ಜೆಡಿಎಸ್ ಪಕ್ಷದ ಬಾಗಿಲು ಮುಚ್ಚುವ ಬಗ್ಗೆ ಮಾತನಾಡಿದ ಎಚ್‌ಡಿಕೆ
ಜೆಡಿಎಸ್ ಪಕ್ಷವನ್ನು ಮುಚ್ಚುವ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಇಂತಹದ್ದೊಂದು ನಿರ್ಧಾರದ ದಿನವೇ ಪಕ್ಷ ಬಂದ್ ಆಗಲಿದೆ ಎಂದಿದ್ದಾರೆ
ಬೆಂಗಳೂರು (ಡಿ.13): ‘ರೈತರ ವಿಷಯದಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದಲ್ಲಿ ರೈತರಿಗೆ ಮಾರಕವಾದ ನಿರ್ಣಯ ಕೈಗೊಂಡ ದಿನವೇ ಜೆಡಿಎಸ್ ಬಾಗಿಲನ್ನು ಮುಚ್ಚುತ್ತೇವೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಡಕ್ಕಾಗಿ ಹೇಳಿದ್ದಾರೆ.
ಬಿಜೆಪಿ ಬಗ್ಗೆ ಮೃದು ಧೋರಣೆ ಇಲ್ಲ. ನಮ್ಮ ಪಕ್ಷವನ್ನು ಯಾರ ಗುಲಾಮತನಕ್ಕೆ ಒಳಪಡಿಸಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಶನಿವಾರ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಅಧಿವೇಶನದಲ್ಲಿ ಒಪ್ಪಿಗೆ ಪಡೆದ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ರೈತರಿಕೆ ಮಾರಕವಾಗಿಲ್ಲ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ರೈತರಿಗೆ ಅನುಕೂಲವಾಗುವಂತಹ ತೀರ್ಮಾನವನ್ನು ಕೈಗೊಳ್ಳುತ್ತೇವೆ. ಈ ವಿಚಾರದಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದಲ್ಲಿ ರೈತರಿಗೆ ಮಾರಕವಾದ ತೀರ್ಮಾನ ತೆಗೆದುಕೊಂಡ ದಿನವೇ ಜೆಡಿಎಸ್ ಬಾಗಿಲನ್ನು ಮುಚ್ಚುತ್ತೇವೆ’ ಎಂದು ಹೇಳಿದರು.
ಸರ್ಕಾರದ ವಿರುದ್ಧ ಹೀಗ್ ಮಾಡೋದ್ ಸರಿಯಲ್ಲ : ಎಚ್ಡಿಕೆ ಬ್ಯಾಟಿಂಗ್ ...
‘ವಿರೋಧ ಪಕ್ಷದಲ್ಲಿದ್ದರೂ ನಾಡಿನ ಬೆಳವಣಿಗೆಗೆ ಸಹಕಾರ ನೀಡಬೇಕಾಗುತ್ತದೆ. ಪ್ರತಿಪಕ್ಷದಲ್ಲಿದ್ದ ಕಾರಣಕ್ಕೆ ಕೇವಲ ವಿರೋಧ ಮಾಡುವುದು ಸರಿಯಲ್ಲ. ಬಿಜೆಪಿ ಬಗ್ಗೆ ನಮಗೆ ಯಾವುದೇ ಮೃದು ಧೋರಣೆ ಇಲ್ಲ. ಎಪಿಎಂಸಿ ಕಾಯ್ದೆ ಕುರಿತು ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಪಂಜಾಬ್‌ನ ಪರಿಸ್ಥಿತಿಯೇ ಬೇರೆ. ಕರ್ನಾಟಕದ ಪರಿಸ್ಥಿತಿಯೇ ಬೇರೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಪ್ರಧಾನಿ ಹೇಳುತ್ತಿದ್ದಾರೆ. ಒಂದು ಅವಕಾಶ ಮಾಡಿಕೊಡಿ. ಕಾದು ನೋಡೋಣ’ ಎಂದರು.
‘ಬಿಜೆಪಿ ಜತೆ ಜೆಡಿಎಸ್ ವಿಲೀನಗೊಳಿಸುವ ಸಂಬಂಧ ಹೈಕಮಾಂಡ್ ಜತೆ ಚರ್ಚೆ ನಡೆದಿದಿರುವುದು ನಿಜವೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, :ರಾಜಕಾರಣದಲ್ಲಿ ಏನು ಬೇಕಾದರೂ ನಡೆಯಬಹುದು. ಹೀಗೆ ನಡೆಯಲಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಮತ್ತೊಂದು ಪಕ್ಷದ ಜತೆ ನಮ್ಮ ಪಕ್ಷವನ್ನು ವಿಲೀನಗೊಳಿಸುವ ಯಾವ ಉದ್ದೇಶವೂ ಇಲ್ಲ. ಅದರ ಅಗತ್ಯತೆಯೂ ನಮಗಿಲ್ಲ. ನಮ್ಮ ಪಕ್ಷವನ್ನು ಬೇರೆ ಪಕ್ಷದ ಜತೆ ವಿಲೀನಗೊಳಿಸುವುದಿಲ್ಲ. ಅಂತಹ ಪರಿಸ್ಥಿತಿಯೇ ಬರುವುದಿಲ್ಲ. ಇವತ್ತು ಅಷ್ಟೇ, ನಾಳೆಯೂ ಅಷ್ಟೇ. ಬಿಜೆಪಿಗೆ ಅಗತ್ಯ ಸಂಖ್ಯಾಬಲ ಇದೆ. ಹೀಗಾಗಿ ಬಿಜೆಪಿಗೆ ಸದ್ಯಕ್ಕಂತೂ ನಮ್ಮ ಅವಶ್ಯಕತೆ ಇಲ್ಲ’ ಎಂದು ನುಡಿದರು.
‘ಬಿಜೆಪಿಯ ಬಿ ಟೀಂ ಎಂದವರೇ ಹಾಗೂ ನಮ್ಮ ಪಕ್ಷವನ್ನು ನಿರ್ನಾಮ ಮಾಡಲು ಹೊರಟ್ಟಿದ್ದವರೇ ನಮ್ಮ ಬಳಿ ಬಂದರು. ನಮ್ಮ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡರು. ಮುಂದೆ ಈ ರಾಜ್ಯಕ್ಕೆ ಕುಮಾರಸ್ವಾಮಿ ಅನಿವಾರ್ಯವಾಗಬಹುದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ಹೇಳಲು ಆರಂಭಿಸಿದ್ದಾರೆ. ನಾನಂತೂ ಜ್ಯೋತಿಷಿ ಅಲ್ಲ. ನನಗೆ ಈಗಲೂ ವಿಶ್ವಾಸ ಇದ್ದು, ರಾಜ್ಯದ ಜನತೆ ಜಾತಿ ಬೇಧ ಮರೆತು ಕುಮಾರಣ್ಣ ಮತ್ತೆ ಬೇಕು ಎಂದು ಬಯಸುವ ದಿನಗಳು ಬರಲಿವೆ ಎಂದು ಕುಮಾರಸ್ವಾಮಿ ತಿಳಿಸಿದರು.