ರಾಹುಲ್ ಗಾಂಧಿಗೆ ಜೈಲು ರಾಜಕೀಯ ಪ್ರೇರಿತ: ಡಿ.ಕೆ.ಶಿವಕುಮಾರ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಜೈಲು ಶಿಕ್ಷೆ ವಿಧಿಸಿರುವ ಪ್ರಕರಣವು ರಾಜಕೀಯಪ್ರೇರಿತ. ಭಾರತ್ ಜೋಡೋ ಯಾತ್ರೆಯ ಶಕ್ತಿ, ಜನರ ಆಶೀರ್ವಾದ ಸಹಿಸಲು ಆಗದೆ ಸುಳ್ಳು ದೂರು ದಾಖಲಿಸಿದ್ದಾರೆ.
ಬೆಂಗಳೂರು (ಮಾ.24): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಜೈಲು ಶಿಕ್ಷೆ ವಿಧಿಸಿರುವ ಪ್ರಕರಣವು ರಾಜಕೀಯಪ್ರೇರಿತ. ಭಾರತ್ ಜೋಡೋ ಯಾತ್ರೆಯ ಶಕ್ತಿ, ಜನರ ಆಶೀರ್ವಾದ ಸಹಿಸಲು ಆಗದೆ ಸುಳ್ಳು ದೂರು ದಾಖಲಿಸಿದ್ದಾರೆ. ಇದ್ಯಾವುದಕ್ಕೂ ರಾಹುಲ್ ಗಾಂಧಿ ಹೆದರುವುದಿಲ್ಲ. ಜೈಲಿನಲ್ಲಿರಲಿ, ಹೊರಗಿರಲಿ ಅವರ ಹೋರಾಟ ನಿಲ್ಲಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲಿ ರಾಹುಲ್ ಗಾಂಧಿ ಮಾಡಿದ್ದ ಭಾಷಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅವರನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದರು.
ಬಿಜೆಪಿಯವರು ಏನಾದರೂ ಮಾಡಿ ಕಾಂಗ್ರೆಸ್ ನಾಯಕರ ಧ್ವನಿ ಅಡಗಿಸಬೇಕು ಎಂದು ಯತ್ನಿಸುತ್ತಾರೆ. ಇಂತಹ ಪ್ರಯತ್ನಗಳಿಂದ ಅವರಿಗೆ ಗೆಲುವಾಗುವುದಿಲ್ಲ. ಇದು ರಾಜಕೀಯ ಪ್ರೇರಣೆಯಿಂದ ದಾಖಲಾದ ಪ್ರಕರಣ. ಭಾರತ್ ಜೋಡೋ ಯಾತ್ರೆ ಮೂಲಕ ಅವರಿಗೆ ಸಿಕ್ಕಿರುವ ಶಕ್ತಿಯನ್ನು ಸಹಿಸಲಾಗದೆ ಅದನ್ನು ಕುಗ್ಗಿಸಲು ಈ ರೀತಿ ಮಾಡಿದ್ದಾರೆ. ಇದರಿಂದ ರಾಹುಲ್ ಗಾಂಧಿ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಮತ್ತೆ ಚುನಾವಣೆಗೆ ಸ್ಪರ್ಧಿಸಲ್ಲ ಅಂತ ಹೇಳಿದ್ದೀನೆಯೇ ಹೊರತು ರಾಜಕೀಯ ನಿವೃತ್ತಿ ತೆಗೆದುಕೊಂಡಿಲ್ಲ: ಬಿಎಸ್‌ವೈ
ರಾಹುಲ್ ಗಾಂಧಿ ಅವರ ತಾತ ನೆಹರೂ ಅವರು ದೇಶಕ್ಕಾಗಿ 13 ವರ್ಷಗಳ ಕಾಲ ಜೈಲು ಸೇರಿದ್ದರು. ಅವರ ಅಜ್ಜಿ ಇಂದಿರಾ ಗಾಂಧಿ ಹಾಗೂ ತಂದೆ ರಾಜೀವ್‌ಗಾಂಧಿ ಅವರು ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಪ್ರಧಾನಮಂತ್ರಿ ಹುದ್ದೆ ಸಿಕ್ಕರೂ ದೇಶದ ಆರ್ಥಿಕ ತಜ್ಞನಿಗೆ ಆ ಸ್ಥಾನ ತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ದೇಶಕ್ಕಾಗಿ ಅಧಿಕಾರ ತ್ಯಾಗ ಮಾಡಿದ್ದಾರೆ. ಜನರ ಪ್ರೀತಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಭವಿಷ್ಯಕ್ಕಾಗಿ ಇಡೀ ದೇಶ ಕಾಯುತ್ತಿದೆ. ಇಂತಹವುಗಳಿಂದ ಅವರನ್ನು ಕುಗ್ಗಿಸುವುದು ಅಸಾಧ್ಯ ಎಂದರು.
ಬಿಎಸ್‌ವೈರನ್ನು ಬಿಜೆಪಿ ಹೆದರಿಸುತ್ತಿದೆ: ರಾಜ್ಯ ಕಾಂಗ್ರೆಸ್‌ಗೆ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಇನ್ನೂ ಅನೇಕರು ಬರುತ್ತಾರೆ. ಬಿಜೆಪಿ ಬಿಟ್ಟು ಹೋಗದಂತೆ ತಡೆಯಲು ಆದಾಯ ತೆರಿಗೆ (ಐಟಿ) ದಾಳಿ ಮಾಡಿಸಲಾಗುತ್ತಿದೆ. ಸ್ವತಃ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಕುಟುಂಬದವರನ್ನು ಹೆದರಿಸಿ ನಿಯಂತ್ರಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪೂರ್ಣಿಮಾ ಶ್ರೀನಿವಾಸ್ ಹಾಗೂ ನಾರಾಯಣ ಗೌಡ ಅವರನ್ನು ಕರೆದು ಮಾತನಾಡಿದ್ದೇನೆ. ಅವರು ಕಾಂಗ್ರೆಸ್‌ಗೆ ಹೋಗಲ್ಲ’ ಎಂಬ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಈ ನಾಯಕರುಗಳು (ಪೂರ್ಣಿಮಾ ಶ್ರೀನಿವಾಸ್, ನಾರಾಯಣಗೌಡ) ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಅವರಿಗೆ ಹೇಳಿದವರಾರು? ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೋಡಿಕೊಳ್ಳುತ್ತಿರುವುದೇಕೆ? ಅವರು ಏನು ಮಾಡಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಅವರ ಪಕ್ಷದವರು ಬಿಟ್ಟು ಹೋಗುತ್ತಾರೆ ಎಂಬ ಭಯದಲ್ಲಿ ಐ.ಟಿ.-ಇ.ಡಿ. ದಾಳಿ ಮಾಡಿಸುತ್ತಿದ್ದಾರೆ. ಬಿಜೆಪಿ ಸಚಿವರುಗಳು ಹಣ ಮಾಡಿಲ್ಲವೇ? ಅವರ ಮನೆ ಮೇಲೆ ದಾಳಿ ಏಕಿಲ್ಲ? ಎಂದು ಪ್ರಶ್ನಿಸಿದರು.
ಪುನೀತ್ ರಾಜ್‌ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ಚಾಲನೆ
ಇನ್ನು ಯಡಿಯೂರಪ್ಪ ಹಾಗೂ ಅವರ ಕುಟುಂಬದವರನ್ನು ನಿಯಂತ್ರಿಸಲು ಕೆಲವು ಅಧಿಕಾರಿಗಳನ್ನು ಬಿಟ್ಟಿದ್ದಾರೆ. ಅವರ ಮೂಲಕ ಯಡಿಯೂರಪ್ಪ ಅವರನ್ನು ನಿಯಂತ್ರಿಸಲಾಗುತ್ತಿದೆ. ಅವರನ್ನೂ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ಪಕ್ಷ ಬಿಟ್ಟು ಹೋಗದಂತೆ ಕರೆದು ಮಾತನಾಡುತ್ತಿದ್ದಾರೆ ಎಂದು ‘ಹೊಸ ಬಾಂಬ್’ ಸಿಡಿಸಿದರು.