Ballari: ಜನಾರ್ಧನ ರೆಡ್ಡಿಯ ಕೆಆರ್‌ಪಿಪಿ ಪಕ್ಷದ ಬಾವುಟ ಲೋಕಾರ್ಪಣೆ: ಪ್ರಚಾರ ಕಾರ್ಯ ಆರಂಭಿಸಿದ ಲಕ್ಷ್ಮೀ ಅರುಣಾ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧಿಕೃತ ಭಾವುಟ ಬಿಡುಗಡೆ
ಜನಾರ್ಧನರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಅವರಿಂದ ಅಧಿಕೃತ ಪ್ರಚಾರ ಕಾರ್ಯ ಆರಂಭ
ಬಳ್ಳಾರಿ ವಿಧಾನಸಭಾ ಕ್ಷೇತ್ರದ ಬೆಣಕಲ್ ಗ್ರಾಮದಲ್ಲಿ ಪ್ರಚಾರ ಕಾರ್ಯ
ಬಳ್ಳಾರಿ (ಜ.1): ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಡಿ.25 ರಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸ್ಥಾಪನೆ ಮಾಡಿದ್ದ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರು ಇಂದು ಪಕ್ಷದ ಅಧಿಕೃತ ಬಾವುಟವನ್ನು ಲೋಕಾರ್ಪಣೆ ಮಾಡಿದರು. ನಂತರ ಕ್ಷೇತ್ರದ ಬೆಣಕಲ್ ಗ್ರಾಮದಲ್ಲಿ ಕಾರ್ಯಕರ್ತರ ಮನೆಗೆ ತೆರಳಿ ಅಧಿಕೃತ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಅಧಿಕೃತ ಚುನಾವಣೆ ಪ್ರಚಾರ ಕಾರ್ಯ ಆರಂಭವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಜನಾರ್ದನ ರೆಡ್ಡಿ ಅವರಿಗೆ ಪ್ರವೇಶ ಅವಕಾಶ ಇಲ್ಲದ ಹಿನ್ನಲೆಯಲ್ಲಿ ತಮ್ಮ ಪತ್ನಿ ಲಕ್ಷ್ಮೀ ಅರುಣಾ ಮೂಲಕ ಬಳ್ಳಾರಿಯಲ್ಲಿ ಪಕ್ಷ ಸಂಘಟನೆಗೆ ಜನಾರ್ಧನ ರೆಡ್ಡಿ ಮುಂದಾಗಿದ್ದರು.
ಲಕ್ಷ್ಮೀ ಅರುಣಾ ಅವರು ಬೆಣಕಲ್ ಗ್ರಾಮದ ಕುರುಬರ ಮನೆಯಲ್ಲಿ ಉಡಿ ತುಂಬಿಸಿಕೊಳ್ಳುವ ನೆಪದಲ್ಲಿ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಮೂಲಕ ಗ್ರಾಮದಲ್ಲಿನ ದೇವಾಲಯಗಳಿಗೆ ಭೇಟಿ ಮಾಡಿ ಪೂಜೆ ಸಲ್ಲಿಸಿದರು. ಗ್ರಾಮದ ದುರ್ಗಮ್ಮ ಗುಡಿ, ಬೀರಲಿಂಗಶ್ವರ ದೇವಸ್ಥಾನ ಭೇಟಿ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕೆಆರ್‌ಪಿಪಿ ಪಕ್ಷದ ಅಧಿಕೃತ ಬಾವುಟವನ್ನು ಉದ್ಘಾಟನೆ ಮಾಡಿ ಪಕ್ಷದ ಪ್ರಚಾರ ಕಾರ್ಯಕ್ರಮವನ್ನು ಆರಂಭಿಸಿದರು.
ಹೊಸ ವರ್ಷದ ಮೊದಲ ದಿನವೇ ಜನಾರ್ದನ ರೆಡ್ಡಿ ಹೊಸ ಆಟ: ಬಳ್ಳಾರಿಯಲ್ಲಿ ಕಣಕ್ಕಿಳೀತಾರಾ ರೆಡ್ಡಿ ಪತ್ನಿ..?
ಕುರಿ ಮರಿ ಉಡುಗೊರೆ: ಬೆಣಕಲ್ ಗ್ರಾಮದಲ್ಲಿ ಕುರೇರಾ ಗಂಗಾಧರ ಅವರ ಮನೆಯಲ್ಲಿ ಉಡಿ ತುಂಬಿಸಿಕೊಂಡರು. ಈ ವೇಳೆ ಗ್ರಾಮಸ್ಥರು ಜನಾರ್ದನ ರೆಡ್ಡಿ ಪತ್ನಿ ಲಕ್ಷ್ನೀ ಅರುಣಾ ಅವರಿಗೆ ಉಣ್ಣೆಯ ಕಂಬಳಿಯನ್ನು ಹಾಕಿ ಕುರಿ ಮರಿಯನ್ನು ಉಡುಗೊರೆಯಾಗಿ ನೀಡಿದರು. ಪುಟ್ಟದಾದ ವೇದಿಕೆ ಕಾರ್ಯಕ್ರಮವೊಂದನ್ನು ಆಯೋಜಿಸಿ, ಲಕ್ಷ್ಮೀ ಅವರಿಗೆ ಸನ್ಮಾನವನ್ನೂ ಮಾಡಿದರು. ಈ ಮೂಲಕ ಗ್ರಾಮದಲ್ಲಿ ಜನಾರ್ಧನ ರೆಡ್ಡಿ ಅವರು ಸ್ಥಾಪಿಸಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಲಕ್ಷ್ಮೀ ಅರುಣಾ ಅವರು ಭರ್ಜರಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಧುಮಿಕಿದ್ದಾರೆ.
ಮನೆ ಮಗಳಂತೆ ಸ್ವಾಗತಿಸಿದ ಗ್ರಾಮಸ್ಥರು: ಈ ಕುರಿತು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮೀ ಅರುಣಾ ಅವರು, ಬೆಣಕಲ್ ಗ್ರಾಮದಲ್ಲಿ ನನ್ನನ್ನು ಮನೆ ಮಗಳಂತೆ ಸ್ವಾಗತಿಸಿದ್ದೀರಾ.. ಜನಾರ್ದನ ರೆಡ್ಡಿ ಬಳ್ಳಾರಿಗೆ ಬರಲು ಅವಕಾಶವಿಲ್ಲ, ಹೀಗಾಗಿ ನಾನು ಹಳ್ಳಿ ಹಳ್ಳಿ ತಿರುಗುವ ಮೂಲಕ ಪಕ್ಷವನ್ನು ಕಟ್ಟುತ್ತಿದ್ದು, ಇದಕ್ಕೆ ನಿಮ್ಮೆಲ್ಲರ ಸಹಕಾರವೂ ಬೇಕು. ಜನಾರ್ದನ ರೆಡ್ಡಿ ಅವರು ನೋವು ಅವಮಾನ ಸಹಿಸಿ ಪಕ್ಷ ಕಟ್ಟಿಸಿದ್ದಾರೆ. ಜನರಿಂದ ಜನಾರ್ದನ ರೆಡ್ಡಿ ಅವರನ್ನು ದೂರ ಮಾಡಲು ಯಾರಿಂದಲೂ ಆಗುವುದಿಲ್ಲ. ನಮ್ಮ ಪಕ್ಷಕ್ಕೆ ಮತ ನೀಡುವ ಮೂಲಕ ಜಿಲ್ಲೆಯ ಸ್ವಾಭಿಮಾನವನ್ನು ಕಾಪಾಡಬೇಕು. ನಮಗೆ ಈಗ ತಂದೆ ತಾಯಿ ಎಲ್ಲವೂ ಜನರೇ ಹೀಗಾಗಿ ನಮ್ಮನ್ನು ಕೈಹಿಡಿದು ನಡೆಸಿ ಎಂದು ಮನವಿ ಮಾಡಿದರು.
ಸಿಂಧನೂರಿನಲ್ಲಿ ಜ.6ರಂದು, ಬಳ್ಳಾರಿಯಲ್ಲಿ ಜ.11ರಂದು ಜನಾರ್ದನ ರೆಡ್ಡಿ ಬೃಹತ್ ಸಮಾವೇಶ
ಜನಾರ್ಧನರೆಡ್ಡಿ ಅವರನ್ನು ಜನರಿಂದ ದೂರ ಮಾಡಲು ಯಾರಿಂದಲೂ ಆಗೊಲ್ಲ: ಜನಾರ್ದನ ರೆಡ್ಡಿ ಅವರ ಕನಸು ರಾಜ್ಯ ಕಲ್ಯಾಣ ರಾಜ್ಯ ಆಗಬೇಕು. ಬಳ್ಳಾರಿ ರಾಜ್ಯಮಟ್ಟದಲ್ಲಿ ಅಭಿವೃದ್ಧಿಯಾಗಬೇಕು. ರೆಡ್ಡಿಗೆ ಜಿಲ್ಲೆಯಲ್ಲಿ ಪ್ರವೇಶ ನಿರ್ಬಂಧವಿದೆ. ಅದಕ್ಕಾಗಿ ಅವರ ಬದಲಿಗೆ ನಾನು ಬಳ್ಳಾರಿಯಿಂದ ಪ್ರಚಾರ ಆರಂಭಿಸುತ್ತಿರುವೆ. ಜನಾರ್ದನ ರೆಡ್ಡಿಯವರು ಎನೇ ಕೆಲಸ ಮಾಡಿದ್ದರೂ ಕುರುಬ ಸಮಾಜದ ಮನೆಯವರಿಂದ ಆರಂಭ ಮಾಡಿದ್ದಾರೆ. ಮದುವೆ ಆಗಿ 30 ವರ್ಷದ ನಂತರ ಬೆಣಕಲ್ ಗ್ರಾಮಕ್ಕೆ ಆಗಮಿಸಿರುವ ನನಗೆ ಮನೆ ಮಗಳ ಪ್ರೀತಿ ತೋರಿಸಿದ್ದೀರಿ. ನಾನು ಎಂದಿಗೂ ಬೆಣಕಲ್ ಗ್ರಾಮದ ಋಣ ಮರೆಯಲ್ಲ ಎಂದರು.
ಜನಾರ್ದನ ರೆಡ್ಡಿಗೆ ನೋವು, ಅವಮಾನ ಆದರೂ ಅವರು ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಹುಟ್ಟಿದ ಸೂರ್ಯನನ್ನ ಯಾರಿಂದಲೂ ತಡೆಯಲು ಆಗಲ್ಲ, ಅದೇ ರೀತಿಯಾಗಿ ಜನರಿಂದ ಜನಾರ್ದನ ರೆಡ್ಡಿಯನ್ನ ದೂರ ಮಾಡಲು ಆಗಲ್ಲ. ನಮ್ಮ ತಂದೆ ತಾಯಿ ಬಂಧು ಬಳಗ ನೀವು. ಕಲ್ಯಾಣ ರಾಜ್ಯ ನಿರ್ಮಾಣ ಮಾಡೋಣ ಎಂದು ಲಕ್ಷ್ಮೀ ಅರುಣಾ ಮತದಾರರಿಗೆ ಮನವಿ ಮಾಡಿದರು.