ ಲೋಕ ಬಿಟ್ಟು ಹೋಗಿದೀನಾ: HD Devegowda
ಜಿಟಿಡಿ ಮಗ ಹರೀಶ್ ಗೌಡಗೆ ಟಿಕೆಟ್:
ಜಿಟಿ ದೇವೇಗೌಡ ಮಗ ಹರೀಶ್ ಗೌಡ ಅವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿರಲಿಲ್ಲ. ಈ ವಿಚಾರಕ್ಕೂ ಜಿ.ಟಿ. ದೇವೇಗೌಡ ಬೇಸರಗೊಂಡಿದ್ದರು. ಎಚ್ ವಿಶ್ವನಾಥ್ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಕ್ಕೆ ಹರೀಶ್ ಗೌಡ ಟಿಕೆಟ್ ತಪ್ಪಿತ್ತು. ಆದರೆ ಈ ಬಾರಿ ಹರೀಶ್ ಗೌಡ ಅವರಿಗೆ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆ ದಳಪತಿಗಳಿಂದ ಬಂದಿದೆ ಎನ್ನಲಾಗಿದೆ. ರಾಜಕೀಯ ತಜ್ಞರ ಪ್ರಕಾರ ಹರೀಶ್ ಗೌಡ ವರುಣಾ ಕ್ಷೇತ್ರವೊಂದನ್ನು ಹೊರತುಪಡಿಸಿ ಮೈಸೂರು ಭಾಗದ ಇನ್ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲಲು ಶಕ್ತರು. ಹಾಗಾಗಿ ಹುಣಸೂರಿನಿಂದ ಈ ಬಾರಿ ಸ್ಪರ್ಧೆ ಖಚಿತ ಎನ್ನಲಾಗಿದೆ.