Assembly election: 5 ಕ್ಷೇತ್ರಗಳಿಗೆ ಕೆಆರ್‌ಪಿಪಿ ಅಭ್ಯರ್ಥಿ ಘೋಷಿಸಿದ ಜನಾರ್ಧನರೆಡ್ಡಿ: ಶ್ರೀರಾಮುಲು ವಿರುದ್ಧ ಯಾರು
ಸಿರಗುಪ್ಪ, ಕನಕಗಿರಿ, ಸಿಂಧನೂರು, ಹಿರಿಯೂರು, ನಾಗಠಾಣ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ
ಸಮೀಕ್ಷೆಯನ್ನು ಮಾಡಿಸಿ ಗೆಲ್ಲುವ ಅಭ್ಯರ್ಥಿಗಳನ್ನು ಮಾತ್ರ ಘೋಷಣೆ ಮಾಡಲಾಗಿದೆ
ನಮ್ಮ ಪಕ್ಷ ಯಾರ ಮೇಲೆ ಸಿಟ್ಟು ದ್ವೇಷದಿಂದ ಹುಟ್ಟಿಕೊಂಡಿಲ್ಲ
ಕೊಪ್ಪಳ (ಫೆ.16): ರಾಜ್ಯದಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸ್ಥಾಪಿಸುವ ಮೂಲಕ ರಾಜಕಾರಣದ 2ನೇ ಇನ್ನಿಂಗ್ಸ್ ಆರಂಭಿಸಿದ್ದು, ಇಂದು ಕೆಆರ್‌ಪಿಪಿ ಪಕ್ಷದಿಂದ 5 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿರುವ ಜನಾರ್ಧನರೆಡ್ಡಿ ಮನೆಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಕೆಆರ್ ಪಿಪಿ ಪಕ್ಷದ ವತಿಯಿಂದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ, ರಾಯಚೂರು ಜಿಲ್ಲೆಯ ಸಿಂಧನೂರು, ವಿಜಯಪುರ ಜಿಲ್ಲೆಯ ನಾಗಠಾಣ, ಕೊಪ್ಪಳ ಜಿಲ್ಲೆಯ ಕನಕಗಿರಿ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಲಾಗುತ್ತಿದೆ. ಸಿರುಗುಪ್ಪ ಕ್ಷೇತ್ರದಿಂದ ಧರೇಪ್ಪ ನಾಯಕ್, ಕನಕಗಿರಿ ಕ್ಷೇತ್ರದಿಂದ ಡಾ.ಚಾರುಲ್ ದಾಸರಿ, ನಾಗಠಾಣ ಕ್ಷೇತ್ರದಿಂದ ಶ್ರಿಕಾಂತ, ಸಿಂಧನೂರು ಕ್ಷೇತ್ರಕ್ಕೆ ನೆಕ್ಕಂಟಿ ಮಲ್ಲಿಕಾರ್ಜುನ್ ಹಾಗೂ ಹಿರಿಯೂರು ಕ್ಷೇತ್ರದಿಂದ ಮಹೇಶ ಸ್ಪರ್ಧೆ ಮಾಡಲಿದ್ದಾರೆ ಎಂದರು.
ಜನಾರ್ದನ ರೆಡ್ಡಿಯಿಂದ ಬಿಜೆಪಿಗೆ ರಾಗಿ ಕಾಳಷ್ಟೂಅಪಾಯವಿಲ್ಲ: ಸಚಿವ ಶ್ರೀರಾಮುಲು
ಸಮೀಕ್ಷೆ ಮಾಡಿಸಿ ಅಭ್ಯರ್ಥಿಗಳ ನಿರ್ಧಾರ: ಇಂದು ಘೋಷಣೆ ಮಾಡಿರುವ ಕೆಆರ್‌ಪಿಪಿ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ. ಈ ಬಗ್ಗೆ ಕ್ಷೇತ್ರದಲ್ಲಿ ಸಮೀಕ್ಷೆಯನ್ನು ಮಾಡಿಸಿ ಗೆಲ್ಲುವ ಅಭ್ಯರ್ಥಿಗಳನ್ನ ಮಾತ್ರ ಘೋಷಣೆ ಮಾಡುತ್ತಿದ್ದೆವೆ. ನಾನು ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಇನ್ನೂ ಸಮಯವಿದೆ ಎಲ್ಲದಕ್ಕೆ ಉತ್ತರ ಸಿಗುತ್ತದೆ. ಶ್ರೀರಾಮುಲು ವಿರುದ್ದ ಅಭ್ಯರ್ಥಿ ಹಾಕುವ ಬಗ್ಗೆ ತೀರ್ಮಾನ ಮಾಡಿಲ್ಲ. ಆದರೆ, ಅಭ್ಯರ್ಥಿ ಘೋಷಣೆ ಮಾಡಿದ ದಿನ ಅಸಮಾಧಾನ ಉಂಟಾಗಬಹುದು. ಆದರೆ, ರಾಜ್ಯದಲ್ಲಿ ಅಭಿವೃದ್ಧಿ ಪರ ಚರ್ಚೆಗೆ ಜನ ಮನ್ನಣೆ ಕೊಡ್ತಾರೆ.
ಹಲವರನ್ನು ಹಿಂದೆ ನಂಬಿ ಮೋಸ ಹೋಗಿದ್ದೇನೆ: ಸಿರಗುಪ್ಪ ಕ್ಷೇತ್ರದ ಶಾಸಕ ಸೋಮಲಿಂಗಪ್ಪ ವಿರುದ್ದ ಕಿಡಿಕಾರಿದ ಜನಾರ್ಧನರೆಡ್ಡಿ, ಸಿರಗುಪ್ಪ ಕ್ಷೇತ್ರದಲ್ಲಿ ನಾವೇ ಎಮ್ ಎಲ್ ಎ ಮಾಡಿದ್ದು. ಎಷ್ಟೊ ಮಂದಿ ಶಾಸಕ ಮತ್ತು ಸಂಸದರನ್ನಾಗಿ ಮಾಡಿದ್ದೇವೆ. ಮೂರು ಜನರನ್ನ ಮುಖ್ಯಮಂತ್ರಿ ಮಾಡಿ ರೆಡ್ಡಿ ಮೋಸ ಹೋಗಿರೋದು. ಬೆನ್ನಿಗೆ ಚೂರಿ ಹಾಕಿದವರು ಯಾವತ್ತು ಜನರ ಮನಸ್ಸಲ್ಲಿ ಇರಲ್ಲ. ಹೀರೊ ಹಿರೋನೆ, ವಿಲನ್ ವಿಲನ್ನೇ. ನನ್ನ ಸಿನಿಮಾ ಮಾಡಲು ಬಹಳ ಫಾರಿನ್ ಕಂಪನಿ ಬಂದಾಗ ನನ್ನ ಸಿನಿಮಾ ಮಾಡಲು ಕನಿಷ್ಠ ಐದು ವರ್ಷ ಬೇಕು. ಈಗ ನನ್ನ ಫಸ್ಟ್ ಆಫ್‌ಗೆ 12 ವರ್ಷ ತಗೊಂಡಿದೀನಿ. ಇನ್ನು ಮುಂದೆ ನನ್ನ ಸೆಕೆಂಡ್ ಆಪ್ ಶುರುವಾಗತ್ತದೆ. ಅದು ಮುಗಿಯಲು ಹನ್ನೆರಡು ವರ್ಷ ಬೇಕಾಗತ್ತದೆ. ಅಷ್ಟರಲ್ಲಿ ಜನಾರ್ದನರೆಡ್ಡಿ ಯಾರು ಅಂತ ಜಗತ್ತಿಗೆ ಗೊತ್ತಾಗತ್ತದೆ ಎಂದರು.
ಬೆಂಗಳೂರು, ದೆಹಲಿ ದೊಡ್ಡ ರಾಜಕಾರಣಿಗಳಿಗೆ ಹೆದರಿಲ್ಲ: ನಾನು ಮಾತಾಡೋದು ತುಂಬಾ ಇದೆ. ಮಾದ್ಯಮದವರು ಇದ್ದಾರೆ ಹೀಗಾಗಿ ಮಾತಾಡ್ತಾಯಿಲ್ಲ. ಅವರಿಲ್ಲದಿದ್ದರೆ ಮಾತಾಡೋದು ತುಂಬಾ ಇದೆ. ಮುಂದೊಂದು ದಿನ ಬರತ್ತೆ ಅವರ ಎದುರು ಮಾತಾಡೋದು. ಸಿರಗುಪ್ಪ ಜನರಿಗೆ ಏನೆ ಕಷ್ಟ ಬಂದ್ರು ರೆಡ್ಡಿ ಕುಟುಂಬ ನಿಮ್ಮ ಜೊತೆ ಇದೆ. ಬೆಂಗಳೂರಿನ, ದೆಹಲಿಯ ದೊಡ್ಡ ದೊಡ್ಡ ರಾಜಕಾರಣಿಗಳಿಗೆ ನಾನು ಹೆದರಿಲ್ಲ. ನಾನು ಜೈಲಿಗೆ ಹೋದ್ರು ನನ್ನ ನಂಬಿದವರಿಗೆ ಮೋಸ ಮಾಡಿಲ್ಲ. ನಾನು ಬೆಂಗಳೂರು ಡೆಲ್ಲಿ ಎಲ್ಲವನ್ನೂ ನೋಡಿ ಬಿಟ್ಟಿದ್ದಿನಿ. ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಕರ್ನಾಟಕ ಯಾವ ಮೂಲೆಗೆ ಹೋದರೂ ಜನರು ನನಗೆ ಸ್ವಾಗತ ಮಾಡ್ತಾಯಿದ್ದಾರೆ. ಇದಕ್ಕಿಂತ ಹೆಚ್ಚಿಗೆ ನನಗೆ ಎನೂ ಬೇಕು. ನಮ್ಮ ಪಕ್ಷ ಯಾರ ಮೇಲೆ ಸಿಟ್ಟು ದ್ವೇಷದಿಂದ ಹುಟ್ಟಿಕೊಂಡಿಲ್ಲ. ಬಸವ ಬುದ್ದ ಅಂಬೇಡ್ಕರ್ ಆಶಯದಂತೆ ಸಮಾನತೆ ಮಾರ್ಗದಲ್ಲಿ ಹುಟ್ಟಿರೋದು ಎಂದು ಹೇಳಿದರು.
2008ರಲ್ಲಿ ಬಿಎಸ್‌ವೈಯನ್ನು ಸಿಎಂ ಮಾಡಿದ್ದು ನಾನೇ: ಜನಾರ್ದನ ರೆಡ್ಡಿ
ಯಾರ ಬಗ್ಗೆಯೂ ನಾನು ಮಾತನಾಡೊಲ್ಲ: ಸಿದ್ದರಾಮಯ್ಯ ವಿರುದ್ದದ ಸಚಿವ ಅಶ್ವಥ್ ನಾರಾಯಣ್ ಟೀಕೆ ಮಾಡಿದ್ದಾರೆ. ಆದರೆ, ಯಾರೇ ಏನೆ ಮಾತಾಡಿದರೂ ಜನ ತೀರ್ಮಾನ ಮಾಡ್ತಾರೆ. ನಾನು ಯಾರ ಬಗ್ಗೆಯೂ ಮತಾನೋಡಲ್ಲ. ನಾನು ನನ್ನ ಪಕ್ಷ ಹಾಗೂ ಕೆಲಸದ ಬಗ್ಗೆ ಮಾತನಾಡ್ತೆನೆ. ಹಿಂದೂ-ಮುಸ್ಲಿಂ ಯಾವ ಭೇದ ಭಾವ ಇರಬಾರದು. ಅದೇ ತರಹ ನಾನು ಹೋಗ್ತಿದ್ದೆನೆ. ಬಸವಣ್ಣನವರ ಆಸೆಯಂತೆಯೇ ಪಕ್ಷ ಮುಂದುವರೆಸಿಕೊಂಡು ಹೋಗ್ತಿದ್ದೆನೆ. ಜಾತಿಮತ ಬೇಧ ಇರಬಾರದು. ಎಲ್ಲರೂ ನನ್ನ ಜೊತೆ ಬರ್ತಿದ್ದಾರೆ ಎಂದು ಜನಾರ್ಧನರೆಡ್ಡಿ ತಿಳಿಸಿದರು.
ವಿಧಾನಸಭಾ ಕ್ಷೇತ್ರವಾರು ಘೋಷಣೆ ಮಾಡಿದ ಅಭ್ಯರ್ಥಿಗಳು:
- ಸಿರುಗುಪ್ಪ ಕ್ಷೇತ್ರದಿಂದ ಧರೇಪ್ಪ ನಾಯಕ್
- ಕನಕಗಿರಿ ಕ್ಷೇತ್ರದಿಂದ ಡಾ.ಚಾರುಲ್ ದಾಸರಿ
- ನಾಗಠಾಣ ಕ್ಷೇತ್ರದಿಂದ ಶ್ರಿಕಾಂತ
- ಸಿಂಧನೂರು ಕ್ಷೇತ್ರಕ್ಕೆ ನೆಕ್ಕಂಟಿ ಮಲ್ಲಿಕಾರ್ಜುನ್
- ಹಿರಿಯೂರು ಕ್ಷೇತ್ರದಿಂದ ಮಹೇಶ