Asianet Suvarna News Asianet Suvarna News

ಜನಾರ್ದನ ರೆಡ್ಡಿಯಿಂದ ಬಿಜೆಪಿಗೆ ರಾಗಿ ಕಾಳಷ್ಟೂಅಪಾಯವಿಲ್ಲ: ಸಚಿವ ಶ್ರೀರಾಮುಲು

ಜನಾರ್ದನ ರೆಡ್ಡಿಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಿಜೆಪಿಗೆ ರಾಗಿ ಕಾಳಿನಷ್ಟೂ ಹೊಡೆತವಿಲ್ಲ ಎಂದು ಜಿಲ್ಲಾ ಸಚಿವ ಬಿ.ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನಾರ್ದನ ರೆಡ್ಡಿಯ ಪಕ್ಷ ಸೇರಿದಂತೆ ಯಾವುದೇ ಪ್ರಾದೇಶಿಕ ಪಕ್ಷದಿಂದ ಬಿಜೆಪಿಗೆ ಸಮಸ್ಯೆಯಿಲ್ಲ.

Minister B Sriramulu Talks About Janardhan Reddy At Ballari gvd
Author
First Published Feb 13, 2023, 6:20 AM IST

ಬಳ್ಳಾರಿ (ಫೆ.13): ಜನಾರ್ದನ ರೆಡ್ಡಿಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಿಜೆಪಿಗೆ ರಾಗಿ ಕಾಳಿನಷ್ಟೂ ಹೊಡೆತವಿಲ್ಲ ಎಂದು ಜಿಲ್ಲಾ ಸಚಿವ ಬಿ.ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನಾರ್ದನ ರೆಡ್ಡಿಯ ಪಕ್ಷ ಸೇರಿದಂತೆ ಯಾವುದೇ ಪ್ರಾದೇಶಿಕ ಪಕ್ಷದಿಂದ ಬಿಜೆಪಿಗೆ ಸಮಸ್ಯೆಯಿಲ್ಲ. ಬಿಜೆಪಿಗೆ ರಾಜ್ಯದಲ್ಲಿ ಬಲಿಷ್ಠ ಸಂಘಟನೆಯಿದೆ. ಕಾರ್ಯಕರ್ತರ ದೊಡ್ಡ ಪಡೆಯಿದೆ. ಹೀಗಾಗಿ ನಾವು ಪ್ರಾದೇಶಿಕ ಪಕ್ಷಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.

ಜನಾರ್ದನ ರೆಡ್ಡಿ ವಿರುದ್ಧ ಶ್ರೀರಾಮುಲು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೆಡ್ಡಿ ವಿರುದ್ಧ ಸ್ಪರ್ಧಿಸುವ ಕುರಿತು ಇನ್ನು ನಿರ್ಧರಿಸಿಲ್ಲ. ಇದು ಬಹಳ ಶೀಘ್ರವಾಗಿ ತೆಗೆದುಕೊಂಡ ತೀರ್ಮಾನವಾಗಿ ಬಿಡುತ್ತದೆ. ನಾನು ಎಲ್ಲಿಂದ ಸ್ಪರ್ಧಿಸಬೇಕು ಎಂದು ಪಕ್ಷವೇ ಸೂಕ್ತ ನಿಲುವು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

2008ರಲ್ಲಿ ಬಿಎಸ್‌ವೈಯನ್ನು ಸಿಎಂ ಮಾಡಿದ್ದು ನಾನೇ: ಜನಾರ್ದನ ರೆಡ್ಡಿ

ವಿಕ್ರಮಾದಿತ್ಯ-ಬೇತಾಳ: ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ಜಿ. ಸೋಮಶೇಖರ ರೆಡ್ಡಿ ಸ್ಪರ್ಧಿಸಲಿದ್ದು, ಗೆಲುವು ಸಾಧಿಸಲಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಯಾರಾದರೂ ಸ್ಪರ್ಧಿಸಲಿ. ಅದರಿಂದ ನಮ್ಮ ಪಕ್ಷದ ಅಭ್ಯರ್ಥಿಗೆ ಯಾವ ಸಮಸ್ಯೆಯೂ ಇಲ್ಲ. ಬಳ್ಳಾರಿ-ವಿಜಯನಗರದ ಹತ್ತು ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲುವು ಖಚಿತ ಎಂದರು. ರಾಜ್ಯ ಕಾಂಗ್ರೆಸ್ಸಿನದು ವಿಕ್ರಮಾದಿತ್ಯ-ಬೇತಾಳದ ಕಥೆಯಂತಾಗಿದೆ. ವಿಕ್ರಮಾದಿತ್ಯ ಯಾರು? ಬೇತಾಳ ಯಾರು? ಎಂದು ನಾನು ಹೇಳುವುದಿಲ್ಲ. ಆ ಪಕ್ಷದ ನಾಯಕರೇ ಒಬ್ಬರಿಗೊಬ್ಬರು ಕಾಡುತ್ತಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಹಾಸ್ಯಾಸ್ಯದ ವಿಚಾರ. ನಾವು ನಾಡಿನ ಪ್ರಗತಿಗೆ ಸಾಕಷ್ಟುಕೆಲಸ ಮಾಡಿದ್ದೇವೆ. 

ನಮ್ಮ ಸಾಧನೆ ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳುತ್ತೇವೆ. ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಧಿಕಾರಕ್ಕೆ ಬರಲು ಕುಮಾರಸ್ವಾಮಿ ಪ್ರಹ್ಲಾದ ಜೋಶಿ ಅವರ ಬಗ್ಗೆ ವಿವಾದದ ಮಾತುಗಳನ್ನಾಡುತ್ತಾರೆ. ಪೇಶ್ವೆ ಬ್ರಾಹ್ಮಣ ಎನ್ನುತ್ತಾರೆ. ಡಿಎನ್‌ಎ ಪರೀಕ್ಷೆ ಮಾಡಿಸಿ ಎಂದು ಮಾತನಾಡುತ್ತಾರೆ. ಇನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ನಡುವೆ ಕಚ್ಚಾಟ ನಡೆದಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಜ್ಯದ ಪ್ರಗತಿಗೆ ಕಡಿದು ಕಟ್ಟೆಹಾಕಿದ್ದು ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಪ್ರವಾಸ ಕೈಗೊಂಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಡಿಕೆ ಸಹೋದರರ ಗುಣಗಾನ ಮಾಡಿದ ಸಚಿವ ಸುಧಾಕರ್‌

ಜಗಳವಾಡುವುದಿಲ್ಲ: ನಗರದ ಶ್ರೀರಾಂಪುರ ಕಾಲನಿಯ ಶಿಥಿಲಗೊಂಡಿರುವ ಶಾಲಾ ಕಟ್ಟಡವನ್ನು ಖನಿಜ ನಿಧಿಯ .3.60 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿದೆ. ಶಿಕ್ಷಣ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಕಟ್ಟಡ ನಿರ್ಮಾಣ ಸ್ಥಗಿತಗೊಂಡರೆ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗುತ್ತದೆ. ಶಾಲೆಗೆ ಹಣ ಬಳಕೆ ಮಾಡದಿದ್ದರೆ ವಾಪಸ್‌ ಹೋಗುತ್ತದೆ. ಈ ವಿಚಾರದಲ್ಲಿ ಯಾರ ಬಳಿಯೂ ನಾನು ಜಗಳ ಆಡುವುದಿಲ್ಲ. ಸತ್ಯ, ಧರ್ಮ ವಿಚಾರ ಬಂದಾಗ ರಾಜಿಯಾಗುತ್ತೇನೆ. ಮಕ್ಕಳ ಶಿಕ್ಷಣ ವಿಚಾರ ಬಂದಾಗ ರಾಜಕೀಯ ಮಾಡುವುದು ಬೇಡ ಎಂದು ಮಾಜಿ ಸಚಿವ ಎಂ. ದಿವಾಕರ ಬಾಬು ಅವರಿಗೆ ಸಹ ಮನವಿ ಮಾಡುತ್ತೇನೆ ಎಂದು ಸಚಿವ ಶ್ರೀರಾಮುಲು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Follow Us:
Download App:
  • android
  • ios