ಗಂಗಾವತಿಯಿಂದ ಸ್ಪರ್ಧೆಗೆ ಸಿದ್ಧ ಎಂದ ಜನಾರ್ದನ ರೆಡ್ಡಿ: ಆಕಾಂಕ್ಷಿಗಳ ಪಾಲಿಗೆ ಆಗುವರೇ ಅಡ್ಡಿ?
ತಮ್ಮ ರಾಜಕೀಯ ನಡೆಯ ಬಗ್ಗೆ ಡಿ.25 ರಂದು ತಿಳಿಸುವುದಾಗಿ ಹೇಳಿರುವ ಜನಾರ್ದನ ರೆಡ್ಡಿ, ಗಂಗಾವತಿಯಿಂದ ಕಣಕ್ಕಿಳಿಯುವುದಾಗಿಯೂ ಸ್ಪಷ್ಟಪಡಿಸಿದ್ದಾರೆ.
ರಾಮಮೂರ್ತಿ ನವಲಿ
ಗಂಗಾವತಿ(ಡಿ.21): ಗಂಗಾವತಿಯಿಂದಲೇ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಘೋಷಿಸುವುದರೊಂದಿಗೆ ಈ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಗಲಿದ್ದು, ರೆಡ್ಡಿ ನಡೆಯ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಸಂಚಲ ಮೂಡಿಸಿದೆ. ತಮ್ಮ ರಾಜಕೀಯ ನಡೆಯ ಬಗ್ಗೆ ಡಿ.25 ರಂದು ತಿಳಿಸುವುದಾಗಿ ಹೇಳಿರುವ ಜನಾರ್ದನ ರೆಡ್ಡಿ, ಗಂಗಾವತಿಯಿಂದ ಕಣಕ್ಕಿಳಿಯುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಅವರು ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ, ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆಯೇ? ಬಿಜೆಪಿ ಅಥವಾ ಬೇರಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳುವರೋ ಅಥವಾ ಹೊಸ ಪಕ್ಷವನ್ನೇ ಹುಟ್ಟು ಹಾಕಲಿದ್ದಾರೆಯೇ ಎಂಬ ಪ್ರಶ್ನೆ ಇದೀಗ ರಾಜಕೀಯದಲ್ಲಿ ಬಹು ಚರ್ಚಿತ ವಿಷಯವಾಗಿದೆ.
ಇತ್ತೀಚಿಗೆ ಗಂಗಾವತಿಯಲ್ಲಿ ಮನೆ ಖರೀದಿಸಿ ಗೃಹ ಪ್ರವೇಶ ನೆರವೇರಿಸಿದ್ದ ಸಂದರ್ಭದಲ್ಲಿಯೇ ತಮ್ಮ ಮುಂದಿನ ರಾಜಕೀಯ ನೆಲೆಯನ್ನಾಗಿ ಹನುಮನ ನಾಡನ್ನು ರೆಡ್ಡಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಸೂಚನೆ ದೊರೆತಿತ್ತು. ವರ್ಷದ ಹಿಂದೆ ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದ ವಿವಿಧ ದೇವಾಲಯಗಳ ಜೀರ್ಣೋದ್ಧಾರ ಕೈಗೊಂಡ ಸಂದರ್ಭದಲ್ಲಿ ಅವರು ತಮ್ಮ ರಾಜಕೀಯ ಮರುಪ್ರವೇಶಕ್ಕೆ ಗಂಗಾವತಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ವಿಚಾರ ಯಾರಲ್ಲಿಯೂ ಬಂದಿರಲಿಲ್ಲ. ಸ್ವತಃ ಅವರೂ ಸಹ ಮಾನಸಿಕ ನೆಮ್ಮದಿಗಾಗಿ ದೇಗುಲ ಪುನಶ್ಚೇತನ ಮಾಡುತ್ತಿದ್ದೇನೆ. ನಮ್ಮ ಕುಟುಂಬದವರಾರಯರೂ ಇಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಈಗಿನ ಅವರ ನಿರ್ಧಾರ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ ಎಲ್ಲರ ಲೆಕ್ಕಾಚಾರ ಬುಡಮೇಲು ಮಾಡಿದ್ದಲ್ಲದೇ, ಗಂಗಾವತಿ ಕ್ಷೇತ್ರದ ಚಿತ್ರಣವನ್ನೂ ಬದಲಾಯಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಡಿ.25 ರಂದು ಹೊಸ ಪಕ್ಷ ಘೋಷಣೆ ಮಾಡ್ತಾರಾ ಜನಾರ್ದನ ರೆಡ್ಡಿ..?
ಊಹಾಪೋಹಕ್ಕೆ ತೆರೆ:
ಕಳೆದ ವಾರ ಅಂಜನಾದ್ರಿಯಲ್ಲಿ ಹನುಮ ಮಾಲೆ ವಿಸರ್ಜನೆ ಸಂದರ್ಭದಲ್ಲಿ ದಿಢೀರ ಪ್ರತ್ಯಕ್ಷರಾಗಿ ಹನುಮಮಾಲೆ ಧರಿಸಿ ಕಾಲ್ನಡಿಗೆಯಲ್ಲೇ ಬೆಟ್ಟಹತ್ತಿ ಆಂಜನೇಯನ ದರ್ಶನ ಪಡೆಯುವ ಮೂಲಕ ರೆಡ್ಡಿ ಕ್ಷೇತ್ರದಲ್ಲಿ ನೆಲೆಯೂರುವ ಸಂಕಲ್ಪ ಮಾಡಿದರು. ಬಳಿಕ ಮನೆ ಖರೀದಿಸಿರುವ ವಿಚಾರವನ್ನೂ ಬಹಿರಂಗಪಡಿಸಿದರು. ಬಿಜೆಪಿ ನಾಯಕರು, ವಿವಿಧ ಧಾರ್ಮಿಕ ನಾಯಕರ ಮನೆಗೆ ತೆರಳಿ ಸನ್ಮಾನ ಸ್ವೀಕರಿಸಿ ಬೆಂಬಲ ಯಾಚಿಸಿದರು. ಬಳ್ಳಾರಿಗೆ ತೆರಳಲು ಸುಪ್ರಿಕೋರ್ಚ್ ನಿರ್ಬಂಧವಿದೆ, ಬೆಂಗಳೂರು ದೂರಾಯಿತು, ಆದ್ದರಿಂದ ನಮ್ಮ ಜನರ ಜೊತೆ ಇರಲು ಗಂಗಾವತಿ ಆಯ್ಕೆ ಮಾಡಿಕೊಂಡೆ ಎಂದು ಅವರು ಹೇಳಿಕೊಂಡಿದ್ದರು. ಆದರೆ ಅವರ ನಡೆ ಸ್ಪಷ್ಟವಾಗಿತ್ತು. ಇದೀಗ ಸ್ಪರ್ಧೆಯ ಘೋಷಣೆ ಮಾಡುವುದರೊಂದಿಗೆ ಊಹಾಪೋಹಕ್ಕೆ ತೆರೆ ಬಿದ್ದಿದೆ.
ಸಂಚಲನ:
ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಖಚಿತ ಎಂಬುದು ಘೋಷಣೆ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಯ ವಲಯದಲ್ಲಿ ಸಂಚಲನ ಉಂಟಾಗಿದೆ. ಈ ಹಿಂದೆ ಗಂಗಾವತಿ ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂದು ಬಿಂಬಿಸಲಾಗಿತ್ತು. ನಂತರ ಕಾಂಗ್ರೆಸ್ ನಾಯಕರ ಕಚ್ಚಾಟದಿಂದಾಗಿ ಬಿಜೆಪಿ ತನ್ನ ಕೋಟೆ ನಿರ್ಮಿಸಿತ್ತು. ಈಗ ರೆಡ್ಡಿ ಆಗಮನದಿಂದ ಚುನಾವಣೆಗೆ ಜಿದ್ದಾಜಿದ್ದಿನ ಕಣವಾಗಿ ಪರಿವರ್ತನೆಯಾಗಲಿದೆ.
Janardhana Reddy: ಜನಾರ್ದನ ರೆಡ್ಡಿಯಿಂದ ದೂರ-ದೂರ: ಗಣಿಧಣಿಯಿಂದ ಅಂತರ ಕಾಯ್ದುಕೊಂಡ ಸಹೋದರ & ಸ್ನೇಹಿತ
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷದವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈಗ ಜನಾರ್ದನರೆಡ್ಡಿ ಆಗಮನದಿಂದ ಗಂಗಾವತಿ ರಾಜಕೀಯ ಬದಲಾಗುವುದೇ ಎನ್ನುವ ಪ್ರಶ್ನೆ ಮತದಾರರಲ್ಲಿ ಚರ್ಚೆಗೆ ಗ್ರಾಸವಾಗಿದೆ. 2023ಕ್ಕೆ ನಡೆಯುವ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ತೀವ್ರ ಪೈಪೋಟಿ ನಡೆದಿದೆ. ಈ ಮಧ್ಯೆ ಗಾಲಿ ಜನಾರ್ದನ ರೆಡ್ಡಿಯವರು ಸ್ಪರ್ಧೆಯ ಹೇಳಿಕೆ ರಾಜಕೀಯ ಪಕ್ಷಗಳಲ್ಲಿ ಭಾರಿ ಕುತೂಹಲ ಕೆರಳಿಸಿದೆ.
ಗಂಗಾವತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದನ್ನು ವರಿಷ್ಠರು ನಿರ್ಧರಿಸುತ್ತಾರೆ. ಗಂಗಾವತಿಯಿಂದ ಗಾಲಿ ಜನಾರ್ದನರೆಡ್ಡಿಯವರು ಸ್ಪರ್ಧಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಆದರೆ ಆ ಕುರಿತು ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಕುಷ್ಟಗಿ ಕ್ಷೇತ್ರದಿಂದ ಸ್ಪರ್ಧಿಸುವ ನನ್ನ ಹೆಸರನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಆದರೆ ಅದು ಅಂತಿಮವಲ್ಲ. ಬದಲಾಗುವ ರಾಜಕೀಯದಿಂದ ಅಭ್ಯರ್ಥಿಗಳು ಬದಲಾಗಬಹುದು ಅಂತ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ತಿಳಿಸಿದ್ದಾರೆ.